varthabharthi

ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

80 ದಿನಗಳ ಸಾಹಸಮಯ ವಿಶ್ವ ಯಾತ್ರೆ

ವಾರ್ತಾ ಭಾರತಿ : 5 Nov, 2017
-ಕಾರುಣ್ಯ

ಯೂಲ್ಸ್ ವೆರ್ನೆ ಎಂಬ ಫ್ರೆಂಚ್ ಲೇಖಕ ಬರೆದ ವಿಶ್ವಪ್ರಸಿದ್ಧ ಸಾಹಸಮಯ ಕಾದಂಬರಿ ‘ಎರೌಂಡ್ ದಿ ವರ್ಲ್ಡ್ ಇನ್ ಎಯ್‌ಟಿ ಡೇಸ್’’. 1873ರಲ್ಲಿ ಬರೆದ ಈ ಕೃತಿ, ಬಳಿಕ ಇಂಗ್ಲಿಷ್‌ಗೆ ಅನುವಾದವಾಯಿತು. ಇಂಗ್ಲಿಷ್ ಮೂಲಕ ಈ ಸಾಹಸ ಯಾತ್ರೆ ವಿಶ್ವಾದ್ಯಂತ ಹರಡಿಕೊಂಡಿತು. 1872ರಲ್ಲಿ ವಿಮಾನ ಪ್ರಯಾಣದ ಅನುಕೂಲತೆಗಳೇ ಇಲ್ಲದ ಕಾಲದಲ್ಲಿ ಉಗಿಹಡಗು ಮತ್ತು ಉಗಿ ರೈಲು ಬಂಡಿಗಳ ಮೂಲಕ ಜಗತ್ತಿಗೆ ಎಂಬತ್ತು ದಿನಗಳಲ್ಲಿ ಒಂದು ಸುತ್ತು ಬರುವ ಸಾಹಸದ ಯಾತ್ರೆಯ ಈ ಕಥನವು ಒಂದು ರೋಮಾಂಚಕ ಕಾದಂಬರಿಯಾಗಿ ವಿದ್ಯಾರ್ಥಿಗಳು, ಯುವಕರನ್ನು ಸೆಳೆದಿದೆ. ಈ ಕೃತಿಯನ್ನು ಇದೀಗ ಕನ್ನಡದ ಹಿರಿಯ ಲೇಖಕರಾಗಿರುವ ಬಿ.ಎ.ವಿವೇಕ್ ರೈ ಕನ್ನಡಕ್ಕೆ ತಂದಿದ್ದಾರೆ. ಸಾಧಾರಣವಾಗಿ ಅಕಾಡಮಿಕ್ ಮತ್ತು ಸಂಶೋಧನಾತ್ಮಕವಾದ ಬರಹಗಳಲ್ಲೇ ಗುರುತಿಸಿಕೊಂಡಿರುವ ರೈ ಅವರು ಸಾಹಿತ್ಯ ಕೃತಿಯಾಗಿ ಬರೆದಿರುವ ಮೊದಲ ಪುಸ್ತಕ ಎಂದೂ ಇದನ್ನು ಕರೆಯಬಹುದಾಗಿದೆ. ಈ ಕೃತಿ ಅವರ ಗಮನ ಸೆಳೆಯುವುದಕ್ಕೂ ಕಾರಣವಿದೆ. ಅದನ್ನು ತಮ್ಮ ಮುನ್ನುಡಿಯಲ್ಲಿ ಅವರು ಹಂಚಿಕೊಂಡಿದ್ದಾರೆ. ಪ್ರೌಢ ಶಾಲಾ ಕಲಿಕೆಯ ಸಂದರ್ಭದಲ್ಲಿ ಈ ಇಂಗ್ಲಿಷ್ ಕೃತಿಯ ಹಿಂದಿ ಅನುವಾದ ಅವರಿಗೆ ಪಠ್ಯವಾಗಿತ್ತು ಮತ್ತು ಆ ಕತೆ ಅವರ ಆ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ಪರಿಣಾಮವನ್ನು ಬೀರಿತ್ತು. ಆರಂಭದಲ್ಲಿ ಆ ಹಿಂದಿ ಕೃತಿಯನ್ನೇ ಅವರು ನೇರ ಕನ್ನಡಕ್ಕಿಳಿಸಲು ಪ್ರಯತ್ನಿಸಿದ್ದರು. ಅದೂ ವಿದ್ಯಾರ್ಥಿ ಜೀವನದಲ್ಲೇ. ಆಗ ಅವರು ಅದಕ್ಕೆ ನೀಡಿದ ಶೀರ್ಷಿಕೆ ‘80 ದಿನಗಳಲ್ಲಿ ವಿಶ್ವ ಪರ್ಯಟನ’. ಹೀಗೆ ಬಾಲ್ಯದಲ್ಲಿ ಬಿತ್ತಿದ ಬೀಜ ಈಗ ಪುಸ್ತಕ ರೂಪವನ್ನು ಪಡೆದಿದೆ.

  ವಿದೇಶಿ ಸಾಹಸ ಗಾಥೆಗಳನ್ನಿಟ್ಟುಕೊಂಡು ಹತ್ತುಹಲವು ಖ್ಯಾತ ಕೃತಿಗಳು ಬಂದಿವೆ. ಭಾರೀ ಪ್ರಮಾಣದ ಓದುಗರನ್ನು ಸೆಳೆದಿವೆ. ಇಂತಹ ಕೃತಿಗಳನ್ನು ಗುರುತಿಸಿ ಪೂರ್ಣ ಚಂದ್ರ ತೇಜಸ್ವಿಯವರು ಅನುವಾದ ಮಾಡಿ, ಒಂದು ದೊಡ್ಡ ಓದುಗ ವರ್ಗವನ್ನು ಸೆಳೆದಿದ್ದರು. ಕನ್ನಡಕ್ಕೆ ಈ ಮೂಲಕ ಓದುವ ಖುಷಿಯನ್ನು ಕೊಟ್ಟಿದ್ದರು. ವಿದ್ಯಾರ್ಥಿಗಳು, ಹದಿಹರೆಯದ ಯುವಕರು ಇಂತಹ ಸಾಹಸಮಯ ಕಾದಂಬರಿಗಳಿಂದ ಆಕರ್ಷಿತರಾಗಿ ಕನ್ನಡ ಅಕ್ಷರಗಳನ್ನು ಪ್ರೀತಿಸತೊಡಗಿದ್ದರು. ಇದೀಗ ಪ್ರೊ. ಬಿ. ಎ. ವಿವೇಕ ರೈ ಅವರು ಕೂಡ ಇಂತಹದೊಂದು ಪ್ರಯತ್ನವನ್ನು ಮಾಡಿದ್ದಾರೆ. ಇಂದು ಯುವಕರಲ್ಲಿ ಕನ್ನಡ ಓದುವಿಕೆಯ ಕೊರತೆ ಕಾಣುತ್ತಿದೆ. ಒಂದೆಡೆ ಇಂಗ್ಲಿಷ್ ಮೀಡಿಯಂ ಪ್ರಭಾವ ಇದಕ್ಕೆ ಕಾರಣವಾಗಿರಬಹುದು. ಇದೇ ಸಂದರ್ಭದಲ್ಲಿ ಆಧುನಿಕ ಸಂದರ್ಭಕ್ಕೆ ತಕ್ಕಂತೆ ಯುವಕರನ್ನು, ಮಕ್ಕಳನ್ನು ಆಕರ್ಷಿಸುವಂತಹ ಪುಸ್ತಕಗಳು ಬರುವುದೂ ಕಡಿಮೆಯಾಗಿದೆ. ಮಕ್ಕಳನ್ನು ಕನ್ನಡ ಅಕ್ಷರಗಳ ಕಡೆಗೆ ಸೆಳೆಯುವಂತಹ ಕುತೂಹಲಕಾರಿ ಕೃತಿಗಳು ಹೆಚ್ಚು ಹೆಚ್ಚು ಬರತೊಡಗಿದಂತೆ, ಕನ್ನಡ ಓದುಗರ ಸಂಖ್ಯೆಯೂ ಜಾಸ್ತಿಯಾಗಬಹುದೇನೋ? ಈ ನಿಟ್ಟಿನಲ್ಲಿ ವಿವೇಕ್ ರೈ ಪ್ರಯತ್ನವನ್ನು ನಾವು ಅಭಿನಂದಿಸಬೇಕಾಗಿದೆ.
ಆಕೃತಿ ಆಶಯ ಪಬ್ಲಿಕೇಶನ್ ಹೊರತಂದಿರುವ ಕೃತಿಯ ಒಟ್ಟು ಪುಟಗಳು 70. ಮುಖಬೆಲೆ 80ರೂ. ಆಸಕ್ತರು 0824 2443002 ದೂರವಾಣಿಯನ್ನು ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)