varthabharthi

ಸಂಪಾದಕೀಯ

ಭಾರತದ ಭವಿಷ್ಯವನ್ನು ಕಾಡಲಿರುವ ಅಪೌಷ್ಟಿಕತೆ

ವಾರ್ತಾ ಭಾರತಿ : 3 Nov, 2017

ಇತ್ತೀಚೆಗೆ ರಾಜಸ್ಥಾನ, ದಿಲ್ಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಧಾರ್‌ಕಾರ್ಡ್ ಹೊಂದಿಲ್ಲದ ಕಾರಣಕ್ಕಾಗಿ ಪಡಿತರ ವಿತರಣೆ ಸ್ಥಗಿತಗೊಂಡು ಹಲವರು ಹಸಿವಿನಿಂದ ಸತ್ತ ಸುದ್ದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತಂದಿದೆ. ಇಂತಹ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘‘ಡಿಜಿಟಲ್ ಯುಗ ಆರಂಭಗೊಂಡಿದೆ’’ ಎಂದು ಘೋಷಿಸುತ್ತಾರೆ. ಇನ್ನ್ನು ಬ್ಯಾಂಕುಗಳೇ ಕಾಲಿಡದ ಹಲವು ಜಿಲ್ಲೆಗಳು, ತಾಲೂಕುಗಳು ನಮ್ಮ ದೇಶದಲ್ಲಿವೆ. ಮೊಬೈಲ್‌ಗಳನ್ನು ಕಂಡರಿಯದ ಜನರು ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ವಿದ್ಯಾವಂತರೇ ಡಿಜಿಟಲ್ ಯುಗದ ಕುರಿತಂತೆ ಸಾಕಷ್ಟು ಗೊಂದಲ, ಅನುಮಾನಗಳನ್ನು ಹೊಂದಿರುವಾಗ, ಗ್ರಾಮೀಣ ಭಾರತದ ತಳಸ್ತರದ ಜನತೆ ಇದನ್ನು ಸ್ವೀಕರಿಸುವುದು ಹೇಗೆ ಸಾಧ್ಯ? ಆತುರಾತುರವಾಗಿ ಡಿಜಿಟಲ್ ವ್ಯವಹಾರಗಳನ್ನು ಜಾರಿಗೊಳಿಸಲು ಹೊರಡುವುದು ಎಂದರೆ, ಅಭಿವೃದ್ಧಿಯಿಂದ ಗ್ರಾಮೀಣ ಭಾರತವನ್ನು ಸಂಪೂರ್ಣ ಕೈಬಿಡುವುದೆಂದೇ ಅರ್ಥ. ಈ ಮೂಲಕ ಗ್ರಾಮ ಭಾರತ ನಗರಗಳ ಊಳಿಗ ಮಾಡುತ್ತಾ ಬದುಕುವುದು ಅನಿವಾರ್ಯವಾಗುತ್ತದೆ. ಡಿಜಿಟಲ್ ವ್ಯವಹಾರ ಅಧಿಕವಾದಂತೆ ಗ್ರಾಮೀಣ ಉದ್ದಿಮೆ ಹಂತಹಂತವಾಗಿ ನಾಶವಾಗುತ್ತದೆ. ಈ ದೇಶದಲ್ಲಿ ಬಡತನ, ನಿರುದ್ಯೋಗ ಇನ್ನಷ್ಟು ಹೆಚ್ಚಲಿದೆ. ಚಿಲ್ಲರೆ ಅಂಗಡಿಗಳೂ ಮಾಯವಾಗಲಿವೆ.

ಜಿಎಸ್‌ಟಿ ತೆರಿಗೆ ಮೂಲಕ ಖಜಾನೆ ತುಂಬಿಸುವ ಕನಸು ಕಾಣುತ್ತಿರುವ ಸರಕಾರ, ಮಗದೊಂದೆಡೆ ಜನಸಾಮಾನ್ಯರ ಬದುಕು ಕಟ್ಟುವ ಕನಸುಗಳನ್ನೇ ನಾಶ ಮಾಡುತ್ತಿದೆ. ಇದೇ ಹೊತ್ತಿನಲ್ಲಿ ಭಾರತ ಇನ್ನೊಂದು ಹೆಗ್ಗಳಿಕೆಯನ್ನೂ ತನ್ನದಾಗಿಸಿಕೊಂಡಿದೆ. ಭಾರತ ಮಕ್ಕಳ ಅಪೌಷ್ಠಿಕತೆಗಾಗಿ ವಿಶ್ವದಲ್ಲಿ ನಂ.1 ಎಂದು ಗುರುತಿಸಿಕೊಂಡಿದೆ. ವಿಶ್ವದ ಒಟ್ಟು ಮಕ್ಕಳಲ್ಲಿ ಅಪೌಷ್ಠಿಕತೆ ಹೊಂದಿರುವ ಶೇ.50 ಮಕ್ಕಳು ಭಾರತದಲ್ಲೇ ಇದ್ದಾರೆ ಎನ್ನುವುದು ಹೊರಬಿದ್ದಿದೆ. ಇದು ಮಕ್ಕಳಿಗಷ್ಟೇ ಸೀಮಿತವಾಗಿರುವ ವಿಷಯವೂ ಅಲ್ಲ. ದೊಡ್ಡವರೇ ಹಸಿವಿನಿಂದ ಸಾಯುವಂತಹ ಸ್ಥಿತಿ ಇರುವಾಗ, ಮಕ್ಕಳ ಅಪೌಷ್ಟಿಕತೆ ಭೀಕರ ರೂಪ ಪಡೆಯುವುದರಲ್ಲಿ ಅಚ್ಚರಿಯೇನಿದೆ?

ಮೋದಿಯ ನೋಟು ನಿಷೇಧ, ಆಧಾರ್ ಕಾರ್ಡ್, ಜಿಎಸ್‌ಟಿಯ ದಿನಗಳಿಂದ ಅಪೌಷ್ಟಿಕತೆ ಇನ್ನಷ್ಟು ವಿಸ್ತರಿಸುವುದಕ್ಕೆ ಆರಂಭಿಸಿದೆ. ನೋಟು ನಿಷೇಧದ ಬಳಿಕ ಕುಸಿದು ಬಿದ್ದಿರುವ ಆರ್ಥಿಕತೆಯ ದೆಸೆಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚಿದೆ. ಇದರ ನೇರ ಪರಿಣಾಮವನ್ನು ಮಕ್ಕಳು ಮತ್ತು ಮಹಿಳೆಯರು ಅನುಭವಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಗಂಭೀರ ಸ್ವರೂಪದ ಟಿಬಿ ಕಾಯಿಲೆ ಭಾರತಕ್ಕೆ ಮತ್ತೆ ಕಾಲಿಟ್ಟಿದೆ. ಅಪೌಷ್ಟಿಕತೆಯೊಂದಿಗೆ ಈ ಕಾಯಿಲೆಗೆ ನೇರ ಸಂಬಂಧವಿದೆ. ಅಪೌಷ್ಟಿಕತೆ ಎಂದರೆ ಪರೋಕ್ಷವಾಗಿ ಕಾಯಿಲೆಯೇ ಆಗಿದೆ. ಅದು ಬೇರೆ ಬೇರೆ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಉಣ್ಣುವ ಆಹಾರಕ್ಕೆ ಬರಗಾಲವಿರುವಾಗ ಇನ್ನು ಈ ಮಕ್ಕಳಿಗೆ ಔಷಧಿಯೆಲ್ಲಿಂದ ಬರಬೇಕು?

ದೇಶದಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕತೆಗೆೆ ಸರಕಾರದ ನೀತಿಯೂ ಕಾರಣವಾಗಿದೆ. ಒಂದು ರೀತಿಯಲ್ಲಿ, ಅಪೌಷ್ಟಿಕತೆಯನ್ನು ಪೋಷಿಸುವ ಕೆಲಸ ನಡೆಯುತ್ತಿದೆ. ಬಡವರ ಕೈಯಲ್ಲಿರುವ ಆಹಾರಗಳನ್ನು ಒಂದೊಂದಾಗಿ ಕಿತ್ತುಕೊಂಡು ಸರಕಾರ ಅವರನ್ನು ಅಸಹಾಯಕರನ್ನಾಗಿ ಮಾಡುತ್ತಿದೆ. ಗೋಮಾಂಸದ ಕುರಿತಂತೆ ಸರಕಾರ ಅನುಸರಿಸುತ್ತಿರುವ ದ್ವಂದ್ವ ನೀತಿ ಅಪೌಷ್ಟಿಕತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಒಂದೆಡೆ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವಲ್ಲಿ ಭಾರತ ಮುಂಚೂಣಿಯ ಸ್ಥಾನದಲ್ಲಿದೆ. ಆದರೆ ಇದೇ ಸಂದರ್ಭದಲ್ಲಿ ಭಾರತದೊಳಗೆ ಗೋಮಾಂಸ ಸೇವನೆಯನ್ನು ಬಲವಂತದಿಂದ ತಡೆಯಲಾಗುತ್ತಿದೆ. ಗೋಮಾಂಸಾಹಾರಿಗಳು ಹೈನುಗಾರಿಕೆಯ ಒಂದು ಭಾಗವಾಗಿ ಇದ್ದವರು. ಹೈನೋದ್ಯಮದ ಜೊತೆಗೆ ಬರೇ ಹಾಲು, ಮೊಸರು, ತುಪ್ಪ ಅಷ್ಟೇ ತಳಕು ಹಾಕಿಕೊಂಡಿಲ್ಲ.

ಬರೇ ಅಷ್ಟನ್ನೇ ನೆಚ್ಚಿಕೊಂಡು ಗೋವುಗಳನ್ನು ಸಾಕಿದರೆ ಸಾಕಣೆದಾರರು ನಷ್ಟವನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಹಾಲು ಕೊಡದ ಹಸುಗಳನ್ನು ಮಾರಾಟ ಮಾಡಿ ಅದರಿಂದ ಉಳಿದ ಗೋವುಗಳಿಗೆ ಆಹಾರವನ್ನು ಒದಗಿಸುವುದಕ್ಕೆ ರೈತರಿಗೆ ಸಾಧ್ಯವಾಗುತ್ತದೆ. ಜೊತೆಗೆ ಗೋವಿನ ಮಾಂಸ, ಚರ್ಮ, ಎಲುಬು ಎಲ್ಲಕ್ಕೂ ಮಾರುಕಟ್ಟೆಯಿರುವುದರಿಂದ ಗೋಸಾಕಣೆಯ ವೆಚ್ಚ ಕಡಿಮೆಯಾಗಿರುತ್ತಿತ್ತು. ಆದರೆ ಸರಕಾರ ಜಾರಿಗೆ ತರಲು ಹೊರಟ ಗೋಮಾರಾಟ ನಿಯಂತ್ರಣ ಕಾಯ್ದೆ ರೈತರ ಗೋವುಗಳನ್ನು ಮಾರುವ ಹಕ್ಕನ್ನೇ ಮೊಟಕುಗೊಳಿಸಿತು. ಇದೊಂದು ರೀತಿಯಲ್ಲಿ ರೈತರ ಪಾಲಿಗೆ ಇನ್ನೊಂದು ನೋಟು ನಿಷೇಧವಾಗಿತ್ತು. ತನ್ನ ಹಟ್ಟಿಯಲ್ಲಿ ತಾನು ಸಾಕುತ್ತಿರುವ ಹಸುಗಳನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಮಾರಾಟ ಮಾಡಲು ಹಕ್ಕಿಲ್ಲ ಎನ್ನುವುದು ಗ್ರಾಮೀಣ ಪ್ರದೇಶದ ಹೈನೋದ್ಯಮವನ್ನೇ ಬುಡಮೇಲುಗೊಳಿಸಿತು. ನಕಲಿ ಗೋರಕ್ಷಕರು ಈ ರೈತರ ಹಸುಗಳ ಮೇಲೆ ಹಕ್ಕು ಸಾಧಿಸತೊಡಗಿದರು. ರೈತರು ಹಾಲುಕೊಡದ ಹಸುಗಳನ್ನು ಅನಿವಾರ್ಯವಾಗಿ ಗೋಶಾಲೆಗಳಿಗೆ ಸೇರಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು.

ಗೋಶಾಲೆಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾಂಸ ಸಂಸ್ಕರಣಾ ಘಟಕಗಳಿಗೆ ಅನೈತಿಕ ಸಂಬಂಧವಿದೆ. ರೈತರ ಹಸುಗಳು ಅನಾಯಾಸವಾಗಿ ಕಡಿಮೆ ಬೆಲೆಗೆ ಈ ಸಂಸ್ಕರಣಾ ಘಟಕಗಳನ್ನು ಸೇರುವಂತಾಯಿತು. ಹೊರದೇಶಗಳಿಗೆ ಗೋಮಾಂಸ ರಫ್ತು ಹೆಚ್ಚಿತು. ಇತ್ತ ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ ಪುಟ್ಟ ಹಟ್ಟಿಗಳೆಲ್ಲ ಒಂದೊಂದಾಗಿ ಮುಚ್ಚ ತೊಡಗಿವೆ. ಪರಿಣಾಮವಾಗಿ, ಒಂದು ಕಾಲದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಅಧಿಕ ಪ್ರೊಟೀನ್ ಇರುವ ಗೋಮಾಂಸ ಜನರ ಪಾಲಿಗೆ ದುಬಾರಿ ಆಹಾರವಾಯಿತು. ಸಾಧಾರಣವಾಗಿ ಗೋಮಾಂಸವನ್ನು ತಳಸ್ತರದ ಜನರೇ ಅಧಿಕವಾಗಿ ಬಳಸುತ್ತಿದ್ದರು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಗೋಮಾಂಸದ ಬೆಲೆ ಕಿಲೋಗೆ 20 ರೂಪಾಯಿಯಿತ್ತು. ಇಂದು ಅದರ ಬೆಲೆ 300ರೂ. ದಾಟಿದೆ.

ಬಡವರಿಗೆ ಸುಲಭದಲ್ಲಿ ಸಿಗುತ್ತಿದ್ದ ಮಾಂಸವನ್ನು ಸರಕಾರವೇ ಕಿತ್ತುಕೊಂಡ ಕಾರಣದಿಂದ, ದೇಶದಲ್ಲಿ ಅಪೌಷ್ಟಿಕತೆ ಇನ್ನಷ್ಟು ಹೆಚ್ಚುವುದಕ್ಕೆ ಕಾರಣವಾಗಿದೆ. ಹಾಗೆಯೇ ದನ ಸಾಕಿ ಬದುಕು ನಡೆಸುತ್ತಿದ್ದ ನೂರಾರು ಕುಟುಂಬಗಳೂ ಬೀದಿಪಾಲಾದವು. ಅವರಿಗೆ ಬದುಕುವ ಬೇರೆ ದಾರಿಯಿಲ್ಲದ ಕಾರಣ ಕೂಲಿ ಕಾರ್ಮಿಕರಾಗಬೇಕಾಯಿತು. ನೋಟು ನಿಷೇಧದ ಬಳಿಕ ಅವರಿಗೆ ಕೂಲಿ ಕೆಲಸ ಸಿಗುವುದೂ ಕಷ್ಟವಾಗಿದೆ. ಶ್ರೀಮಂತರು ಕೂಲಿ ಕಾರ್ಮಿಕರನ್ನು ಕಡಿಮೆ ಬೆಲೆಗೆ ದುಡಿಸಲು ಶುರು ಹಚ್ಚಿದ್ದಾರೆ. ಇದೇ ಸಂದರ್ಭದಲ್ಲಿ, ಈ ಹಿಂದಿನಂತೆ ರೇಷನ್ ಅಂಗಡಿಗಳು ಸಕ್ರಿಯವಾಗಿ ನಡೆಯುತ್ತಿಲ್ಲ. ಅಲ್ಲಿ ಆಹಾರದ ಪೂರೈಕೆಗಳೂ ಸಮರ್ಪಕವಾಗಿಲ್ಲ. ಜೊತೆಗೆ ಆಧಾರ್ ಕಾರ್ಡ್‌ನಂತಹ ತಾಂತ್ರಿಕ ವಿಷಯವನ್ನಿಟ್ಟು ಸಿಬ್ಬಂದಿ ಶೋಷಿಸುವುದಕ್ಕೆ ಶುರು ಹಚ್ಚಿದ್ದಾರೆ. ಆಹಾರ ದೊರಕುವ ಎಲ್ಲ ದಾರಿಗಳನ್ನೂ ಸರಕಾರ ಹಂತಹಂತವಾಗಿ ಮುಚ್ಚ ತೊಡಗಿರುವುದರಿಂದ, ಭವಿಷ್ಯದಲ್ಲಿ ಅಪೌಷ್ಟಿಕತೆಯೇ ಒಂದು ಮಾರಕ ರೋಗವಾಗಿ ದೇಶವನ್ನು ಕಾಡಲಿದೆ.

ಮಕ್ಕಳು ಅಪೌಷ್ಟಿಕತೆಯ ಜೊತೆ ಜೊತೆಗೆ ಬೆಳೆಯತೊಡಗಿದ್ದರೆ ಅವರಿಂದ ಈ ದೇಶ ದೊಡ್ಡದನ್ನು ನಿರೀಕ್ಷಿಸುವುದಾದರೂ ಹೇಗೆ? ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿದೆ. ಅಂದರೆ ಅಪೌಷ್ಟಿಕತೆ ಹೀಗೆ ಮುಂದುವರಿದರೆ, ರೋಗಗ್ರಸ್ಥ ಭವಿಷ್ಯವೊಂದನ್ನು ಎದುರುಗೊಳ್ಳಲು ಭಾರತ ಸಿದ್ಧವಾಗಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)