varthabharthi

ನಿಮ್ಮ ಅಂಕಣ

ಇಂತಹ ಆಡಂಬರ ಬೇಕಿತ್ತೇ?

ವಾರ್ತಾ ಭಾರತಿ : 4 Nov, 2017
-ಉದಯರಾಜ್ ಬಿ. ಆಳ್ವ, ಕಾಟಿಪಳ್ಳ, ಸುರತ್ಕಲ್

ಮಾನ್ಯರೆ,

ಘಜನಿಯಿಂದ ದಾಳಿಗೊಳಗಾಗಿದ್ದ ಗುಜರಾತಿನ ಸೋಮನಾಥ ದೇವಸ್ಥಾನವನ್ನು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಮರಳಿ ಕಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲರು. ಗಾಂಧೀಜಿ ಹತ್ಯೆಯ ನಂತರ ಆಗ ದೇಶದ ಎಲ್ಲಾ ಪ್ರಮುಖ ನೇತಾರರಿಗೆ ವಿಶೇಷ ಭದ್ರತೆ ಒದಗಿಸಲಾಗಿತ್ತು. ಒಮ್ಮೆ ಪಟೇಲರು ಸೋಮನಾಥ ದೇವಸ್ಥಾನಕ್ಕೆ ಹೋದಾಗ ಅವರೊಟ್ಟಿಗೆ ಬಂದಿದ್ದ ಭದ್ರತಾ ಸಿಬ್ಬಂದಿಯಿಂದಾಗಿ ಸಾಮಾನ್ಯ ಭಕ್ತರಿಗೆ ತೊಂದರೆ ಆಗುತ್ತಿರುವುದನ್ನು ಕಂಡು ಪಟೇಲರು ಹೇಳಿದ್ದೇನೆಂದರೆ­ ‘‘ನಾನು ದೇವಸ್ಥಾನಕ್ಕೆ ಬರುವುದರಿಂದ ಇತರ ನೈಜ ಭಕ್ತರಿಗೆ ಅನನುಕೂಲತೆ ಆಗುತ್ತಿದ್ದರೆ ನಾನು ದೇವರಿಗೆ ದೂರದಿಂದಲೇ ಕೈಮುಗಿದು ಹೋಗುತ್ತೇನೆ, ಅದರಿಂದ ದೇವರಿಗೆ ಹೆಚ್ಚು ಸಂತೋಷವಾಗುತ್ತದೆ, ತನ್ನ ಬಡ ಭಕ್ತರಿಗೆ ನನ್ನಿಂದ ಅನನುಕೂಲತೆ ಆಗುವುದನ್ನು ದೇವರು ಎಂದೂ ಮೆಚ್ಚಲು ಸಾಧ್ಯವಿಲ್ಲ’’ ಎಂದು ಹೇಳಿ ಸರ್ದಾರ್‌ಪಟೇಲರು ಅಂದು ಹೊರಗಿನಿಂದಲೇ ದೇವರಿಗೆ ಕೈಮುಗಿದು ಹೋದರಂತೆ. ನಂತರವೂ ಅವರು ತಾವೇ ಕಟ್ಟಿಸಿದ ಸೋಮನಾಥ ದೇವಸ್ಥಾನಕ್ಕೆ ಬರುವಾಗ ಹೆಚ್ಚಿನ ಭದ್ರತೆಯಿಲ್ಲದೆ ಹೆಚ್ಚಿನ ಪ್ರಚಾರದ ಆಡಂಬರವಿಲ್ಲದೇ ಒಬ್ಬ ಸಾಮಾನ್ಯ ಭಕ್ತನಂತೆ ಬಂದು ಕೈಮುಗಿದು ಹೋಗುತ್ತಿದ್ದರಂತೆ.

ಪಟೇಲರ ಜೀವನದ ಈ ಸಂಗತಿ ಈಗ ಜ್ಞಾಪಿಸಲು ಮುಖ್ಯ ಕಾರಣವೇನೆಂದರೆ ಮೊನ್ನೆ ಮೋದಿಯವರು ಧರ್ಮಸ್ಥಳಕ್ಕೆ ಬಂದಾಗ ಕರ್ಫ್ಯೂ ಹೇರಿದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಭದ್ರತಾ ಪಡೆಗಳು ಪೂರಾ ಎರಡು ದಿನ ಸಾಮಾನ್ಯ ಭಕ್ತರನ್ನು ಆ ಕ್ಷೇತ್ರದತ್ತ ಸುಳಿಯಲು ಬಿಟ್ಟಿರಲಿಲ್ಲ. ಸಣ್ಣ ಪುಟ್ಟ ಅಂಗಡಿಗಳನ್ನೂ ಎರಡು ದಿನ ಬಂದ್ ಮಾಡಿಸಿ ಆ ಬಡವರ ಹೊಟ್ಟೆಗೆ ಹೊಡೆಯಲಾಯಿತು. ಬಡ ಆಟೋರಿಕ್ಷಾ ಚಾಲಕರು ಮತ್ತು ಬಾಡಿಗೆ ವಾಹನದಾರರ ಕುಟುಂಬ ದವರಿಗೆ ಎರಡು ದಿನ ಆದಾಯವಿಲ್ಲದೆ ನರಳಿಸಲಾಯಿತು. ಸಾವಿರಾರು ಬಡ ಜನರಿಗೆ ವಿಪರೀತ ತೊಂದರೆ ಕೊಟ್ಟು ಪ್ರದರ್ಶಿಸಿದ ಇಂತಹ ಆಡಂಬರದ ಭಕ್ತಿಯನ್ನು ದೇವರು ಎಂದಾದರೂ ಮೆಚ್ಚಲು ಸಾಧ್ಯವೇ?

ಮೂವತ್ತು ವರ್ಷಗಳ ಹಿಂದೆ ಮಾಜಿ ಪ್ರಧಾನಿ ರಾಜೀವ್‌ಗಾಂಧಿಯವರೂ ಧರ್ಮಸ್ಥಳಕ್ಕೆ ಬಂದಿದ್ದರು. ಆಗ ಅವರು ಕೇವಲ ಒಂದು ಕಾಟನ್ ಪಂಚೆ ಮತ್ತು ಒಂದು ಸಾದಾ ಕಾಟನ್ ಟಾವೆಲ್ ಹೊದ್ದುಕೊಂಡು ದೇವರ ದರ್ಶನಕ್ಕೆ ತುಂಬಾ ಸರಳವಾಗಿ ಹೋಗಿದ್ದರು. ಆಗಲೂ ಟಿವಿ ಮತ್ತು ಪತ್ರಿಕೆಗಳ ಛಾಯಾಗ್ರಾಹಕರು ಅಲ್ಲಿಗೆ ಬಂದಿದ್ದರೂ ಅವರಲ್ಲಿ ಯಾರನ್ನೂ ರಾಜೀವ್ ಗಾಂಧಿ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗಲಿಲ್ಲ. ರಾಜೀವ ಗಾಂಧಿ ಬಂದಿದ್ದಾಗ ಕೇವಲ ಅರ್ಧ ಗಂಟೆ ಮಾತ್ರ ಸಾಮಾನ್ಯ ಭಕ್ತರಿಗೆ ದೇವಸ್ಥಾನದ ಒಳಗೆ ಹೋಗಲು ಬಿಟ್ಟಿರಲಿಲ್ಲ ಅಷ್ಟೇ. ಅಂದು ಹೊರಗಿನ ಯಾವುದೇ ಅಂಗಡಿಗಳನ್ನೂ ಬಂದ್‌ ಮಾಡಿರಲಿಲ್ಲ. ರಾಷ್ಟ್ರಪತಿ ವಿ.ವಿ. ಗಿರಿ ಬಂದಿದ್ದಾಗಲೂ ಯಾರಿಗೂ ಧರ್ಮಸ್ಥಳದಲ್ಲಿ ಅನನುಕೂಲತೆ ಆಗಿರಲಿಲ್ಲ. ಕುರುಡು ಮೋದಿ ಭಕ್ತರನ್ನು ಹೊರತು ಪಡಿಸಿ ಇತರ ಬಿಜೆಪಿ ಕಾರ್ಯಕರ್ತರೇ ಮೊನ್ನೆ ಮೋದಿಯಿಂದಾಗಿ ಸಾಮಾನ್ಯ ಭಕ್ತರಿಗೆ, ಸಣ್ಣ ಅಂಗಡಿಗಳವರಿಗೆ ಮತ್ತು ರಿಕ್ಷಾದವರಿಗೆ ಎರಡೆರಡು ದಿನ ವಿಪರೀತ ಅನನುಕೂಲತೆ ಆಗಿದ್ದಕ್ಕೆ ಬಹಿರಂಗವಾಗಿ ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿಯವರು ತಮ್ಮ ದೈವಭಕ್ತಿಯ ಬಹಿರಂಗ ಪ್ರದರ್ಶನ ಮಾಡುವುದು ಅನಿವಾರ್ಯ ಆಗಿತ್ತಾದರೂ ಹೆಚ್ಚಿನ ಪ್ರಜ್ಞಾವಂತರು ಇದನ್ನು ಅನುಮೋದಿಸುತ್ತಿಲ್ಲ. ದೇಶಭಕ್ತಿಯಂತೆಯೇ ದೇವರ ಭಕ್ತಿಯನ್ನೂ ಚುನಾವಣಾ ಪ್ರಚಾರದ ವಸ್ತುವಾಗಿ ಮಾಡುವುದನ್ನು ಯಾರೂ ಮೆಚ್ಚುವುದಿಲ್ಲ.

 

Comments (Click here to Expand)