varthabharthi

ಸಂಪಾದಕೀಯ

ವಾಸ್ತವವನ್ನು ಒಪ್ಪಿಕೊಳ್ಳುವುದೊಂದೇ ದಾರಿ

ವಾರ್ತಾ ಭಾರತಿ : 8 Nov, 2017

2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ದೇಶಕ್ಕೆ ಹಂಚಿದ ‘ಖಡಕ್ ಚಹಾ’ದ ಆಘಾತದಿಂದ ಜನರು ಇನ್ನೂ ಹೊರಬಂದಿಲ್ಲ. ಒಂದು ವರ್ಷದ ಬಳಿಕವೂ ಅದರ ಕಹಿಯನ್ನು ಬೇರೆ ಬೇರೆ ರೀತಿಯಲ್ಲಿ ಶ್ರೀಸಾಮಾನ್ಯ ಚಪ್ಪರಿಸುತ್ತಲೇ ಇದ್ದಾನೆ. ತನಗೆ 50 ದಿನಗಳನ್ನು ಕೊಡಿ ಎಂದು ಮೋದಿ ಕೇಳಿಕೊಂಡಿದ್ದರು. ಜನರು 360 ದಿನಗಳನ್ನು ಕೊಟ್ಟರು. ಆದರೆ 50 ದಿನಗಳಲ್ಲಿ ಮರಳಿ ಬಂದು ಜನರಿಗೆ ಮುಖಾಮುಖಿಯಾಗಬೇಕಾದ ಪ್ರಧಾನಿ 360 ದಿನಗಳು ಕಳೆದರೂ ಮುಖ ತೋರಿಸಿಲ್ಲ. ಕಪ್ಪು ಹಣ ಹೊರ ಬರುತ್ತದೆ ಎಂದು ಸರಕಾರ ಆರಂಭದಲ್ಲಿ ಹೇಳಿತ್ತು. ಆದರೆ ಕಪ್ಪು ಹಣವನ್ನು ಹೊರತರುವಲ್ಲಿ ಸಂಪೂರ್ಣ ವಿಫಲವಾಯಿತು. ಭಯೋತ್ಪಾದನೆಗೆ ಹಣ ಹರಿಯುವುದು ನಿಲ್ಲುತ್ತದೆ ಎಂದು ಸರಕಾರ ಹೇಳಿತು. ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಲ್ಲುತ್ತದೆ ಎಂದು ಭರವಸೆ ನೀಡಿತು. ಆದರೆ ನೋಟು ನಿಷೇಧದ ಬಳಿಕ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಅಧಿಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಅತೀ ಹೆಚ್ಚು ಹಿಂಸಾಚಾರ ನಡೆದಿದೆ ಮಾತ್ರವಲ್ಲ, ಸೈನಿಕರ ಸಾವು ನೋವುಗಳ ಸಂಖ್ಯೆಯಲ್ಲೂ ತೀವ್ರ ಹೆಚ್ಚಳವಾಗಿದೆ. ಅಂತಿಮವಾಗಿ, ನೋಟು ನಿಷೇಧದ ಉದ್ದೇಶವೇ ಆರ್ಥಿಕತೆಯ ಡಿಜಿಟಲೀಕರಣ ಎಂದು ಸರಕಾರ ಇದೀಗ ಹೇಳುತ್ತಿದೆ ಮತ್ತು ಇದರಿಂದ ಭವಿಷ್ಯದಲ್ಲಿ ದೇಶಕ್ಕೆ ಲಾಭವಾಗಲಿದೆ ಎಂದು ಹೇಳಿ ಬೀಸುವ ದೊಣ್ಣೆಯಿಂದ ಪಾರಾಗುವ ಯತ್ನದಲ್ಲಿದೆ.

 ‘ನೋಟು ನಿಷೇಧ’ದಂತಹ ತೀರ್ಮಾನ ಈ ದೇಶಕ್ಕೆ ಅಗತ್ಯವಿತ್ತೇ ಎನ್ನುವ ವಿಷಯದಲ್ಲಿ ಪರ ವಿರೋಧದ ಧ್ವನಿಗಳಿವೆ. ನೋಟು ನಿಷೇಧ ನಿರ್ಧಾರ ಅತ್ಯುತ್ತಮವಾದುದೇ ಆಗಿದೆ. ಆದರೆ ಪೂರ್ವತಯಾರಿಯ ಕೊರತೆಯ ಕಾರಣದಿಂದ ವಿಫಲವಾಯಿತು ಎನ್ನುವವರಿದ್ದಾರೆ. ‘ನೋಟು ನಿಷೇಧ’ವೆನ್ನುವ ಒಂದು ಮಹತ್ತರ ಆರ್ಥಿಕ ಕಾರ್ಯತಂತ್ರವನ್ನು ರಾಜಕಾರಣಿಗಳು ಮತ್ತು ಕಾರ್ಪೊರೇಟ್ ವಲಯ ಜೊತೆಗೂಡಿ ದುರುಪಯೋಗ ಪಡಿಸಿಕೊಂಡ ಕಾರಣದಿಂದಾಗಿ ಇದು ವಿಫಲವಾಯಿತು ಎನ್ನುವವರಿದ್ದಾರೆ. ಅಂದರೆ ವಿಫಲವಾದುದು ಶ್ರೀಸಾಮಾನ್ಯನ ಪಾಲಿಗೆ ಮಾತ್ರ. ಕಾರ್ಪೊರೇಟ್ ಶಕ್ತಿಗಳು ಮತ್ತು ಕೆಲವು ರಾಜಕೀಯ ಹಿತಾಸಕ್ತಿ ಇದರ ಲಾಭಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ಆದುದರಿಂದಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ‘ಸಂಘಟಿತ ಲೂಟಿ’ ಎನ್ನುವ ವ್ಯಾಖ್ಯಾನವನ್ನು ನಾವು ಗಂಭೀರವಾಗಿ ಸ್ವೀಕರಿಸಬೇಕಾಗುತ್ತದೆ. ಕಪ್ಪುಹಣ ನಿಯಂತ್ರಿಸಲು ನೋಟು ನಿಷೇಧ ಒಂದು ಪರಿಣಾಮಕಾರಿ ವಿಧಾನವಾಗುತ್ತಿತ್ತು. ಆದರೆ ರಾಜಕೀಯ ಮತ್ತು ಉದ್ಯಮಿಗಳ ಸ್ವಾರ್ಥ ಅದನ್ನು ವಿಫಲಗೊಳಿಸಿತು. ನೋಟು ನಿಷೇಧದಿಂದ ಬಚ್ಚಿಟ್ಟುಕೊಂಡಿರುವ ಕಪ್ಪು ಹಣ ಹೊರ ಬರಬೇಕಾದರೆ, ಮೊತ್ತ ಮೊದಲು ಅಕ್ರಮವಾಗಿ ಬಿಳಿಯಾಗಿಸುವ ಎಲ್ಲ ಒಳದಾರಿಗಳನ್ನು ಸರಕಾರ ಮೊದಲು ಮುಚ್ಚಿಬಿಡಬೇಕಾಗಿತ್ತು. ಆದರೆ ಅಂತಹ ಹಲವು ಒಳದಾರಿಗಳನ್ನು ತೆರೆದಿಟ್ಟು ಸರಕಾರ ಈ ಅಪಾಯಕಾರಿ ಜೂಜಾಟಕ್ಕಿಳಿಯಿತು. ಸರಕಾರದ ಆಪ್ತವಲಯಕ್ಕೆ ನೋಟು ನಿಷೇಧದ ಮಾಹಿತಿಯಿತ್ತು ಎನ್ನುವುದನ್ನು ಸಾಬೀತು ಪಡಿಸುವಂತಹ ಹಲವು ವರದಿಗಳು ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಕಪ್ಪು ಹಣ ಹೊರಬರದೇ ಇರುವುದಕ್ಕೆ ಇದೂ ಒಂದು ಕಾರಣ. ಹಾಗೆಯೇ, ದೇವಾಲಯದ ಹುಂಡಿಗಳು, ಮಠಮಾನ್ಯಗಳು ಕಪ್ಪು ಹಣವನ್ನು ಸಾಗಿಸುವ ರಾಜಹೆದ್ದಾರಿಗಳಾದವು. ಇದಕ್ಕೆ ನಿರ್ಬಂಧ ಹೇರುವ ಇಚ್ಛಾಶಕ್ತಿ ಕೇಂದ್ರ ಸರಕಾರದ ಬಳಿ ಇರಲಿಲ್ಲ. ರಾಜಕಾರಣಿಗಳು, ಶ್ರೀಮಂತಕುಳಗಳು ಈ ದಾರಿಯನ್ನು ಬಳಸಿಕೊಂಡು ತಮ್ಮ ಕಪ್ಪನ್ನು ಬಿಳಿಯಾಗಿಸುವಲ್ಲಿ ಯಶಸ್ವಿಯಾದರು. ಎಲ್ಲಕ್ಕಿಂತ ಮುಖ್ಯವಾಗಿ, ಕಪ್ಪು ಹಣ ಕೇವಲ ನಗದು ರೂಪದಲ್ಲಷ್ಟೇ ಇರುವುದಿಲ್ಲ ಎನ್ನುವುದು ಗೊತ್ತಿದ್ದೂ ಸರಕಾರ ಗೊತ್ತಿಲ್ಲದಂತೆ ವರ್ತಿಸಿತು. ಮುಳುಗುತ್ತಿರುವ ಬ್ಯಾಂಕುಗಳನ್ನು ಉಳಿಸುವುದಕ್ಕೋಸ್ಕರ ಜನಸಾಮಾನ್ಯರ ನಗದನ್ನು ಬ್ಯಾಂಕ್‌ನೊಳಗೆ ತುಂಬಿಸುವುದಷ್ಟೇ ಈ ನೋಟುನಿಷೇಧದ ಗುರಿಯಾಗಿತ್ತೇ ಎಂದು ಜನರು ಅನುಮಾನ ಪಡುವಂತಾಯಿತು. ಅಂತಿಮವಾಗಿ, ಆರ್ಥಿಕ ಡಿಜಿಟಲೀಕರಣವನ್ನು ಮುನ್ನೆಲೆಗೆ ತಂದು ಮುಖ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಸರಕಾರ, ಇದರಿಂದ ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಉದ್ದಿಮೆಗಳು ಸಂಪೂರ್ಣ ನಾಶವಾಗಿರುವುದರ ಕಡೆಗೆ ಕುರುಡಾಗಿದೆ.ಗ್ರಾಮೀಣ ಉದ್ದಿಮೆ ಕುಸಿದರೆ ಭಾರತದ ಆರ್ಥಿಕ ಅಡಿಗಲ್ಲು ಕುಸಿದಂತೆ ಎನ್ನುವುದನ್ನು ಮರೆತು, ನಗರ ಕೇಂದ್ರಿತ ಅಭಿವೃದ್ಧಿಯ ಮೂಲಕ ನವಭಾರತವನ್ನು ಕಟ್ಟುವ ಕನಸು ಕಾಣುತ್ತಿದೆ. ಇವೆಲ್ಲದರ ಕುರಿತಂತೆ ಜನರ ಮುಂದೆ ನಿಂತು ಅವರಿಗೆ ಭರವಸೆ ಹೇಳಬೇಕಾದ ನರೇಂದ್ರ ಮೋದಿ ತಲೆಮರೆಸಿಕೊಂಡಿದ್ದಾರೆ. ಬದಲಿಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಮುಂದೆ ಬಿಟ್ಟಿದ್ದಾರೆ. ಜೇಟ್ಲಿ ಅವರು ನೋಟು ನಿಷೇಧದ ಸಾಧಕ ಬಾಧಕಗಳ ಕುರಿತಂತೆ ಹೊಸತೇನನ್ನೂ ಹೇಳಲಿಲ್ಲ.

 ನಗದು ಅಮಾನ್ಯವು ಮಹತ್ವದ ಯಶಸ್ಸನ್ನು ಕಂಡಿದೆಯೆಂದು ಹೇಳಿ ಜೇಟ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಜೇಟ್ಲಿ ತನ್ನ ಪತ್ರಿಕಾಗೋಷ್ಠಿಯಲ್ಲಿ ನೋಟು ನಿಷೇಧದಿಂದ ಜಿಡಿಪಿ ಹಾಗೂ ಆರ್ಥಿಕ ಬೆಳವಣಿಗೆಗೆ ಆದ ಹಿನ್ನಡೆಯ ಬಗ್ಗೆ ಚಕಾರವೆತ್ತಿಲ್ಲ. ಜೀವವಿಮಾ ಕಂಪೆನಿಗಳು ಹೆಚ್ಚು ಪ್ರೀಮಿಯಂಗಳನ್ನು ಈಗ ಸಂಗ್ರಹಿಸುತ್ತಿವೆಯೆಂಬುದಷ್ಟನ್ನೇ ಕೇಂದ್ರ ವಿತ್ತ ಸಚಿವರು ಆರ್ಥಿಕ ಬೆಳವಣಿಗೆಗೆ ಉದಾಹರಣೆಯಾಗಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೋಟು ನಿಷೇಧವನ್ನು ಘೋಷಿಸಿದ ಬಳಿಕ ದೇಶಾದ್ಯಂತ ಆರ್ಥಿಕ ತಲ್ಲಣ ಸೃಷ್ಟಿಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅದರಲ್ಲೂ ಗ್ರಾಮೀಣ ಮಾರುಕಟ್ಟೆಗಳು ಹಾಗೂ ಔಪಚಾರಿಕ ಆರ್ಥಿಕತೆಗಳಲ್ಲಿ ನೋಟು ನಿಷೇಧವು ಹಾಹಾಕಾರವೆಬ್ಬಿಸಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಕುಸಿತವು ನೋಟು ನಿಷೇಧದ ಅತಿ ದೊಡ್ಡ ದುಷ್ಪರಿಣಾಮಗಳಲ್ಲೊಂದಾಗಿದೆ. 2016ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಶೇ.7ರಷ್ಟಿದ್ದ ಜಿಡಿಪಿ ಬೆಳವಣಿಗೆಯು 2017ರ ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.5.7ಕ್ಕೆ ಕುಸಿದಿದೆ. ಹಿಂದಿನ ಆರು ತ್ರೈಮಾಸಿಕ ಬೆಳವಣಿಗಳಲ್ಲಿ ಇದು ಅತ್ಯಂತ ಕನಿಷ್ಠವಾದುದಾಗಿತ್ತು. ಆದರೆ ಜೇಟ್ಲಿ ಹಾಗೂ ಇತರ ಬಿಜೆಪಿ ನಾಯಕರು ನಗದು ಅಮಾನ್ಯತೆಗೂ ಜಿಡಿಪಿ ಕುಸಿತಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೊಳ್ಳುತ್ತಾ ಬಂದಿದ್ದಾರೆ.

   ಈ ವರ್ಷದ ಅಕ್ಟೋಬರ್‌ನಲ್ಲಿ ಕೇಂದ್ರ ವಿತ್ತ ಸಚಿವಾಲಯವು, ಜಿಡಿಪಿ ಇನ್ನಷ್ಟು ಕುಸಿಯುವ ನಿರೀಕ್ಷೆಯಿದೆಯೆಂದು ಹೇಳಿರುವುದು ಇನ್ನಷ್ಟು ಆತಂಕ ಮೂಡಿಸಿದೆ. 2021-22ರ ವೇಳೆಗಷ್ಟೇ ಭಾರತದ ಜಿಡಿಪಿ ಬೆಳವಣಿಗೆಯು ಶೇ.8ಕ್ಕೆ ತಲುಪಲು ಶಕ್ತವಾಗಲಿದೆಯೆಂದು ಅದು ಹೇಳಿಕೊಂಡಿದೆ. ಸದ್ಯಕ್ಕೆ ಭಾರತದ ಜಿಡಿಪಿ ಬೆಳವಣಿಗೆ ಚೇತರಿಸಿಕೊಳ್ಳುವುದೆಂಬುದನ್ನು ಯಾರೂ ಕೂಡಾ ನಿರೀಕ್ಷಿಸುವಂತಿಲ್ಲವೆಂಬುದಕ್ಕೆ ಜೇಟ್ಲಿಯವರ ಈ ಮಾತುಗಳೇ ಸಾಕ್ಷಿಯಾಗಿವೆ. ನೋಟು ನಿಷೇಧದಿಂದ ದೇಶಕ್ಕೆ ಒಳಿತಾಗಿದೆ ಎಂದು ಸರಕಾರ ತಾನೇ ಘೋಷಿಸಿಕೊಳ್ಳುವುದರಿಂದ ಯಾವ ಲಾಭವೂ ಇಲ್ಲ. ಎಲ್ಲಿ, ಹೇಗೆ ಒಳ್ಳೆಯದಾಗಿದೆ ಮತ್ತು ಒಳ್ಳೆಯದಾಗುತ್ತದೆ ಎನ್ನುವುದನ್ನು ವಿವರಿಸುವ ಹೊಣೆಗಾರಿಕೆಯೂ ಅದರದಾಗಿದೆ. ಸರಕಾರ ತನ್ನ ನೋಟು ನಿಷೇಧದಿಂದಾಗಿರುವ ಹಾನಿಯನ್ನು ಒಪ್ಪಿಕೊಳ್ಳುವುದೇ ಅದನ್ನು ಸರಿಪಡಿಸುವುದಕ್ಕೆ ಇಡುವ ಮೊದಲ ಹೆಜ್ಜೆಯಾಗಿದೆ. ಆದುದರಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಮುಂದೆ ಬಂದು ನೋಟು ನಿಷೇಧದ ಕುರಿತಂತೆ ಸ್ಪಷ್ಟ ಹೇಳಿಕೆಯನ್ನು ನೀಡಬೇಕು. ಶ್ರೀಸಾಮಾನ್ಯರು ಮೋದಿಯ ಮಾತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ತನ್ನನ್ನು ನಂಬಿ ಬೀದಿಗೆ ಬಿದ್ದ ಜನರಿಗೆ ಪ್ರಧಾನಿ ನಿರಾಶೆ ಮಾಡಬಾರದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)