varthabharthi

ನಿಮ್ಮ ಅಂಕಣ

‘ಕನ್ನೇಶ್ವರ ರಾಮ’ ಮತ್ತೆ ನೋಡಿದಾಗ...

ವಾರ್ತಾ ಭಾರತಿ : 5 Nov, 2017
ವಿ.ಎನ್. ಲಕ್ಷ್ಮೀನಾರಾಯಣ

ರಾಜಕೀಯ ನಿರಕ್ಷರಿಗಳಾಗಿದ್ದುಕೊಂಡು, ಇಲ್ಲವೆ, ಆಳುವವವರ ಊಳಿಗಮಾನ್ಯ-ಬಂಡವಾಳಶಾಹಿ-ಸಾಮ್ರಾಜ್ಯ ವಾದೀ ಸಿದ್ಧಾಂತಗಳನ್ನು ಅಪ್ರಜ್ಞಾಪೂರ್ವಕವಾಗಿ ಬೆಂಬಲಿಸುತ್ತಾ ತಾವು ಸಿದ್ಧಾಂತಗಳ ಪರಿಧಿಯಾಚೆಗೆ ಬದುಕನ್ನು ಪ್ರೀತಿಸುವ ಪ್ರಜಾಪ್ರಭುತ್ವವಾದಿಗಳೆಂದು ಬಹಳಷ್ಟು ಜನ ಗಂಭೀರ ಲೇಖಕರು, ಬುದ್ಧಿಜೀವಿಗಳು, ಚಿತ್ರನಿರ್ದೇಶಕರು ನಂಬುತ್ತಾರೆ. ತಾವು ಎಲ್ಲವನ್ನೂ ಸಿದ್ಧಾಂತದ ಕನ್ನಡಕದ ಮೂಲಕ ನೋಡದೆ ವಸ್ತುನಿಷ್ಠವಾಗಿ, ನಿರಪೇಕ್ಷವಾಗಿ ಸತ್ಯಾನ್ವೇಷಣೆಗೆ ತೊಡಗುವವರೆಂದು ಅನೇಕ ಸೃಜನಶೀಲರು, ವಿಮರ್ಶಕರು ಅವಕಾಶ ಸಿಕ್ಕಿದಾಗಲೆಲ್ಲಾ ಹೇಳುತ್ತಿರುತ್ತಾರೆ. ಇಂಥವರ ಮಧ್ಯೆ ಎಂ.ಎಸ್.ಸತ್ಯು ತಾನೊಬ್ಬ ಎಡಪಂಥೀಯ ಚಿತ್ರನಿರ್ದೇಶಕನೆಂದು ನಿರ್ಭಿಡೆಯಿಂದ ಗುರುತಿಸಿಕೊಳ್ಳುತ್ತಾರೆ.

ತಾನು ಹಿಂದೆ ಡಕಾಯಿತನಾಗಿದ್ದು ನಾರದರ ಉಪದೇಶದಿಂದ ಋಷಿಯಾದನೆಂದು ಹೇಳಲಾಗುವ ವಾಲ್ಮೀಕಿ ರಚಿಸಿದ ರಾಮಾಯಣವು ಮೇಲ್ಪದರದಲ್ಲಿ ಪಿತೃವಾಕ್ಯಪರಿಪಾಲಕ, ಏಕಪತ್ನೀವ್ರತಸ್ಥ, ಅಯೋಧ್ಯಾ ರಾಮನ ಕತೆೆ ಎನಿಸಿದರೂ, ಒಳಪದರಗಳಲ್ಲಿ ರಾಮನ ಆದರ್ಶಗಳ ಪ್ರತಿಸತ್ಯಗಳಾದ ಸಾಮ್ರಾಜ್ಯ ದಾಹ, ಈರ್ಷೆ, ಸಂಚು, ಅಮಾನವೀಯತೆ, ಮೋಸ, ಹಿಂಸೆ ಮತ್ತು ಪ್ರತಿಹಿಂಸೆಗಳ ಕಥಾನಕವಾಗಿದೆ. ಸಂಘ ಪರಿವಾರವು ಸಂಸ್ಕೃತಿ ಹೆಸರಿನಲ್ಲಿ ಮಾಡುವ ರಾಜಕಾರಣವು ತಾತ್ವಿಕವಾಗಿ ಅಯೋಧ್ಯಾ ರಾಮನ ಆದರ್ಶಗಳನ್ನು ಎತ್ತಿಹಿಡಿಯುತ್ತಾ ವಾಸ್ತವದಲ್ಲಿ ರಾಮಾಯಣದ ಪ್ರತಿಸತ್ಯಗಳನ್ನು ಅಳವಡಿಸಿಕೊಂಡಿದೆ. ಈ ವೈರುಧ್ಯವನ್ನು ಮರೆಮಾಚಲು ಸಂಘಪರಿವಾರವು ತನ್ನ ಎಲ್ಲ ಅಧಿಕಾರವನ್ನು ವಿವಿಧ ನೆಲೆಗಳಲ್ಲಿ ಬಳಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸತ್ಯು 1977ರಲ್ಲಿ ತಯಾರಿಸಿದ ಕನ್ನೇಶ್ವರ ರಾಮ ಚಲನಚಿತ್ರದ ಮರುವೀಕ್ಷಣೆ ಮತ್ತು ವ್ಯಾಖ್ಯಾನ ಸಂಗತವಾಗಿದೆ.

ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮೇಲ್ಪದರದಲ್ಲಿ ವಿರೋಧಿಸುವಂಥ ದೃಷ್ಟಿಕೋನಗಳ ಪ್ರಗತಿಪರ ಚಿತ್ರನಿರ್ದೇಶಕರ ಮಧ್ಯೆ ಇದ್ದುಕೊಂಡೇ ಚಿಂತನಶೀಲ ಸಿನೆಮಾ ಮಾಡುವ ಕನ್ನಡದ ಈ ಎಡಪಂಥೀಯ ಚಿತ್ರ ನಿರ್ದೇಶಕ ನಾಲ್ಕು ದಶಕಗಳ ಹಿಂದೆ ತಯಾರಿಸಿದ ‘ಕನ್ನೇಶ್ವರ ರಾಮ’ ಸಂಕೀರ್ಣ ಚಿಂತನಾ ವಿನ್ಯಾಸವನ್ನು ಹೊಂದಿರುವ ಚಿತ್ರ. ಕೇಂದ್ರಪಾತ್ರವಾದ ಕನ್ನೇಶ್ವರ ರಾಮನ ನೆನಪುಗಳ ಮೂಲಕ ವ್ಯಕ್ತಿ-ಘಟನೆ-ಸನ್ನಿವೇಶಗಳ ವಿವರಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತದೆ. ಮೇಲುನೋಟಕ್ಕೆ ಸ್ಥಳೀಯ ಡಕಾಯಿತನಾಗಿ ಸಾಹಸಮಯ ಬದುಕನ್ನು ಬದುಕುತ್ತಾ ಕೊನೆಗೆ ದುರಂತ ಸಾವನ್ನಪ್ಪಿ ದಂತಕತೆಯಾದ, ಜನಪ್ರಿಯ ಲಾವಣಿಗಳ ರೋಚಕವಸ್ತುವಾದ ಒಬ್ಬ ಬಂಡುಕೋರನ ಕತೆಯಂತೆ ಕಾಣಿಸುತ್ತದೆ.

ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಘಟಿಸಿದ ಈ ಕತೆಯನ್ನು ಭಿತ್ತಿಯಾಗಿರಿಸಿಕೊಂಡು ಎಡಪಂಥೀಯ ನೆಲೆಯಲ್ಲಿ, ನೈಜ ಸ್ವಾತಂತ್ರ್ಯ, ಸರ್ವಸಮಾನತೆ ಮತ್ತು ಜನಪರವಾದ ನ್ಯಾಯದ ನಿರ್ವಚನೆಗಳನ್ನು ಸತ್ಯು ತಮ್ಮ ಈ ಚಿತ್ರದಲ್ಲಿ ದೃಶ್ಯಗಳನ್ನಾಗಿಸುತ್ತಾರೆ. 40 ವರ್ಷಗಳ ನಂತರ ಈ ಚಿತ್ರವನ್ನು ಮತ್ತೆ ನೋಡಿದಾಗ ನನಗೆ ದಕ್ಕಿದ ಅನುಭವದ ನಿರೂಪಣೆ ಇಲ್ಲಿದೆ. ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಪ್ರಜೆಯೊಬ್ಬ ತನ್ನ ನ್ಯಾಯನಿಷ್ಠೆ ಮತ್ತು ಬಂಡುಕೋರತನದಿಂದಾಗಿ ಆಳುವವರನ್ನು ವಿರೋಧಿಸುತ್ತಾ ದರೋಡೆಕೋರನಾಗಿ ಪರಿವರ್ತಿತನಾಗುವ ಕತೆ ಎಸ್.ಕೆ.ನಾಡಿಗರ ಕನ್ನಯ್ಯರಾಮ ಎಂಬ ಕಾದಂಬರಿ ಈ ಚಿತ್ರದ ಹಂದರವಾಗಿದೆ.

ಬಡವರ ಬಂಧುವಾಗಿ, ಆಳುವವರಿಗೆ ತಲೆನೋವಾಗಿ, ಸಾಮಾಜಿಕ ವೀರನಾಗಿ ದಂತಕತೆಯಾದ ಕನ್ನೇಶ್ವರ ರಾಮನಿಗೆ ಸಂಬಂಧಿಸಿದ ವಾಸ್ತವ-ಕಲ್ಪನೆಗಳನ್ನು ಸತ್ಯು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸಂಯೋಜಿಸಿ ಗಂಭೀರ ತಾತ್ವಿಕ ಚಿಂತನೆ, ಲಘುಹಾಸ್ಯ, ಸಿನಿಮೀಯ ಸಾಹಸ ಮತ್ತು ದುರಂತಗಳನ್ನೊಳಗೊಂಡ ಚಿತ್ರವನ್ನಾಗಿಸಿದ್ದಾರೆ. ತನ್ನ ನಿಷ್ಠ ಒಡನಾಡಿಗಳನ್ನು ಕಳೆದುಕೊಂಡು ಒಂಟಿಯಾದ ರಾಮ, ಪೊಲೀಸರು ಹೇರುವ ಒತ್ತಡಕ್ಕೆ ಸಿಕ್ಕಿ ಅಸಹಾಯಕರಾದ ಜನ, ಮತ್ತು ಅವರನ್ನು ಪಾರುಮಾಡಲು ಅವನನ್ನು ಪ್ರೀತಿಸುವ ಮಲ್ಲಿ ಪೊಲೀಸರೊಂದಿಗೆ ಕೈಗೂಡಿಸಿದಾಗ, ತಾನೇ ಪೊಲೀಸರಿಗೆ ಶರಣಾಗುತ್ತಾನೆ. ಮರಣದಂಡನೆಗೆ ಗುರಿಯಾಗಿ, ಗಲ್ಲಿಗೇರುವ ಮೊದಲು ಸಾಗುವ ಮೆರವಣಿಗೆ ಅವನ ಬಾಳಿನಲ್ಲಿ ಬಂದುಹೋದ ಜನರು ಮತ್ತು ಘಟನೆಗಳ ನೆನಪುಗಳ ಮೆರವಣಿಗೆಯೂ ಆಗುತ್ತದೆ. ಈ ಘಟನಾವಳಿಗಳನ್ನು ಇತಿಹಾಸವಾಗಿ ದಾಖಲಿಸುವಂತೆ ಹೆಣೆದು ಹಾಡಿದ ಲಾವಣಿ ಚಿತ್ರದ ಸ್ವರಭಿತ್ತಿಯಾಗಿದೆ.

ಸತ್ಯು ಚಿತ್ರದ ನಿರೂಪಣೆಯಲ್ಲಿ ದ್ವಂದ್ವಾತ್ಮಕ ಭೌತವಾದದ ನೆಲೆಯಲ್ಲಿ ವೈರುಧ್ಯಗಳನ್ನು ಮುಖಾಮುಖಿಯಾಗಿಸುತ್ತಾರೆ. ವ್ಯಕ್ತಿನಿಷ್ಠೆ-ಸಮಾಜಿಕನಿಷ್ಠೆ, ಬಡವರ ನೈತಿಕತೆ-ಉಳ್ಳವರ ಅನೈತಿಕತೆ, ಕಾನೂನು-ನ್ಯಾಯ, ದಮನ- ದಂಗೆಕೋರತನ, ನಿರ್ಬಂಧಿತ ಪ್ರೀತಿ-ಸ್ವಚ್ಛಂದ ಪ್ರೇಮ, ವ್ಯವಸ್ಥೆಯ ಬಲ-ವ್ಯಕ್ತಿಯ ನಿರ್ಬಲತೆ, ರಾಜಕೀಯ ಬಿಡುಗಡೆ-ಸಂಪೂರ್ಣ ಸ್ವಾತಂತ್ರ್ಯ ಹೀಗೆ ವಾಸ್ತವಿಕ ಸತ್ಯಗಳನ್ನು ಎಲ್ಲೂ ಏಕಪಕ್ಷೀಯವಾಗಿ ನೋಡದೆ ಎರಡು ವಿರೋಧಗಳ ಸಮನ್ವಯಿತ ಸತ್ಯವನ್ನಾಗಿ ನೋಡುವಂತೆ ಚಿತ್ರ ಸಹೃದಯರನ್ನು ಪ್ರೇರೇಪಿಸುತ್ತಾರೆ. ಕನ್ನೇಶ್ವರ ರಾಮ ಎರಡು ರೀತಿಯ ಸ್ವಾತಂತ್ರ್ಯಹೋರಾಟಗಳನ್ನು ನಮ್ಮ ಮುಂದೆ ಇಡುತ್ತದೆ.

ಒಂದು: ಬಡವರು ಮತ್ತು ಜನಸಾಮಾನ್ಯರಿಗೂ ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಒದಗಿಸುವಂಥ ಆದರ್ಶ ಸಮಸಮಾಜದ ಕಲ್ಪನೆಯನ್ನು ತಲೆಯಲ್ಲಿಟ್ಟುಕೊಂಡ ಡಕಾಯಿತನೊಬ್ಬ ನಡೆಸುವ ಸಶಸ್ತ್ರ ಹೋರಾಟ. ಎರಡು: ಬ್ರಿಟಿಷರ ರಾಜಕೀಯ ದಾಸ್ಯದಿಂದ ಬಿಡುಗಡೆ ಪಡೆಯಲು ಗಾಂಧಿವಾದಿಗಳು ನಡೆಸಿದ ಅಹಿಂಸಾತ್ಮಕ ಹೋರಾಟ. ಮೊದಲನೆಯದು ದಾಸ್ಯ-ಶೋಷಣೆ-ಅನ್ಯಾಯಗಳಿಂದ ಇಡೀ ಮನುಕುಲದ ಬಿಡುಗಡೆಗೆ ಸಂಬಂಧಿಸಿದ ವಿಶಾಲ ಉದ್ದೇಶದ ಸ್ವಾತಂತ್ರ್ಯ ಹೋರಾಟ. ಎರಡನೆಯದು ಗಾಂಧಿ ಪ್ರಣೀತ ಧೇಯೋದ್ದೇಶಗಳ ಘೋಷಣೆಯೊಂದಿಗೆ ಪ್ರಾರಂಭಿಸಿ ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಕೈಯಿಂದ ದೇಶೀಯ ಬಂಡವಾಳಿಗರ ಕೈಗೆ ರಾಜಕೀಯ ಹಸ್ತಾಂತರದಲ್ಲಿ ಪರ್ಯವಸಾನವಾದ ಸೀಮಿತ ಫಲದ ಕಾಂಗ್ರೆಸ್ ನೇತೃತ್ವದ ಸ್ವಾತಂತ್ರ್ಯ ಹೋರಾಟ.

ಭಾರತದ ಯಾವುದೇ ಪ್ರದೇಶವಾಗಿರಬಹದಾದ ಕುಗ್ರಾಮದ ರೈತನೊಬ್ಬ ತನ್ನ ಮೇಲೆ ಗ್ರಾಮದ ಬಲಿಷ್ಠರು ಹೇರುವ ಪಂಚಾಯತ್ ನ್ಯಾಯದ ವಿರುದ್ಧ ಪ್ರತಿಭಟಿಸಿ, ಅಪರಾಧಗಳ ಸುಳಿಯೊಳಗೆ ಸಿಕ್ಕಿ, ಜೈಲು ಸೇರುತ್ತಾನೆ. ಬ್ರಿಟಿಷರ ವಿರುದ್ಧ ಹೋರಾಡಿ ಬಂಧಿಗಳಾಗಿ ಜೈಲು ಸೇರುವ ಸ್ವಾತಂತ್ರ್ಯ ಸೇನಾನಿಗಳು ಕಾಂಗ್ರೆಸ್ ಬಾವುಟವನ್ನು ಜೈಲಿನ ಆವರಣದಲ್ಲಿ ಹಾರಿಸುವಾಗ ಏರ್ಪಡುವ ಗೊಂದಲದಲ್ಲಿ ಸಮಾನ ಮನಸ್ಕರಾದ ಬಂಧಿಗಳೊಂದಿಗೆ ಜೈಲಿನಿಂದ ತಪ್ಪಿಸಿಕೊಂಡು ಡಕಾಯಿತರ ಗುಂಪೊಂದನ್ನು ಸೇರಿಕೊಳ್ಳುತ್ತಾನೆ. ಅಪಾಯವನ್ನೆದುರಿಸುವ ಧೈರ್ಯ, ಜಾಣ್ಮೆ-ಸಾಹಸ-ಸಂಘಟನಾತ್ಮಕ ಕೌಶಲಗಳಿಂದಾಗಿ ರಾಮ, ಡಕಾಯಿತರ ನಾಯಕ ಜುಂಜ ಸತ್ತನಂತರ ಅವನ ಉತ್ತರಾಧಿ ಕಾರಿಯಾಗುತ್ತಾನೆ. ಜುಂಜನ ಪ್ರೇಯಸಿ ಮಲ್ಲಿಯ ಅನುರಾಗವನ್ನು ಗಳಿಸಿಕೊಳ್ಳುತ್ತಾನೆ. ದರೋಡೆ-ಸುಲಿಗೆಗಳಲ್ಲಿ ತೊಡಗಿ, ಪ್ರಭುತ್ವ ಮತ್ತು ಪೊಲೀಸರಿಗೆ ಸಿಕ್ಕದೆ ನಾಗರಿಕ ಸಮಾಜದ ಆಚೆ ಉಳಿದು ತನ್ನದೇ ಆದ ರಾಜ್ಯ, ಬಾವುಟಗಳ ಕನಸು ಕಾಣುತ್ತಾನೆ.

ಜೈಲಿನಿಂದ ತಪ್ಪಿಸಿಕೊಂಡು ಓಡಿಬಂದ ಹಸಿದ ಗಂಡನಿಗೆ ಊಟವಿಕ್ಕುವ ಹೆಂಡತಿ, ಅವನಿಗೆ ಸಹಾಯಕವಾಗಿರುವ ಬದಲು ರಾಮನ ಒಡಹುಟ್ಟಿದ ಅಣ್ಣನೊಂದಿಗೆ ಸೇರಿ ದಂಗೆಕೋರ ಗಂಡನನ್ನು ಪೊಲೀಸರಿಗೆ ಹಿಡಿದುಕೊಡಲು ಯತ್ನಿಸುತ್ತಾಳೆ. ಆ ಮೂಲಕ ಪ್ರಭುತ್ವದ ಕಾನೂನಿಗೆ ನಿಷ್ಠೆ ಮೆರೆಯುತ್ತಾಳೆ.

ಆದರೆ ಜೈಲಿನಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸಹೋದರತೆಯನ್ನು ಬೆಳೆಸಿಕೊಳ್ಳುವ ದರೋಡೆಕೋರ ಸಹಚರ ಸದಾ ರಾಮನ ಬೆನ್ನಿಗಿರುತ್ತಾ ಪೊಲೀಸರು ಸುತ್ತುವರಿದಾಗ ತನ್ನ ಪ್ರಾಣಕೊಟ್ಟು ರಾಮನು ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರವಾಗುತ್ತಾನೆ.

ರಾಜಕೀಯ ಸ್ವಾತಂತ್ರ್ಯಕ್ಕಾಗಿ ಕಾನೂನುಭಂಗ ಮಾಡುವ ಸತ್ಯಾಗ್ರಹಿಗಳು, ತನ್ನದೇ ಆದ ನೆಲೆಗಳಲ್ಲಿ ನ್ಯಾಯಕ್ಕಾಗಿ ಕಾನೂನು ಮುರಿಯುವ ರಾಮನಂಥ ದಂಗೆಕೋರರು ಜೈಲಿನಲ್ಲಿ ಬಂಧಿಗಳಾಗಿ ಸಮಾನ ನೆಲೆಯಲ್ಲಿ ಸಂಧಿಸುತ್ತಾರೆ. ಅಹಿಂಸಾತ್ಮಕ ಚಳುವಳಿಯ ವ್ರತಕ್ಕೆ ಕಟ್ಟುಬಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಸಶಸ್ತ್ರ ಪೊಲೀಸರು ಬಂಧಿಸಿದಾಗ ಸಶಸ್ತ್ರ ರಾಮ ಪೊಲೀಸರನ್ನು ನಿರಾಯುಧರನ್ನಾಗಿಸಿ, ಚಳುವಳಿಗಾರರನ್ನು ಬಿಡುಗಡೆ ಮಾಡಿಸುತ್ತಾನೆ. ಗಾಂಧಿವಾದಿಗಳಾದ ನಿರ್ಬಲ ಸ್ವಾತಂತ್ರ್ಯ ಹೋರಾಟಗಾರರ ಅಹಿಂಸೆ, ಆಯುಧ ಹಿಡಿದು ನಿರಾಯುಧರ ಮೇಲೆರಗುವ ಪೊಲೀಸರ ಹಿಂಸೆ ಮತ್ತು ಹಿಂಸೆಗೆ ಅವಕಾಶವಿದ್ದಾಗಲೂ ಹಿಂಸಿಸದೆ ಕ್ಷಮೆತೋರಿಸಿ ಪೊಲೀಸರನ್ನು ಬಫೂನುಗಳನ್ನಾಗಿಸುವ ಬಂದೂಕುಧಾರಿ ರಾಮನ ಅಹಿಂಸೆ ಪ್ರಭುತ್ವ, ಗಾಂಧಿವಾದ ಮತ್ತು ಹಿಂಸೆ-ಅಹಿಂಸೆಗಳ ತಾತ್ವಿಕ ತಾಕಲಾಟಗಳನ್ನು ಭಾವನಾತ್ಮಕವಾಗಿ ನೋಡದೆ ವೈಚಾರಿಕವಾಗಿ ನೋಡುವಂತೆ ಮಾಡುತ್ತವೆ.

ಜನರ ದಾನ-ವಂತಿಗೆಗಳಿಂದ ನಡೆಯುವ ಮಠದ ಧರ್ಮಗುರುಗಳು ಕಷ್ಟಕಾಲದಲ್ಲಿ ಜನರಿಗೆ ನೆರವಾಗುವುದರ ಬದಲು ತಾವೇ ಬಡ್ಡಿ-ಹಾದರಗಳ ಮೂಲಕ ಜನರನ್ನು ಶೋಷಿಸುತ್ತಾರೆ. ‘ಹರ ಕೊಲ್ಲಲ್ ಪರ ಕಾಯ್ವನೇ’ ಎಂಬಂಥ ಅಸಹಾಯಕ ಸ್ಥಿತಿಯಲ್ಲಿ ಡಕಾಯಿತನಾದ ರಾಮ ಅವರನ್ನು ಮಠದ ದೌರ್ಜನ್ಯಗಳಿಂದ ಪಾರುಮಾಡುತ್ತಾನೆ.

ವೈವಾಹಿಕ ಚೌಕಟ್ಟಿನಲ್ಲಿ ತನಗೆ ನಿಷ್ಠಳಾದ ಹೆಂಡತಿಯಲ್ಲಿ ಪಡೆಯಲಾಗದ್ದನ್ನು ವಿವಾಹೇತರ ಸಂಬಂಧದ ಸ್ವಚ್ಛಂಧತೆಯಲ್ಲಿ, ನಿರ್ದಿಷ್ಟವಾಗಿ ಯಾರಿಗೂ ನಿಷ್ಠಳಾಗದೆಯೂ ಪ್ರೀತಿಸಬಲ್ಲ ವೇಶ್ಯೆ, ಮಲ್ಲಿಯಲ್ಲಿ ರಾಮ ಪಡೆಯುತ್ತಾನೆ. ಆದರೆ ಗಲ್ಲಿಗೇರುವ ಮೊದಲು, ತನ್ನ ಪ್ರೀತಿಯ ಸಂಕೇತವಾದ ಉಂಗುರವನ್ನು ಮಲ್ಲಿಯ ಕೈಗೆ ಕೊಡದೆ, ಹೆಂಡತಿಗೆ ಕೊಡುವಂತೆ ಪೊಲೀಸರಿಗೆ ಸೂಚಿಸುತ್ತಾನೆ. ರಾಮನಿಂದ ಸಹಾಯ ಪಡೆದ ಗ್ರಾಮಸ್ಥರು ಪೊಲೀಸರ ಒತ್ತಡಕ್ಕೆ ಸಿಕ್ಕಿ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬೇಕಾದಾಗ ತಾವೇ ಅವನನ್ನು ಹಿಡಿದುಕೊಡಲು ಮುಂದಾಗುತ್ತಾರೆ. ಕ್ರೋಧ, ಅಸಹಾಯಕತೆ, ಸ್ವರಕ್ಷಣೆಯ ವಾಂಛೆಗಳಿಂದಾಗಿ ಹುಚ್ಚನಂತಾದ ರಾಮ ಗ್ರಾಮಸ್ಥರ ಮನೆಗಳಿಗೆ ಬೆಂಕಿಹಚ್ಚಿದಾಗ, ರಾಮನ ಪ್ರೀತಿಪಾತ್ರ ಮಲ್ಲಿಯೇ ಅವನನ್ನು ಶರಣಾಗಿಸಲು ಮುಂದಾಗುತ್ತಾಳೆ.

ಚಿತ್ರದ ಪ್ರಾರಂಭದಿಂದಲೂ ವಿದ್ರೋಹಿಯಾಗಿಯೇ ಆಳುವವರಿಗೆ ಸೆಡ್ಡು ಹೊಡೆಯುತ್ತಾ ಬಂದ ರಾಮ ತನ್ನ ಪ್ರೀತಿಪಾತ್ರ ಹೆಣ್ಣು ಪೊಲೀಸರೊಂದಿಗೆ ಸಹಕರಿಸಿದಾಗ ಅವಳನ್ನು ನಿಂದಿಸದೆ, ಪೊಲೀಸರೊಂದಿಗೆ ಹೋರಾಡಿ ಹುತಾತ್ಮನಾಗದೆ, ಅಥವಾ ಆತ್ಮಹತ್ಯೆಗೆ ಯತ್ನಿಸದೆ, ಕೈಲಿದ್ದ ಪಿಸ್ತೂಲನ್ನು ಎಸೆದು ಅವರಿಗೆ ಶರಣಾಗಿ ಕಾನೂನಿನ ಪ್ರಕ್ರಿಯೆಯನ್ನು ಎದುರಿಸುತ್ತಾನೆ.

ಶೋಷಕರಿಂದ ರಾಜ್ಯಾಧಿಕಾರವನ್ನು ಪಡೆಯುವ ಎಡಪಂಥೀಯ ಕ್ರಾಂತಿಯಲ್ಲಿ ಆಳುವವರ ಹಿಂಸಾತ್ಮಕ ದಮನ, ಅನೈತಿಕಪ್ರತಿರೋಧ, ಮತ್ತು ನಿರ್ದಯವಾದ ಆಕ್ರಮಣಗಳನ್ನು ಎದುರಿಸಲು ಸಶಸ್ತ್ರ ಹೋರಾಟ ಪಕ್ಷಕ್ಕೆ ಅನಿವಾರ್ಯವಾಗಬಹುದು. ಆದರೆ ಜನರ ಬೆಂಬಲವಿಲ್ಲದಿದ್ದರೆ ಅಥವಾ ಯಾರ ಹಿತರಕ್ಷಣೆಯನ್ನು ರಕ್ಷಿಸಲು ಹೋರಾಟ ನಡೆಯುತ್ತದೆಯೋ ಅವರ ಹಿತವನ್ನೇ ಕಡೆಗಣಿಸಿ ಹಿಂಸೆಗಿಳಿದರೆ, ಅದು ಜನಪರವಲ್ಲದ ಹುಚ್ಚು ಹೋರಾಟವಾಗುತ್ತದೆ ಎಂಬುದನ್ನೂ ಸತ್ಯು ಚಿತ್ರದ ಕಡೆಯಭಾಗದಲ್ಲಿ ಕಾಣಿಸಿದ್ದಾರೆ.

ಜೊತೆಗೆ ಮತ್ತು ಒಟ್ಟಾರೆಯಾಗಿ ಸತ್ಯು ತಮ್ಮ ಕನ್ನೇಶ್ವರ ರಾಮ ಚಲನಚಿತ್ರವು ಕಟ್ಟಿಕೊಡುವ ಸಂಕಥನದ ಮೂಲಕ ಅಯೋಧ್ಯೆಯ ರಾಮನನ್ನು ಕುರಿತಾದ ಭಾವಪರವಶ, ಅವೈಚಾರಿಕ ಹಾಗೂ ಪ್ರಭುತ್ವದ ಪರವಾದ ರಾಜಕೀಯವನ್ನು ಮುನ್ನೊತ್ತುವ ನೂರಾರು ಸಿನೆಮಾ-ಸಂಕಥನಗಳನ್ನು ತಾತ್ವಿಕ ಮತ್ತು ವೈಚಾರಿಕ ವಿಮರ್ಶಗೆ ಒಳಪಡಿಸುವಂತೆ ಮಾಡುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)