varthabharthi

ವಚನ ಬೆಳಕು

ಪೃಥ್ವಿ ಸಮ ಬಾರದು

ವಾರ್ತಾ ಭಾರತಿ : 7 Nov, 2017

ನಿಮ್ಮ ಶರಣರ ಚಮ್ಮಾವುಗೆಗೆ ಪೃಥ್ವಿ ಸಮ ಬಾರದು;
ಸರಿಯಲ್ಲ ನೋಡಾ.
ಕೂಡಲಸಂಗಮದೇವಾ,
ನಿಮ್ಮ ಶರಣರ ಚಮ್ಮಾವುಗೆಗೆ!
                                    -ಬಸವಣ್ಣ

 ಕಲ್ಯಾಣದ ಪ್ರಧಾನಿ ಬಸವಣ್ಣನವರು ಒಂದು ದಿನ ಒಡ್ಡೋಲಗಕ್ಕೆ ಹೋಗುತ್ತಿರುವಾಗ ಹರಳಯ್ಯನವರು ‘ಶರಣು’ ಎಂದು ಕೈ ಮುಗಿದರು. ಬಸವಣ್ಣನವರು ‘ಶರಣು ಶರಣಾರ್ಥಿ’ ಎಂದು ಕೈ ಮುಗಿದರು. ಬಸವಣ್ಣನವರು ಎರಡು ಬಾರಿ ಶರಣೆಂದುದನ್ನು ಕೇಳಿ ಸ್ತಂಭೀಭೂತರಾದ ಹರಳಯ್ಯ ನಿಂತಲ್ಲಿಯೇ ನಿಂತರು. ಪತ್ನಿ ಕಲ್ಯಾಣಮ್ಮ ಹುಡುಕಿಕೊಂಡು ಬರುವವರೆಗೆ ಅಲ್ಲಿಯೇ ನಿಂತಿದ್ದರು. ಬಸವಣ್ಣನವರು ತಮ್ಮ ಮೇಲೆ ಹೆಚ್ಚಿನ ಶರಣು ಹೊರೆ ಹೊರೆಸಿದ್ದನ್ನು ಪತ್ನಿಗೆ ವಿವರಿಸಿದರು. ತಮ್ಮ ತೊಡೆಯ ಚರ್ಮದಿಂದ ಚಮ್ಮಾವುಗೆಯ ಮಾಡಿ ಬಸವಣ್ಣನವರ ಪಾದಗಳಿಗೆ ಅರ್ಪಿಸುವುದೇ ಇದಕ್ಕೆ ಪರಿಹಾರ ಎಂದು ನಿರ್ಧರಿಸಿದರು.

 ‘‘ಮರುದಿನವೆ ಹರಳಯ್ಯ ಕೊರೆದ ಬಲದೊಡಿ ಚರ್ಮ

ಹರನೆಂದು ಮಡದಿಯೆಡದೊಡೆಯ/ ತಾ ಕೊಯ್ದು

ಭರದಿ ಹದಮಾಡಿ ಒಣಗಿಸಿದ//’’

ಎಂದು ಮುಂತಾಗಿ ಆ ಕಾಲದ ಜನಪದ ಕವಿಯೊಬ್ಬ ಹೃದಯಸ್ಪರ್ಶಿಯಾಗಿ ತ್ರಿಪದಿಗಳನ್ನು ಕಟ್ಟಿ ಹಾಡಿದ್ದಾನೆ.

 ಹರಳಯ್ಯನವರು ಈ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ ಅವುಗಳನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಇವು ದೇವರ ಪಾದರಕ್ಷೆಗಳು ಎಂದರು. ಆ ಸಂದರ್ಭದ ಹಿನ್ನೆಲೆಯಲ್ಲಿ ಬಸವಣ್ಣನವರು ಮೇಲೆ ತಿಳಿಸಿದ ವಚನವನ್ನು ಹೇಳಿದ್ದಾರೆ. ಹರಳಯ್ಯ ದಂಪತಿ ನಿರ್ಮಿಸಿದ ಈ ಚಮ್ಮಾವುಗೆಗಳಿಗೆ ದೇವರ ಸೃಷ್ಟಿಯಾದ ಈ ಪೃಥ್ವಿ ಸಮ ಬರುವುದಿಲ್ಲ ಎಂದು ಬಸವಣ್ಣನವರು ಹೇಳಬೇಕಾದರೆ ಹರಳಯ್ಯ ದಂಪತಿ ಎಂಥ ಪವಿತ್ರ ಜೀವಗಳು ಎಂಬುದರ ಅರಿವಾಗುವುದು. ಸಮಗಾರ ಹರಳಯ್ಯನವರು ಮತ್ತು ಬ್ರಾಹ್ಮಣ ಮಧುವರಸರು ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಜಾತಿಸಂಕರಗೊಂಡು ಬಸವಣ್ಣನವರ ಜಾತ್ಯತೀತ ಧರ್ಮವಾದ ಲಿಂಗವಂತ ಧರ್ಮ ಸ್ವೀಕರಿಸಿದರು. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆಯೂ ಆಯಿತು. ಆದರೆ ಮನುವಾದಿಗಳು ರೊಚ್ಚಿಗೆದ್ದರು. ಸಮಗಾರ ವರನಿಗೆ ಬ್ರಾಹ್ಮಣ ಕನ್ಯೆಯನ್ನು ಕೊಡುವುದು ಧರ್ಮಬಾಹಿರವಾದ ವಿಲೋಮ ವಿವಾಹ ಎಂದು ಕಲ್ಯಾಣದ ದೊರೆ ಬಿಜ್ಜಳನ ಕಿವಿ ಚುಚ್ಚಿದರು. ಕಣ್ಣು ಕೀಳಿಸಿಕೊಂಡು ಎಳೆಹೂಟೆ ಶಿಕ್ಷೆ ಅನುಭವಿಸಿದ ಹರಳಯ್ಯ, ಶೀಲವಂತ ಮತ್ತು ಮಧುವರಸರು ಹುತಾತ್ಮರಾದರು. ಮನುವಾದಿ ಭಯೋತ್ಪಾದಕರಿಂದಾಗಿ ಕಲ್ಯಾಣದಲ್ಲಿ ಅಸಂಖ್ಯಾತ ಶರಣರ ಹತ್ಯಾಕಾಂಡವಾಯಿತು. ಸಹಸ್ರಾರು ವಚನಕಟ್ಟುಗಳು ಬೆಂಕಿಗೆ ಆಹುತಿಯಾದವು. ಸಕಲ ಮಾನವರನ್ನು ವಿಮೋಚನೆಗೊಳಿಸುವಂತಹ ಬಸವಕ್ರಾಂತಿ ಆಗದಂತೆ ಮನುವಾದಿಗಳು ನೋಡಿಕೊಂಡರು.

 ಹರಳಯ್ಯನವರ ವಚನಗಳು ಸಿಕ್ಕಿಲ್ಲ. ಆದರೆ ಅವರು ಬಸವಣ್ಣನವರಿಗೆ ಕೊಟ್ಟ ಕಲಾತ್ಮಕ ಚಮ್ಮಾವುಗೆಗಳು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿವೆ. ಬಸವಣ್ಣನವರು ಸ್ಪರ್ಶಿಸಿದ ಇನ್ನೊಂದು ಚರವಸ್ತು ಈ ಜಗತ್ತಿನಲ್ಲಿ ಉಳಿದಿಲ್ಲವಾದ ಕಾರಣ ಈ ಚಮ್ಮಾವುಗೆಗಳು ಅಮೂಲ್ಯವಾಗಿವೆ.

 ನಡೆ ನುಡಿ ಸಿದ್ಧಾಂತದ ಶರಣರು ‘ಜಾತಿ ನಿರರ್ಥಕ, ನೀತಿ ಲೋಕರಕ್ಷಕ’ ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟವರಾಗಿದ್ದರು. ಪ್ರತಿಯೊಬ್ಬರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ನೀತಿವಂತರಾದಾಗ ಅವರ ವರ್ಣ, ಜಾತಿ ಮತ್ತು ಉಪಜಾತಿಗಳು ನಿರ್ನಾಮವಾಗಿ ಕೇವಲ ಮನುಷ್ಯರಾಗುವರು. ಅಂಥವರೇ ನಿಜಮಾನವರು. ಶರಣರು ಇಂಥ ನಿಜಮಾನವರಾಗಿದ್ದರು. ಶರಣ ಸಂಕುಲವು ಇಂಥ ನಿಜಮಾನವರ ಸಮಾಜವಾಗಿತ್ತು. ಜಾತಿ ಮತ್ತು ಅಸ್ಪಶ್ಯತೆಯ ವಿಷವನ್ನು ನಮ್ಮ ಸಮಾಜದಿಂದ ಹೊರಹಾಕಿ ಎಲ್ಲ ರೀತಿಯ ಸಮಾನತೆಯನ್ನು ಸಾಧಿಸುವುದು ಶರಣರ ಉದ್ದೇಶವಾಗಿತ್ತು. ಇಂಥ ಘನ ಉದ್ದೇಶದಿಂದಲೇ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಶರಣರು ಏರ್ಪಡಿಸಿದರು. ವರ್ಣ ಮತ್ತು ಜಾತಿಪದ್ಧತಿಯ ಮೇಲೆ ನಿಂತ ಮನುಧರ್ಮದ ಸಮಾಜಕ್ಕೆ ದೊಡ್ಡ ಸವಾಲು ಒಡ್ಡಿದರು. ಅದಕ್ಕಾಗಿ ಶರಣರು ಸಾವು ನೋವು ಮತ್ತು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಯಿತು. ನಡೆ ನುಡಿ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಅವರು ಎಂಥ ತ್ಯಾಗಕ್ಕೂ ಸಿದ್ಧರಾದರು. ಅದಕ್ಕಾಗಿ ನಾಡು ಎಂದೂ ಕಂಡರಿಯದಂಥ ದುರಂತವನ್ನು ಅನುಭವಿಸಿದರು. ನಮ್ಮ ಜನರಲ್ಲಿ ಮತ್ತು ಲಿಂಗಾಯತರು ಎಂದು ಕರೆಯಿಸಿಕೊಳ್ಳುವವರ ಹೃದಯಗಳಲ್ಲಿ ನಿರಂತರ ನೋವಿನ ಜ್ವಾಲೆಯಾಗಿ ಅವರ ತ್ಯಾಗ ಜೀವಂತವಾಗಿರಬೇಕಿತ್ತು. ಆದರೆ ನಮ್ಮ ಜನರ ವಿಸ್ಮತಿಯಿಂದಾಗಿ ಹತ್ತಾರು ಸಹಸ್ರ ಶರಣರ ಸಾವು ನೋವುಗಳು ನಮಗೆ ಬಾಧಿಸದೆ ಮರೆಯಾಗಿವೆ. ಎಲ್ಲ ಕಾಯಕಜೀವಿ ಶರಣರ ಸಹಸ್ರಾರು ವಚನ ಕಟ್ಟುಗಳನ್ನೂ ವೈದಿಕಶಕ್ತಿಗಳು ಸುಟ್ಟು ಹಾಕಿದವು. ಶರಣರ ಈ ತ್ಯಾಗಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವಿಸದೆ ನಾವು ಮನುಷ್ಯರಾಗಿ ಉಳಿಯಲು ಸಾಧ್ಯವಿಲ್ಲ.

 ಹರಳಯ್ಯನವರು ಬಸವಣ್ಣನವರಿಗಾಗಿ ತಯಾರಿಸಿದ ಚಮ್ಮಾವುಗೆಗಳು ಬಿಜನಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿವೆ. ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಎಡ ತೊಡೆಯ ರೂಪಾಯಿ ಅಗಲ ಚರ್ಮ ಎಡ ಚಮ್ಮಾವುಗೆಯಲ್ಲಿ ಇದೆ. ಅದೇ ರೀತಿ ಹರಳಯ್ಯನವರ ಬಲ ತೊಡೆಯ ರೂಪಾಯಿಯಗಲ ಚರ್ಮ ಬಲ ಚಮ್ಮಾವುಗೆಯಲ್ಲಿದೆ. ಈ ಅನುಪಮ ತ್ಯಾಗದ ಚರ್ಮದ ತುಕಡಿಗಳಿಗೆ ಇಡೀ ಮಾನವಕುಲ ತಲೆಬಾಗಬೇಕಿದೆ. ಆದರೆ ಸರಕಾರ ಕಣ್ಣುಮುಚ್ಚಿ ಕುಳಿತಿರುವುದರಿಂದ ಅವುಗಳ ಮೇಲೆ ಮಾಲಕತ್ವ ಸಾಧಿಸಲು ಕೆಲವರು ಯತ್ನಿಸುತ್ತಿದ್ದಾರೆ. ನಾಡಿನ ಈ ಅಮೂಲ್ಯ ಆಸ್ತಿಯ ಬಗ್ಗೆ ಸರಕಾರಕ್ಕೆ ಪರಿಜ್ಞಾನವೇ ಇಲ್ಲ. ರಾಜ್ಯಸರಕಾರ ಕೂಡಲೇ ಕ್ರಮಕೈಗೊಂಡು ಶರಣರ ಈ ಏಕೈಕ ಚರವಸ್ತುವನ್ನು ಸರಕಾರದ ಸೊತ್ತೆಂದು ಘೋಷಿಸಬೇಕು. ಬಸವಕಲ್ಯಾಣ ಪ್ರಾಧಿಕಾರದ ಅಡಿಯಲ್ಲಿ, ಬಿಜನಳ್ಳಿಯಲ್ಲಿಯೇ ಈ ಚಮ್ಮಾವುಗೆಗಳಿಗಾಗಿ ನಯನಮನೋಹರವಾದ ಸ್ಮಾರಕಭವನವನ್ನು ನಿರ್ಮಿಸಬೇಕು. ಆ ಮೂಲಕ ಬಿಜನಳ್ಳಿಯನ್ನು ಸಮಾನತೆಯ ಯಾತ್ರಾಸ್ಥಳವನ್ನಾಗಿಸಬೇಕು.

***

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)