varthabharthi

ಸಿನಿಮಾ

20 ನಿಮಿಷಗಳ ಚೇಸಿಂಗ್ 'ಸಾಹೋ' ಹೈಲೆಟ್

ವಾರ್ತಾ ಭಾರತಿ : 3 Nov, 2017

ಬಾಹುಬಲಿ ಬಳಿಕ, ಸಿನೆಮಾ ಪ್ರೇಮಿಗಳ ಕಣ್ಣುಗಳೀಗ ಪ್ರಭಾಸ್‌ರ ಮುಂದಿನ ಪ್ರಾಜೆಕ್ಟ್ ‘ಸಾಹೋ’ದೆಡೆಗೆ ನೆಟ್ಟಿದೆ. ಭಾರತೀಯ ಚಿತ್ರರಂಗ ಹಿಂದೆಂದೂ ಕಂಡಿರದಂತಹ ಮೈನವಿರೇಳಿಸುವ ಆ್ಯಕ್ಷನ್ ದೃಶ್ಯಗಳನ್ನು ಸಾಹೋ ಪ್ರೇಕ್ಷಕರಿಗೆ ಉಣಬಡಿಸಲಿದೆಯೆಂದು ಚಿತ್ರತಂಡ ತುಂಬು ಭರವಸೆಯಿಂದ ಹೇಳಿಕೊಂಡಿದೆ. ಬರೋಬ್ಬರಿ 20 ನಿಮಿಷಗಳ ಚೇಸಿಂಗ್ ದೃಶ್ಯವೊಂದು ಸಾಹೋದ ಹೈಲೈಟ್ ಆಗಿದ್ದು, ಅದರ ಚಿತ್ರೀಕರಣ ಸಂಪೂರ್ಣವಾಗಿ ಬುರ್ಜ್ ಖಲೀಫಾ ಸೇರಿದಂತೆ ದುಬೈನ ವಿವಿಧ ತಾಣಗಳಲ್ಲಿ ನಡೆಯಲಿದೆ. ಈ ಮೈನವಿರೇಳಿಸುವಂತಹ ಚೇಸಿಂಗ್ ದೃಶ್ಯಕ್ಕಾಗಿ ಹಾಲಿವುಡ್‌ನ ಖ್ಯಾತ ಸಾಹಸನಿರ್ದೇಶಕ ಕೆನ್ನಿಬೇಟ್ಸ್ ಅವರನ್ನು ಕರೆತರಲಾಗಿದೆ. ಕೆನ್ನಿ ಬೇಟ್ಸ್, ಹಾಲಿವುಡ್‌ನ ಆ್ಯಕ್ಷನ್ ಚಿತ್ರಗಳಾದ ಟ್ರಾನ್ಸ್ ಫಾರ್ಮರ್ಸ್‌(2007) ಹಾಗೂ ಡೈಹಾರ್ಡ್ (1988) ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ.

ಅದ್ಭುತವಾದ ಚೇಸಿಂಗ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಇಡೀ ಸಾಹೋ ತಂಡ ದುಬೈಗೆ ಪ್ರಯಾಣಿಸಲಿದೆ. ಇದಕ್ಕೆ ಪೂರ್ವತಯಾರಿಯಾಗಿ ಕೆನ್ನಿಬೇಟ್ಸ್ ಪ್ರಭಾಸ್ ಹಾಗೂ ಸಹನಟರಿಗೆ ತರಬೇತಿ ನೀಡುತ್ತಿದ್ದಾರೆ. ಪ್ರಭಾಸ್ ಹುಟ್ಟುಹಬ್ಬದಂದು ಸಾಹೋದ ಚೊಚ್ಚಲ ಪೋಸ್ಟರ್ ಬಿಡುಗಡೆಗೊಂಡಿದ್ದು, ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಬಾಲಿವುಡ್ ನಟಿ ಶ್ರದ್ಧಾಕಪೂರ್ ನಾಯಕಿಯಾಗಿದ್ದು, ಈ ಚಿತ್ರದೊಂದಿಗೆ ಮೊದಲ ಬಾರಿಗೆ ದಕ್ಷಿಣಭಾರತದ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನೀಲ್ ನಿತಿನ್ ಮುಖೇಶ್ ಆ್ಯಂಟಿ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸುಜೀತ್ ನಿರ್ದೇಶನದ ಸಾಹೋ 2018ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಒಟ್ಟಿನಲ್ಲಿ ಮುಂದಿನ ವರ್ಷವೂ ಪ್ರಭಾಸ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುವುದು ಗ್ಯಾರಂಟಿ ಎಂದು ಚಿತ್ರತಂಡದ ಅಂಬೋಣ.

 

Comments (Click here to Expand)