varthabharthi

ಸಂಪಾದಕೀಯ

ಬಿಜೆಪಿ ಯಾತ್ರೆಗೆ ಆರಂಭದಲ್ಲಿ ವಿಘ್ನ

ವಾರ್ತಾ ಭಾರತಿ : 6 Nov, 2017

ಕರ್ನಾಟಕದಲ್ಲಿ ಮತ್ತೆ ಅಧಿಕಾರವನ್ನು ಸ್ವಾಧೀನ ಪಡಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನಿಂದ ಹೊರಟ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಆರಂಭದಲ್ಲೇ ವಿಘ್ನ ಉಂಟಾಗಿದೆ. ಈ ಯಾತ್ರೆಯ ಮೊದಲ ದಿನ ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾರೀ ನಿರೀಕ್ಷೆ ಇಟ್ಟುಕೊಂಡು ಉದ್ಘಾಟನೆಗೆ ಬಂದಿದ್ದರು. ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಐದಾರು ಲಕ್ಷ ಜನ ಸೇರುತ್ತಾರೆಂಬ ನಿರೀಕ್ಷೆ ಅವರಿಗಿತ್ತು. ಹಾಗೆಂದು ರಾಜ್ಯದ ನಾಯಕರು ಅವರಿಗೆ ಬಿಂಬಿಸಿದ್ದರು. ಆದರೆ, ಸಮಾವೇಶದ ಉದ್ಘಾಟನೆಯ ದಿನ ಅಮಿತ್ ಶಾ ಕಣ್ಣಿಗೆ ಗೋಚರಿಸಿದ್ದು ಖಾಲಿ ಇರುವ ಕುರ್ಚಿಗಳು. ಮುಂಭಾಗದಲ್ಲಿ ಮಾತ್ರ ಎರಡು ಸಾವಿರ ಜನ ಸೇರಿದ್ದರು. ಇನ್ನಷ್ಟು ಜನ ಸೇರಲಿ ಎಂದು ವಿಮಾನ ನಿಲ್ದಾಣದಲ್ಲೇ ಕುಳಿತ ಶಾ ಮೂರು ತಾಸು ತಡವಾಗಿ ಸಭೆ ನಡೆಯುವ ಸ್ಥಳಕ್ಕೆ ಆಗಮಿಸಿದರೂ ಹೆಚ್ಚಿನ ಜನ ಸೇರಲಿಲ್ಲ.

ಇದರಿಂದಾಗಿ ಕೆಂಡಾಮಂಡಲರಾದ ಅವರು, ವೇದಿಕೆಯ ಮೇಲಿದ್ದ ಬಿಜೆಪಿಯ ಹಿರಿಯ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ಆಗ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಡಿ.ವಿ.ಸದಾನಂದ ಗೌಡರು ಇತರ ನಾಯಕರೊಂದಿಗೆ ವೇದಿಕೆಯಿಂದ ಕೆಳಗಿಳಿದು ಬಂದು ದಾರಿಯಲ್ಲಿ ಹೋಗುತ್ತಿದ್ದ ಜನರನ್ನೆಲ್ಲ ಸಭೆಗೆ ಬರುವಂತೆ ಕೈಮಾಡಿ ಕರೆದರು. ಆದರೂ ಕುರ್ಚಿಗಳು ಭರ್ತಿ ಯಾಗಲಿಲ್ಲ. ಬೆಂಗಳೂರಿನ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 100 ಜನ ಸದಸ್ಯರಿದ್ದಾರೆ. ಇವರೆಲ್ಲಾ ಮನಸ್ಸು ಮಾಡಿದ್ದರೆ ಲಕ್ಷಾಂತರ ಜನರನ್ನು ಸೇರಿಸುವುದು ಕಷ್ಟಕರವೇನೂ ಆಗುತ್ತಿರಲಿಲ್ಲ. ಆದರೆ, ಅವರ ನಿರಾಸಕ್ತಿಯಿಂದಾಗಿ ಸಭೆಗೆ ಸೇರಿದವರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದರು.

ಬೆಂಗಳೂರಿನ ನಂತರ ಈ ಯಾತ್ರೆ ತುಮಕೂರಿಗೆ ಹೋದಾಗಲೂ ಅಲ್ಲಿಯೂ ಅಷ್ಟೊಂದು ಜನ ಸೇರಿರಲಿಲ್ಲ. ಅಲ್ಲಿನ ಮಾಜಿ ಶಾಸಕ ಸೊಗಡು ಶಿವಣ್ಣ ಕಾರ್ಯಕ್ರಮಕ್ಕೆ ಬರಲಿಲ್ಲ. ಅಲ್ಲದೆ, ಕೆ.ಎಸ್. ಈಶ್ವರಪ್ಪ ಆಡಿದ ಮಾತೊಂದು ಸವಿತಾ ಸಮಾಜದವರನ್ನು ಕೆರಳಿಸಿ ಕೋಲಾಹಲಕ್ಕೆ ಕಾರಣವಾಯಿತು. ಈ ಯಾತ್ರೆ ತಿಪಟೂರಿಗೆ ತಲುಪಿದಾಗ ಬಿಜೆಪಿ ಅತೃಪ್ತ ಕಾರ್ಯಕರ್ತರು ಯಾತ್ರೆಯ ಮೇಲೆ ತೆಂಗಿನ ಕಾಯಿ ಮತ್ತು ಕಲ್ಲು ತೂರಾಟ ನಡೆಸಿದರು. ಇದರಿಂದ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದಾಗಿ ರಾಜ್ಯದಲ್ಲಿ ಬಿಜೆಪಿಯ ಪ್ರಭಾವ ಕುಸಿದಿದೆ. ಎರಡನೆಯ ಮುಖ್ಯ ಅಂಶವೆಂದರೆ ರಾಜ್ಯದ ಬಿಜೆಪಿ ಒಡೆದ ಮನೆಯಾಗಿದೆ. ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲೇ ಈ ಅಂಶ ಸ್ಪಷ್ಟವಾಯಿತು. ನಾವೇನೋ ಒಂದಾಗಿದ್ದೇವೆ ಎಂದು ನಾಯಕರು ಬಹಿರಂಗವಾಗಿ ಹೇಳಿಕೊಂಡರೂ ಅಂತರಂಗದಲ್ಲಿ ಅಪನಂಬಿಕೆಯ ಮತ್ತು ಅಸಹನೆಯ ಅಡ್ಡಗೋಡೆ ಎದ್ದುನಿಂತಿರುವುದು ಸ್ಪಷ್ಟವಾಗಿದೆ.

ಬೆಂಗಳೂರಿನ ಸಮಾವೇಶಕ್ಕೆ ಜನರನ್ನು ಸೇರಿಸುವ ಹೊಣೆಗಾರಿಕೆಯನ್ನು ಮಾಜಿ ಸಚಿವ ಅಶೋಕ್ ವಹಿಸಿಕೊಂಡಿದ್ದರಂತೆ. ಆದರೆ, ಅವರು ಉದ್ದೇಶಪೂರ್ವಕವಾಗಿಯೇ ಜನರನ್ನು ಸೇರಿಸಲಿಲ್ಲ ಎಂದು ಪಕ್ಷದ ಕೆಲ ನಾಯಕರು ಅಮಿತ್ ಶಾ ಅವರಿಗೆ ದೂರು ನೀಡಿದ್ದಾರಂತೆ. ಇನ್ನೊಂದೆಡೆ ಬಿಜೆಪಿ ಬಾಹುಳ್ಯದ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಬಂದಿರಲಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ್ ಜೋಶಿ ಅವರ ಮತಕ್ಷೇತ್ರಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿರಲಿಲ್ಲ ಎಂದು ಪಕ್ಷದ ಕೆಲ ನಾಯಕರು ರಾಷ್ಟ್ರೀಯ ಅಧ್ಯಕ್ಷರಿಗೆ ದೂರು ನೀಡಿದರು. ಇದಕ್ಕೆ ಪ್ರತಿಯಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ದೂರು ನೀಡಿದ ಭಿನ್ನಮತೀಯ ನಾಯಕರು ಯಡಿಯೂರಪ್ಪನವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳುವಾಗ ತಮ್ಮೆಂದಿಗೆ ಸಮಾಲೋಚನೆ ಮಾಡುತ್ತಿಲ್ಲ.

ಅವರು ಶೋಭಾ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿ ಮಾತನ್ನು ಕೇಳಿ ಅವರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಾರೆಂದು ಕೆಲ ನಾಯಕರು ಅಮಿತ್ ಶಾ ಅವರಿಗೆ ದೂರು ನೀಡಿರು. ಇನ್ನೊಂದೆಡೆ ಯಡಿಯೂರಪ್ಪ ಮತ್ತು ಸಂತೋಷ್ ಅವರ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡಿರುವುದು ಈ ಯಾತ್ರೆಯಿಂದ ಸ್ಪಷ್ಟವಾಯಿತು. ಎರಡನೆಯದಾಗಿ ರಾಜ್ಯದಲ್ಲಿ ಬಿಜೆಪಿಯ ಪ್ರಭಾವ ಮುಂಚಿನಷ್ಟಿಲ್ಲ. ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರು ಮಾಡಿದ ಭ್ರಷ್ಟಾಚಾರದ ಹಗರಣಗಳಿಂದ ಜನಸಾಮಾನ್ಯರಲ್ಲಿ ಅದರಲ್ಲೂ ಬಿಜೆಪಿ ಬೆಂಬಲಿಗರಲ್ಲಿ ಒಂದು ವಿಧದ ಅಸಮಾಧಾನವಿದೆ. ಏನೇ ಅಸಮಾಧಾನವಿದ್ದರೂ ಯಡಿಯೂರಪ್ಪನವರ ಮುಖ ನೋಡಿ ಅವರನ್ನು ಬೆಂಬಲಿಸುತ್ತಾ ಬಂದಿದ್ದ ಲಿಂಗಾಯತರು ಈಗ ಬಿಜೆಪಿಯಿಂದ ದೂರ ಸರಿಯುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ವೈದಿಕಶಾಹಿ ತಮ್ಮನ್ನು ಆಪೋಷನ ಮಾಡಿಕೊಳ್ಳುತ್ತಿದೆ ಎಂಬುದು ಲಿಂಗಾಯತ ಸಮುದಾಯದವರಿಗೆ ತಡವಾಗಿ ಅರ್ಥವಾಗುತ್ತಿದೆ.

ಲಿಂಗಾಯತ ಸಮುದಾಯದಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ ಮತ್ತು ಜೆಡಿಎಸ್ ನಾಯಕರಾದ ಬಸವರಾಜ ಹೊರಟ್ಟಿ ಮುಂತಾದ ನಾಯಕರು ಈಗ ಯಡಿಯೂರಪ್ಪನವರನ್ನು ಹಿಂದೆ ಸರಿಸಿ ಸಮುದಾಯದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬೆಳಗಾವಿ ಮತ್ತು ಕಲಬುರಗಿಯಲ್ಲಿ ನಡೆದ ಸಮಾವೇಶಕ್ಕೆ ಲಕ್ಷಾಂತರ ಜನ ಸೇರಿದ್ದರು. ಸಂಘಪರಿವಾರದ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಹುಬ್ಬಳ್ಳಿಯಲ್ಲಿ ನವೆಂಬರ್ 5ರಂದು ನಡೆದ ಲಿಂಗಾಯತ ಸಮಾವೇಶಕ್ಕೆ 2 ಲಕ್ಷಕ್ಕೂ ಹೆಚ್ಚು ಜನ ನೆರೆದಿದ್ದರು. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಿರ್ಣಯ ಅಂಗೀಕರಿಸಿತು. ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಲಿಂಗಾಯತರನ್ನು ಶನಿ ಸಂತಾನ ಎಂದು ಆರೆಸ್ಸೆಸ್‌ನ ಹಿರಿಯ ನಾಯಕರೊಬ್ಬರು ಟೀಕಿಸಿದ್ದರು. ಆನಂತರ ತಾನು ಆಡಿದ ಮಾತಿಗಾಗಿ ಅವರು ಕ್ಷಮೆಯಾಚಿಸಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಯಡಿಯೂರಪ್ಪನವರ ಹಿಂದೆ ಲಿಂಗಾಯತರು ಇಲ್ಲ ಎಂದು ತಿಳಿದುಕೊಂಡ ಸಂಘ ಪರಿವಾರದ ನಾಯಕರು ಈಗ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮೂಲಕ ಲಿಂಗಾಯತ ಧರ್ಮ ಸ್ವತಂತ್ರ ಮಾನ್ಯತೆಗೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ಕೊಡಿಸಿದ್ದಾರೆ.

ಆದರೆ, ಅನಂತಕುಮಾರ್ ಹೆಗಡೆ ಹೇಳಿಕೆ ನೀಡಿದರೂ ಲಿಂಗಾಯತರು ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲು ಈಗ ಸಿದ್ಧವಿಲ್ಲ. ಅಂತಲೇ ಅವರ ಸಮಾವೇಶದಲ್ಲಿ ಬಿಜೆಪಿ ಪ್ರಮುಖ ಲಿಂಗಾಯತ ನಾಯಕರಾದ ಪ್ರಭಾಕರ ಕೋರೆ, ಜಗದೀಶ್ ಶೆಟ್ಟರ್, ಸುರೇಶ್ ಅಂಗಡಿ ಮುಂತಾದವರು ಪಾಲ್ಗೊಳ್ಳಲಿಲ್ಲ. ಒಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಚಳವಳಿ ತೀವ್ರಗೊಳ್ಳುತ್ತಿದ್ದರೆ, ಇನ್ನೊಂದೆಡೆ ಮತ ಬೇಟೆಗಾಗಿ ಬಿಜೆಪಿ ಆರಂಭಿಸಿದ ನವಪರಿವರ್ತನಾ ಯಾತ್ರೆ ನಿರುತ್ಸಾಹದಿಂದ ಸಾಗಿದೆ. ಈ ಯಾತ್ರೆ ಸಂಚರಿಸಿದ ಕಡೆ ಕಳೆದ ಐದು ದಿನಗಳಲ್ಲಿ ಅಂತಹ ಬೆಂಬಲ ಅದಕ್ಕೆ ವ್ಯಕ್ತವಾಗಲಿಲ್ಲ. ಒಂದೇ ವಾಹನದಲ್ಲಿ ಬಿಜೆಪಿ ನಾಯಕರು ಯಾತ್ರೆ ಮಾಡುತ್ತಿದ್ದರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡದಂತಹ, ಮಾತನಾಡದಂತಹ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಆದರೂ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಜೈಲಿಗೆ ಹಾಕುವುದಾಗಿ ಬೂಟಾಟಿಕೆಯ ಮಾತನ್ನಾಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರ ಮೇಲಿನ ಹಳೆಯ ಪ್ರಕರಣಗಳನ್ನೆಲ್ಲಾ ಹೊರಗೆ ತೆಗೆದು ವಿಶೇಷ ತನಿಖೆ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಅಕ್ರಮವಾಗಿ ಅದಿರು ರಫ್ತು ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟವುಂಟುಮಾಡಿರುವ ಆರೋಪದ ಮೇರೆಗೆ ಕೆಲ ಗಣಿಗಾರಿಕೆ ಕಂಪೆನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಅಕ್ರಮವಾಗಿ ಅದಿರು ಸಾಗಣೆಯಾಗಿರುವ ಪ್ರಕರಣಗಳ ತನಿಖೆ ನಡೆಸಿದ ಸಿಬಿಐ 25 ಸಾವಿರ ಕೋಟಿ ರೂ.ಗೂ. ಅಧಿಕ ಅವ್ಯವಹಾರ ಆಗಿರುವುದನ್ನು ಪತ್ತೆಹಚ್ಚಿದೆ. ಆದರೆ, ಆ ಬಗ್ಗೆ ಸಾಕ್ಷ ಸಿಕ್ಕಿಲ್ಲವೆಂದು ಪ್ರಕರಣಗಳನ್ನು ಕೈಬಿಟ್ಟಿದೆ. ಅದಕ್ಕಾಗಿ ನಾವು ವಿಶೇಷ ತನಿಖಾ ತಂಡವನ್ನು ರಚಿಸಿ ಅಪರಾಧಿಗಳನ್ನು ಪತ್ತೆ ಹಚ್ಚುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಒಟ್ಟಾರೆ ರಾಜ್ಯದ ರಾಜಕೀಯ ತೀವ್ರ ಕುತೂಹಕರ ತಿರುವನ್ನು ತೆಗೆದುಕೊಳ್ಳುತ್ತಿದೆ. ಜಾತ್ಯತೀತ ಜನತಾದಳದ ರಾಷ್ಟ್ರಾಧ್ಯಕ್ಷ ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಕೂಡಾ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಯಾತ್ರೆ ಆರಂಭಿಸಲು ತೀರ್ಮಾನಿಸಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸೆಂಬರ್ 25ರಿಂದ ಸುಮಾರು 40 ದಿನಗಳ ಕಾಲ ಕರ್ನಾಟಕದ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಇವೆರಡು ಪಕ್ಷಗಳಿಗಿಂತ ಮುಂಚೆ ಮುಂದಿನ ಚುನಾವಣೆಯಲ್ಲಿ ಗೆದ್ದು ಸರಕಾರವನ್ನು ರಚಿಸಿಬಿಡುವುದಾಗಿ ಅತ್ಯುತ್ಸಾಹದಿಂದ ಯಾತ್ರೆ ಆರಂಭಿಸಿದ ಬಿಜೆಪಿ ಆಂತರಿಕ ಕಲಹದಿಂದಾಗಿ ಜನರ ಮೇಲೆ ಪ್ರಭಾವ ಬೀರುವಲ್ಲಿ ವಿಫಲಗೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)