varthabharthi

ಸಂಪಾದಕೀಯ

ಪರಿವರ್ತನಾ ಯಾತ್ರೆ ಎಂಬ ವ್ಯರ್ಥ ಕಸರತ್ತು

ವಾರ್ತಾ ಭಾರತಿ : 2 Nov, 2017

ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ನವೆಂಬರ್ 2ರಿಂದ 70 ದಿನಗಳವರೆಗೆ ನವಪರಿವರ್ತನಾ ಯಾತ್ರೆಯನ್ನು ಕೈಗೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಈ ಯಾತ್ರೆ ರಾಜ್ಯ ಸರಕಾರದ ಭ್ರಷ್ಟಾಚಾರ, ಅಧ್ಯಕ್ಷ ಆಡಳಿತ, ಧಾರ್ಮಿಕ ಉಗ್ರರ ಬಗ್ಗೆ ಮೃದುಧೋರಣೆ ಮುಂತಾದ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡಲಿದೆಯಂತೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು ಈ ಯಾತ್ರೆಯನ್ನು ಸಂಘಟಿಸಲಾಗಿದೆ. ಇದಕ್ಕಾಗಿ 1 ಕೋಟಿ ರೂ. ಮೊತ್ತದ ಐಷಾರಾಮಿ ವಾಹನವೊಂದು ಈಗ ಸಿದ್ಧವಾಗಿದೆ. ನವೆಂಬರ್ 2ರಂದು ನಡೆಯಲಿರುವ ಈ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬರಲಿದ್ದಾರೆ.

ಜನವರಿ 28ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಹುಬ್ಬಳ್ಳಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲಾದ ಘಟಾನುಘಟಿಗಳೇ ಆಗಮಿಸುವ ಸಾಧ್ಯತೆ ಇದೆ. ಈ ಕಾಲಾವಧಿಯಲ್ಲೇ ಪಕ್ಷದ ವಿಸ್ತಾರಕರು ನವೆಂಬರ್ 10ರೊಳಗೆ ಬೂತ್ ಮಟ್ಟದ ಅಭಿಯಾನವನ್ನು ಪೂರ್ಣಗೊಳಿಸುತ್ತಾರೆ. ಆವಾಗಲೇ ಬಿಜೆಪಿಯ ಶಕ್ತಿಯ ನಿಜವಾದ ಅರಿವಾಗುತ್ತದೆ ಎಂದು ವಕ್ತಾರರು ಹೇಳಿದ್ದಾರೆ.

ಈ ಪರಿವರ್ತನಾ ಯಾತ್ರೆಯನ್ನು ಮಾಡುವ ಮುನ್ನ ಬಿಜೆಪಿ ನಾಯಕರು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಬೇಕಾಗಿದೆ. ಯಾವ ಮುಖವಿಟ್ಟುಕೊಂಡು ಇವರು ಜನರ ಬಳಿ ಹೋಗುತ್ತಾರೆ? ಕರ್ನಾಟಕದ ಜನ ಈ ಹಿಂದೆ ಕಾಂಗ್ರೆಸನ್ನು ತಿರಸ್ಕರಿಸಿ ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಚುನಾಯಿಸಿದ್ದರು. ಆವಾಗ ಆಪರೇಶನ್ ಕಮಲದ ಮೂಲಕ ಬಹುಮತ ಮಾಡಿಕೊಂಡು ಬಿಜೆಪಿ ರಾಜ್ಯದ ಅಧಿಕಾರ ಹಿಡಿದಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಾಗಲೂ ಜನ ಇವರು ಹೊಸದೇನನ್ನೋ ಮಾಡುತ್ತಾರೆಂದು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ರಾಜ್ಯದಲ್ಲಿ ಬಿಜೆಪಿಯ ಐದು ವರ್ಷಗಳ ಆಡಳಿತದಲ್ಲಿ ಈ ಎಂತೆಂತಹ ಅನಾಹುತಗಳು ಸಂಭವಿಸಿವೆ ಎಂಬುದು ಎಲ್ಲರಿಗೂ ಗೊತ್ತಿದೆ.

ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರ ಆರೋಪದಲ್ಲಿ ಪರಪ್ಪನ ಅಗ್ರಹಾರದ ಜೈಲಿಗೆ ಹೋಗಿ ಬಂದರು. ಸಚಿವ ಸಂಪುಟದ ಇನ್ನೊಬ್ಬ ಹಿರಿಯ ಸಚಿವ ಗಣಿ ಲೂಟಿ ಹಗರಣದಲ್ಲಿ ಹೈದರಾಬಾದ್ ಚಂಚಲಗುಡದಲ್ಲಿ ಜೈಲುವಾಸವನ್ನು ಅನುಭವಿಸಿ ಬಂದರು. ಈಗ ಕೇಂದ್ರದಲ್ಲಿರುವ ಮೋದಿ ಸರಕಾರ ಸಿಬಿಐ ಎಂಬ ಅಸ್ತ್ರವನ್ನು ಬಳಸಿಕೊಂಡು ಈ ಗಣಿಲೂಟಿಕೋರರನ್ನು ಆರೋಪದಿಂದ ಮುಕ್ತಗೊಳಿಸಿದೆ. ಆದರೆ, ಇನ್ನೂ ಕೆಲವು ಪ್ರಕರಣಗಳು ತನಿಖಾ ಹಂತದಲ್ಲಿವೆ ಎಂದು ಸಿಬಿಐ ಸ್ಪಷ್ಟೀಕರಣವನ್ನು ನೀಡಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದ ಇನ್ನೊಬ್ಬ ಹಿರಿಯ ಸಚಿವ ತನ್ನ ಪುತ್ರನ ಸಹಿತ ಸೆರೆಮನೆ ವಾಸ ಅನುಭವಿಸಿದರು. ಆಗ ಸದನದಲ್ಲಿ ನೀಲಿ ಚಿತ್ರ ನೋಡಿದ ಮೂವರು ಮಂತ್ರಿಗಳು ಅಧಿಕಾರ ಕಳೆದುಕೊಂಡರು. ಅಷ್ಟೇ ಅಲ್ಲದೇ, ಆ ಐದು ವರ್ಷಗಳ ಕಾಲಾವಧಿಯಲ್ಲಿ ರಾಜ್ಯದಲ್ಲಿ ಅಲ್ಪಸಂಖ್ಯಾತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ, ಗೋರಕ್ಷಕರೆಂಬ ಗೂಂಡಾಗಳ ಹಾವಳಿ ಮಿತಿಮೀರಿ ನಡೆದು ಕಾನೂನು ಸುವ್ಯವಸ್ಥೆ ಕೂಡಾ ಹದಗೆಟ್ಟಿತ್ತು. ಇಂತಹವರು ಯಾವ ಮುಖವಿಟ್ಟುಕೊಂಡು ಮತ್ತೆ ಮತದಾರರ ಬಳಿಗೆ ಹೋಗುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ.

ಬಿಜೆಪಿ ನಾಯಕರು ತಮ್ಮ ಯಾತ್ರೆಗೆ ಪರಿವರ್ತನಾ ಯಾತ್ರೆ ಎಂಬುದರ ಬದಲಾಗಿ ಪಶ್ಚಾತ್ತಾಪ ಯಾತ್ರೆ, ಕ್ಷಮಾಯಾಚನೆ ಯಾತ್ರೆ ಎಂದು ಹೆಸರಿಟ್ಟು ಜನರ ಬಳಿ ಹೋಗಿದ್ದರೆ ಪ್ರಯೋಜನವಾಗುತ್ತಿತ್ತು. ಜನತೆ ತಮಗೆ ನೀಡಿದ್ದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮತದಾರರ ಮನೆಬಾಗಿಲಿಗೆ ಹೋಗಿ ಕ್ಷಮೆ ಯಾಚಿಸಬೇಕಾಗಿತ್ತು. ಆದರೆ, ಜನ ಇವರ ಮಾತಿಗೆ ಸ್ಪಂದಿಸದಿದ್ದರೂ ಇವರ ಮಾತನ್ನು ಸಹನೆಯಿಂದ ಕೇಳುತ್ತಿದ್ದರು. ಆದರೆ, ಈ ಯಾವ ಸೌಜನ್ಯ ಮತ್ತು ವಿನಯವಿಲ್ಲದೆ ಪರಿವರ್ತನಾ ಯಾತ್ರೆಗೆ ಹೊರಟಿರುವುದು ಜನತೆಗೆ ಮಾಡಿದ ಅವಮಾನವಾಗಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಯಾವುದೇ ಗಂಭೀರ ಸ್ವರೂಪದ ಆರೋಪಗಳು ಕಂಡುಬಂದಿಲ್ಲ.

ತೀರ್ಥಹಳ್ಳಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಟಿ.ರವಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹೋಗಿ ತಾವೇ ಅಪಹಾಸ್ಯಕ್ಕೀಡಾದರು. ಹೀಗಾಗಿ ಸರಕಾರದ ಹೆಸರು ಕೆಡಿಸಲು ಯಾವುದೇ ವಿಷಯಗಳು ಇಲ್ಲದಾಗ ಸಿದ್ದರಾಮಯ್ಯನವರು ಮೀನುತಿಂದು ಧರ್ಮಸ್ಥಳದ ದೇವಸ್ಥಾನಕ್ಕೆ ಹೋಗಿ ಬಂದರು, ಇದರಿಂದ ದೇವರಿಗೆ ಅಪಚಾರವಾಗಿದೆ ಎಂದು ಕೀಳುಮಟ್ಟದ ಅಪಪ್ರಚಾರ ನಡೆಸಿದ್ದಾರೆ. ಆದರೆ, ಧರ್ಮಸ್ಥಳದ ಆಡಳಿತಾಧಿಕಾರಿಗಳು ಮಾಂಸ ತಿಂದು ದೇವಾಲಯ ಪ್ರವೇಶಕ್ಕೆ ಅಭ್ಯಂತರವಿಲ್ಲವೆಂದು ಸ್ಪಷ್ಟೀಕರಣ ನೀಡಿದ ನಂತರವೂ ಇವರ ಅಪಪ್ರಚಾರ ನಿಂತಿಲ್ಲ. ಇನ್ನು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಲು ಹೋಗಿ ತಾವೇ ಒಂದು ಹಗರಣವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅವರು ಇಂಧನ ಸಚಿವೆಯಾಗಿದ್ದಾಗ ನಡೆದ ಪ್ರಕರಣವೊಂದು ಈಗ ಸದನ ಸಮಿತಿಯ ಮುಂದೆ ವಿಚಾರಣೆಯಲ್ಲಿದೆ. ಇನ್ನು ಪರಿವರ್ತನಾ ಯಾತ್ರೆಗೆ ಹೊರಟಿರುವ ಬಿಜೆಪಿ ಕರ್ನಾಟಕದಲ್ಲಿ ಒಡೆದ ಮನೆಯಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಪಕ್ಷದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕರೆಯುತ್ತಿರುವ ಕೋರ್ ಕಮಿಟಿ ಸಭೆಗಳಿಗೆ ಈಶ್ವರಪ್ಪನವರು ಬರುತ್ತಿಲ್ಲ. ಅನೇಕ ಬಾರಿ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಸದಾನಂದ ಗೌಡ ಯಡಿಯೂರಪ್ಪನವರು ಇರುವ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಮಿತ್ ಶಾ ಅವರಿಗೆ ಹೆದರಿ ಕೆಲ ಬಾರಿ ಬಹಿರಂಗವಾಗಿ ಕಾಣಿಸಿಕೊಂಡರೂ ಅಂತರಂಗದಲ್ಲಿ ವೈಷಮ್ಯದ ಲಾವರಸ ಕುದಿಯುತ್ತಿದೆ. ನವೆಂಬರ್ 1ರಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಯಡಿಯೂರಪ್ಪ ಮತ್ತು ಪಕ್ಷದ ಹಿರಿಯ ನಾಯಕ ಬಿ.ಎಲ್.ಸಂತೋಷ್ ಮುಖಾಮುಖಿಯಾದರೂ ಮಾತನಾಡಲಿಲ್ಲ.

ಇದು ವಿದ್ಯುನ್ಮಾನವಾಹಿನಿಗಳಲ್ಲಿ ದೊಡ್ಡ ಸುದ್ದಿಯಾಯಿತು. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಕೂಡಾ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುವುದಿಲ್ಲ ಎಂಬುದು ಪಕ್ಷದ ಆಂತರಿಕ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಹಾಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ತರಲು ಆರೆಸ್ಸೆಸ್ ಬಯಸುತ್ತಿದೆ. ಅದಕ್ಕೆ ಅಮಿತ್ ಶಾ ಅವರ ಒಪ್ಪಿಗೆಯೂ ಇದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಕೇಂದ್ರ ಸಚಿವ ಅನಂತಕುಮಾರ್ ಕೂಡಾ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಕಸರತ್ತುಗಳನ್ನು ನಡೆಸಿದ್ದಾರಂತೆ. ಮತ್ತೊಂದೆಡೆ ಯಾವುದೇ ಕಾರಣಕ್ಕೂ ಈಶ್ವರಪ್ಪನವರಿಗೆ ವಿಧಾನಸಭೆ ಟಿಕೆಟ್ ಕೊಡಬಾರದೆಂದು ಯಡಿಯೂರಪ್ಪ ಬಣ ಪಟ್ಟು ಹಿಡಿದಿದೆ. ಯಡಿಯೂರಪ್ಪನವರು ಶಿಕಾರಿಪುರದ ಬದಲಾಗಿ ಉತ್ತರಕರ್ನಾಟಕದ ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸಬೇಕೆಂದು ಈಶ್ವರಪ್ಪ ಬಣ ಅಮಿತ್ ಶಾ ಮೂಲಕ ಒತ್ತಡ ತರುತ್ತಿದೆ. ಇವೆಲ್ಲದರ ನಡುವೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಚಳವಳಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವುದರಿಂದ ಯಡಿಯೂರಪ್ಪನವರ ಬಲ ಕುಸಿದುಹೋಗಿದೆ ಎಂದು ಹೇಳಲಾಗುತ್ತಿದೆ.

ಈವರೆಗೆ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾ ಬಂದ ಬಹುತೇಕ ಲಿಂಗಾಯತರು ಈಗ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ವಿನಯ ಕುಲಕರ್ಣಿಯಂತಹ ಯುವ ನಾಯಕರಲ್ಲಿ ಭರವಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಹಲವಾರು ಕಾರಣಗಳಿಂದ ಬಿಜೆಪಿ ನಡೆಸಲು ಹೊರಟಿರುವ ಈ ಯಾತ್ರೆ ವ್ಯರ್ಥ ಪ್ರಹಸನವಾಗುವುದಲ್ಲದೆ ಬೇರೇನನ್ನೂ ಸಾಧಿಸಲು ಸಾಧ್ಯವಿಲ್ಲ. ರಾಜ್ಯದ ಪಕ್ಷದೊಳಗಿರುವ ಒಡಕಿನ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ತೀವ್ರ ಅಸಮಾಧಾನ ಉಂಟಾಗಿದೆ. ಇತ್ತೀಚೆಗೆ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಲು ಯಾಕೆ ಒತ್ತಾಯಿಸಿಲ್ಲ. ಯಾಕೆ ಸುಮ್ಮನೆ ಕುಳಿತಿದ್ದೀರಿ ಎಂದು ರಾಜ್ಯದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರಂತೆ. ಆನಂತರ ಒಮ್ಮೆಲೇ ಎಚ್ಚೆತ್ತ ಬಿಜೆಪಿ ನಾಯಕರು ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ರಾಜ್ಯವ್ಯಾಪಿ ಚಳವಳಿ ನಡೆಸುವುದಾಗಿ ಹೇಳಿದರು.

ಬಿಜೆಪಿ ನಾಯಕರ ಬೆದರಿಕೆಗೆ ಮಣಿಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೂಡ ಕೊಲೆ ಪ್ರಕರಣದ ಆರೋಪವಿದೆ. ಅದು ಎಫ್‌ಐಆರ್ ಕೂಡ ಆಗಿದೆ. ಕೇಂದ್ರದ ಸುಮಾರು 20 ಸಚಿವರು ತೀವ್ರವಾದ ಕ್ರಿಮಿನಲ್ ಆರೋಪಕ್ಕೆ ಒಳಗಾಗಿದ್ದಾರೆ. ಅವರ ಮೇಲೂ ಎಫ್‌ಐಆರ್ ಆಗಿದೆ. ಅವರ ರಾಜೀನಾಮೆ ಕೊಡಿಸಿ ಆನಂತರ ಜಾರ್ಜ್‌ರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು ಸವಾಲು ಹಾಕಿದರು. ಈ ಸವಾಲು ಹಾಕಿದ ಆನಂತರ ಚಳವಳಿಯ ಮಾತನ್ನು ಕೈಬಿಟ್ಟ ಬಿಜೆಪಿ ನಾಯಕರು ಈಗ ಪರಿವರ್ತನಾ ಯಾತ್ರೆಗೆ ಹೊರಟಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)