varthabharthi

ಸಂಪಾದಕೀಯ

ಕನ್ನಡದ ಧ್ವಜವ ಹಿಡಿದೆತ್ತಿ ನಿಲ್ಲಲೇ ಬೇಕಾದ ಸಮಯ

ವಾರ್ತಾ ಭಾರತಿ : 1 Nov, 2017

 ದೇಶದ ಒಕ್ಕೂಟ ವ್ಯವಸ್ಥೆ ಅಭದ್ರತೆಯನ್ನು ಎದುರಿಸುತ್ತಿರುವ ದಿನಗಳಲ್ಲಿ ಕನ್ನಡ ರಾಜ್ಯೋತ್ಸವ ಮತ್ತೆ ಬಂದಿದೆ. ಬಹುಶಃ ಈ ಕಾರಣಕ್ಕೇ ಇರಬೇಕು ಬರೇ ಕಾಟಾಚಾರಕ್ಕೆ ಆಚರಿಸಲ್ಪಡುತ್ತಿದ್ದ ರಾಜ್ಯೋತ್ಸವ ಈ ಬಾರಿ ಸ್ವಾತಂತ್ರ ದಿನಾಚರಣೆಯಷ್ಟೇ ಮಹತ್ವವನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಭಾಷೆ ಮತ್ತು ಆತ್ಮಗೌರವಕ್ಕೆ ಬೇರೆ ಬೇರೆ ದಿಕ್ಕುಗಳಿಂದ ನಡೆಯುತ್ತಿರುವ ದಾಳಿಗಳು ಕನ್ನಡಿಗರನ್ನು ಒಂದಾಗುವಂತೆ ಮಾಡುತ್ತಿರುವುದು ಸುಳ್ಳಲ್ಲ.

ಈ ಹಿಂದೆಲ್ಲ ನಮಗೆ ಕನ್ನಡ ಭಾಷೆ, ನೆಲದ ನೆನಪಾಗಬೇಕಾದರೆ, ಬೆಳಗಾವಿಯ ಗಡಿಯಲ್ಲಿ ಮರಾಠಿಗರು ತಂಟೆ ಮಾಡಬೇಕು. ಮರಾಠಿಗರು ಬೆಳಗಾವಿ ನಮ್ಮದು ಎಂದು ಘೋಷಿಸಿದಾಕ್ಷಣ ಒಮ್ಮೆಲೆ ಕನ್ನಡ ಪ್ರೇಮ ಉಕ್ಕಿ ಹರಿದು, ಕನ್ನಡ ಬಾವುಟದ ಜೊತೆಗೆ ಸಂಘಟನೆಗಳು ಬೀದಿಗಿಳಿಯುತ್ತಿದ್ದವು. ಅಥವಾ ಕಾವೇರಿ ನೀರಿನ ವಿವಾದ ಭುಗಿಲೇಳಬೇಕು. ತಮಿಳರನ್ನು ವಿರೋಧಿಸುವ ಮೂಲಕ ನಮ್ಮ ಕನ್ನಡ ಪ್ರೇಮವನ್ನು ಮೆರೆಸುತ್ತಿದ್ದೆವು. ಅದೇ ಹೊತ್ತಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನಿಧಾನಕ್ಕೆ ಕನ್ನಡ ಅಳಿಯುತ್ತಾ ಬರುತ್ತಿರುವುದನ್ನು ಕಂಡೂ ಕಾಣದಂತೆ ಬದುಕುತ್ತಾ ಬಂದಿದ್ದೇವೆ. ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಾ ಬಂದರೂ ನಮಗೆ ಆತಂಕವಾಗುತ್ತಿಲ್ಲ.

ಇಂಗ್ಲಿಷ್ ಮೀಡಿಯಂಗಳು ಅಣಬೆಗಳಂತೆ ತಲೆಯೆತ್ತುತ್ತಿವೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಅದರಿಂದ ಅನ್ನ ಹುಟ್ಟುವುದಿಲ್ಲ ಎನ್ನುವ ನಂಬಿಕೆ ದಿನದಿಂದ ದಿನಕ್ಕೆ ಮನದಲ್ಲಿ ಬಲವಾಗುತ್ತಿರುವ ಕಾರಣದಿಂದಲೇ ತಮ್ಮ ಮಕ್ಕಳನ್ನು ಅದೆಷ್ಟೇ ಕಷ್ಟವಾದರೂ ಇಂಗ್ಲಿಷ್ ಮೀಡಿಯಂಗೆ ಸೇರಿಸಬೇಕು ಎಂದು ಪಾಲಕರು ಬಯಸುತ್ತಿದ್ದಾರೆ. ಇದೂ ಕನ್ನಡದ ಸೋಲೇ ಆಗಿದೆ. ಇವೆಲ್ಲದರ ನಡುವೆ, ಇದೀಗ ಕೇಂದ್ರ ಸರಕಾರ ಹಂತ ಹಂತವಾಗಿ ಒಕ್ಕೂಟವ್ಯವಸ್ಥೆಯನ್ನು ದುರ್ಬಲಗೊಳಿಸಿ ಎಲ್ಲ ಪ್ರಾದೇಶಿಕ ಅನನ್ಯತೆಗಳನ್ನು ನಾಶ ಮಾಡಿ, ದೇಶವನ್ನು ಒಂದಾಗಿಸುವ ಯತ್ನದಲ್ಲಿದೆ. ಪರಿಣಾಮವಾಗಿ ಕನ್ನಡವಿಂದು ಏಕಕಾಲಕ್ಕೆ ಇಂಗ್ಲಿಷ್ ಮತ್ತು ಹಿಂದಿ ಎರಡರ ವಿರುದ್ಧವೂ ಹೋರಾಡಬೇಕಾದಂತಹ ಸಂದಿಗ್ಧದಲ್ಲಿ ನಿಂತಿದೆ.

ಇಂಗ್ಲಿಷ್ ಅಂತಾರಾಷ್ಟ್ರೀಯ ಭಾಷೆ. ಕನ್ನಡಿಗರು ಅದನ್ನು ಸಂಪೂರ್ಣ ತಿರಸ್ಕರಿಸಿ ಮುನ್ನಡೆಯುವಂತಿಲ್ಲ. ಆದುದರಿಂದ ಕನ್ನಡದ ಜೊತೆ ಜೊತೆಗೆ ಇಂಗ್ಲಿಷ್‌ನ್ನು ಕೊಂಡೊಯ್ಯುವುದು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರಿಯಾದ ಕ್ರಮ. ಈ ಹಿಂದೆ ಹಿರಿಯ ಚಿಂತಕ ಅನಂತಮೂರ್ತಿಯವರು ತಮ್ಮ ಭಾಷಣದಲ್ಲಿ ಇದನ್ನೇ ಹೇಳಿದ್ದರು. ‘‘ಕನ್ನಡದ ಜೊತೆಗೆ ಇಂಗ್ಲಿಷ್’ ಸೂತ್ರವೇ ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಉಳಿಸೀತು ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಹಿಂದಿಯ ಹೇರಿಕೆ ಭಿನ್ನತರವಾದುದು. ಈ ಹೇರಿಕೆ ಭಾಷೆಗಷ್ಟೇ ಸೀಮಿತವಾದುದಲ್ಲ. ಅದರಾಚೆಗಿನ ರಾಜಕೀಯ, ಸಾಂಸ್ಕೃತಿಕ ಅಜೆಂಡಾಗಳು ಇದರ ಹಿಂದಿದೆ. ಹಿಂದಿಯ ಹೇರಿಕೆಯ ಹಿಂದೆ, ಕನ್ನಡದ ಅಸ್ಮಿತೆಯನ್ನು ಬುಡಮೇಲುಗೊಳಿಸುವಂತಹ ಸಂಚಿದೆ. ಉತ್ತರ ಭಾರತವನ್ನು ದಕ್ಷಿಣ ಭಾರತದ ಮೇಲೆ ಹೇರುವ ಪ್ರಯತ್ನದ ಮುಂದುವರಿದ ಭಾಗ ಇದಾಗಿದೆ.

ಉತ್ತರ ಭಾರತ ಮತ್ತು ದಕ್ಷಿಣ ಭಾರತ ಭಾಷೆಯ ಕಾರಣಗಳಿಂದಷ್ಟೇ ವಿಭಿನ್ನವಲ್ಲ. ಸಾಂಸ್ಕೃತಿಕ ಕಾರಣಗಳಿಂದಲೂ ಉತ್ತರ ಭಾರತೀಯರಿಗಿಂತ ದಕ್ಷಿಣ ಭಾರತೀಯರು ವಿಭಿನ್ನರಾಗಿದ್ದಾರೆ. ಆದುದರಿಂದಲೇ, ದಕ್ಷಿಣ ಭಾರತೀಯರಿಗೆ ಸಂಬಂಧಿಸಿದಂತೆ ಮಾತನಾಡುವಾಗ ಕೇಂದ್ರ ನಾಯಕರ ನಾಲಗೆ ಆಗಾಗ ಜಾರಿ ಬಿಡುವುದು. ‘‘ನಾವು ಜನಾಂಗೀಯವಾದಿಗಳೇ ಆಗಿದ್ದರೆ ದಕ್ಷಿಣ ಭಾರತೀಯರೊಂದಿಗೆ ಅನ್ಯೋನ್ಯವಾಗಿರಲು ಸಾಧ್ಯವಿತ್ತೇ?’’ ಎನ್ನುವ ಉತ್ತರ ಭಾರತೀಯ ಬಿಜೆಪಿ ನಾಯಕರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಕೇರಳದ ಓಣಂನ್ನು ಅರ್ಥೈಸಲು ಸಾಧ್ಯವಾಗದ ಅಮಿತ್ ಶಾ ಅದನ್ನು ‘‘ವಾಮನ ಜಯಂತಿ’’ಯಾಗಿ ಪರಿವರ್ತಿಸಲು ವಿಫಲ ಪ್ರಯತ್ನ ನಡೆಸಿದ್ದರು. ಕೇರಳೀಯರು ಇದನ್ನು ಪ್ರಬಲವಾಗಿ ವಿರೋಧಿಸಿದ್ದರು. ಇಂತಹ ಹಸ್ತಕ್ಷೇಪವನ್ನು ಕರ್ನಾಟಕದಲ್ಲೂ ಕೇಂದ್ರ ಸರಕಾರ ನಡೆಸುತ್ತಿದೆ. ಅದರ ಮೊದಲ ಹೆಜ್ಜೆ ಹಿಂದಿ ಹೇರಿಕೆಯಾಗಿದೆ.

ಭಾರತದ ಎಲ್ಲ ಭಾಷಾ ವೈವಿಧ್ಯಗಳನ್ನು ಅಳಿಸಿ ಹಾಕಿ, ರಾಜ್ಯದ ಎಲ್ಲ ಸಾಂಸ್ಕೃತಿಕ ವೈವಿಧ್ಯಗಳನ್ನು ನಾಶ ಮಾಡಿ ಒಂದು ಸಂಸ್ಕೃತಿಯನ್ನು ಹೇರುವುದು ಕೇಂದ್ರ ಸರಕಾರದ ಹಿಡನ್ ಅಜೆಂಡಾ ಆಗಿದೆ ಮತ್ತು ಆ ಒಂದು ಸಂಸ್ಕೃತಿ ಯಾವುದು ಎನ್ನುವುದನ್ನು ಇಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ದಕ್ಷಿಣ ಭಾರತ ಈ ಹಿಂದೆಯೇ ದ್ರಾವಿಡ ಚಳವಳಿಯ ಮೂಲಕ ಆ ಸಂಸ್ಕೃತಿಯ ವಿರುದ್ಧ ಪ್ರತಿರೋಧವನ್ನು ಪ್ರದರ್ಶಿಸುತ್ತಲೇ ಬಂದಿದೆ. ಇದೀಗ ‘ರಾಷ್ಟ್ರೀಯತೆ’ಯ ಹೆಸರಲ್ಲಿ ಮತ್ತೆ ಆ ಸಂಸ್ಕೃತಿ ದಕ್ಷಿಣ ಭಾರತೀಯರ ಮೇಲೆ, ಕನ್ನಡಿಗರ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಏಕ ಭಾಷೆ, ಏಕ ಸಂಸ್ಕೃತಿ ಮತ್ತು ಒಂದು ರಾಷ್ಟ್ರ ಎನ್ನುವ ಕಲ್ಪನೆಯಡಿಯಲ್ಲಿ, ಹಿಂದುತ್ವ ಅಥವಾ ಬ್ರಾಹ್ಮಣ್ಯವನ್ನು ಜಾರಿಗೆ ತರುವುದೇ ಅವರ ಅಂತಿಮ ಗುರಿಯಾಗಿದೆ. ಹಿಂದಿ ಹೇರಿಕೆಯ ಹಿಂದೆ ಆರೆಸ್ಸೆಸ್ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿರುವುದು ಇದೇ ಕಾರಣಕ್ಕೆ.

 ಕನ್ನಡ ಸಂಸ್ಕೃತಿ ಎನ್ನುವುದು ಒಂದು ಭಾಷೆಗಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನು ನೆನಪಲ್ಲ್ಲಿಟ್ಟುಕೊಳ್ಳಬೇಕು. ಕನ್ನಡ ಮಾತನಾಡುತ್ತಾನೆ ಎನ್ನುವುದಷ್ಟೇ ಕನ್ನಡಿಗನಾಗಿರುವುದಕ್ಕೆ ಮಾನದಂಡವಲ್ಲ. ಕನ್ನಡ ಪರಂಪರೆಯನ್ನು, ಅದು ಪ್ರತಿಪಾದಿಸುತ್ತಾ ಬಂದಿರುವ ಜೀವನ ವೌಲ್ಯಗಳನ್ನೂ ನಾವು ರೂಢಿಸಿಕೊಳ್ಳಬೇಕು. ಈ ರಾಜ್ಯದ ವಿಶೇಷತೆಯೆಂದರೆ, ಇಲ್ಲಿರುವ ಪ್ರತೀ ಜಾತಿ, ಧರ್ಮಗಳಿಗೂ ತಮ್ಮದೇ ಆದ ಮಾತೃಭಾಷೆಯಿದೆ. ಮನೆಯಲ್ಲಿ ಆಡುವ ಭಾಷೆಯೇ ಬೇರೆ, ಸಾರ್ವಜನಿಕವಾಗಿ ಬಳಸುವ ಭಾಷೆಯೇ ಬೇರೆ. ಕನ್ನಡ ಮಾತೃಭಾಷೆಯೇ ರಾಜ್ಯಭಾಷೆಯೇ ಎನ್ನುವುದು ಚರ್ಚೆಯಲ್ಲಿರುವ ವಿಷಯ. ಇದೇ ಸಂದರ್ಭದಲ್ಲಿ ತಮ್ಮ ಮನೆಭಾಷೆ ಯಾವುದೇ ಆಗಿರಲಿ, ಕನ್ನಡ ಭಾಷೆಯ ಮೂಲಕ ಈ ನಾಡಿನ ಜನತೆ ಒಂದಾಗಿ ಬೆಸೆಯಲ್ಪಟ್ಟಿರುವುದು ಸುಳ್ಳಲ್ಲ. ಕನ್ನಡವೆಂದರೆ ಇಂತಹ ವೈವಿಧ್ಯಮಯ ಸಂಸ್ಕೃತಿಗಳ ಒಕ್ಕೂಟವಾಗಿದೆ.

ವಚನಕಾರರಿಂದ, ಸೂಫಿಸಂತರಿಂದ, ಭಕ್ತಿ ಪಂಥದಿಂದ, ಜಾನಪದ ಹಾಡುಗಾರರಿಂದ ರೂಪುಗೊಂಡ ನಾಡು ನಮ್ಮದು. ಇದು ಪ್ರತಿಪಾದಿಸುತ್ತಾ ಬಂದಿರುವ ಮಾನವೀಯ ವೌಲ್ಯಗಳು ಶ್ರೇಷ್ಠವಾದುದು. ಕನ್ನಡ ಭಾಷೆಯ ಅಳಿವು ಎಂದರೆ, ಈ ವೌಲ್ಯಗಳ ಅಳಿವು ಎಂದರ್ಥ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವಿರುದ್ಧ ಹುನ್ನಾರ ಮಾಡುವವರ ಗುರಿ ಕೇವಲ ಭಾಷೆ ಮಾತ್ರವಲ್ಲ, ಆ ಮೂಲಕ ವಚನಕಾರರು, ಸೂಫಿಸಂತರು ಬಿತ್ತಿ ಬೆಳೆಸಿದ ಮಾನವೀಯ ಚಿಂತನೆಗಳನ್ನು ಅಳಿಸಿ ಹಾಕುವುದು ಅವರ ಉದ್ದೇಶವಾಗಿದೆ. ಆದುದರಿಂದಲೇ ಮುಂದಿನ ದಿನಗಳಲ್ಲಿ ಕನ್ನಡಿಗರ ಪಾಲಿಗೆ ನವೆಂಬರ್ 1ರ ದಿನ ಆಗಸ್ಟ್ 15ರಷ್ಟೇ ಮಹತ್ವವನ್ನು ಪಡೆಯಬೇಕಾಗಿದೆ.

ಈಗಾಗಲೇ ಕನ್ನಡ ಬಾವುಟ ಸುದ್ದಿಯಲ್ಲಿದೆ. ಕರ್ನಾಟಕ ತನ್ನದೇ ಆದ ಧ್ವಜವನ್ನು ಹೊಂದುವುದರ ಬಗ್ಗೆ ಕೇಂದ್ರದ ಕೆಲವು ನಾಯಕರು ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕನ್ನಡದ ಮೇಲೆ ಕೇಂದ್ರ ನಡೆಸುತ್ತಿರುವ ದಾಳಿಯನ್ನು ಗಮನಿಸಿದಾಗ ನಾವು ನಮ್ಮದೇ ಆದ ಧ್ವಜದ ಅಡಿಯಲ್ಲಿ ಭಾರತೀಯತೆಯನ್ನು ಪ್ರದರ್ಶಿಸಬೇಕಾದುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ, ಶೀಘ್ರದಲ್ಲೇ ಎಲ್ಲ ಜಾತಿ, ಧರ್ಮ, ಸಮುದಾಯಗಳನ್ನು ಬೆಸೆಯ ಬಲ್ಲಂತಹ ಕನ್ನಡ ಧ್ವಜ ಅಧಿಕೃತತೆಯನ್ನು ಪಡೆಯಬೇಕಾಗಿದೆ. ಹಾಗೆಯೇ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಡೆಗೆ ಸರಕಾರ ತುರ್ತಾಗಿ ಗಮನ ಹರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)