varthabharthi

ವಿಶೇಷ-ವರದಿಗಳು

ನಿಮ್ಮ ಐಡೆಂಟಿಟಿ ಕಳ್ಳತನವಾಗಿದ್ದರೆ ನೀವೇನು ಮಾಡಬೇಕು?

ವಾರ್ತಾ ಭಾರತಿ : 2 Nov, 2017

ಬೆಂಗಳೂರು ಮೂಲದ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಹರಿ ಕೆಲವು ವರ್ಷಗಳಿಂದ ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಬಳಿ ಇಲ್ಲಿಯ ಕ್ರೆಡಿರ್ಟ್ ಕಾರ್ಡ್ ಇದ್ದು, ಅದನ್ನು ಅವರು ಬಳಸುತ್ತಿರಲಿಲ್ಲ ಮತ್ತು ರದ್ದುಗೊಳಿಸಿಯೂ ಇರಲಿಲ್ಲ. ಅದೊಂದು ದಿನ ಅವರ ಬ್ಯಾಂಕಿನಿಂದ ಬಂದಿದ್ದ ಕರೆಯು ‘ನಿಮ್ಮ ಕ್ರೆಡಿಟ್ ಮಿತಿಯು ಮುಗಿದುಹೋಗಿದೆ ಮತ್ತು ಬಾಕಿಯನು ತೀರಿಸುವ ಕೊನೆಯ ದಿನಾಂಕ ಹತ್ತಿರವಾಗುತ್ತಿದೆ’ ಎಂಬ ಮಾಹಿತಿಯನ್ನು ನೀಡಿತ್ತು. ಆಘಾತಗೊಂಡ ಹರಿಗೆ ತನ್ನ ಹಣಕಾಸು ದಾಖಲೆಗಳ ಕಳ್ಳತನವಾಗಿದೆ ಮತ್ತು ಅವುಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎನ್ನುವುದು ಅರ್ಥವಾಗಿತ್ತು. ಇದನ್ನು ಐಡೆಂಟಿಟಿ ಕಳ್ಳತನ ಎಂದು ಕರೆಯಲಾಗುತ್ತದೆ.

   ಐಡೆಂಟಿಟಿ ಕಳ್ಳತನವು ಬ್ಯಾಂಕ್ ಖಾತೆಯ ಸಂಖ್ಯೆ, ಆಧಾರ್ ಸಖ್ಯೆ ಮತ್ತು ಕ್ರೆಡಿಟ್ ಕಾರ್ಡ್ ಸಂಖ್ಯೆಯಂತಹ ವ್ಯಕ್ತಿಯ ವೈಯಕ್ತಿಕ ಐಡೆಂಟಿಟಿಯನ್ನು ವ್ಯಾಖ್ಯಾನಿಸುವ ಆತನ ವೈಯಕ್ತಿಕ ಮಾಹಿತಿಗಳನ್ನು ಅಕ್ರಮವಾಗಿ ಪಡೆದುಕೊಳ್ಳುವ ಅತ್ಯಂತ ಸಾಮಾನ್ಯ ಸೈಬರ್ ಅಪರಾಧವಾಗಿದೆ. ಸೈಬರ್ ಕಳ್ಳರು ಈ ದಾಖಲೆಗಳ ನೆರವಿನಿಂದ ತಾವು ಅದೇ ವ್ಯಕ್ತಿಯೆಂದು ಬಿಂಬಿಸಿ ಹಣಕಾಸು ಲಾಭಗಳನ್ನು ಮಾಡಿಕೊಳ್ಳುತ್ತಾರೆ.

ಹರಿಯ ಪ್ರಕರಣದಲ್ಲಿ ಅವರ ಹಣಕಾಸು ದತ್ತಾಂಶಗಳ ಕಳ್ಳತನವಾಗಿತ್ತು. ಸೈಬರ್ ಅಪರಾಧಿಗಳು ವಿಳಾಸ, ಇ-ಮೇಲ್ ಐಡಿ, ಫೋನ ನಂಬರ್‌ನಿಂದ ಹಿಡಿದು ತೆರಿಗೆ ರಿಟರ್ನಗಳು, ಕ್ರೆಡಿಟ್ ಕಾರ್ಡ್ ಮಾಹಿತಿ, ಬ್ಯಾಂಕ್ ಖಾತೆಗಳ ವಿವರ, ಫೋಟೊಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳವರೆಗೆ ನಿಮ್ಮ ಹಲವಾರು ಐಡೆಂಟಿಟಿ ದತ್ತಾಂಶಗಳನ್ನು ಕದಿಯುತ್ತಾರೆ. ಇಂತಹ ಕೆಲವು ಕಳ್ಳತನಗಳು ಗಂಭೀರ ಪರಿಣಾಮ ಗಳನ್ನು ಉಂಟು ಮಾಡಬಲ್ಲವು.

ಉದಾಹರಣೆಗೆ ಆಧಾರ್ ಗುರುತು ಹಲವಾರು ಕಾರ್ಯಗಳಿಗೆ ಬಳಕೆಯಾ ಗುವುದರಿಂದ ಅದರ ಕಳ್ಳತನವು ವ್ಯಕ್ತಿಗೆ ತೀವ್ರ ಹಾನಿಯನ್ನುಂಟು ಮಾಡಬಹುದು. ಹೆಚ್ಚಿನ ಸೈಬರ್ ದಾಳಿಗಳು ನಿಮ್ಮ ಹಣಕಾಸು ದತ್ತಾಂಶಗಳು ಅಥವಾ ಇ-ಮೇಲ್ ಪಾಸ್‌ವರ್ಡ್‌ಗಳನ್ನು ಗುರಿಯಾಗಿಸಿಕೊಂಡಿರುತ್ತವೆ. ನಿಮ್ಮ ಸಿಸ್ಟಮ್‌ನಲ್ಲಿ ಮಾಲ್‌ವೇರ್ ಸೇರಿಸುವುದರಿಂದ ಹಿಡಿದು ಯಾರಾದರೂ ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ನ್ನು ನೋಡುವವರೆಗೆ ಹಲವಾರು ರೀತಿಗಳಲ್ಲಿ ನಿಮ್ಮ ಐಡೆಂಟಿಟಿ ಯನ್ನು ಕಳವು ಮಾಡಬಹುದು.

 ಐಟೆಂಟಿಟಿ ಕಳವು ನಿಮಗೆ ಹಲವಾರು ರೀತಿಗಳಲ್ಲಿ ನಷ್ಟವನ್ನುಂಟು ಮಾಡಬಹುದು. ನಿಮ್ಮ ಬ್ಯಾಂಕ್ ದತ್ತಾಂಶ ಕಳ್ಳತನವಾದರೆ ಅದರಿಂದ ನೀವು ಹಣವನ್ನು ಕಳೆದುಕೊಳ್ಳ ಬಹುದು. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆ ಕಳ್ಳತನವಾದರೆ ನೀವು ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಬಹುದು ಅಥವಾ ನಿಮ್ಮ ಖಾಸಗಿ ಫೋಟೊಗಳು ಅಂತರ್ಜಾಲ ದಲ್ಲಿ ಹರಿದಾಡಬಬಹುದು.

ಐಡೆಂಟಿಟಿ ಕಳ್ಳತನವಾದ ಸಂದರ್ಭದಲ್ಲಿ ನೀವೇನು ಮಾಡಬಹುದು?

ಏನು ಕಳ್ಳತನವಾಗಿದೆ ಎನ್ನುವುದನ್ನು ವಿಶ್ಲೇಷಿಸಿ

ಐಡೆಂಟಿಟಿ ಕಳ್ಳತನಗಳಲ್ಲಿ ಹಲವಾರು ವಿಧಗಳಿವೆ. ನೀವು ಯಾವ ಅಪರಾಧದ ಬಲಿಪಶುವಾಗಿದ್ದೀರಿ ಎನ್ನುವುದನ್ನು ಗುರುತಿಸಲು ಪ್ರಯತ್ನಿಸಿ. ಏಕಕಾಲದಲ್ಲಿ ಹಲವಾರು ಕಳ್ಳತನಗಳಿಗೆ ನೀವು ಬಲಿಯಾಗಿರುವ ಸಾಧ್ಯತೆಯು ಇರುತ್ತದೆ.

ಮೂಲವನ್ನು ಪತ್ತೆ ಹಚ್ಚಿ

ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಕ್ರಮವನ್ನು ಕೈಗೊಳ್ಳುವ ಮೊದಲು ಅದರ ಮೂಲವನ್ನು ಪತ್ತೆ ಹಚ್ಚಲು ಪ್ರಯತ್ನಿಸಿ. ನೀವು ಸೈಬರ್ ಖದೀಮರ ಕೈಚಳಕಕ್ಕೆ ಬಲಿಯಾಗಿದ್ದೀರಿ ಎನ್ನುವುದು ಗೊತ್ತಾದ ತಕ್ಷಣ ಇದಕ್ಕೆ ಕಾರಣವಾಗಿರಬಹುದಾದ ನಿಮ್ಮ ಇತ್ತೀಚಿನ ಆನ್‌ಲೈನ್ ಚಟುವಟಿಕೆಗಳನ್ನು ನೆನಪಿಸಿಕೊಳ್ಳಿ. ಉದಾಹರಣೆಗೆ ಹೊಸ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಲು ನೀವು ಕ್ರೆಡಿಟ್ ಕಾರ್ಡ್‌ನ್ನು ಬಳಸಿರಬಹುದು ಅಥವಾ ಹೊಸ ಮೂಲದಿಂದ ಬಂದಿರುವ ಇ-ಮೇಲ್‌ಗೆ ಸ್ಪಂದಿಸಿರಬಹುದು. ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗೆ ಹೊಸ ಸಾಫ್ಟ್‌ವೇರ್ ಅಥವಾ ಆ್ಯಪ್‌ನ್ನು ಅಥವಾ ವಿಲಕ್ಷಣವೆನ್ನಿಸುವ ಅಟ್ಯಾಚ್‌ಮೆಂಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿ ರಬಹುದು. ಇ-ಕಾಮರ್ಸ್ ಸೈಟ್‌ನಲ್ಲಿ ನೀವು ನೋಂದಣಿ ಮಾಡಿಕೊಂಡಿರಬಹುದು. ಇತ್ತೀಚಿಗೆ ರೊಮಾಟೊ ಆನ್‌ಲೈನ್ ಫುಡ್ ಆರ್ಡರಿಂಗ್ ಸೈಟ್‌ನ ಡಾಟಾಬೇಸ್‌ನ್ನು ಅತಿಕ್ರಮಿಸಿ ಗ್ರಾಹಕರ ವಿವರಗಳನ್ನು ಕಳವು ಮಾಡಲಾಗಿತ್ತು.

ಪಾಸ್‌ವರ್ಡ್‌ಗಳನ್ನು ಬದಲಿಸಿ

ಇಂತಹ ವಂಚನೆಗೆ ಗುರಿಯಾಗಿರುವವರು ಮಾಡುವ ಅತ್ಯಂತ ಸಾಮಾನ್ಯ ತಪ್ಪೆಂದರೆ ಐಡೆಂಟಿಟಿ ಕಳವಿನ ಬಳಿಕವೂ ತಮ್ಮ ಪಾಸ್‌ವರ್ಡ್‌ಗಳನ್ನು ಬದಲಿಸುವುದಿಲ್ಲ. ತಕ್ಷಣವೇ ನಿಮ್ಮ ಪಾಸ್‌ವರ್ಡ್‌ಗಳನ್ನು ಬದಲಿಸಿ ಮತ್ತು ಅವು ಹಳೆಯ ಪಾಸ್‌ವರ್ಡ್‌ಗಳನ್ನು ಹೋಲದಂತೆ ಎಚ್ಚರಿಕೆ ವಹಿಸಿ.

ನಿಮ್ಮ ಸಂಸ್ಥೆಗಳನ್ನು ಸಂಪರ್ಕಿಸಿ.

ಐಡೆಂಟಿಟಿ ಕಳ್ಳತನ ನಿಮ್ಮ ಅರಿವಿಗೆ ಬಂದ ತಕ್ಷಣ ನಿಮ್ಮ ದಾಖಲೆಗಳ ರಕ್ಷಣೆಗಾಗಿ ನಿಮ್ಮ ಬ್ಯಾಂಕುಗಳು, ಸಾಲ ಸಂಸ್ಥೆಗಳು, ವಿಮಾ ಕಂಪನಿಗಳು ಇತ್ಯಾದಿಗಳನ್ನು ತಕ್ಷಣ ಸಂಪರ್ಕಿಸಿ. ನಿಮ್ಮ ಹಾಲಿ ಖಾತೆಗಳನ್ನು ಮುಚ್ಚಿ ಹೊಸ ಐಡೆಂಟಿಫಿಕೇಷನ್ ಡಾಟಾದೊಂದಿಗೆ ಹೊಸ ಖಾತೆಗಳನ್ನು ತೆರೆಯಲೂ ನೀವು ನಿಮ್ಮ ಬ್ಯಾಂಕುಗಳನ್ನು ಕೇಳಿಕೊಳ್ಳಬಹುದು. ನಿಮ್ಮ ಅನುಮತಿಯಿಲ್ಲದೆ ವ್ಯವಹಾರ ನಡೆದ ಯಾವುದೇ ಖಾತೆಯನ್ನು ನೀವು ಮುಚ್ಚಲೇಬೇಕು.

ಪೊಲೀಸರಿಗೆ ಮಾಹಿತಿ ನೀಡಿ

ನೀವು ವಂಚನೆಯ ಬಲಿಪಶುವಾಗಿದ್ದೀರಿ ಎನ್ನುವುದನ್ನು ರುಜುವಾತು ಮಾಡಬೇಕೆಂದಿ ದ್ದರೆ ತಕ್ಷಣ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಂ ಸೆಲ್‌ಗೆ ದೂರು ನೀಡಿ. ಪೊಲೀಸರು ಔಪಚಾರಿಕವಾಗಿ ದೂರನ್ನು ದಾಖಲಿಸಿಕೊಂಡು ಪ್ರಕರಣದ ತನಿಖೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸದಿದ್ದರೂ ದೂರು ನೀವು ಐಡೆಂಟಿಟಿ ಕಳ್ಳತನಕ್ಕೆ ಬಲಿಪಶುವಾಗಿದ್ದೀರಿ ಎನ್ನುವುದನ್ನು ರುಜುವಾತುಗೊಳಿಸಲು ನೆರವಾಗುತ್ತದೆ. ಅಲ್ಲದೆ ಪೊಲೀಸ್ ದೂರು ದಾಖಲಿಸದಿದ್ದರೆ ಬ್ಯಾಂಕುಗಳಿಂದ ಪರಿಹಾರ ಕೋರಿಕೆ ಇತ್ಯಾದಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುವದಿಲ್ಲ. ಅದು ಹೊಸ ಖಾತೆಯನ್ನು ತೆರೆಯಲು ಮತ್ತು ವಿಮೆಯನ್ನು ನವೀಕರಿಸಲೂ ನೆರವಾಗುತ್ತದೆ.

ಕಂಪ್ಯೂಟರ್‌ನಲ್ಲಿ ವೈರಸ್ ಇದೆಯೇ ಎಂದು ನೋಡಿ

ನಿಮ್ಮ ಐಡೆಂಟಿಟಿಯು ಮಾಲವೇರ್ ಅಥವಾ ವೈರಸ್ ಮೂಲಕ ಕಳ್ಳತನವಾಗಿದ್ದರೆ ಅದಿನ್ನೂ ನಿಮ್ಮ ಕಂಪ್ಯೂಟರ್‌ನಲ್ಲಿ ಅಡಗಿರಬಹುದು ಮತ್ತು ಪುನಃ ದಾಳಿ ಮಾಡಬಹುದು. ನಿಮ್ಮ ಕಂಪ್ಯೂಟರ್ ವೈರಸ್ ಸೋಂಕಿಗೊಳಗಾಗಿದೆಯೆಂದು ನೀವು ಭಾವಿಸಿದ್ದರೆ ಅಪ್‌ಡೇಟೆಡ್ ಆ್ಯಂಟಿ ವೈರಸ್ ಪ್ರೋಗ್ರಾಮ್‌ನ್ನು ಬಳಸಿ ಮತ್ತು ವೈರಸ್‌ನ್ನು ತೆಗೆದುಹಾಕಲು ತಜ್ಞರ ಸಲಹೆ ಪಡೆದುಕೊಳ್ಳಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)