varthabharthi

ನಿಮ್ಮ ಅಂಕಣ

ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಅನಿವಾರ್ಯ ಏಕೆಂದರೆ...

ವಾರ್ತಾ ಭಾರತಿ : 4 Nov, 2017
ಕು.ಸ.ಮಧುಸೂದನ ನಾಯರ್, ರಂಗೇನಹಳ್ಳಿ

ಇವತ್ತು ನೂರು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಅಸ್ತಿತ್ವ ಅಂತೇನಾದರೂ ಉಳಿಸಿಕೊಂಡು ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ನೆಹರೂ ಕುಟುಂಬದ ಆಕರ್ಷಣೆ ಕಾರಣವೇ ಹೊರತು ಬೇರೆಯೇನಲ್ಲ. ಇದು ಸತ್ಯವಾದ ಸಂಗತಿ. ನೆಹರೂ ಕುಟುಂಬದ ಆಚೆಗೆ ಪಕ್ಷ ಬಂದು ನಿಂತರೆ ಕೆಲವೇ ತಿಂಗಳುಗಳಲ್ಲ್ಲಿ ಅದು ತನ್ನ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದುಕೊಂಡು ಹತ್ತಾರೇನು, ನೂರಾರು ಚೂರುಗಳಾಗಿ ಒಡೆದು ಛಿದ್ರಗೊಳ್ಳುವುದು ಖಚಿತ.


ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊನ್ನೆ ಅಕ್ಟೋಬರ್ 31ರ ಒಳಗೆ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ವಿರಾಜಮಾನರಾಗಬೆಕಿತ್ತು. ಆದರೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭೆೆಗಳಿಗೆ ಘೋಷಣೆಯಾಗಿರುವ ಚುನಾವಣೆಗಳು ರಾಹುಲರ ಪದೋನ್ನತಿಗೆ ಅಡ್ಡಿಯಾಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಮತ್ತು ಭಾಜಪಕ್ಕೆ ಮಾಡು ಇಲ್ಲವೇ ಮಡಿ ಎನ್ನುವಷ್ಟರ ಮಟ್ಟಿಗೆ ಮಹತ್ವ ಪಡೆದಿರುವ ಈ ಚುನಾವಣೆಗಳಿಗೆ ಸಿದ್ಧತೆ ನಡೆದಿದ್ದು, ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟು ಹಂಚಿಕೆ ನಡೆದಿರುವ ಈ ಸಂಕೀರ್ಣ ಸಮಯದಲ್ಲಿ ಕಾರ್ಯಕರ್ತರಲ್ಲಿ ಅಲ್ಲದಿದ್ದರೂ ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರಲ್ಲಿ ಗೊಂದಲ ಮೂಡಿಸಬಹುದು.

ಪಕ್ಷದ ಅಧ್ಯಕ್ಷ ಸ್ಥಾನ ಒಬ್ಬ ವ್ಯಕ್ತಿಯ ಕೈಯಿಂದ ಇನ್ನೊಬ್ಬ ವ್ಯಕ್ತಿಯ ಕೈಗೆ ಬದಲಾಗುವಾಗ ಸಹಜವಾಗಿಯೇ ಅಧ್ಯಕ್ಷರಿಗೆ ಅನುಕೂಲವಾಗುವಂತೆ ಮತ್ತು ಅವರ ಚಿಂತನೆಯ ದಾಟಿಗೆ ಅನುಗುಣವಾಗುವಂತೆ ಪಕ್ಷದೊಳಗೆ ಹಲವು ಹುದ್ದೆಗಳಲ್ಲಿರುವ ವ್ಯಕ್ತಿಗಳು ಬದಲಾಗಬೇಕಿರುವುದು ಸಾಮಾನ್ಯವಾಗಿದೆ. ಖಂಡಿತ ವಾಗಿಯೂ ಕಾಂಗ್ರೆಸ್‌ನ ಚುನಾವಣೆಯ ಓಟದ ದೃಷ್ಟಿಯಿಂದ ಗುಜರಾತ್‌ನ ಚುನಾವಣೆಗಳು ಮುಗಿಯುವವರೆಗೂ ರಾಹುಲರ ಪದೋನ್ನತಿ ಸಾಧ್ಯವಾಗುವುದಿಲ್ಲವೆಂಬ ಮಾಹಿತಿಯನ್ನು ಆ ಪಕ್ಷದ ಕೆಲವು ನಾಯಕರೇ ಪಿಸು ಮಾತುಗಳಲ್ಲಿ ನುಡಿಯುತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ನಾಯಕರು ಇನ್ನೊಂದು ಮುಖ್ಯವಾದ ಕಾರಣವನ್ನು ನೀಡುತ್ತಿದ್ದಾರೆ. ಅಕಸ್ಮಾತ್ ಈಗ ರಾಹುಲರು ಅಧ್ಯಕ್ಷರಾಗಿಬಿಟ್ಟು, ತಕ್ಷಣದಲ್ಲಿಯೇ ನಡೆಯುವ ಗುಜರಾತ್‌ನಂತಹ ಪ್ರಮುಖ ರಾಜ್ಯದಲ್ಲಿ ಪಕ್ಷವೇನಾದರೂ ಸೋಲನ್ನಪ್ಪಿಬಿಟ್ಟರೆ ಅದು ರಾಹುಲ್‌ರ ನಾಯಕತ್ವಕ್ಕೆ ಅಂಟಿಕೊಳ್ಳಬಹುದಾದ ಕಪ್ಪು ಚುಕ್ಕೆಯಾಗಿಬಿಡುವ ಭಯ ಕಾಂಗ್ರೆಸ್‌ಗೆ ಇದೆ. ಈ ಕಾರಣಗಳಿಂದಾಗಿಯೇ ಹಿಮಾಚಲ ಪ್ರದೇಶ ಮತ್ತು ಗುಜರಾತಿನ ಚುನಾವಣೆಗಳ ಪಲಿತಾಂಶ ಪ್ರಕಟವಾದ ನಂತರವೇ ರಾಹುಲರು ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ.

ಹೇಗಿದ್ದರೂ ಪಕ್ಷಗಳ ಆಂತರಿಕ ಚುನಾವಣೆಗಳನ್ನು ಪೂರ್ಣಗೊಳಿಸಲು ಕೇಂದ್ರ ಚುನಾವಣಾ ಆಯೋಗ ನೀಡಿರುವ ಗಡುವು ಮುಗಿಯುವುದು ಡಿಸೆಂಬರ್ 31ಕ್ಕೆ. ಅಷ್ಟರ ಒಳಗೆ ಅಧ್ಯಕ್ಷೀಯ ಚುನಾವಣೆ ಮುಗಿಸಬಹುದೆಂಬುದು ಕಾಂಗ್ರೆಸಿಗರ ಮಾತಾಗಿದೆ. ಬಹುಶಃ ಕಾಂಗ್ರೆಸ್‌ನ ಈ ನಡೆಗಳನ್ನು ನೋಡಿದರೆ ಡಿಸೆಂಬರ್ 28 ರಂದು ಈ ಕಾರ್ಯಕ್ರಮ ನಡೆಯಬಹುದೆನಿಸುತ್ತದೆ. ಯಾಕೆಂದರೆ ಡಿಸೆಂಬರ್ 28 ಕಾಂಗ್ರೆಸ್‌ನ ಸಂಸ್ಥಾಪನಾ ದಿನವಾಗಿದೆ. 1885ರ ಡಿಸೆಂಬರ್ 28ರಂದು ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷ ಅಧಿಕೃತ ವಾಗಿ ಸ್ಥಾಪನೆಯಾಗಿತ್ತು.

ಈ ನಡುವೆ ರಾಹುಲ್ ಗಾಂಧಿಯವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಬಗ್ಗೆ ಭಾಜಪದ ನಾಯಕರು ಅಸಹನೆಯಿಂದ ಮಾತಾಡುತ್ತ್ತಾ ಕಾಂಗ್ರೆಸ್‌ನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಕಳೆದ ಹಲವು ದಶಕಗಳಿಂದಲೂ ಕಾಂಗ್ರೆಸೇತರ ಪಕ್ಷಗಳು ಕಾಂಗ್ರೆಸ್‌ನ ವಂಶಪಾರಂಪರ್ಯ ರಾಜಕಾರಣದ ಬಗ್ಗೆ ಟೀಕಿಸುತ್ತ, ಕುಟುಂಬ ರಾಜಕಾರಣವನ್ನು ಕೆಲವೊಮ್ಮೆ ತೀರಾ ಕೀಳುಭಾಷೆಯಲ್ಲಿ ಲೇವಡಿ ಮಾಡುತ್ತಲೇ ಬರುತ್ತಿವೆ. ಆದರೆ ಈಗ ನೋಡಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತಾಡುವ ಎಲ್ಲ ಯೋಗ್ಯತೆಗಳನ್ನೂ ಇಂಡಿಯಾದ ಬಹಳಷ್ಟು ರಾಜಕೀಯ ಪಕ್ಷಗಳು ಕಳೆದುಕೊಂಡಿವೆಯೆನಿಸುತ್ತೆ. ಯಾಕೆಂದರೆ ನೆಹರೂ ಕುಟುಂಬವನ್ನು ವಿರೋಧಿಸುತ್ತಲೇ ರಾಜಕೀಯ ಮಾಡಿದ ಸಮಾಜವಾದಿ ನಾಯಕರು, ಪಕ್ಷಗಳು ಕುಟುಂಬ ರಾಜಕಾರಣದ ಬಲೆಯಲ್ಲಿ ಬಿದ್ದಿವೆ.

ಇನ್ನು ಭಾಜಪದ ಹಲವು ರಾಷ್ಟ್ರೀಯ ಮತ್ತು ರಾಜ್ಯಗಳ ನಾಯಕರ ವಂಶದ ಕುಡಿಗಳು ಸಹ ಈಗಾಗಲೇ ಶಕ್ತಿ ರಾಜಕಾರಣದ ಅಂಗಳದಲ್ಲಿ ಆಟವಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ ಇವತ್ತು ಕುಟುಂಬ ರಾಜಕಾರಣದ ಬಗ್ಗೆ ಯಾರಾದರೂ ಮಾತಾಡಿದರೆ ಅದನ್ನು ಜನತೆ ಗಂಭೀರವಾಗಿ ಸ್ವೀಕರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕೆಲವರು ಕಾಂಗ್ರೆಸ್ ಮತ್ತೆ ಸುಧಾರಿಸಿಕೊಳ್ಳಬೇಕಾದರೆ ಆ ಪಕ್ಷ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಯವರ ಹಿಡಿತದಿಂದ ಹೊರಬರಬೇಕೆಂದು ಕಿರುಚುತಿದ್ದಾರೆ. ಆದರೆ ಕಾಂಗ್ರೆಸ್ ನೆಹರೂ ಕುಟುಂಬದ ಹಿಡಿತದಿಂದ ಹೊರಬಂದರೆ ಹೊರತಾದ ಕಾಂಗ್ರೆಸ್ ಭವಿಷ್ಯ ಏನಾಗಬಹುದೆಂಬುದನ್ನು ಈಗ ಒಂದಿಷ್ಟು ನೋಡೋಣ:

ಇವತ್ತು ನೂರು ವರ್ಷಗಳ ನಂತರವೂ ಕಾಂಗ್ರೆಸ್ ತನ್ನ ಅಸ್ತಿತ್ವ ಅಂತೇನಾದರೂ ಉಳಿಸಿಕೊಂಡು ಉಸಿರಾಡುತ್ತಿದ್ದರೆ ಅದಕ್ಕೆ ಕಾರಣ ನೆಹರೂ ಕುಟುಂಬದ ಆಕರ್ಷಣೆ ಕಾರಣವೇ ಹೊರತು ಬೇರೆಯೇನಲ್ಲ. ಇದು ಸತ್ಯವಾದ ಸಂಗತಿ. ನೆಹರೂ ಕುಟುಂಬದ ಆಚೆಗೆ ಪಕ್ಷ ಬಂದು ನಿಂತರೆ ಕೆಲವೇ ತಿಂಗಳುಗಳಲ್ಲ್ಲಿ ಅದು ತನ್ನ ರಾಷ್ಟ್ರೀಯ ಐಡೆಂಟಿಟಿಯನ್ನು ಕಳೆದು ಕೊಂಡು ಹತ್ತಾರೇನು, ನೂರಾರು ಚೂರುಗಳಾಗಿ ಒಡೆದು ಛಿದ್ರಗೊಳ್ಳುವುದು ಖಚಿತ. ಯಾಕೆಂದರೆ ಎಲ್ಲಿಯವರೆಗೆ ನೆಹರೂ ಕುಟುಂಬದ ಸದಸ್ಯರು ಅದನ್ನು ಮುನ್ನಡೆಸುತ್ತಾರೊ ಅಲ್ಲಿಯವರೆಗೂ ಅದರ ಒಗ್ಗಟ್ಟು ಬಲವಾಗಿರುತ್ತದೆ. ಆ ಕುಟುಂಬವೇ ಅದಕ್ಕೆ ಶಕ್ತಿಕೇಂದ್ರವಾಗಿದೆ. ಅದು ನಾಶವಾದರೆ ಪಕ್ಷವೂ ನಾಶವಾಗುವುದರಲ್ಲಿ ಅನುಮಾನವೇನಿಲ್ಲ.

ಇದಕ್ಕೆ ಬಹಳ ಜನ ರಾಜಕೀಯ ಪಂಡಿತರು, ನಾಯಕರು ಕಾಂಗ್ರೆಸ್ ಬೇರೆ ನಾಯಕರನ್ನು ಬೆಳೆಸಲಿಲ್ಲವೆಂದು ಆರೋಪಿಸುತ್ತಾರೆ. ಆದರೆ ಇಂಡಿಯಾದಂತಹ ವಿಶಾಲ ರಾಷ್ಟ್ರದಲ್ಲಿ ನಾಲ್ಕು ದಿಕ್ಕುಗಳಿಗೂ ಒಪ್ಪಿತವಾಗುವಂತಹ ನಾಯಕನನ್ನು ಯಾರೂ ಬೆಳೆಸಲಾಗುವುದಿಲ್ಲ. ಹಾಗೆ ಬೆಳಸುವ ನಾಯಕ ಬಹಳ ದಿನ ಬಾಳಿಕೆ ಬರಲಾರ. ನಾಯಕನಾದವನು ಸ್ವಯಂ ಸೃಷ್ಟಿಯಾಗಬೇಕು. ಹಾಗೆ ನೋಡ ಬಹುದಾದರೆ; ನರೇಂದ್ರ ಮೋದಿಯವರನ್ನು ಭಾಜಪವೇನು ಬೆಳೆಸಲಿಲ್ಲ, ಬದಲಿಗೆ ಬೆಳೆದ ಮೋದಿಯವರನ್ನು ಭಾಜಪ ಬಳಸಿಕೊಂಡಿತ್ತಷ್ಟೇ! ಪ್ರಾದೇಶಿಕ ನಾಯಕರು ಬೆಳೆಯಬಹುದೇ ಹೊರತು ರಾಷ್ಟ್ರನಾಯಕರನ್ನು ಯಾರೂ ಬೆಳೆಸಲಾಗುವುದಿಲ್ಲ. ಇವತ್ತು ನಿತೀಶ್ ಕುಮಾರ್‌ರಂತಹವರು ಎಷ್ಟೇ ದೊಡ್ಡ ನಾಯಕರಾದರೂ ದಕ್ಷಿಣದಲ್ಲಿ ಅವರನ್ನು ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಇಂಡಿಯಾದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಒಬ್ಬ ನಾಯಕ ಭಾವನಾತ್ಮಕವಾಗಿ ಜನರನ್ನು ಒಲಿಸಿಕೊಂಡು ಬೆಳೆಯಬಹುದೇ ಹೊರತು ಬೇರ್ಯಾವ ಶಕ್ತಿಗಳು ಅಂತಹ ನಾಯಕನನ್ನು ಸೃಷ್ಟಿಸಲಾರವು.

ಹೀಗಾಗಿಯೇ ನಾನು ಹೇಳುವುದು ಸೋನಿಯಾ ಆಗಲಿ ರಾಹುಲ್ ಆಗಲಿ ಕಾಂಗ್ರೆಸ್‌ನ ನಾಯಕತ್ವವನ್ನು ಬಿಟ್ಟುಕೊಟ್ಟರೆ ಅದು ಭಾಜಪದಂತಹ ಪಕ್ಷಗಳಿಗೆ ಹಾಸಿಕೊಡುವ ಕೆಂಪುಹಾಸಿನ ಸ್ವಾಗತವಾಗುತ್ತದೆ. ಜೊತೆಗೆ ಏಕ ಪಕ್ಷದ ಸರ್ವಾಧಿಕಾರಿ ಆಡಳಿತಕ್ಕೂ ಹಾದಿಯಾಗುತ್ತದೆ. ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲದಿದ್ದರೂ ಪ್ರಜಾಪ್ರಭುತ್ವ ಬದುಕಿರಲಾದರೂ ಕಾಂಗ್ರೆಸ್ ಜೀವಂತವಾಗಿರುವ ಅಗತ್ಯವಿದೆ. ಹಾಗೇನಾದರೂ ನಾಳೆ ಸೋನಿಯಾ ಮತ್ತು ರಾಹುಲ್ ಕಾಂಗ್ರೆಸ್‌ನ ಅಧಿಕಾರ ಬಿಟ್ಟುಕೊಟ್ಟು ಹೊರಬಂದರೆ ಬಹುಶ: ಕರ್ನಾಟಕದಲ್ಲಿಯೇ ಹತ್ತಾರು ಕಾಂಗ್ರೆಸ್‌ಗಳು ಜನಿಸುವುದು ಗ್ಯಾರಂಟಿ. ಉದಾಹರಣೆಗಾಗಿ ಇತಿಹಾಸವನ್ನೊಮ್ಮೆ ತಿರುವಿ ಹಾಕಿ ನೋಡಿ.

ಎಪ್ಪತ್ತರ ದಶಕದಿಂದ ಇದುವರೆಗೂ ಯಾರ್ಯಾರು ಕಾಂಗ್ರೆಸ್ ತೊರೆದು ಮರಿ ಕಾಂಗ್ರೆಸ್ ಪಕ್ಷಗಳನ್ನು ಕಟ್ಟಿದರೋ ಅವರೆಲ್ಲ ರಾಜಕೀಯದಲ್ಲಿ ಮೇಲೇರಲು ಸಾಧ್ಯವೇ ಆಗಿಲ್ಲ. ಜೊತೆಗೆ ಅವರಲ್ಲಿ ಬಹಳಷ್ಟು ಜನ ಮತ್ತೆ ಕಾಂಗ್ರೆಸ್‌ನ ತೆಕ್ಕೆಗೆ ಹೋಗಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಅದು ಸೋನಿಯಾ ಗಾಂಧಿಯೋ, ರಾಹುಲ್ ಗಾಂಧಿಯೋ ಮಾತ್ರ ಕಾಂಗ್ರೆಸನ್ನು ಕಾಪಾಡಬಲ್ಲರೆನಿಸುತ್ತೆ. ನೆಹರೂ ಕುಟುಂಬದವರ ಬಗ್ಗೆ ಪೂರ್ವಗ್ರಹವಿಲ್ಲದೆ ನೋಡಿದರೆ ಮಾತ್ರ ಈ ಸತ್ಯ ಅರ್ಥವಾಗುತ್ತದೆ. ಎರಡು ಕಾರಣಗಳಿಗಾಗಿ ಕಾಂಗ್ರೆಸ್ ಮುಂದೆಯೂ ತನ್ನ ಅಸ್ತಿತ್ವ ಉಳಿಸಿಕೊಂಡಿರಬೇಕು:

ಮೊದಲನೆಯದು, ಕಾಂಗ್ರೆಸ್ ನಮ್ಮ ಸ್ವಾತಂತ್ರ ಹೋರಾಟದ ನೆನಪಾಗಿದ್ದು ಅದು ನಮ್ಮ ಜೊತೆ ಭಾವನಾತ್ಮಕವಾಗಿ ಥಳುಕು ಹಾಕಿಕೊಂಡಿದೆ. ಎರಡನೆಯದು, ಕಾಂಗ್ರೆಸ್ ಇಲ್ಲವಾಗಿ ಬಿಟ್ಟರೆ ಭಾಜಪ ಏಕೈಕ ರಾಷ್ಟ್ರೀಯ ಪಕ್ಷವಾಗಿ ಹಿಂದೆ ಕಾಂಗ್ರೆಸ್ ಹೇಗೆ ಆರು ದಶಕಗಳವರೆಗೂ ನಮ್ಮನ್ನು ಆಳಿತೊ ಅದೇ ರೀತಿ ಭಾಜಪವೂ ಸಹ ಆಗಿಬಿಡುವ ಸಾಧ್ಯತೆಯಿದೆ. ಭಾಜಪಕ್ಕೊಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಕಂಡುಕೊಳ್ಳಲಾಗದೆ ಭಾರತೀಯ ಮತದಾರ ಅಸಹಾಯಕನಾಗಬೇಕಾಗುತ್ತದೆ.
ಆದ್ದರಿಂದಲೇ ಕಾಂಗ್ರೆಸ್‌ನ ಉಳಿವು ಈ ನೆಲದ ಪ್ರಜಾತಂತ್ರದ ಉಳಿವಿಗೂ ಸಂಬಂಧವಿದೆ ಯೆಂಬುದನ್ನು ಕಾಂಗ್ರೆಸಿಗರು ಮಾತ್ರವಲ್ಲ ಮತದಾರರೂ ಮರೆಯಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)