varthabharthi

ಸಂಪಾದಕೀಯ

ಹಾಗಾದರೆ ಇವರು ಯಾರು?

ವಾರ್ತಾ ಭಾರತಿ : 4 Nov, 2017

ದೇಶದಲ್ಲಿ ಹಿಂದುತ್ವದ ಹೆಸರಲ್ಲಿ ತಲೆಯೆತ್ತಿರುವ ಭಯೋತ್ಪಾದನೆಯನ್ನು ಖ್ಯಾತ ಕಲಾವಿದ ಕಮಲ್ ಹಾಸನ್ ಪ್ರಸ್ತಾಪ ಮಾಡಿದ ಬೆನ್ನಿಗೇ ಅವರ ವಿರುದ್ಧ ಕೇಸರಿ ಉಗ್ರವಾದಿಗಳು ಮುಗಿ ಬಿದ್ದಿದ್ದಾರೆ. ಹೇಳಿಕೆ ನೀಡಿದ ಮರುದಿನವೇ ಕಮಲ್ ಹಾಸನ್ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಸಂದರ್ಭದಲ್ಲಿ ಇನ್ನೋರ್ವ ಹಿರಿಯ ಕಲಾವಿದ ಪ್ರಕಾಶ್ ರೈ ಕೂಡ ಬಲಪಂಥೀಯ ಉಗ್ರವಾದದ ಕಡೆಗೆ ಬೆಟ್ಟು ಮಾಡಿ ತೋರಿಸಿದ್ದಾರೆ. ‘‘ಹಿಂದುತ್ವ ಉಗ್ರವಾದ ಇಲ್ಲವೆಂದಾದಲ್ಲಿ, ಬೀದಿಯಲ್ಲಿ ಗೋರಕ್ಷಕರಿಂದ ನಡೆಯುತ್ತಿರುವ ಹತ್ಯೆ, ಗುಂಪು ಥಳಿತ ಇವೆಲ್ಲ ಏನು?’’ ಎಂದು ಕೇಳಿದ್ದಾರೆ.

ದೇಶದಲ್ಲಿ ಫ್ಯಾಶಿಸ್ಟ್ ಶಕ್ತಿಗಳ ಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿರುವಂತೆಯೇ ಇನ್ನೊಂದೆಡೆ ಅದರ ವಿರುದ್ಧ ಪ್ರತಿರೋಧದ ಧ್ವನಿಯೂ ತೀವ್ರವಾಗುತ್ತಿದೆ. ದೇಶದ ಪ್ರಮುಖ ಕಲಾವಿದರು ಒಬ್ಬೊಬ್ಬರಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವಂತೆಯೇ ಅವರ ವಿರುದ್ಧ ಬೇರೆ ಬೇರೆ ನೆಲೆಗಳಿಂದ ಪ್ರತಿದಾಳಿ ನಡೆಯುತ್ತಿದೆ. ಇಂದು ಕಮಲ್ ಹಾಸನ್ ಮೇಲೆ ಪ್ರಕರಣ ದಾಖಲಾಗಿದ್ದರೆ, ಮುಂದಿನ ಸರದಿ ಪ್ರಕಾಶ್ ರೈ ಅವರದಾಗಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಹಿಂದುತ್ವದ ಹೆಸರಿನಲ್ಲಿ ಉಗ್ರವಾದ ದೇಶದೊಳಗೆ ಅಸ್ತಿತ್ವದಲ್ಲಿದೆ ಎನ್ನುವ ಹೇಳಿಕೆಯನ್ನು ಇದೇ ಮೊದಲ ಬಾರಿ ಕೇಳಿದವರಂತೆ ಕೆಲವು ಸಂಘ ಪರಿವಾರದ ಮುಖಂಡರು ಹೌಹಾರಿದವರಂತೆ ಹೇಳಿಕೆ ನೀಡುತ್ತಿರುವುದೇ ಒಂದು ವ್ಯಂಗ್ಯವಾಗಿದೆ.

ಸ್ವಾತಂತ್ರೋತ್ತರ ಭಾರತದ ಮೊತ್ತ ಮೊದಲ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟ ಮಹಾತ್ಮಾ ಗಾಂಧೀಜಿಯ ಕೊಲೆಗಾರ ನಾಥೂರಾಂ ಗೋಡ್ಸೆ ಯಾವ ಹಿನ್ನೆಲೆಯಿಂದ ಬಂದವನು? ಅವನನ್ನು ಸಿದ್ಧಗೊಳಿಸಿದ ಸಂಘಟನೆ ಯಾವುದು ಎನ್ನುವ ಎರಡೇ ಎರಡು ಪ್ರಶ್ನೆಗಳು ಸಂಘಪರಿವಾರವನ್ನು ಬಾಯಿ ಮುಚ್ಚಿಸುತ್ತದೆ. ನಾಥೂರಾಂ ಗೋಡ್ಸೆ ತನ್ನ ಸಂಘಟನೆಗೆ ಸೇರಿದವನಲ್ಲ ಎಂದು ಆರೆಸ್ಸೆಸ್ ನಿರಾಕರಿಸುತ್ತದೆಯಾದರೂ, ಆರೆಸ್ಸೆಸ್ ಸಂಘಟನೆಯ ಬೀಜ ಹಿಂದೂ ಮಹಾಸಭಾ ಎನ್ನುವುದು ಎಲ್ಲರಿಗೂ ತಿಳಿದಿರುವ ಅಂಶ.

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿಯವರು ಆರೆಸ್ಸೆಸ್‌ನ ವಿರುದ್ಧ ಗಾಂಧಿಯನ್ನು ಕೊಂದ ಆರೋಪ ಮಾಡಿದಾಗ ಆರೆಸ್ಸೆಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಆರೆಸ್ಸೆಸ್-ಹಿಂದೂ ಮಹಾಸಭಾ-ನಾಥೂರಾಂಗೋಡ್ಸೆ ನಡುವಿನ ಕರುಳ ಸಂಬಂಧ ಅಷ್ಟು ಸುಲಭದಲ್ಲಿ ಕತ್ತರಿಸಿ ಹಾಕುವಂಥದ್ದಲ್ಲ. ಇಂದಿಗೂ ಹಿಂದೂ ಮಹಾಸಭಾ ಸಂಘಟನೆ ಅಸ್ತಿತ್ವದಲ್ಲಿದೆ ಮಾತ್ರವಲ್ಲ, ನಾಥೂರಾಂ ಗೋಡ್ಸೆಯನ್ನು ನಾಯಕನೆಂದು ಬಹಿರಂಗವಾಗಿ ಘೋಷಣೆಗಳನ್ನು ಕೂಗುತ್ತದೆ. ಮಹಾತ್ಮಾ ಗಾಂಧೀಜಿ ಒಬ್ಬ ಮಾದರಿ ಹಿಂದೂವಾಗಿದ್ದರು. ನಾಥೂರಾಂ ಗೋಡ್ಸೆ ಹಿಂದುತ್ವ ವನ್ನು ತಲೆಗೇರಿಸಿಕೊಂಡ ಉಗ್ರವಾದಿಯಾಗಿದ್ದ. ಈ ಕಾರಣದಿಂದಲೇ ಆತನಿಗೆ ಮಹಾತ್ಮಾಗಾಂಧೀಜಿಯನ್ನು ಸಹಿಸುವುದಕ್ಕೆ ಅಸಾಧ್ಯವಾಯಿತು ಮತ್ತು ಮತೀಯ ದ್ವೇಷವನ್ನು ತಲೆಯಲ್ಲಿ ತುಂಬಿಕೊಂಡ ಕಾರಣಕ್ಕಾಗಿಯೇ ಆತ ಗಾಂಧಿಯನ್ನು ಕೊಂದು ಹಾಕಿದ. ದೇಶದಲ್ಲಿ ನಾಥೂರಾಮ್‌ನನ್ನು ವೈಭವೀಕರಿಸುವ ಪ್ರಯತ್ನ ಈಗಲೂ ಮುಂದುವರಿಯುತ್ತಿದೆ. ಹೀಗಿರುವಾಗ, ಕಮಲ್ ಹಾಸನ್ ‘ದೇಶದಲ್ಲಿ ಹಿಂದುತ್ವ ಉಗ್ರವಾದಿಗಳು, ಭಯೋತ್ಪಾದಕರು ಇದ್ದಾರೆ ’ ಎಂದು ಅಭಿಪ್ರಾಯ ಪಟ್ಟರೆ ಅದರಲ್ಲಿ ತಪ್ಪೇನಿದೆ?

ನಾಥೂರಾಂ ಗೋಡ್ಸೆಯನ್ನು ಪಕ್ಕಕ್ಕಿಡೋಣ. ಈ ದೇಶದಲ್ಲಿ ಹಿಂದುತ್ವ ಉಗ್ರವಾದ ಇಲ್ಲದೇ ಇದ್ದ ಮೇಲೆ ಮಾಲೇಗಾಂವ್ ಸ್ಫೋಟ, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಹೇಗೆ ಸಂಭವಿಸಿತು? ಈ ಪ್ರಶ್ನೆಗಾದರೂ ಸಂಘಪರಿವಾರದ ಮುಖಂಡರು ಉತ್ತರಿಸಬೇಕಾಗುತ್ತದೆ. ಸ್ವತಃ ತನ್ನದೇ ತಾಯ್ನೆಲವನ್ನು ಬಾಂಬಿಟ್ಟು ಉಢಾಯಿಸಿದವರನ್ನು ಉಗ್ರರು ಎನ್ನದೇ, ಸಾಂಸ್ಕೃತಿಕ ಉದ್ಧಾರಕರೆಂದು ಕರೆಯಲು ಸಾಧ್ಯವೆ? ಕೇಸರಿ ಉಗ್ರವಾದದ ಅಸ್ತಿತ್ವವನ್ನು ಮೊದಲು ಗುರುತಿಸಿದವರು ಯಾರೋ ದಾರಿ ಹೋಕರಲ್ಲ. ಅತ್ಯುನ್ನತ ತನಿಖಾ ಸಂಸ್ಥೆಯ ಅಧಿಕಾರಿ ಎನ್ನುವುದನ್ನು ನಾವು ಗಮನಿಸಬೇಕಾಗಿದೆ.

ಹೇಮಂತ್ ಕರ್ಕರೆ ಮತ್ತು ಅವರ ತನಿಖಾ ತಂಡ ನಡೆಸಿದ ತನಿಖೆಯ ಫಲವಾಗಿ ಈ ದೇಶದೊಳಗೇ ಬಚ್ಚಿಟ್ಟುಕೊಂಡ ಹೊಸ ತಳಿಯ ಉಗ್ರವಾದಿಗಳು ಹುತ್ತದಿಂದ ಒಬ್ಬೊಬ್ಬರಾಗಿ ಹೊರಬಂದರು. ಕರ್ಕರೆ ತಂಡದ ತನಿಖೆಯ ಫಲವಾಗಿ ಹಲವು ಶಂಕಿತ ಕೇಸರಿ ಉಗ್ರರು ಜೈಲು ಸೇರಿದರು. ಆರೆಸ್ಸೆಸ್‌ನ ಮುಖಂಡನೋರ್ವನ ಪಾದ ಬುಡಕ್ಕೇ ಈ ತನಿಖೆ ಬಂದು ನಿಂತಿತು. ಇದಾದ ಬಳಿಕ ಮುಂಬೈ ಉಗ್ರರ ದಾಳಿಯಲ್ಲಿ ಇಡೀ ತನಿಖಾ ತಂಡವೇ ನಿಗೂಢವಾಗಿ ಕೊಲೆಗೀಡಾಯಿತು. ಆದರೆ ಈ ದೇಶದಲ್ಲಿ ಹಿಂದುತ್ವದ ಹೆಸರಿನಲ್ಲಿ ಒಂದು ದೊಡ್ಡ ಗುಂಪು ಭಯೋತ್ಪಾದನಾ ಕೃತ್ಯಗಳಿಗೆ ಇಳಿದಿದೆ ಮತ್ತು ದೇಶದ್ರೋಹ ಚಟುವಟಿಕೆಗಳನ್ನು ಎಸಗುತ್ತಿದೆ ಎನ್ನುವುದನ್ನು ವಿಶ್ವಕ್ಕೆ ಜಾಹೀರು ಪಡಿಸಿಯೇ ಕರ್ಕರೆ ಅವರ ತಂಡದ ಸದಸ್ಯರು ಹುತಾತ್ಮರಾದರು. ಹಿಂದುತ್ವ ಉಗ್ರವಾದಿಗಳ ಬಗ್ಗೆ ಕಮಲ್ ಹಾಸನ್ ಮಾತನಾಡಿರುವುದಕ್ಕೆ ಪ್ರಕರಣ ದಾಖಲಿಸುವುದಾಗಿದ್ದರೆ, ಕರ್ಕರೆ ಬಹಿರಂಗ ಪಡಿಸಿದ ಸತ್ಯಗಳನ್ನು ಇವರು ಹೇಗೆ ನಿರಾಕರಿಸುತ್ತಾರೆ?

ಕೆಲವು ಉಗ್ರವಾದಿ ಕೇಸರಿ ಸಂಘಟನೆಗಳ ಕುಖ್ಯಾತ ವ್ಯಕ್ತಿಗಳು ಈಗಲೂ ತಲೆಮರೆಸಿಕೊಂಡಿದ್ದಾರೆ. ಅವರನ್ನು ಬೇರೆ ಬೇರೆ ಸ್ಫೋಟ ಮತ್ತು ಕೊಲೆ ಪ್ರಕರಣಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಯೂ ತನಿಖಾಧಿಕಾರಿಗಳು ಸನಾತನ ಸಂಸ್ಥೆಯಂತಹ ಸಂಘಟನೆಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಂದು ಬಿಜೆಪಿ ಅಧಿಕಾರದಲ್ಲಿರುವ ಗೋವಾದಲ್ಲಿ ಪ್ರಮೋದ್ ಮುತಾಲಿಕ್ ಎನ್ನುವ ಉಗ್ರವಾದಿ ಭಾಷಣಕಾರನಿಗೆ ನಿಷೇಧ ಹೇರಲಾಗಿದೆ. ಒಂದು ವೇಳೆ ಆತ ನಿರುಪದ್ರವಿ ಮತ್ತು ಸಂಸ್ಕೃತಿ ರಕ್ಷಕ ಎಂದಾದಲ್ಲಿ ಸ್ವತಃ ಬಿಜೆಪಿ ಸರಕಾರ ಆತನಿಗೆ ಪ್ರವೇಶವನ್ನು ಯಾಕೆ ನಿರಾಕರಿಸುತ್ತಿದೆ? ಆತನ ಸಹಚರರನ್ನು ಹುಬ್ಬಳ್ಳಿ ಹೈಕೋರ್ಟ್‌ನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಯಾಕೆ ಬಂಧಿಸಲಾಯಿತು? ಹೈನೋದ್ಯಮಕ್ಕಾಗಿ ದನ ಕೊಂಡೊಯ್ಯುವ ವೃದ್ಧನನ್ನು ಥಳಿಸಿಕೊಂದವರು, ಫ್ರಿಡ್ಜ್‌ನಲ್ಲಿ ಗೋಮಾಂಸವಿದೆ ಎಂದು ಆರೋಪಿಸಿ ವೃದ್ಧ ಅಖ್ಲಾಕ್‌ರನ್ನು ಕೊಂದು ಹಾಕಿದವರು ಭಯೋತ್ಪಾದಕರು, ಉಗ್ರವಾದಿಗಳು ಅಲ್ಲವಾದರೆ ಅವರನ್ನು ಇನ್ನೇನೆಂದು ಕರೆಯಬೇಕು? ಸ್ವತಃ ಸಂಘಪರಿವಾರದ ನಾಯಕರೇ ಹೇಳಬೇಕು.

ಒಂದಂತೂ ಸತ್ಯ. ಉಗ್ರವಾದಿಗಳಿಗೆ ಧರ್ಮವಿಲ್ಲ. ಅವರು ಧರ್ಮದ ಹೆಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ದುರುದ್ದೇಶಗಳನ್ನು ಸಾಧಿಸಲು ಹೊರಟಿದ್ದಾರೆ. ಧರ್ಮದ ಹೆಸರಿನಲ್ಲಿ ಈ ಭಯೋತ್ಪಾದನೆ ಕೃತ್ಯ ಎಸಗುತ್ತಿರುವವರನ್ನು ರಾಜಕಾರಣ ನಿಯಂತ್ರಿಸುತ್ತಿದೆ. ಆದುದರಿಂದಲೇ, ವಿದೇಶಿ ಉಗ್ರರು ನಮ್ಮ ದೇಶದೊಳಗೆ ಕಾಲಿಟ್ಟು ಸ್ಫೋಟ ನಡೆಸಿದರೆ ಅದು ಭಯೋತ್ಪಾದನೆ ನಮ್ಮದೇ ದೇಶದೊಳಗೆ ತಲೆಯೆತ್ತಿರುವ ಉಗ್ರರು ನಡೆಸುವ ಸ್ಫೋಟಗಳು ಸಂಸ್ಕೃತಿ ರಕ್ಷಣೆ ಎಂಬ ದ್ವಂದ್ವ ನಿಲುವನ್ನು ಸರಕಾರವೇ ಅನುಸರಿಸುತ್ತಿದೆ. ಎಲ್ಲ ಉಗ್ರವಾದಿ ಹಿಂಸೆಗಳನ್ನು ಸಮಾನ ದೃಷ್ಟಿಯಿಂದ ನೋಡಿ ಮಟ್ಟ ಹಾಕುವ ರಾಜಕೀಯ ಇಚ್ಛಾ ಶಕ್ತಿಯಿದ್ದರೆ ಮಾತ್ರ ದೇಶದಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾದೀತು. ಭವಿಷ್ಯದಲ್ಲಿ ದೇಶ ಉಳಿದೀತು. ಆದುದರಿಂದ, ಈ ದೇಶದಲ್ಲಿ ಹಿಂದುತ್ವದ ಹೆಸರಲ್ಲಿ ಭಯೋತ್ಪಾದನೆ, ಉಗ್ರವಾದಿ ಚಟುವಟಿಕೆಗಳು ನಡೆಯುತ್ತಿವೆ ಎನ್ನುವುದನ್ನು ಕೇಂದ್ರ ಸರಕಾರ ಮೊದಲು ಒಪ್ಪಿಕೊಳ್ಳಬೇಕಾಗಿದೆ. ಅಲ್ಲಿಂದಲೇ ಅದರ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಆರಂಭವಾಗಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)