varthabharthi

ಅನುಗಾಲ

ಮತ ಕ್ಷೇತ್ರಗಳ ಭೇಟಿ ಮತ್ತು ಮತಗಳ ಬೇಟೆ

ವಾರ್ತಾ ಭಾರತಿ : 2 Nov, 2017
ಬಾಲಸುಬ್ರಹ್ಮಣ್ಯ ಕಂಜರ್ಪನೆ

ದೇಶದ ಪ್ರಧಾನಿಯಾದವರು ಚಿಕ್ಕಪುಟ್ಟ ರಾಜಕಾರಣಿಗಳಂತೆ ವ್ಯವಹರಿಸುವುದನ್ನು ತ್ಯಜಿಸಬೇಕಾಗುತ್ತದೆ. ಇತರರಿಗೆ ಈ ಹಂಗಿಲ್ಲ. ಪ್ರಧಾನಿ ಯಾವುದೇ ರಾಜ್ಯಕ್ಕೆ ಬಂದರೂ ಅಲ್ಲಿನ ಮುಖ್ಯಮಂತ್ರಿಗಳೇ ಪ್ರಧಾನಿಯ ಆತಿಥೇಯರು. ರಾಜಕೀಯದಲ್ಲಿ ಎಷ್ಟೇ ತೀವ್ರ ಭಿನ್ನಾಭಿಪ್ರಾಯಗಳೂ ಇಂತಹ ಔಪಚಾರಿಕ ನೆಲೆಗೆ ಅಥವಾ ಮೌಲ್ಯಕ್ಕೆ ಅಡ್ಡಿಮಾಡಬಾರದು.


ಮೊನ್ನೆ ಈ ದೇಶದ ಪ್ರಧಾನಿ ಧರ್ಮಸ್ಥಳಕ್ಕೆ ಭೇಟಿಕೊಟ್ಟರು. ಪ್ರಧಾನಿಯೊಬ್ಬರು ಧಾರ್ಮಿಕ/ಮತೀಯ ಕ್ಷೇತ್ರಗಳಿಗೆ ಭೇಟಿ ನೀಡುವ ಸಂಪ್ರದಾಯ ಮೊದಲಿನಿಂದಲೂ ಇದೆ. ಇಂದಿರಾ, ರಾಜೀವ್ ಮುಂತಾದವರು ಧರ್ಮಸ್ಥಳಕ್ಕೆ ಬಂದಿದ್ದಾರೆ. ರಾಷ್ಟ್ರಪತಿ ಗಿರಿಯವರೂ ಭೇಟಿ ನೀಡಿದ್ದರು. ಇನ್ನೂ ಅನೇಕರು ಬಂದಿರಬಹುದು. ನನ್ನಲ್ಲಿ ಪಟ್ಟಿಯಿಲ್ಲ. ನೆಹರೂ ಭೇಟಿಕೊಟ್ಟದ್ದು ನನ್ನ ಗಮನಕ್ಕೆ ಬಂದಿಲ್ಲ. ಮೋದಿಯವರಿಗೆ ಅದ್ದೂರಿಯ ಸಾಂಪ್ರದಾಯಿಕ ಸ್ವಾಗತ ನಡೆಯಿತು. ಸಹಜವೇ. ಇದೊಂದು ‘ನಭೂತೋ ನಭವಿಷ್ಯತಿ’ ಎಂದು ಒಂದು ವರ್ಗ ಭಾರೀ ಪ್ರಚಾರ ನಡೆಸಿತು. ಇರಲಿ. ಪಕ್ಷದ ಕಾರ್ಯಕರ್ತರು ಅಷ್ಟೂ ಮಾಡದಿದ್ದರೆ ಹೇಗೆ?

ಆದರೆ ಮೋದಿಯವರು ಬಂದದ್ದು ರುಪೇ ಕಾರ್ಡು ಹಂಚಿಕೆಗೆ. ಸುಮಾರು 12 ಲಕ್ಷ ಕಾರ್ಡುಗಳನ್ನು ಹಂಚುತ್ತಾರೆಂದು ವರದಿಯಾಗಿತ್ತು. ಸಾಂಕೇತಿಕವಾಗಿ (ಪ್ರಾಯಃ ಬಹುಸಂಖ್ಯಾತ-ಅಲ್ಪಸಂಖ್ಯಾತ ಈ ಎಲ್ಲ ಕ್ಷೇತ್ರಗಳ ಒಂದೊಂದು ಜಾತಿ-ಮತದಿಂದ ಒಬ್ಬೊಬ್ಬರನ್ನು ಆರಿಸಿ!) ಕೆಲವು ಕಾರ್ಡುಗಳನ್ನು ಅವರು ಹಂಚಿದರು. ಮುಂದೆ ಬೆಂಗಳೂರಿಗೆ ಹೋದರು. ಸೌಂದರ್ಯ ಲಹರಿ ಕಾರ್ಯಕ್ರಮದ ಸಂಪನ್ನತೆಯಲ್ಲಿ ಭಾಗವಹಿಸಿದರು. ಕನ್ನಡದ ಪತ್ರಿಕೆಯೊಂದು ರಾಜ್ಯದ ಎಲ್ಲ ಆವೃತ್ತಿಗಳಲ್ಲಿ ಒಂದು ಪೂರ್ಣ ಪುಟವನ್ನು ಜಾಹೀರಾತಿನಂತೆ ಈ ಕಾರ್ಯಕ್ರಮಕ್ಕೆ ಮೀಸಲಿಟ್ಟಿತು.

ಅದೇ ದಿನ ರಾಯಚೂರಿನಲ್ಲಿ ಮದ್ಯಪಾನವನ್ನು ನಿಷೇಧಿಸಲು ಒತ್ತಾಯಿಸುವ ರಾಜ್ಯಮಟ್ಟದ ಸಮಾವೇಶವೊಂದು ನಡೆಯಿತು. ಅಲ್ಲೂ ಸುಮಾರು ಹದಿನೈದು ಸಾವಿರಕ್ಕೂ ಮಿಕ್ಕಿ ಮಹಿಳೆಯರು ಭಾಗವಹಿಸಿದ್ದರು. ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮೇಧಾಪಾಟ್ಕರ್ ಪಾಲ್ಗೊಂಡಿದ್ದರು. ಅದಕ್ಕೆ ಸಿಗಬೇಕಾದ ಪ್ರಚಾರ ಸಿಗಲಿಲ್ಲ. (ಪ್ರಧಾನಿಯವರ ಧರ್ಮಸ್ಥಳದ ಭೇಟಿಗೂ ಈ ಸೌಂದರ್ಯಲಹರಿಯ ಪ್ರಾಮುಖ್ಯತೆಯನ್ನು ಅದು ನೀಡಲಿಲ್ಲ/ನೀಡಿರಲಿಲ್ಲ.) ಇರಲಿ, ಇದು ಪತ್ರಿಕಾಧರ್ಮದ ಸ್ವಾತಂತ್ರ್ಯವಲ್ಲದಿದ್ದರೂ ಪತ್ರಿಕೋದ್ಯಮದ ಸ್ವಾತಂತ್ರ್ಯ. ಇದರ ನಡುವೆ ವಿಮಾನ ನಿಲ್ದಾಣದ ಬಳಿ ಪಕ್ಷದ ಕಾರ್ಯಕರ್ತರನ್ನು ದ್ದೇಶಿಸಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳ ನಡುವೆ ಪ್ರಧಾನಿ ರಾಜಕಾರಣವನ್ನೂ ಮಾಡಿದರು. ಅನಿವಾರ್ಯ ಬಿಡಿ, ಅಗತ್ಯವಿಲ್ಲದಿದ್ದರೂ ಅಲ್ಲೂ ರಾಜ್ಯ ಸರಕಾರದ ವಿರುದ್ಧ ಮತ್ತು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದರು.

ಈ ಇಡೀ ಯೋಜನೆಯ ಹಿಂದೆ ಒಂದು ಮತೀಯ ಮತ್ತು ಧರ್ಮದ ಹೆಸರಿನಲ್ಲಿ ಜನಮನದ ಶೋಷಣೆಯ ಘಾಟು ಕಾಣುತ್ತಿತ್ತು. ಮುಂದಿನ ವರ್ಷ ಕರ್ನಾಟಕದ ಶಾಸನಸಭೆಗೆ ಚುನಾವಣೆಯಿಲ್ಲದಿರುತ್ತಿದ್ದರೆ ಪ್ರಧಾನಿ ಈ ಭೇಟಿಗಳನ್ನು ಮಾಡುತ್ತಿದ್ದರೋ ಎಂಬ ಬಗ್ಗೆ ಸಂಶಯವಿದೆ. (ಇನ್ನೀಗ ಅವರ ಭೇಟಿಯ ಸುರಿಮಳೆ ಕಾದಿದೆ!) ಈಚೆಗೆ ಗುಜರಾತ್ ಒಂದೇ ರಾಜ್ಯಕ್ಕೆ ಪ್ರಧಾನಿ ಒಂದೇ ತಿಂಗಳಿನಲ್ಲಿ ನಾಲ್ಕು ಸಲವಾದರೂ ಭೇಟಿ ನೀಡಿ ಅಲ್ಲಿ ವಿವಿಧ ಯೋಜನೆಗಳನ್ನು ಆರಂಭಿಸಿದರು ಇಲ್ಲವೇ ಘೋಷಿಸಿದರು. ಒಂದು ನಗರ ಸಭೆಯ ಅಧ್ಯಕ್ಷರು ಮಾಡಬೇಕಾದ ಆರಂಭೋತ್ಸವವನ್ನೂ ಪ್ರಧಾನಿಯೇ ನೆರವೇರಿಸಿದ್ದು ವಿಶೇಷ. ಹಿಮಾಚಲ ಪ್ರದೇಶದ ಚುನಾವಣೆಯೊಂದಿಗೆ ಗುಜರಾತಿನ ಚುನಾವಣೆಯನ್ನು ಘೋಷಿಸದೆ ಅವರಿಗೆ ಈ ಕರುಣಾವಕಾಶ (Grace Period) ನೀಡಿದ ಚುನಾವಣಾ ಆಯೋಗವು ಧನ್ಯ.

ಮತ-ಧರ್ಮಗಳನ್ನು ರಾಜಕೀಯಕ್ಕೆ ಸೇರಿಸದಿರುವುದೇ ಜಾತ್ಯತೀತತೆ. ಅಡ್ವಾಣಿಯವರು ‘ಢೋಂಗಿ ಜಾತ್ಯತೀತತೆ’ ಎಂಬ ಪದವನ್ನು ಹುಟ್ಟು ಹಾಕಿ ಒಂದು ಶಾಶ್ವತ ಮೌಲ್ಯದ ಘನಸ್ಥಿಕೆಯನ್ನೇ ಮಣ್ಣುಪಾಲು ಮಾಡಿದರು. ಇಂದು ಹಾದಿಹೋಕರೆಲ್ಲಾ ‘ಸಿಕ್ಯುಲರ್’, ‘ಢೋಂಗೀ ಜಾತ್ಯತೀತತೆ’ ಎಂಬ ಪದಗಳನ್ನು ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ. ಫೇಸ್‌ಬುಕ್ ಅಂತೂ ನಮ್ಮ ಹೊರ-ಒಳ ಚರಂಡಿಗಳಿಗಿಂತಲೂ ಗಬ್ಬೆದ್ದು ನಾರುತ್ತಿದೆ. ಅದನ್ನು ಮಾದರಿಯಾಗಿಟ್ಟುಕೊಂಡು ಕನ್ನಡದಲ್ಲಿ ’ಮುಖವಾಣಿ’ ಎಂಬ ಪತ್ರಿಕೆಯನ್ನು ಆರಂಭಿಸಬಹುದು. ಜಾಣರು ಈ ಕಡೆ ಗಮನಹರಿಸಬಹುದು. ಈ ಪದಕ್ಕೆ ಇನ್ನೂ ಕೃತಿಸ್ವಾಮ್ಯ ಹಕ್ಕನ್ನು ಯಾರೂ ಪ್ರತಿಪಾದಿಸಿದಂತಿಲ್ಲ. ದ್ವಾಪರ ಯುಗದಲ್ಲಿ ಅಂದರೆ ಮಹಾಭಾರತದ ಕಾಲದಲ್ಲಿ ಧರ್ಮಕ್ಷೇತ್ರದಲ್ಲೇ ಕುರುಕ್ಷೇತ್ರ ನಡೆದಿದೆ.

ಇಂದು ಅವುಗಳೊಳಗೆ ಮೇಲಾಟ ನಡೆಯುತ್ತಿದೆ. ಹುಂಡಿಯ ಹಣದ ಆಧಾರದಲ್ಲಿ ಕ್ಷೇತ್ರದ ಖ್ಯಾತಿ ಮತ್ತು ಮಹಿಮೆಯ ಗುಣಗಾನ ನಡೆಯುತ್ತಿದೆ. ತಿರುಪತಿ ಶ್ರೀಮಂತ ಕ್ಷೇತ್ರವೆಂದು ಹೇಳಿದ ತಕ್ಷಣ ತಿರುವನಂತಪುರ ತನ್ನ ತಿಜೋರಿಯನ್ನು ಬಿಚ್ಚಿ ತೋರಿಸುತ್ತದೆ. ಕರ್ನಾಟಕದಲ್ಲಂತೂ ಕುಕ್ಕೆ ಸುಬ್ರಹ್ಮಣ್ಯದಂತಹ ಕ್ಷೇತ್ರಕ್ಕೆ ಇರಬಹುದಾದ ಗೌರವಕ್ಕೆ ಅದು ರಾಜ್ಯದಲ್ಲೇ ಅತೀ ಹೆಚ್ಚು ಹುಂಡಿ-ಭಂಡಾರಿಸುವ ಕ್ಷೇತ್ರವೆಂಬುದೇ ಮುಖ್ಯ ಕಾರಣವಾಗಿದೆ. ಆದ್ದರಿಂದ ನಮ್ಮ ಬಹುಪಾಲು ಹಿಂದೂ ಕ್ಷೇತ್ರಗಳು ಭಕ್ತಿಭಂಡಾರಕ್ಕೆ ಗಮನ ಕಡಿಮೆಮಾಡಿದಂತಿದೆ. (ಅದೇನಿದ್ದರೂ ಬಸವಣ್ಣನಿಗೆ ಮೀಸಲು.) ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತಿದೆಯಲ್ಲ. ಈಗ ರಾಜರಿಲ್ಲ; ಮಂತ್ರಿಗಳೇ ಎಲ್ಲ! ಅವರು ಪರೋಕ್ಷ ದೇವರುಗಳಿರುವ ಈ ಕೇಂದ್ರಗಳಿಗೆ ಭೇಟಿ ನೀಡುವುದರ ಮರ್ಮವೇನು? ಮತಕ್ಷೇತ್ರಗಳ ಭೇಟಿ ಮತಗಳ ಬೇಟೆಯೂ ಹೌದು. (ಮಸೀದಿ-ಚರ್ಚುಗಳಿಗೆ ಭೇಟಿ ನೀಡಿದರೆ ಅದು ಅಲ್ಪಸಂಖ್ಯಾತರ ಓಲೈಕೆ. ಹಿಂದೂ ಕ್ಷೇತ್ರಗಳಿಗೆ ಭೇಟಿ ನೀಡಿದರೆ ಅದು ಬಹುಸಂಖ್ಯಾತರ ಓಲೈಕೆಯೆಂದು ಯಾರೂ ಹೇಳುತ್ತಿಲ್ಲ.)

ದ್ವಾಪರದ/ಭಾಗವತದ ಕೃಷ್ಣಕಥೆಯಲ್ಲಿ ಶ್ರೀಕೃಷ್ಣನ ಸೋದರ ಮಾವ ಕಂಸ ತನಗೆ ಕೃಷ್ಣನಿಂದಲೇ ಸಾವು ಬರುತ್ತದೆಂಬ ಭೀತಿಯ ಸಂಕೇತದ ಜಾಡು ಹಿಡಿದು ಕನಸಿನಲ್ಲೂ ಭಯಪಡುತ್ತಾನೆ. (ಈ ಸನ್ನಿವೇಶವನ್ನು ಯಕ್ಷಗಾನದ ‘ಕಂಸವಧೆ’ಯಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸುತ್ತಾರೆ. ತೆಂಕುತಿಟ್ಟಿನ ಶ್ರೇಷ್ಠ ವೇಷಧಾರಿ, ‘ತುಕ್ಕಪ್ಪಯ್ಯ’ ಎಂದು ಜನಪ್ರಿಯರಾಗಿರುವ ದಿವಂಗತ ಪುತ್ತೂರು ಕೃಷ್ಣ ಭಟ್ಟರು ಕಂಸನ ಕನವರಿಕೆಯ ದೃಶ್ಯವನ್ನು ಅಭಿನಯಿಸುತ್ತಿದ್ದ ರೀತಿ ಅನನ್ಯ. ಅದನ್ನು ದಶಕಗಳ ಆನಂತರವೂ ನೋಡಿದವರು ನೆನಪಿಸುತ್ತಾರೆ.) ಈ ಪ್ರಸಂಗ ಅನೇಕ ಕಾರಣಗಳಿಗೆ ಮುಖ್ಯ. ಒಂದು: ತನ್ನನ್ನು ನಾಶಪಡಿಸುವ ಒಂದು ಪುಟ್ಟ ಶಕ್ತಿಯನ್ನು ಹೊಸಕಿ ಹಾಕಲು ಕಂಸ ನಡೆಸುವ ಪ್ರಯತ್ನಗಳು.

ಎರಡು: ಆದರೂ ತನ್ನ ನಾಶ ಈತನಿಂದಲೇ ಎಂಬ ಆಳದ ಮತ್ತು ಆಳವಾದ ವಿಶ್ವಾಸದಿಂದ ಹುಟ್ಟುವ ಭಯ. ಈ ಅಮೂರ್ತ ಭಯವೇ ಕೊನೆಗೂ ಆತನ ಮೂರ್ತ ಮನುಷ್ಯ (ಅಥವಾ ರಾಕ್ಷಸೀಯ) ಪ್ರಯತ್ನಗಳನ್ನು ಸೋಲಿಸುತ್ತದೆ. ಹೀಗೆ ತನ್ನ ಬದುಕಿನ ಬಗ್ಗೆ ವಿಶ್ವಾಸವನ್ನು ಕಳಕೊಂಡಿದ್ದರಿಂದಲೇ ಕಂಸನು ಕೃಷ್ಣನಿಗೆ ಸುಲಭದ ತುತ್ತಾದ. ತನ್ನ ಪಾಡಿಗೆ ತಾನು ನಂದಗೋಕುಲದಲ್ಲಿ ಬೆಳೆಯುತ್ತಿದ್ದ ಕೃಷ್ಣನಿಗೆ ಕೇಡು ಬಯಸಿ ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾದ ಆನಂತರ ಸಾವನ್ನು ತಾನಾಗಿ ಬರಮಾಡಿಕೊಂಡಂತೆ ಕಂಸ ಕೃಷ್ಣನನ್ನು ಬಿಲ್ಲ ಹಬ್ಬದ ನೆಪದಲ್ಲಿ ಮಥುರೆಗೆ ಆಹ್ವಾನಿಸಿದ. ಸ್ವಕ್ಷೇತ್ರದಲ್ಲೇ ಸಾಯಬೇಕೆಂದಿದ್ದರೆ ತಾನೇ ಇಂತಹ ಆಹ್ವಾನಗಳು ತಯಾರಾಗುವುದು!

ಇದೊಂದು ರೂಪಕ ಮಾತ್ರ. ವರ್ತಮಾನದಲ್ಲಿ ಗೆಲುವು-ಸೋಲುಗಳೇ ಹುಟ್ಟುಸಾವುಗಳಂತೆ. ಗೆಲುವನ್ನು ಸಂಪಾದಿಸಲು ಇನ್ನೊಬ್ಬರಿಗೆ ಅಡ್ಡಿಪಡಿಸಬೇಕಾದ ಅಗತ್ಯವಿಲ್ಲ. ತನ್ನ ನೇರಕ್ಕೆ ಓಟವನ್ನು ಮುಂದುವರಿಸಿದರೆ ಸಾಕು. ಮಿಲ್ಖಾ ಸಿಂಗ್ ಒಂದು ದುರದೃಷ್ಟಕರ ಕ್ಷಣದಲ್ಲಿ ಮುಖ ತಿರುಗಿಸಿ ತನ್ನ ಪ್ರತಿಸ್ಪರ್ಧಿಯತ್ತ ದೃಷ್ಟಿ ಹಾಯಿಸಿದ್ದಕ್ಕೇ ಒಲಿಂಪಿಕ್ ಕಂಚಿನ ಪದಕವೂ ತಪ್ಪಿಹೋಯಿತು. ಆದರೆ ರಾಜಕೀಯದಲ್ಲಿ ಸೋಲನ್ನು ತಪ್ಪಿಸಲು ಇನ್ನೊಬ್ಬರಿಗೆ ಅಡ್ಡಗಾಲು ಹಾಕುವುದು, ಹಳಿಯುವುದು ಆಪದ್ಧರ್ಮವೆನಿಸಿದೆ. ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂಬ ವಚನಕಾರರ ಮಾತು ರಾಜಕೀಯಕ್ಕೆ ಹೊಂದುವುದಿಲ್ಲ. ಏಕೆಂದರೆ ಬಹುಪಾಲು ಅಲ್ಲಿ ತನ್ನ ಬಗ್ಗೆ ಹೇಳುವುದಕ್ಕೆ, ಹೇಳಿಕೊಳ್ಳುವುದಕ್ಕೆ ಏನೂ ಇರುವುದಿಲ್ಲ. ಎದುರಾಳಿಯ ಮಾನಹರಣವೇ ತನ್ನ ಬಂಡವಾಳವೆನಿಸುತ್ತದೆ. ಹೀಗೆ ಪರಸ್ಪರ ದೂಷಣೆಯಲ್ಲಿ ಇಬ್ಬರ ಮಾನವೂ ಹರಾಜಾಗುತ್ತದೆ. ಇಷ್ಟಾದರೂ ಹಾರ್ದಿಕ್ ಪಟೇಲ್ ಹೇಳಿದಂತೆ ಮಹಾಚೋರರನ್ನು ಕೆಡವಬೇಕಾದರೆ ಚೋರರನ್ನು ಬೆಂಬಲಿಸಬೇಕಾಗುತ್ತದೆ.

ಕಾನೂನಿನಲ್ಲೂ ಮಹಾರೋಪಿಗಳನ್ನು ಶಿಕ್ಷಿಸಲು ಸಾಮಾನ್ಯ ಆರೋಪಿಗಳನ್ನು ಅಪ್ರೂವರ್ (ಮಾಫಿ ಸಾಕ್ಷಿದಾರ) ಎಂದು ಪರಿಗಣಿಸಲು ಅವಕಾಶವಿದೆ. ಅನೇಕ ಚಿಕ್ಕಪುಟ್ಟ ಕಳ್ಳರೇ ಪೊಲೀಸ್ ಮಾಹಿತಿದಾರರು. ದೇಶದ ಪ್ರಧಾನಿಯಾದವರು ಚಿಕ್ಕಪುಟ್ಟ ರಾಜಕಾರಣಿಗಳಂತೆ ವ್ಯವಹರಿಸುವುದನ್ನು ತ್ಯಜಿಸಬೇಕಾಗುತ್ತದೆ. ಇತರರಿಗೆ ಈ ಹಂಗಿಲ್ಲ. ಪ್ರಧಾನಿ ಯಾವುದೇ ರಾಜ್ಯಕ್ಕೆ ಬಂದರೂ ಅಲ್ಲಿನ ಮುಖ್ಯಮಂತ್ರಿಗಳೇ ಪ್ರಧಾನಿಯ ಆತಿಥೇಯರು. ರಾಜಕೀಯದಲ್ಲಿ ಎಷ್ಟೇ ತೀವ್ರ ಭಿನ್ನಾಭಿಪ್ರಾಯಗಳೂ ಇಂತಹ ಔಪಚಾರಿಕ ನೆಲೆಗೆ ಅಥವಾ ಮೌಲ್ಯಕ್ಕೆ ಅಡ್ಡಿಮಾಡಬಾರದು. ನೆಹರೂ ಯುಗದಲ್ಲಿ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳು ದೇಶದ ಏಳಿಗೆಗೆ ಅಥವಾ ಸಾಮಾಜಿಕ ಸೌಹಾರ್ದ ಸಂಬಂಧಗಳಿಗೆ ತೊಂದರೆ ಮಾಡುತ್ತಿರಲಿಲ್ಲ. ಆದರೆ ಇಂದು ಇದೆಲ್ಲ ಕಳೆದುಹೋಗಿದೆ; ಅಥವಾ ಕಳೆದುಹೋಗುತ್ತಿದೆ. ಇಷ್ಟೆಲ್ಲ ಬಹುಮತ, ಬೆಂಬಲ ಇವೆಲ್ಲದರ ನಡುವೆಯೂ ಪ್ರಧಾನಿಯವರು ಅನೇಕ ಪ್ರಸಂಗಗಳಲ್ಲಿ ಚಿಲ್ಲರೆ ರಾಜಕಾರಣಿಯಂತೆ ಅಥವಾ ಭಯಾವಹರಂತೆ, ಭಯವಿಹ್ವಲರಂತೆ ಕಾಣಿಸುತ್ತಾರೆ.

ಎಲ್ಲೇ ಮತ್ತು ಯಾವುದೇ ಉದ್ದೇಶಕ್ಕೇ ಹೋಗಲಿ, ಅಲ್ಲಿ ವಿರೋಧಪಕ್ಷಗಳನ್ನು ತೀರಾ ಗೌಣವಾಗಿ ಟೀಕಿಸುತ್ತಾರೆ. ತಮ್ಮ ಸರಕಾರದ ಸಾಧನೆಯನ್ನು ಅಂಕಿ-ಅಂಶಗಳ ಮೂಲಕ ಸಾಬೀತುಪಡಿಸುವುದರ ಬದಲು ಮತ್ತು ಸಾತ್ವಿಕವಾಗಿ ವರ್ತಿಸುವುದರ ಬದಲು ಘನಘೋರವಾಗಿ, ನಾಟಕೀಯವಾಗಿ ಘರ್ಜಿಸುತ್ತಾರೆ. 2014ರಿಂದ ಆರಂಭವಾದ ಆಡಳಿತಾವಧಿಯ ಮೊದಲ ಕೆಲವು ದಿನ, ವಾರ, ತಿಂಗಳು ಹೋಗಲಿ ಒಂದೆರಡು ವರ್ಷ ಅವರು ಹೀಗೆ ಸಾರಿದ್ದರೆ ಅದಕ್ಕೊಂದು ಅರ್ಥವಿದೆ. ಆದರೆ ನಾಲ್ಕನೆ ವರ್ಷದ ಈ ದಿನಗಳಲ್ಲೂ ತನ್ನ, ತಮ್ಮ ಬಗ್ಗೆ ಹೇಳದೆ ಕಾಂಗ್ರೆಸ್ ಬಗ್ಗೆ ಅವರು ಮಾತನಾಡುತ್ತಿರುವುದೇ ಕಂಸ-ಕನವರಿಕೆಯಾಗುತ್ತದೆಂಬ ಅರಿವು ಅವರಿಗಿಲ್ಲ.

ಮಾತು ಮನೆಯನ್ನು ಮಾತ್ರವಲ್ಲ, ರಾಜಕೀಯ ಪಕ್ಷಗಳನ್ನು, ಅವರ ಕುರಿತಾದ ಜನಾಭಿಪ್ರಾಯವನ್ನು ಕೆಡಿಸುತ್ತದೆ. ಭಾಜಪ ಗೆಲ್ಲುವುದಕ್ಕೆ ಕಾಂಗ್ರೆಸ್ ಎಷ್ಟು ಕಾರಣವೋ, ಕಾಂಗ್ರೆಸ್ ಪುನರುತ್ಥಾನಕ್ಕೆ ಮೋದಿಯೂ ಅಷ್ಟೇ ಕಾರಣರಾಗುತ್ತಾರೆ. ನಮ್ಮ ಜನರು ಯಾರನ್ನು ಆರಾಧಿಸಬೇಕೋ ಅವರನ್ನು ಮರೆತ ವಿಸ್ಮತಿಯ ಸ್ಥಿತಿಯಲ್ಲಿದ್ದಾರೆ. ರಾಜಕೀಯದ ನಾಯಕರೇ ಯುಗಪುರುಷರು ಎಂಬಂತೆ ಸ್ವಇಚ್ಛೆಯ ಗುಲಾಮಗಿರಿಗೆ ಬಲಿಯಾಗಿದ್ದಾರೆ. ಅಭಿಮಾನಿಗಳು ಭಕ್ತರಾಗಿ ಪರಿವರ್ತನೆಗೊಂಡಿದ್ದಾರೆ. ಪರಿಣಾಮವಾಗಿ ರಾಜಕಾರಣಿಗಳಿಗೂ ದೇವರೆಂಬ ಉದಾತ್ತ ಕಲ್ಪನೆಯು ಅಂತಿಮ ಗುರಿಯಾಗದೆ ಇನ್ನೇನನ್ನೋ ಸಾಧಿಸಲು ಇರುವ ಮಾಧ್ಯಮವಾಗಿ ಪರಿಣಮಿಸಿದೆ.

‘‘ಶ್ರೀಸಾಮಾನ್ಯನೆ ಭಗವನ್ ಮಾನ್ಯಂ; ಶ್ರೀಸಾಮಾನ್ಯನೆ ಭಗವದ್ ಧನ್ಯಂ! ಸಾಮಾನ್ಯವೆ ಭಗವಂತನ ರೀತಿ; ಸಾಮಾನ್ಯವೆ ದಿಟ ಭಗವತ್ ಪ್ರೀತಿ!’’ ಎಂಬ ಕವಿವಾಣಿಯನ್ನು ಈ ದೇವರುಗಳು ಓದಿದರೆ, ಕೇಳಿಸಿ ಕೊಂಡರೆ ನಿಜಕ್ಕೂ ಒಳ್ಳೆಯದಾದೀತು. ಮೊನ್ನೆ ಪ್ರಧಾನಿಯವರ ಭೇಟಿಗಾಗಿ ದಿನವೂ ಬರುವ ಭಕ್ತರ ಭೇಟಿಗೆ ಬೀಗ ಹಾಕಿದ ಭಗವಂತನಿಗೆ ರಾಜಕೀಯ ಶಾಶ್ವತವಲ್ಲ, ಭಕ್ತರ ಮುಗ್ಧತೆ ಮತ್ತು ಅದನ್ನಾಶ್ರಯಿಸಿದ ಭಗವಂತನ ಅಸ್ತಿತ್ವವೇ ಶಾಶ್ವತವೆಂದು ಯಾವಾಗ ಅರ್ಥವಾಗುತ್ತದೋ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)