varthabharthi

ನಿಮ್ಮ ಅಂಕಣ

ಸರ್ದಾರ್ ಪಟೇಲರಿಗೆ ತೋರಿಸುತ್ತಿರುವುದು ಕೃತ್ರಿಮ ಗೌರವವಲ್ಲವೇ?

ವಾರ್ತಾ ಭಾರತಿ : 3 Nov, 2017
-ಜಿ.ರವಿಕಿರಣ, ಮೈಸೂರು

ಮಾನ್ಯರೆ,

ಗುಜರಾತ್ ಚುನಾವಣೆಯ ಪ್ರಚಾರದ ನಡುವೆ ಪ್ರಧಾನಿ ಮೋದಿಯವರು ಸರ್ದಾರ್ ಪಟೇಲರ ಹುಟ್ಟುಹಬ್ಬ ಆಚರಿಸುತ್ತಾ, ಸರ್ದಾರ್ ಪಟೇಲರು ಭಾರತದ ಮೊದಲ ಪ್ರಧಾನಿ ಆಗಬೇಕಿತ್ತು. ಆದರೆ ನೆಹರೂ ಅಡ್ಡಗಾಲು ಹಾಕಿದರು ಎಂದು ಇನ್ನೊಂದು ಹಸಿ ಸುಳ್ಳು ಎಂದಿನಂತೆ ಹೇಳಿದರು. ಆದರೆ ಸರ್ದಾರ್ ಪಟೇಲರ ಬಗ್ಗೆ ಮೋದಿ ಪ್ರದರ್ಶಿಸುತ್ತಿರುವ ನಕಲಿ ಪ್ರೀತಿಯ ಬಗ್ಗೆ ತಿಳಿಯ ಬೇಕಾದರೆ ಸಂಘ ಪರಿವಾರದವರಿಗೆ 1948ರಲ್ಲಿ ಸರದಾರ್ ಪಟೇಲರ ಬಗ್ಗೆ ಯಾವ ಅಭಿಪ್ರಾಯವಿತ್ತು ಎಂಬುದು ತಿಳಿಯುವುದು ಅಗತ್ಯ. ಗಾಂಧೀಜಿ ಹತ್ಯೆಯ ನಂತರ ಆರೆಸ್ಸೆಸ್‌ನ್ನು ನಿಷೇಧಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದವರು ಸರ್ದಾರ್ ಪಟೇಲರು. ನೆಹರೂ ಆರೆಸ್ಸೆಸ್ ಬಗ್ಗೆ ಮೃದು ಧೋರಣೆ ಹೊಂದಿದ್ದರಂತೆ. ಅದಕ್ಕಾಗಿ ಅಗೆಲ್ಲಾ ಆರೆಸ್ಸೆಸ್‌ನವರು ಗುಟ್ಟಾಗಿ ಹೇಳುತ್ತಿದ್ದರಂತೆ-ಪಟೇಲರಂತಹ ಶೂದ್ರನೊಬ್ಬ ಭಾರತದ ಮೊದಲ ಪ್ರಧಾನಿ ಆಗುವ ಬದಲು ಬ್ರಾಹ್ಮಣರಾದ ನೆಹರೂ ದೇಶದ ಮೊದಲ ಪ್ರಧಾನಿ ಆಗಿದ್ದು ತುಂಬಾ ಒಳ್ಳೆಯದಾಯಿತು ಎಂದು. ಈಗ ನೋಡಿದರೆ ಅದೇ ಆರೆಸ್ಸೆಸ್ ಮೂಲಕ ಅಧಿಕಾರಕ್ಕೆ ಬಂದ ಮೋದಿ ಹಸಿ ಹಸಿ ಸುಳ್ಳು ಹೇಳುತ್ತಾ ಪಟೇಲರನ್ನು ಹೊಗಳುತ್ತಾ ನೆಹರೂ ಮೇಲೆ ಗೂಬೆ ಕೂರಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಈಗಿನ ಗುಜರಾತ್ ಚುನಾವಣೆಯಲ್ಲಿ ಪಾಟಿದಾರ್ ಪಟೇಲ್ ಜಾತಿಯ ವೋಟಿಗಾಗಿ ಮಾತ್ರ ಮೋದಿ ಮತ್ತು ಆರೆಸ್ಸೆಸ್‌ನವರು ಸರ್ದಾರ್ ಪಟೇಲರಿಗೆ ಕೃತ್ರಿಮ ಗೌರವ ತೋರಿಸುತ್ತಿರುವುದು ಅಷ್ಟೇ.

1981ರಲ್ಲಿ ಜನತಾ ಪಾರ್ಟಿ ಇಬ್ಭಾಗವಾಗಿ ಮೊರಾರ್ಜಿ ದೇಸಾಯಿ ಸರಕಾರ ಬಿದ್ದ ನಂತರ ನಡೆದ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಮತ್ತೆ ಗೆದ್ದು ಬರಲು ಮೂಲ ಕಾರಣವೇನು ಗೊತ್ತೇ? ಜನತಾ ಪಾರ್ಟಿಯು ಬಾಬು ಜಗಜೀವನ್ ರಾಮ್ ಇವರನ್ನು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿತ್ತು. ಅದಕ್ಕಾಗಿ ಆರೆಸ್ಸೆಸ್‌ನವರು ಜಗಜೀವನ್ ರಾಮರಂತಹ ಒಬ್ಬ ದಲಿತ ಭಾರತದ ಪ್ರಧಾನಿ ಆಗುವ ಬದಲು ಬ್ರಾಹ್ಮಣತಿಯಾದ ಇಂದಿರಾ ಗಾಂಧಿಯೇ ಮತ್ತೆ ಪ್ರಧಾನಿ ಆಗಲಿ ಎಂದು ಹೇಳಿ ಒಳಗಿಂದೊಳಗೆ ಇಂದಿರಾ ಗಾಂಧಿ ಗೆಲ್ಲಲು ಸಹಾಯ ಮಾಡಿತ್ತು. ಆಗ ಜನಸಂಘವೂ ಜನತಾ ಪಾರ್ಟಿಯ ಭಾಗವಾಗಿತ್ತು. ಆದರೂ ಆರೆಸ್ಸೆಸ್‌ನವರು ತಮ್ಮದೇ ಜನತಾ ಪಾರ್ಟಿಯ ಗೆಲುವಿನ ಬದಲು ವೈರಿ ಇಂದಿರಾ ಕಾಂಗ್ರೆಸ್‌ನ ಗೆಲುವಿಗೆ ಸಕಲ ಪ್ರಯತ್ನ ಮಾಡಿ ಸಫಲರೂ ಆದರು. ಹೇಗಿದೆ ನೋಡಿ ಆರೆಸ್ಸೆಸ್‌ನ ದಲಿತ ದ್ವೇಷದ ಪರಾಕಾಷ್ಠೆ. ತಮ್ಮ ವೈರಿ ಗೆದ್ದರೂ ಪರವಾಗಿಲ್ಲ, ಆದರೆ ತಮ್ಮ ಪಕ್ಷದಲ್ಲಿ ದಲಿತನೊಬ್ಬ ಪ್ರಧಾನಿ ಆಗಬಾರದು ಎಂಬುದು ಆರೆಸ್ಸೆಸ್‌ನ ಗುಪ್ತ ನೀತಿ. ಜನತಾ ಪಾರ್ಟಿಯು ಬಾಬು ಜಗಜೀವನರಾಮರ ಬದಲು ಯಾವುದಾದರೂ ಒಬ್ಬ ಬ್ರಾಹ್ಮಣನನ್ನು ತಮ್ಮ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ್ದರೆ ಆಗ ಖಂಡಿತಾ ಜನತಾ ಪಾರ್ಟಿಯೇ ಗೆಲ್ಲುತ್ತಿತ್ತು. ಏನಾದರಾಗಲಿ ಒಬ್ಬ ದಲಿತ ಅಥವಾ ಮುಸ್ಲಿಂ ಭಾರತದ ಪ್ರಧಾನಿ ಆಗಲೇ ಬಾರದು ಎಂಬುದು ಆರೆಸ್ಸೆಸ್‌ನ ಗುಪ್ತ ಅಜೆಂಡಾ. ಇದೇ ಮಾನಸಿಕತೆ ಈಗ ಗುಜರಾತಿನಲ್ಲಿ ಸಂಘಪರಿವಾರಿಗರು ತೋರಿಸುತ್ತಾ, ಒಂದು ವೇಳೆ ಅಲ್ಲಿ ಕಾಂಗ್ರೆಸ್ಸಿಗೆ ಬಹುಮತ ಸಿಕ್ಕರೆ ಗುಜರಾತಿನ ಮುಂದಿನ ಮುಖ್ಯಮಂತ್ರಿ ಖಂಡಿತಾ ಒಬ್ಬ ಮುಸ್ಲಿಮನೇ ಆಗುತ್ತಾನೆ ಎಂದು ಆಪಪ್ರಚಾರ ಮಾಡಿ, ಗುಜರಾತಿನ ಹಿಂದೂ ಮತದಾರರನ್ನು ತಪ್ಪುದಾರಿಗೆಳೆದು, ಅವರ ವೋಟುಗಳನ್ನು ಬಿಜೆಪಿಗೆ ಸೆಳೆಯಲು ಕುತ್ಸಿತ ಪ್ರಯತ್ನ ಮಾಡುತ್ತಿದೆ.

 

Comments (Click here to Expand)