varthabharthi

ನಿಮ್ಮ ಅಂಕಣ

‘ಸೂಕ್ತ ಕ್ರಮ’ ಕೇವಲ ಮಾತಿಗೆ ಸೀಮಿತವೇ?

ವಾರ್ತಾ ಭಾರತಿ : 2 Nov, 2017
-ಜಿ.ಅಬ್ದುರ್ರಹ್ಮಾನ್, ಕಕ್ಕೆಪದವು

ಮಾನ್ಯರೆ,

ದಲಿತರ ಮೇಲಿನ ವಿವಿಧ ರೀತಿಯ ಭೀಕರ ದೌರ್ಜನ್ಯಕ್ಕೆ ಹಲವು ಬಾರಿ ಈ ದೇಶ ಸಾಕ್ಷಿಯಾಗಿದೆ. ಕೇವಲ ವರ್ಷದಿಂದೀಚೆಗೆ ಸಾವಿರಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು ಹಲವಾರು ಕೊಲೆ ಪ್ರಕರಣಗಳೊಂದಿಗೆ ನೂರಾರು ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ವರದಿ ಹೊರಗೆಡಹಿದೆ. ಹೆಚ್ಚಾಗಿ, ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ಹೇರಳ ಪ್ರಕರಣಗಳು ಬೆಳಕಿಗೆ ಬಂದಿರುವುದು ನೋವಿನ ಸಂಗತಿ. ದಲಿತರೆಡೆಗಿರುವ ಸ್ಪಂದನೆ ಕಳೆದುಕೊಳ್ಳುತ್ತಿರುವುದರ ಸಂಕೇತವಿದು. ಪ್ರಕರಣ ನಡೆದಾಗ ರಾಜಕಾರಣಿಗಳು ನೀಡುವ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯಲ್ಲಿ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ.

ಕೇವಲ ಭರವಸೆ, ಬರಹ, ಭಾಷಣಗಳಿಂದ ದಲಿತರ ಜೀವನ ಮಟ್ಟದ ಸುಧಾರಣೆ ಸಾಧ್ಯವಿಲ್ಲ. ಕಾನೂನಿನ ಬಗ್ಗೆ ಆರೋಪಿಗಳಿಗಿರುವ ನಿರ್ಭೀತಿಯ ಮನಸ್ಥಿತಿಯೇ ಇಂತಹ ಪ್ರಕರಣಗಳಿಗೆ ಪ್ರೇರಕ ಶಕ್ತಿಯಾಗಿರುತ್ತದೆ. ಸೂಕ್ತ ಕ್ರಮ ಎನ್ನುವುದು ಹೇಳಿಕೆಗಷ್ಟೆ ಮೀಸಲಾಗದೆ, ಕಾರ್ಯರೂಪ ತಳೆದರೆ ಮಾತ್ರ ದಲಿತರ ಉದ್ಧಾರ ಸಾಧ್ಯ. ರಾಜ್ಯದಲ್ಲಿನ ಹಲವಾರು ಪ್ರಕರಣಗಳು ಇನ್ನೂ ಇತ್ಯರ್ಥಗೊಂಡಿಲ್ಲವಾದ್ದರಿಂದ ಸೂಕ್ತ ಕ್ರಮದ ಅನುಷ್ಠಾನಕ್ಕೆ ಇನ್ನೂ ಸಮಯವಿದೆ. ತಮ್ಮನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳುವುದನ್ನು ಅರಿತುಕೊಂಡು ದಲಿತರು ಎಚ್ಚೆತ್ತುಕೊಳ್ಳಬೇಕಾಗಿದೆ. ತಮ್ಮ ಅಸ್ತಿತ್ವವನ್ನು ಅಳಿಸಲು ಹೊರಟವರ ಧ್ವನಿಯನ್ನು ದಮನಿಸಿ ಜಾತ್ಯತೀತ ಭಾರತವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ. ಜನ ಪ್ರತಿನಿಧಿಗಳು ಸೂಕ್ತ ಕ್ರಮದ ಭರವಸೆ ಜಾರಿಗೊಳಿಸುವಲ್ಲಿ ತಮ್ಮ ಅಸ್ತಿತ್ವದ ಉಳಿವನ್ನು ಭದ್ರಪಡಿಸಬೇಕಿದೆ.
 

 

Comments (Click here to Expand)