varthabharthi

ಸಂಪಾದಕೀಯ

ಪರಿವರ್ತನೆ ಆಗಬೇಕಾದವರು ಯಾರು?

ವಾರ್ತಾ ಭಾರತಿ : 7 Nov, 2017

ಕರ್ನಾಟಕದಲ್ಲಿ ಅಮಿತ್ ಶಾ ಅವರ ಎಲ್ಲಾ ತಂತ್ರಗಳೂ ನೆಲಕಚ್ಚಿವೆೆ. ಪರಿವರ್ತನಾ ರ್ಯಾಲಿಯ ವೈಫಲ್ಯ ರಾಜ್ಯ ಬಿಜೆಪಿಗೆ ಕೆಲವು ಸಂದೇಶಗಳನ್ನು ನೀಡಿದೆ. ಆ ಸಂದೇಶಗಳಲ್ಲಿ ಮುಖ್ಯವಾದುದು, ಪರಿವರ್ತನೆ ನಡೆಯಬೇಕಾದುದು ರಾಜ್ಯದಲ್ಲಲ್ಲ, ಬಿಜೆಪಿಯೊಳಗೆ. ಬಿಜೆಪಿ ಸ್ವಯಂ ತನ್ನನ್ನು ಪರಿವರ್ತನೆಗೊಳಿಸಿಕೊಳ್ಳದ ಹೊರತು, ಈ ರಾಜ್ಯದಲ್ಲಿ ಯಾವ ಪರಿವರ್ತನೆಯನ್ನೂ ತರಲಾರದು. ಆದುದರಿಂದ ಅದು ರಾಜ್ಯವನ್ನು ಪರಿವರ್ತನೆಗೊಳಿಸುವುದಕ್ಕೆ ಮುಂದಾಗುವ ಮೊದಲು, ತನ್ನೊಳಗೆ ಪರಿವರ್ತನೆಯನ್ನು ತರಲು ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ. ಅಂದರೆ ಮೊದಲು ನಡೆಯಬೇಕಾದುದು ಆತ್ಮವಿಮರ್ಶೆ. ಬಳಿಕ ಪರರ ವಿಮರ್ಶೆ. ವಿಪರ್ಯಾಸವೆಂದರೆ ಚುನಾವಣೆಯಲ್ಲಿ ಸೋತ ದಿನದಿಂದಲೂ ಬಿಜೆಪಿಯೊಳಗೆ ಪ್ರಾಮಾಣಿಕವಾದ ಆತ್ಮವಿಮರ್ಶೆ ನಡೆದೇ ಇಲ್ಲ. ಮತ್ತು ಈಗಲೂ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಇವೆಲ್ಲದರ ಪರಿಣಾಮವಾಗಿಯೇ ಅಮಿತ್ ಶಾ ನೇತೃತ್ವದಲ್ಲಿ ಚಾಲನೆ ಪಡೆದ ಬಿಜೆಪಿಯ ಪರಿವರ್ತನಾ ಯಾತ್ರೆ ಆರಂಭಕ್ಕೆ ಮುನ್ನವೇ ಮುಗ್ಗರಿಸಿದೆ.

ಭ್ರಷ್ಟ ಆಡಳಿತ ನಡೆಸಿದ ಒಂದು ಪಕ್ಷವನ್ನು ಮನೆಗೆ ಕಳುಹಿಸಿ ಇನ್ನೊಂದು ಪಕ್ಷವನ್ನು ಅಧಿಕಾರಕ್ಕೆ ಕೂರಿಸುವ ಮತದಾರ ಸಾಧಾರಣವಾಗಿ ಅತೀ ಬೇಗ ಹೊಸ ಸರಕಾರದ ಬಗ್ಗೆ ಭ್ರಮನಿರಸನ ಹೊಂದುತ್ತಾನೆ ಮತ್ತು ಅದೇ ಹಳೆಯ ಪಕ್ಷದ ಕುರಿತಂತೆ ಮೃದುವಾಗಲು ಆರಂಭಿಸುತ್ತಾನೆ. ಆದರೆ ರಾಜ್ಯ ಬಿಜೆಪಿಯ ಪಾಲಿಗೆ ಇದು ತದ್ವಿರುದ್ಧವಾಗಿದೆ. ಬಿಜೆಪಿ ಸರಕಾರ ನಡೆಸಿದ ಭ್ರಷ್ಟ ಆಡಳಿತವನ್ನು ರಾಜ್ಯದ ಜನರು ಇನ್ನೂ ಮರೆತಿಲ್ಲ. ಬಿಜೆಪಿ ಆಡಳಿತದ ಸಂದರ್ಭದಲ್ಲಿ ಕೇವಲ ಆಡಳಿತಾತ್ಮಕವಾಗಿ ಅದು ವಿಫಲಗೊಂಡಿದ್ದಿದ್ದರೆ ಜನರು ಕ್ಷಮಿಸುತ್ತಿದ್ದರು ಅಥವಾ ಮರೆಯುತ್ತಿದ್ದರು. ಆದರೆ ಸರಕಾರ ರಚಿಸಿದ ಎರಡೇ ತಿಂಗಳಲ್ಲಿ ತಾರಕಕ್ಕೇರಿದ ಭಿನ್ನಮತ ಕೊನೆಯವರೆಗೂ ತಣ್ಣಗಾಗಲೇ ಇಲ್ಲ. ಬೇರೆ ಬೇರೆ ರೂಪಗಳಲ್ಲಿ ಅದು ಸಿಡಿಯುತ್ತಲೇ ಹೋಯಿತು. ಇದರಿಂದಾಗಿ ಯಡಿಯೂರಪ್ಪ ಅವರಿಗೆ ಆಡಳಿತ ನಡೆಸುವುದಕ್ಕೆ ಅವಕಾಶವೇ ಸಿಗಲಿಲ್ಲ. ಸದಾ ವರಿಷ್ಠರಿಗೆ ಸ್ಪಷ್ಟೀಕರಣ ನೀಡುವುದರಲ್ಲೇ ಯಡಿಯೂರಪ್ಪರ ಆಡಳಿತದ ಆಯಸ್ಸು ಮುಗಿದು ಹೋಯಿತು. ಯಾವಾಗ ಕುರ್ಚಿಯನ್ನು ಬಿಡಬೇಕಾಗುತ್ತದೆಯೋ ಎನ್ನುವ ಭಯ, ಅಭದ್ರತೆ ಯಡಿಯೂರಪ್ಪ ಅವರನ್ನು ಪರಮ ಭ್ರಷ್ಟನನ್ನಾಗಿಸಿತು. ಜೊತೆಗೆ ಗಣಿ ದೊರೆಗಳಿಗೆ ದಿಲ್ಲಿಯ ವರಿಷ್ಠರ ಆಶೀರ್ವಾದವಿದ್ದುದರಿಂದ ಅವರ ಅವ್ಯವಹಾರಗಳನ್ನು ಪ್ರಶ್ನಿಸುವ ಅಧಿಕಾರವೂ ಯಡಿಯೂರಪ್ಪರಿಗೆ ಇರಲಿಲ್ಲ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ ಸದಾ ‘ಭಿನ್ನಮತದ ಬ್ಲಾಕ್‌ಮೇಲ್’ ಅವರ ನೆತ್ತಿಯ ಮೇಲೆ ಕತ್ತಿಯಂತೆ ತೂಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಯಾವ ಮುಖ್ಯಮಂತ್ರಿಗೂ ಸಮರ್ಥವಾದ ಆಡಳಿತವನ್ನು ನೀಡಲು ಸಾಧ್ಯವಿಲ್ಲ. ಯಡಿಯೂರಪ್ಪ ವೈಯಕ್ತಿಕವಾಗಿ ಮುತ್ಸದ್ದಿ ನಾಯಕನಾಗಿದ್ದರೂ, ಮೇಲಿನೆಲ್ಲ ಕಾರಣಕ್ಕೆ ಅವರು ಒಳ್ಳೆಯ ಆಡಳಿತ ನೀಡುವಲ್ಲಿ ವಿಫಲರಾದರು. ಒಂದೆಡೆ ವಿಫಲ ಆಡಳಿತ, ಮಗದೊಂದೆಡೆ ಭ್ರಷ್ಟಾಚಾರ. ಇವುಗಳ ಜೊತೆಗೆ ಬಿಜೆಪಿ ನಾಯಕರು ಅತ್ಯಾಚಾರ, ಬ್ಲೂಫಿಲಂನಂತಹ ಹಗರಣಗಳಲ್ಲಿ ಸಿಲುಕುವ ಮೂಲಕ ಚಾರಿತ್ರಹೀನ ಸರಕಾರವೆಂದು ಗುರಿತಿಸಲ್ಪಟ್ಟಿತು. ಮಹಿಳೆಯರಂತೂ ಬಿಜೆಪಿ ನಾಯಕರ ವರ್ತನೆಗಳಿಗೆ ಹೇಸಿಕೊಳ್ಳುವಂತಾಯಿತು.

ಅಂತಿಮವಾಗಿ ಎಲ್ಲ ಪಾಪಗಳಿಗೆ ಯಡಿಯೂರಪ್ಪರನ್ನು ಹೊಣೆ ಮಾಡಿ ಕೆಳಗಿಳಿಸಲಾಯಿತಾದರೂ, ಭಿನ್ನಮತ ಮಾತ್ರ ತಣ್ಣಗಾಗಲಿಲ್ಲ. ಯಡಿಯೂರಪ್ಪರ ಬಳಿಕ ಸರದಿಯಲ್ಲಿ ಇನ್ನೂ ಇಬ್ಬರು ಮುಖ್ಯಮಂತ್ರಿಯಾದರು. ಜೊತೆಗೆ ಇಬ್ಬಿಬ್ಬರು ಉಪಮುಖ್ಯಮಂತ್ರಿಗಳು. ಅಳಿದುಳಿದ ಸಮಯ ಈ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಪ್ರಮಾಣವಚನಗಳಲ್ಲೇ ಕಳೆದು ಹೋಯಿತು. ಒಟ್ಟಿನಲ್ಲಿ ಬಿಜೆಪಿಯ ಕುರಿತಂತೆ ಅವರ ಕಾರ್ಯಕರ್ತರಲ್ಲೇ ಹತಾಶೆ ಹುಟ್ಟಿತ್ತು. ಬಿಜೆಪಿಯನ್ನು ತೊಲಗಿಸಲು ಬಿಜೆಪಿಯೊಳಗಿನ ಜನರೇ ಕಚ್ಚೆಕಟ್ಟಿ ನಿಂತರು. ಪರಿಣಾಮವಾಗಿ ಅನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿಯಿತು. ಬಹುಶಃ ಕಾಂಗ್ರೆಸ್ ಈ ಹಿಂದಿನಂತೆಯೇ ಬೇಕಾಬಿಟ್ಟಿ ಅಧಿಕಾರ ನಡೆಸಿದ್ದರೆ ಜನರ ದೃಷ್ಟಿ ಮತ್ತೆ ಬಿಜೆಪಿಯ ಕಡೆಗೆ ಹೊರಳುತ್ತಿತ್ತೋ ಏನೋ. ಬಿಜೆಪಿಯ ದುರದೃಷ್ಟಕ್ಕೆ ಸಿದ್ದರಾಮಯ್ಯರಂತಹ ಮುತ್ಸದ್ದಯ ಕೈಗೆ ಕಾಂಗ್ರೆಸ್‌ನ ನೇತೃತ್ವ ಸಿಕ್ಕಿತು. ಅಷ್ಟೇ ಅಲ್ಲ, ಅವರ ಜನಪರ ಯೋಜನೆಗಳಿಂದಾಗಿ ಇಂದಿಗೂ ಸರಕಾರ ಜನರಿಗೆ ಹತ್ತಿರವಾಗಿದೆ. ಸ್ವತಃ ಬಿಜೆಪಿ ನಾಯಕರೇ, ಟೀಕಿಸಲು ವಿಷಯಗಳಿಲ್ಲದೆ ಸಿದ್ದರಾಮಯ್ಯರು ತಿಂದ ಮೀನಿನಲ್ಲಿ ಮುಳ್ಳುಹುಡುಕುತ್ತಿದ್ದಾರೆ. ಟಿಪ್ಪು ಜಯಂತಿಯಂತಹ ಭಾವನಾತ್ಮಕ ವಿಷಯಗಳಿಗೆ ಮತ್ತೆ ನೇಣು ಹಾಕಿಕೊಳ್ಳಲು ಹೊರಟಿದ್ದಾರೆ.

ಆಡಳಿತ ವೈಫಲ್ಯದ ಕುರಿತಂತೆ ಬಿಜೆಪಿಯ ಯಾವ ನಾಯಕರೂ ಈವರೆಗೆ ಹೇಳಿಕೆಗಳನ್ನು ನೀಡಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ, ಇಂದಿಗೂ ಬಿಜೆಪಿಯೊಳಗೆ ಭಿನ್ನಮತ ಶಮನವಾಗಿಲ್ಲ. ಯಡಿಯೂರಪ್ಪ ಬಿಜೆಪಿಯ ಪಾಲಿಗೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪವಾಗಿದ್ದಾರೆ. ಆದುದರಿಂದ ಈ ಬಾರಿ ದಿಲ್ಲಿಯ ಮೋದಿ ಮತ್ತು ಅಮಿತ್ ಶಾ ಅವರ ಹೆಸರಿನಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಆದರೆ ಪ್ರಯತ್ನ ಆರಂಭದಲ್ಲೇ ವಿಫಲಗೊಂಡಿದೆ. ಹಲವು ಬಾರಿ ತನ್ನ ಪಕ್ಷದೊಳಗಿರುವ ನಾಯಕರ ಕೈಯಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡಿರುವ ಯಡಿಯೂರಪ್ಪ ಈ ಬಾರಿ ತನ್ನ ಬೆನ್ನಿಗೇ ಕಣ್ಣು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ತನ್ನ ಬೆನ್ನಿಗೆ ಲಿಂಗಾಯತ ಸಮಾಜ ನಿಂತಿದೆ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿ ತನ್ನನ್ನು ನೆಚ್ಚಿಕೊಂಡಿದೆ ಎನ್ನುವುದು ಯಡಿಯೂರಪ್ಪರಿಗೆ ಗೊತ್ತಿದೆ. ಇದೇ ಸಂದರ್ಭದಲ್ಲಿ ಆರೆಸ್ಸೆಸ್ ನಾಯಕರು, ಸಂತೋಷ್‌ರ ಕೈಗೆ ಬಿಜೆಪಿಯ ನೇತೃತ್ವವನ್ನು ಕೊಡಲು ಸಂಚು ಮಾಡುತ್ತಿರುವುದು, ಭಾವೀ ಮುಖ್ಯಮಂತ್ರಿಯಾಗಿ ಸಂತೋಷ್‌ರನ್ನು ಬಿಂಬಿಸಲು ಪ್ರಯತ್ನ ನಡೆಯುತ್ತಿರುವುದು ಯಡಿಯೂರಪ್ಪ ಅವರ ಗಮನಕ್ಕೆ ಬಂದಿದೆ. ಯಡಿಯೂರಪ್ಪ ನವರ ಮೇಲಿನ ರಾಜಕೀಯ ವೈರತ್ವದ ಕಾರಣಕ್ಕಾಗಿ, ಈಶ್ವರಪ್ಪ ಕೂಡ ಸಂತೋಷ್‌ರನ್ನು ಮುಖ್ಯಮಂತ್ರಿಯಾಗಿಸುವ ಕುರಿತು ಒಲವು ತೋರಿಸಿದ್ದಾರೆ. ತಾನು ಪಕ್ಷ ಸಂಘಟಿಸುತ್ತಿರುವ ಸಂದರ್ಭದಲ್ಲೇ, ಈಶ್ವರಪ್ಪ, ಸಂತೋಷ್ ಮೊದಲಾದವರು ಒಳಗೊಳಗೆ ತನ್ನ ವಿರುದ್ಧ ಕತ್ತಿ ಮಸೆಯುತ್ತಿರುವುದನ್ನು ಯಡಿಯೂರಪ್ಪ ಸಹಿಸಿಕೊಳ್ಳುವುದು ಕಷ್ಟ. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಲಿಂಗಾಯತರು ಒಂದಾಗಿದ್ದಾರೆ ಮಾತ್ರವಲ್ಲ, ನಾವು ಹಿಂದೂಗಳಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು ಎಂದು ಕೂಗೆಬ್ಬಿಸಿದ್ದಾರೆ.

ಬಿಜೆಪಿಯ ನಾಯಕರು ಮತ್ತು ಆರೆಸ್ಸೆಸ್ ಇದನ್ನು ವಿರೋಧಿಸುತ್ತಿದೆ. ಯಡಿಯೂರಪ್ಪ ಈ ಕುರಿತಂತೆಯೂ ಗೊಂದಲದಲ್ಲಿದ್ದಾರೆ. ಅವರು ಈವರೆಗೆ ಲಿಂಗಾಯತ ಸ್ವತಂತ್ರ ಧರ್ಮದ ಪರ-ವಿರೋಧ ಹೇಳಿಕೆಯನ್ನೂ ನೀಡಿಲ್ಲ. ಬಹುಶಃ, ಬಿಜೆಪಿಯ ನೇತೃತ್ವವನ್ನು ಆರೆಸ್ಸೆಸ್ ನಾಯಕ ಸಂತೋಷ್ ಕೈಗೆ ಕೊಟ್ಟರೆ ಯಡಿಯೂರಪ್ಪ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದ ಒಂದು ಭಾಗವಾಗುವುದರಲ್ಲಿ ಅನುಮಾನವಿಲ್ಲ. ಹಾಗಾದಲ್ಲಿ ಅದು ರಾಜ್ಯದಲ್ಲಿ ಬಿಜೆಪಿಯ ಹಿಂದುತ್ವ ಅಂಜೆಂಡಾಕಕೆ ಭಾರೀ ಆಘಾತ ನೀಡಬಹುದು. ಇಷ್ಟೆಲ್ಲ ಒಳಗೊಂದಲಗಳನ್ನು ಇಟ್ಟುಕೊಂಡು ಬಿಜೆಪಿ ಪರಿವರ್ತನಾ ಯಾತ್ರೆ ಹೊರಟರೆ, ಅದು ತಿರುಗುಬಾಣವಾಗದೇ ಇರುವುದು ಹೇಗೆ?

ಮೊತ್ತ ಮೊದಲು ರಾಜ್ಯ ಬಿಜೆಪಿ, ತನ್ನ ನಾಯಕ ಯಾರು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳ ಬೇಕಾಗಿದೆ ಅಥವಾ ದಿಲ್ಲಿಯ ವರಿಷ್ಠರು ಅದನ್ನು ಉಳಿದೆಲ್ಲರಿಗೆ ಸ್ಪಷ್ಟಪಡಿಸಬೇಕಾಗಿದೆ. ಒಳಗೊಳಗೆ ನಡೆಯುತ್ತಿರುವ ಲಿಂಗಾಯತ ಮತ್ತು ಬ್ರಾಹ್ಮಣ್ಯ ತಿಕ್ಕಾಟಕ್ಕೆ ಕೊನೆ ಎಳೆಯಬೇಕು. ಅಂದರೆ ನಾಯಕತ್ವ ಸ್ಥಾನಕ್ಕೆ ಒಂದೋ ಯಡಿಯೂರಪ್ಪ ಅಥವಾ ಸಂತೋಷ್ ಹೆಸರನ್ನು ಘೋಷಿಸಿ ಕಾರ್ಯಕರ್ತರ ಗೊಂದಲಗಳಿಗೆ ತೆರೆ ಎಳೆಯಬೇಕು. ಯಡಿಯೂರಪ್ಪರನ್ನು ನಾಯಕರೆಂದು ಬಿಜೆಪಿ ವರಿಷ್ಠರು ಗುರುತಿಸಿರುವುದು ನಿಜವೇ ಆಗಿದ್ದರೆ, ಅವರೊಳಗಿನ ಅಭದ್ರತೆಯ ಭಾವನೆಯನ್ನು ನಿವಾರಿಸುವುದು ವರಿಷ್ಠರ ಹೊಣೆಗಾರಿಕೆಯಾಗಿದೆ. ಬಳಸಿ ಎಸೆಯುವ ಯೋಜನೆಗೆ ಅವರನ್ನು ಬಲಿ ಪಶುಮಾಡುವ ಯಾವುದೇ ತಂತ್ರಗಳಿದ್ದರೆ ಅದನ್ನು ನಿವಾರಿಸಬೇಕು. ಸದ್ಯಕ್ಕೆ ಬಿಜೆಪಿಯ ಸ್ಥಿತಿ ಸೇನಾಪತಿಯಿಲ್ಲದೆ ಯುದ್ಧಕ್ಕೆ ಹೊರಟ ಸೇನೆಯಂತಾಗಿದೆ. ಮೊದಲು ಸೇನಾಪತಿಯನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದರೆ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತನ್ನಷ್ಟಕ್ಕೆ ಮೂಡುತ್ತದೆ. ಇಲ್ಲವಾದರೆ, ಇಂತಹ ಪರಿವರ್ತನಾ ರ್ಯಾಲಿಗಳ ವೈಫಲ್ಯಗಳನ್ನೇ ಕಾಂಗ್ರೆಸ್ ತನ್ನ ಬಂಡವಾಳವನ್ನಾಗಿಸಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)