varthabharthi

ವಿಶೇಷ-ವರದಿಗಳು

ನೋಟು ಬವಣೆಗೆ ಒಂದು ವರ್ಷ!

ಆರ್ಥಿಕತೆಯ ಜೊತೆ ಜೂಜಾಟ

ವಾರ್ತಾ ಭಾರತಿ : 8 Nov, 2017
ಕಮಲ್ ಮಿತ್ರ ಚಿನೋಯ್

ಬಹುತೇಕ ಮಂದಿಗೆ ಅದರಲ್ಲೂ ಮುಖ್ಯವಾಗಿ ಬಡವರು ಹಾಗೂ ಕೆಳಮಧ್ಯಮವರ್ಗಕ್ಕೆ 2,000 ರೂಪಾಯಿಯ ನೋಟಿನ ಬಳಕೆ ಇಲ್ಲ. ಆದರೆ ಇದು ಕಾಳಸಂತೆಕೋರರಿಗೆ ವರದಾನ. ಹೀಗೆ ಮೋದಿ ಸರಕಾರ ತನ್ನ ಕಾಲ ಮೇಲೆ ತಾನೇ ಚಪ್ಪಡಿಕಲ್ಲು ಎಳೆದುಕೊಂಡಿದೆ.

ನವೆಂಬರ್ 8ರ ನೋಟು ಅಮಾನ್ಯ ನಿರ್ಧಾರ ಪ್ರಮುಖ ಆರ್ಥಿಕ ಹೆಜ್ಜೆಯಷ್ಟೇ ಅಲ್ಲದೆ, ರಾಜಕೀಯ ಜೂಜು ಕೂಡಾ ಹೌದು. 2016ರ ನವೆಂಬರ್‌ನಲ್ಲಿ ಗೋವಾದಲ್ಲಿ ಮಾಡಿದ ಭಾವಪೂರ್ಣ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ 1000 ರೂಪಾಯಿ ಹಾಗೂ 500 ರೂಪಾಯಿ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಇದು ಕಪ್ಪುಹಣವನ್ನು ಸ್ವಚ್ಛಗೊಳಿಸುವ ಹಾಗೂ 70 ವರ್ಷಗಳಿಂದ ದೇಶದಲ್ಲಿ ಬೇರೂರಿರುವ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುವ ಕ್ರಮ ಎಂದು ಬಣ್ಣಿಸಿದ್ದರು.

ಆದಾಗ್ಯೂ ಕಳೆದ 70 ವರ್ಷ ಆಡಳಿತ ನಡೆಸಿದವರಲ್ಲಿ ಜನಸಂಘದ ಮುಖಂಡರಾದ ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಭೈರೋನ್‌ಸಿಂಗ್ ಶೇಖಾವತ್ ಹಾಗೂ ಮತ್ತಿತರ ಮುಖಂಡರು ಸೇರಿದ್ದಾರೆ. ಆದ್ದರಿಂದ ಕಳೆದ ಎಪ್ಪತ್ತು ವರ್ಷಗಳಲ್ಲಿ (ವಾಸ್ತವವಾಗಿ 69 ವರ್ಷ- 1947- 2016) ಇಡೀ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಮುಂದಾಗಿರುವ ಪ್ರಾಮಾಣಿಕ ನಾಯಕರು ಎಂದು ಬಿಂಬಿಸಿಕೊಂಡಿದ್ದರು.

ಆದ್ದರಿಂದ ನೋಟು ಅಮಾನ್ಯ ನಿರ್ಧಾರದ ಉದ್ದೇಶ ದೊಡ್ಡ ಪ್ರಮಾಣದ ಆರ್ಥಿಕ ಪುನಾರಚನೆ ಮಾತ್ರವಲ್ಲದೆ, ಹೊಸ, ಸಂಪೂರ್ಣ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತ ವ್ಯವಸ್ಥೆಯನ್ನು ರೂಪಿಸುವುದೂ ಆಗಿತ್ತು.

ಆದಾಗ್ಯೂ ಕೆಲ ಕಾನೂನು ಅಂಶಗಳೂ ಸೇರಿದಂತೆ ಪ್ರಮುಖ ಅಗತ್ಯಗಳನ್ನು ಎನ್‌ಡಿಎ ಸರಕಾರ ಹಾಗೂ ನೋಟು ಅಮಾನ್ಯತೆಯ ಟೀಕಾಕಾರರು ನಿರ್ಲಕ್ಷಿಸಿದಂತಿದೆ. ನೋಟು ರದ್ದತಿ ನಿರ್ಧಾರದ ಬಳಿಕ ಹಣಕಾಸು ಕಾಯ್ದೆ- 2017 ಆಗಿ ತಿದ್ದುಪಡಿ ಮಾಡಲಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ- 1934ರ ಸೆಕ್ಷನ್ 24 (2) ಹೀಗೆ ವ್ಯಾಖ್ಯಾನಿಸಿದೆ: ‘‘ಕೇಂದ್ರ ಸರಕಾರವು ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸಿನಂತೆ, ಕೆಲ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡದಂತೆ ಅಥವಾ ಸ್ಥಗಿತಗೊಳಿಸುವಂತೆ ನಿರ್ದೇಶಿಸಬಹುದು.’’

ಆದರೆ ಒಟ್ಟು ಚಲಾವಣೆಯಲ್ಲಿರುವ ಕರೆನ್ಸಿಯ ಶೇ.86ರಷ್ಟು ನೋಟುಗಳನ್ನು ಅಮಾನ್ಯ ಮಾಡುವ ಸಂಬಂಧ ಆರ್‌ಬಿಐನ ಕೇಂದ್ರೀಯ ಮಂಡಳಿ ಯಾವ ನಿರ್ಧಾರವನ್ನೂ ಕೈಗೊಳ್ಳಲಿಲ್ಲ. 1,000 ಹಾಗೂ 500 ರೂಪಾಯಿಯ ನೋಟುಗಳನ್ನು ಅಮಾನ್ಯ ಮಾಡುವ ಕ್ರಮವನ್ನು 2016ರ ನವೆಂಬರ್ 8ರವರೆಗೂ ಮೋದಿ ಸರಕಾರ ತೀರಾ ರಹಸ್ಯವಾಗಿ ಇರಿಸಿತ್ತು.

ಅದಲ್ಲದೆ ಆರ್‌ಬಿಐ ಕಾಯ್ದೆಯ ಸೆಕ್ಷನ್ 9ರಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಿರುವಂತೆ, ಸ್ಥಳೀಯ ಮಂಡಳಿಯನ್ನು ಶೆಡ್ಯೂಲ್ 1ನಲ್ಲಿ ನಿರ್ದಿಷ್ಟಪಡಿಸಿರುವ ಎಲ್ಲ ನಾಲ್ಕು ಕ್ಷೇತ್ರಗಳಲ್ಲಿ ರಚಿಸಬೇಕು. ಇದು ಕೇಂದ್ರ ಸರಕಾರ ನೇಮಿಸಿರುವ ಐದು ಮಂದಿ ಸದಸ್ಯರನ್ನು ಹೊಂದಿರಬೇಕು. ಸಾಧ್ಯವಾದಷ್ಟೂ ಆಯಾ ಪ್ರದೇಶದ ಮತ್ತು ಆರ್ಥಿಕ ಹಿತಾಸಕ್ತಿಯನ್ನು ಮತ್ತು ಸಹಕಾರ ಕ್ಷೇತ್ರ ಹಾಗೂ ದೇಶೀಯ ಬ್ಯಾಂಕುಗಳ ಹಿತಾಸಕ್ತಿಯನ್ನು ಪ್ರತಿನಿಧಿಸುವಂತಿರಬೇಕು.

ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಬ್ಯಾಂಕುಗಳ ಕೊರತೆ ಇದ್ದರೂ, ನೋಟು ಅಮಾನ್ಯ ಪ್ರಕ್ರಿಯೆಯಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿದ ಹೊರತಾಗಿಯೂ ಕೃಷಿ ಸಹಕಾರ ಬ್ಯಾಂಕುಗಳು ನೋಟು ಅಮಾನ್ಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಅವಕಾಶ ನೀಡಲಿಲ್ಲ. ಈ ಬ್ಯಾಂಕ್‌ಗಳು ಕನಿಷ್ಠ ಬ್ಯಾಂಕ್ ಶಾಖೆಗಳನ್ನು ಹೊಂದಿದ್ದವು. ಕೆಲ ಬ್ಯಾಂಕ್ ಶಾಖೆಗಳು/ ಎಟಿಎಂಗಳು ಸುದೀರ್ಘ ಕಾಲದ ಬಳಿಕ ಪುನರ್ ಭರ್ತಿಯಾದವು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ಸಂಕಷ್ಟ ಎದುರಾಯಿತು ಹಾಗೂ ಬ್ಯಾಂಕ್‌ಗಳ ಮುಂದೆ ಹಲವು ದಿನಗಳ ಕಾಲ ಉದ್ದುದ್ದದ ಸರತಿ ಸಾಲುಗಳು ಕಂಡುಬಂದವು.

ಮೋದಿ ಸರಕಾರ ದೊಡ್ಡ ಮೊತ್ತದ ಕಪ್ಪುಹಣವನ್ನು ಹೊರಹಾಕುವ, ಉಗ್ರರಿಗೆ ಭಾರತೀಯ ಕರೆನ್ಸಿ ರೂಪದಲ್ಲಿ ನೆರವು ನಿರಾಕರಿಸುವ ಮತ್ತು ಭಾರತೀಯ ನೋಟುಗಳ ಕಳ್ಳನೋಟುಗಳನ್ನು ನಿರ್ಬಂಧಿಸುವ ಉದ್ದೇಶದಿಂದ 1,000 ಮತ್ತು 500 ರೂಪಾಯಿಗಳ ನೋಟುಗಳನ್ನು ಅಮಾನ್ಯಗೊಳಿಸಿದರೂ, ಈ ಎಲ್ಲ ಉದ್ದೇಶಗಳೂ 2,000 ರೂಪಾಯಿಯ ನೋಟು ಮುದ್ರಿಸುವ ಮೂಲಕ ಲೆಕ್ಕಾಚಾರ ಬುಡಮೇಲಾಯಿತು. ಸದ್ಯದ ವರೆಗೂ ಇದು ಅತ್ಯಧಿಕ ಮೌಲ್ಯದ ನೋಟಾಗಿ ಉಳಿದಿದೆ.

ಬಹುತೇಕ ಮಂದಿಗೆ ಅದರಲ್ಲೂ ಮುಖ್ಯವಾಗಿ ಬಡವರು ಹಾಗೂ ಕೆಳಮಧ್ಯಮವರ್ಗಕ್ಕೆ 2,000 ರೂಪಾಯಿಯ ನೋಟಿನ ಬಳಕೆ ಇಲ್ಲ. ಆದರೆ ಇದು ಕಾಳಸಂತೆಕೋರರಿಗೆ ವರದಾನ. ಹೀಗೆ ಮೋದಿ ಸರಕಾರ ತನ್ನ ಕಾಲ ಮೇಲೆ ತಾನೇ ಚಪ್ಪಡಿಕಲ್ಲು ಎಳೆದುಕೊಂಡಿದೆ.

ಭಾರತ ಸರಕಾರ ಕರೆನ್ಸಿಯ ಒಟ್ಟು ಮೌಲ್ಯವನ್ನು ಹೆಚ್ಚಿಸುವ ಅಗತ್ಯತೆ ಹೊಂದಿತ್ತು. ಅದರೆ ಅದನ್ನು ಶೇ. 86ರಷ್ಟು ಕಡಿತಗೊಳಿಸಲಾಯಿತು. ಈ ಕಾರಣದಿಂದ 2,000 ರೂಪಾಯಿಯ ನೋಟು ಅನಿವಾರ್ಯವಾಯಿತು. ಆದರೆ ಅದು ನೋಟುರದ್ದತಿ ಪ್ರಚಾರದಲ್ಲೇ ಇದನ್ನು ಮುಚ್ಚಿಹಾಕಿತು.

ಇದಕ್ಕಿಂತ ಹೆಚ್ಚಾಗಿ ನೋಟು ಅಮಾನ್ಯ ನಿರ್ಧಾರ ಸಂವಿಧಾನಾತ್ಮಕ ಹಕ್ಕಿನ ಉಲ್ಲಂಘನೆಯೂ ಆಗಿದೆ. ಸಂವಿಧಾನದ 300 ಎ ವಿಧಿಯಲ್ಲಿ ಹೇಳಿದಂತೆ, ಕಾನೂನಿನ ಸಂರಕ್ಷಣೆ ಹೆಸರಿನಲ್ಲಿ ಯಾವ ವ್ಯಕ್ತಿಗೂ ಆತನ ಆಸ್ತಿಯ ಹಕ್ಕನ್ನು ನಿರಾಕರಿಸಲಾಗದು. ಭಾರತದ ಕರೆನ್ಸಿ ನೋಟು ಸ್ಪಷ್ಟವಾಗಿ ಹೇಳುವಂತೆ, ಇದನ್ನು ತಂದವರಿಗೆ 2,000 ರೂಪಾಯಿಯನ್ನು ನೀಡುವ ಆಶ್ವಾಸನೆಯನ್ನು ನಾನು ನೀಡುತ್ತೇನೆ ಎಂದು ಆರ್‌ಬಿಐ ಗವರ್ನರ್ ಸಹಿ ಮಾಡಿರುತ್ತಾರೆ. ಈ ಆಶ್ವಾಸನೆಯನ್ನೂ ಉಳಿಸಿಕೊಳ್ಳಲಿಲ್ಲ.

ನೋಟು ಅಮಾನ್ಯ ಪ್ರಕ್ರಿಯೆ ಆರ್‌ಬಿಐ ಕಾಯ್ದೆಯನ್ನು ಉಲ್ಲಂಘಿಸಿದಂತೆ, ಇದನ್ನು ಅಧಿಕಾರಯುತ ಕಾನೂನಿನ ಅನ್ವಯ ಮಾಡಲಾಗಿದೆ ಎಂದು ಪರಿಗಣಿಸುವಂತೆಯೂ ಇಲ್ಲ. ಇಂಥ ಹಲವು ಸಮಸ್ಯೆಗಳನ್ನು ಪ್ರಮುಖ ಹಿರಿಯ ವಕೀಲರು ಎತ್ತಿದ್ದರು. ಆದರೆ ಈ ವಿಷಯಗಳು ನೋಟು ರದ್ದತಿ ಜಾರಿಯಾದ ಬಳಿಕ ಎದ್ದ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಕೂಡಾ ಮಧ್ಯಪ್ರವೇಶಿಸಲು ನಿರಾಕರಿಸಿದವು.

ಪ್ರಸ್ತುತ ಮೋದಿ ಸರಕಾರ ದುರ್ಬಲ ನೆಲೆಯಲ್ಲಿದೆ. ತೆರಿಗೆ ಮೂಲ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂಬ ಅಂದಾಜನ್ನು ಅದರ ಸದಸ್ಯರು ನೀಡಿದ್ದಾರೆ. ಆದರೆ 120 ಕೋಟಿ ಜನರಿರುವ ದೇಶದಲ್ಲಿ, 18 ವರ್ಷ ಮೇಲ್ಪಟ್ಟ ಸದಸ್ಯರ ಸಂಖ್ಯೆ ಹೆಚ್ಚಿದಂತೆಲ್ಲ ತೆರಿಗೆ ಮೂಲವೂ ಹೆಚ್ಚುತ್ತಲೇ ಹೋಗುತ್ತದೆ ಎನ್ನುವುದು ವಾಸ್ತವ. ಹೇಗೆಯೇ ನೋಡಿದರೂ, ವಿಶ್ವದಲ್ಲೇ ಅತೀ ಹೆಚ್ಚು ತೆರಿಗೆ ವಿಧಿಸುವ ದೇಶಗಳ ಪೈಕಿ ಭಾರತವೂ ಒಂದು.

ಎಲ್ಲಕ್ಕಿಂತ ಹೆಚ್ಚಾಗಿ ಬಹಿರಂಗವಾಗಿರುವ ಆಘಾತಕಾರಿ ಸಂಗತಿ ಎಂದರೆ, ಶೇ.99ರಷ್ಟು ಅಮಾನ್ಯಗೊಂಡ ನೋಟುಗಳನ್ನು ಸಾರ್ವಜನಿಕರು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿದ್ದಾರೆ. ಇದನ್ನು 2017ರ ಜುಲೈ 7ರ ಆರ್‌ಬಿಐ ಬುಲೆಟಿನ್ ಸ್ಪಷ್ಟಪಡಿಸಿದೆ. ಆದರೆ ಮೋದಿ ಸರಕಾರ ಇದನ್ನು ಪ್ರಕಟಿಸಲು ಸುದೀರ್ಘ ಸಮಯ ತೆಗೆದುಕೊಂಡಿತು.

ಇದಕ್ಕೂ ಮುನ್ನ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ಸಂಸದೀಯ ಸಮಿತಿಗೆ, ಕರೆನ್ಸಿ ಎಣಿಕೆ ಯಂತ್ರಗಳ ಕೊರತೆಯಿಂದಾಗಿ, ನೋಟು ಅಮಾನ್ಯ ನಿರ್ಧಾರದ ಪರಿಣಾಮವನ್ನು ಲೆಕ್ಕಾಚಾರ ಮಾಡುವಲ್ಲಿ ವಿಳಂಬವಾಗಿದೆ ಎಂದು ಹೇಳಿದ್ದರು.

ಕಳ್ಳನೋಟುಗಳು ಪತ್ತೆಯಾಗಿರುವುದು ತೀರಾ ಕಡಿಮೆ. ಇಷ್ಟಾಗಿಯೂ, ಎಲ್ಲ ಬಂಧಿತ ಉಗ್ರರು ಹೊಸ ನೋಟುಗಳನ್ನು ಹೊಂದಿದ್ದರು. ಹಳೆಯ ಕರೆನ್ಸಿ ನೋಟುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು ಇಲ್ಲವೇ ವಿನಿಮಯ ಮಾಡಲಾಯಿತು. ದಿಲ್ಲಿ ಮಾರುಕಟ್ಟೆಯಲ್ಲಿ 1000 ರೂಪಾಯಿ ನೋಟುಗಳನ್ನು 700 ರೂಪಾಯಿಗೆ, 500 ರೂಪಾಯಿ ನೋಟುಗಳನ್ನು 325-350 ರೂಪಾಯಿಗಳಿಗೆ ಮಾರಾಟ ಮಾಡಲಾಯಿತು. ಸ್ನೇಹಿತರು, ಸಂಬಂಧಿಕರು ಮತ್ತು ಬಡವರನ್ನು ಈ ವಹಿವಾಟಿನಲ್ಲಿ ತೊಡಗಿಸಲಾಯಿತು.

‘‘ಶ್ರೀಮಂತರಿಗೆ ಕಪ್ಪುಹಣ ನಿರಾಕರಿಸಲಾಗುತ್ತದೆ. ಈ ಹಣವನ್ನು ಬಡವರಿಗೆ ನೀಡಲಾಗುತ್ತದೆ’’ ಎಂದು ಮೋದಿ ತಮ್ಮ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಘಂಟಾಘೋಷವಾಗಿ ಹೇಳಿದ್ದರು. ಆದರೆ ಇಂಥ ವರ್ಗಾವಣೆಗೆ ಯಾವ ಕಾನೂನು ಕೂಡಾ ಅವಕಾಶ ನೀಡುವುದಿಲ್ಲ.

ಒಟ್ಟಿನಲ್ಲಿ ಹೇಳುವುದಾದರೆ ಅರೆ ಕಾನೂನುಬದ್ಧ, ತೀರಾ ಪ್ರಚಾರ ಮಾಡಲ್ಪಟ್ಟ ನೋಟು ರದ್ದತಿ ಹಿಮಾಲಯನ್ ಬ್ಲಂಡರ್. ಈ ಸೈದ್ಧಾಂತಿಕ ಮತ್ತು ರಾಜಕೀಯ ತಂತ್ರದಿಂದ ಜನ ತೀವ್ರ ತೊಂದರೆ ಅನುಭವಿಸಬೇಕಾಯಿತು.

ಖ್ಯಾತ ಅರ್ಥಶಾಸ್ತ್ರಜ್ಞ ಜಾನ್ ಮೆನಾರ್ಡ್ ಕೇನ್ಸ್ ಒಮ್ಮೆ ಹೀಗೆ ಹೇಳಿದ್ದರು: ‘‘ಆರ್ಥಿಕತೆಗೆ ಇರುವ ಅತಿದೊಡ್ಡ ಅಪಾಯವೆಂದರೆ ನೋಟು ಅಮಾನ್ಯ ಮಾಡುವುದು.’’ ದೇಶದ ಕರೆನ್ಸಿ ವ್ಯವಸ್ಥೆಯನ್ನು ಸಾರಾಸಗಟಾಗಿ ದುರ್ಬಳಕೆ ಮಾಡಿಕೊಂಡಿದ್ದನ್ನು ಜನ ಸುಧೀರ್ಘ ಕಾಲದವರೆಗೆ ಮರೆಯಲಾರರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)