varthabharthi

ವಿಶೇಷ-ವರದಿಗಳು

ನೋಟು ಬವಣೆಗೆ ಒಂದು ವರ್ಷ!

ರಾಜಕೀಯ ಬದಿಗಿಟ್ಟು, ಆರ್ಥಿಕತೆಯನ್ನು ಮತ್ತೆ ಕಟ್ಟೋಣ: ಮನಮೋಹನ್ ಸಿಂಗ್

ವಾರ್ತಾ ಭಾರತಿ : 8 Nov, 2017

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಂದರ್ಶನ

ನಮ್ಮ ಸಮಾಜದ ದುರ್ಬಲ ವರ್ಗಗಳು ಹಾಗೂ ಉದ್ಯಮದ ಮೇಲೆ ನಗದು ಅಮಾನ್ಯದ ಪರಿಣಾಮವು ಆರ್ಥಿಕ ಸೂಚಕವು ಬಹಿರಂಗಪಡಿಸಿರುವುದಕ್ಕಿಂತಲೂ ಬಹಳಷ್ಟು ಹೆಚ್ಚು ಹಾನಿಯನ್ನುಂಟು ಮಾಡಿದೆ ಎಂದು ಪ್ರಧಾನಿ ಮನಮೋಹನ್‌ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. 1,000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಮೋದಿ ಸರಕಾರ ನಿಷೇಧಿಸಿದ ಮೊದಲನೆ ವರ್ಷಾಚರಣೆಯ ಸಂದರ್ಭದಲ್ಲಿ ‘ಬ್ಲೂಮ್‌ಬರ್ಗ್‌ಕ್ವಿಂಟ್’ ವಿತ್ತಪತ್ರಿಕೆಯ ಪೋಷಕ ಸಂಪಾದಕ ಪ್ರವೀಣ್ ಚಕ್ರವರ್ತಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗದು ಅಮಾನ್ಯತೆಯಿಂದಾಗಿ ಸಣ್ಣ ಹಾಗೂ ಮಧ್ಯಮ ದರ್ಜೆಯ ಉದ್ಯಮರಂಗದಲ್ಲಿ ಸಾವಿರಾರು ಮಂದಿ ಉದ್ಯೋಗಗಳನ್ನು ಕಳೆದುಕೊಂಡಿರುವ ಬಗ್ಗೆ ಮಾಜಿ ಪ್ರಧಾನಿ ಆತಂಕ ವ್ಯಕ್ತಪಡಿಸಿದ್ದಾರೆ. ನೋಟು ನಿಷೇಧದ ಪರಿಣಾಮವಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ತಲೆದೋರುವ ಸಾಧ್ಯತೆಯೂ ಇದೆ ಎಂದವರು ಎಚ್ಚರಿಕೆ ವ್ಯಕ್ತಪಡಿಸಿದ್ದಾರೆ.
ಮನಮೋಹನ್‌ಸಿಂಗ್ ಅವರ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.

ಪ್ರವೀಣ್: ಕೇಂದ್ರ ಸರಕಾರ ನಗದು ಅಮಾನ್ಯವನ್ನು ಕೈಗೊಂಡು ಈಗ ಒಂದು ವರ್ಷ ತುಂಬಿದೆ. ಅವಾಗಿನಿಂದ ಈತನಕವೂ ನೀವು ನೋಟು ನಿಷೇಧವನ್ನು ಬಲವಾಗಿ ವಿರೋಧಿಸುತ್ತಾ ಬಂದಿದ್ದೀರಿ. ಅದು ಉಂಟು ಮಾಡಿರುವ ಪರಿಣಾಮವನ್ನು ನೀವು ಹೇಗೆ ಅಂದಾಜಿಸುವಿರಿ?.

ಮನಮೋಹನ್‌ಸಿಂಗ್: ನಗದು ಅಮಾನ್ಯತೆಯು ಆರ್ಥಿಕ ನೀತಿಗೆ ಮಹಾವಿನಾಶಕಾರಿಯಾಗಿದೆ. ದೇಶದ ಆರ್ಥಿಕ, ಸಾಮಾಜಿಕ, ಪ್ರತಿಷ್ಠೆಗೆ ಹಾಗೂ ಸಾಂಸ್ಥಿಕವಾಗಿ ಇದರಿಂದ ಹಲವು ಪಟ್ಟು ಹಾನಿಯಾಗಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಕುಸಿತವು ಆರ್ಥಿಕ ಹಾನಿಯ ಒಂದು ಸೂಚಕ ಮಾತ್ರವೇ ಆಗಿದೆ. ನಮ್ಮ ಸಮಾಜದ ದುರ್ಬಲ ವರ್ಗಗಳು ಹಾಗೂ ಉದ್ಯಮದ ಮೇಲೆ ಅದರಿಂದಾದ ಪರಿಣಾಮವು ಇತರ ಯಾವುದೇ ಆರ್ಥಿಕ ಸೂಚಕವು ಬಹಿರಂಗಪಡಿಸುವುದಕ್ಕಿಂತ ಹೆಚ್ಚು ಹಾನಿಕರವಾಗಿದೆ. ಉದ್ಯೋಗಗಳ ನಷ್ಟ ನೋಟು ನಿಷೇಧದ ಇನ್ನೊಂದು ತಕ್ಷಣದ ಪರಿಣಾಮವಾಗಿದೆ. ನಮ್ಮ ದೇಶದ ನಾಲ್ಕನೆ ಮೂರರಷ್ಟು ಕೃಷಿಯೇತರ ಉದ್ಯೋಗಗಳು ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯಗಳಲ್ಲಿವೆ. ನೋಟು ನಿಷೇಧದಿಂದಾಗಿ ಈ ವಲಯಕ್ಕೆ ತೀವ್ರ ಹಾನಿಯಾಗಿದೆ. ಹೀಗಾಗಿ, ಉದ್ಯೋಗಗಳು ನಷ್ಟವಾಗಿವೆ ಹಾಗೂ ಯಾವುದೇ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ.
ನಗದು ಅಮಾನ್ಯತೆಯ ದೀರ್ಘಾವಧಿಯ ಪರಿಣಾಮದ ಬಗ್ಗೆಯೂ ನನಗೆ ಚಿಂತೆಯಾಗಿದೆ. ಇತ್ತೀಚಿನವರೆಗೂ ಕೆಳಮಟ್ಟಕ್ಕೆ ಕುಸಿದಿದ್ದ ಜಿಡಿಪಿಯು ನಿಧಾನವಾಗಿ ಸುಧಾರಿಸತೊಡಗಬಹುದು. ಆದರೆ ಹೆಚ್ಚುತ್ತಿರುವ ಅಸಮಾನತೆಯು ನಮ್ಮ ಆರ್ಥಿಕ ಅಭಿವೃದ್ಧಿಯ ಸ್ವರೂಪಕ್ಕೆ ನಿರಂತರವಾದ ಬೆದರಿಕೆಯಾಗಿದೆ. ನಗದು ಅಮಾನ್ಯದಿಂದ ಇಂತಹ ಅಸಮಾನತೆಯು ಉಲ್ಬಣಗೊಳ್ಳಲಿದ್ದು, ಅದನ್ನು ಭವಿಷ್ಯದಲ್ಲಿ ಸರಿಪಡಿಸುವುದು ತೀರಾ ಕಷ್ಟಕರ. ನಮ್ಮಂತಹ ವೈವಿಧ್ಯಮಯ ದೇಶದಲ್ಲಿ ಅಸಮಾನತೆಯು ಇತರ ಏಕರೂಪಿ ದೇಶಗಳಿಗಿಂತಲೂ ದೊಡ್ಡ ಪಿಡುಗಾಗಿ ಪರಿಣಮಿಸಲಿದೆ.
 ಶಾಂತಿ ಹಾಗೂ ಸ್ಥಿರತೆಯ ದೇಶವೆಂಬ ಭಾರತದ ಪ್ರತಿಷ್ಠೆಗೆ ನಗದು ಅಮಾನ್ಯವು ಗಂಭೀರವಾದ ಹಾನಿಯನ್ನುಂಟು ಮಾಡಿದೆ. ಅವಸರದಿಂದ ಜಾರಿಗೊಳಿಸಲಾದ ವಿವೇಚನಾರಹಿತ ನೀತಿಯ ಪರಿಣಾಮವಾಗಿಯೇ ಈ ಬೇಗುದಿ ಸೃಷ್ಟಿಯಾಗಿದೆ. ಒಟ್ಟಾರೆಯಾಗಿ ನೋಟು ನಿಷೇಧವು ಒಂದು ಮರೆಯಲು ಸಾಧ್ಯವಿಲ್ಲದಂತಹ ಪ್ರಮಾದವಾಗಿದೆ.

ಪ್ರವೀಣ್: ಭಾರತದ ಏಕೈಕ ಅರ್ಥಶಾಸ್ತ್ರಜ್ಞ ಪ್ರಧಾನಿಯಾಗಿದ್ದ ನಿಮಗೆ ನೋಟು ಆಮಾನ್ಯದ ಪರಿಣಾಮದ ಬಗ್ಗೆ ಪೂರ್ವಭಾವಿಯಾಗಿ ತಿಳುವಳಿಕೆ ಇದ್ದುದರಲ್ಲಿ ಅಚ್ಚರಿಯೇನಿಲ್ಲ. ನೀವು ನೀಡಿದ್ದ ಎಚ್ಚರಿಕೆಗಳು ಸರಿ ಎಂದು ನಿಮಗೆ ಅನಿಸುತ್ತಿದೆಯೇ?.
ಮನಮೋಹನ್:  ಇಲ್ಲ. ಇದು ಸಮರ್ಥನೆಯ ಪ್ರಶ್ನೆ ಅಲ್ಲ. ವಾಸ್ತವಿಕವಾಗಿ, ನಗದು ಅಮಾನ್ಯದ ಬಗ್ಗೆ ರಾಜಕೀಯ ನಡೆಸುವ ಸಮಯ ಕಳೆದುಹೋಗಿದೆಯೆಂದು ನಾನು ಬಲವಾಗಿ ಭಾವಿಸುತ್ತೇನೆ. ಪ್ರಧಾನಿಯವರು ಮುಕ್ತಮನಸ್ಸಿನಿಂದ ಈ ಪ್ರಮಾದವನ್ನು ಒಪ್ಪಿಕೊಳ್ಳಬೇಕು ಹಾಗೂ ನಮ್ಮ ಆರ್ಥಿಕತೆಯನ್ನು ಪುನರ್‌ನಿರ್ಮಿಸಲು ಎಲ್ಲರ ಬೆಂಬಲವನ್ನು ಕೋರಬೇಕು. ಆರ್ಥಶಾಸ್ತ್ರವು ರಾಜಕೀಯ ವನ್ನು ಹಿಂದೆ ಸರಿಸಿದ ಕೆಲವು ನಿರ್ದಿಷ್ಟ ಸಂದರ್ಭಗಳು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಬರುತ್ತವೆ. ಅಂತಹದ್ದೊಂದು ಸಂದರ್ಭ ಈಗ ಭಾರತದಲ್ಲಿದೆ. ಎಲ್ಲಾ ರಾಜಕೀಯವನ್ನು ಮೀರಿ ನಿಲ್ಲಿಸಬೇಕು. ನಿರುದ್ಯೋಗ ಹಾಗೂ ಅಸಮಾನ ಆರ್ಥಿಕ ಬೆಳವಣಿಗೆಯ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಶ್ರಮಿಸಬೇಕು. ಸೃಜನಾತ್ಮಕ ಹಾಗೂ ಸಹಮತದ ರಾಜಕೀಯ ಪರಿಹಾರಗಳ ಅಗತ್ಯವಿರುವಂತಹ ಅಗಾಧವಾದ ಸವಾಲುಗಳು ಇವಾಗಿವೆ. ನಗದು ಅಮಾನ್ಯತೆಯ ಪರಿಣಾಮದ ವಿಷಯದಲ್ಲಿ ನನ್ನದು ಸರಿಯೇ ಅಥವಾ ತಪ್ಪೇ ಎಂಬ ಬಗ್ಗೆ ವಾದಿಸುವ ಸಮಯ ಇದಲ್ಲ.
ನಾನು ಈ ಮೊದಲು ವ್ಯಕ್ತಪಡಿಸಿದ್ದ ಭೀತಿಗೆ ವ್ಯತಿರಿಕ್ತ ವಾಗಿ ನಗದು ಅಮಾನ್ಯದಿಂದ ಉಂಟಾಗುವ ಆರ್ಥಿಕ ದುಷ್ಪರಿಣಾಮವು ಅತ್ಯಂತ ಕನಿಷ್ಠವಾಗಿದ್ದರೂ ನಾನು ಸಂತಸಪಡುತ್ತೇನೆ.

ಪ್ರವೀಣ್: ಇದು ತಮ್ಮ ಹೃದಯವೈಶಾಲ್ಯವನ್ನು ತೋರಿಸುತ್ತದೆ. ನಗದು ರಹಿತ ಆರ್ಥಿಕತೆ, ಡಿಜಿಟಲ್ ಆರ್ಥಿಕತೆಯಂತಹ ನಗದು ಅಮಾನ್ಯದ ಇತರ ಉದ್ದೇಶಗಳನ್ನು ಸರ ಕಾರವು ಮುಂದಿಟ್ಟಿತು. ಖಂಡಿತವಾಗಿಯೂ ಈ ಉದ್ದೇಶಗಳ ಬಗ್ಗೆ ಯಾರೂ ತಪ್ಪು ಹುಡುಕಲು ಸಾಧ್ಯವಿಲ್ಲವೆಂಬುದು ಸರಿತಾನೇ?. ಆರ್ಥಿಕ ಗುರಿಗಳಾಗಿ ಇವು ನಮ್ಮ ದೇಶಕ್ಕೆ ಎಷ್ಟು ಮುಖ್ಯ?.
ಮನಮೋಹನ್:  ನಮ್ಮದು ಸಣ್ಣ ಹಾಗೂ ಮಧ್ಯಮ ಉದ್ಯಮಗಳ ದೇಶ. ಈ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ಹೊಂದಿವೆ. ಅವರು ಸಂಘಟಿತರಾಗಿರುವುದು ಕಡಿಮೆ ಹಾಗೂ ನಗದನ್ನು ವಹಿವಾಟಿನ ಪ್ರಾಥಮಿಕ ವಿಧಾನವಾಗಿ ಬಳಸಿಕೊಳ್ಳುತ್ತಾರೆ. ಈ ಸಣ್ಣ ಉದ್ಯಮ ಗಳಿಗೆ ನೆರವಾಗಲು ದಾರಿಗಳನ್ನು ಹುಡುಕುವುದು ನಮ್ಮ ದೇಶದ ಆರ್ಥಿಕತೆಯ ಪ್ರಮುಖ ಉದ್ದೇಶವಾಗಬೇಕು. ಮುಂದೆ ಆರ್ಥಿಕತೆಯ ಮಟ್ಟದಲ್ಲಿ ದಕ್ಷತೆಯನ್ನು ಸಾಧಿಸಲು ಇದು ನೆರವಾಗಲಿದೆ. ಆದರೆ ಸಣ್ಣ ಉದ್ಯಮಗಳ ಪ್ರಸಕ್ತ ಸ್ವರೂಪಕ್ಕೆ ಯಾವುದೇ ಹಾನಿಯನ್ನುಂಟು ಮಾಡದೆ ನಾವು ಈ ಉದ್ದೇಶಗಳನ್ನು ಸಾಧಿಸಬೇಕು. ನಗದು ರಹಿತ ಆರ್ಥಿಕತೆ ಅಥವಾ ಡಿಜಿಟಲ್ ಆರ್ಥಿಕತೆಯು ಶ್ಲಾಘನಾರ್ಹ ಗುರಿಗಳಾಗಿವೆ. ಆದರೆ ನಮ್ಮ ಆರ್ಥಿಕ ಆದ್ಯತೆಗಳನ್ನು ಕೂಡಾ ಸರಿಪಡಿಸಿಕೊಳ್ಳುವ ಅಗತ್ಯವೂ ಇದೆ. ನಗದು ಆರ್ಥಿಕತೆಯ ಗುರಿಗಳು ಖಂಡಿತವಾಗಿಯೂ ಸಣ್ಣ ಉದ್ಯಮಿಗಳಿಗೆ ನೆರವಾಗುವುದೆಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಭಾರತದ ಆರ್ಥಿಕತೆ ಹಾಗೂ ಕಾರ್ಮಿಕ ಮಾರುಕಟ್ಟೆಯ ಬೆನ್ನೆಲುಬುಗಳಾಗಿವೆ.
ಡಿಜಿಟಲ್ ಆರ್ಥಿಕತೆಯ ಗುರಿಯನ್ನು ಸಾಧಿಸಲು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಹಾನಿಯುಂಟು ಮಾಡುವುದು ಜಾಣತನವಲ್ಲ.
ಯಾವುದೇ ವರ್ತನಾತ್ಮಕ ಬದಲಾವಣೆಯನ್ನು ಬಲವಂತವಾಗಿ ಅಥವಾ ಬೆದರಿಕೆಯಿಂದ ತರಲು ಸಾಧ್ಯವಿಲ್ಲ. ಡಿಜಿಟಲ್ ಅಥವಾ ಕ್ಯಾಶ್‌ಲೆಸ್ ಆರ್ಥಿಕತೆಯನ್ನು ಮೂಲಭೂತವಾಗಿ ಲೋಪಭರಿತವಾದ ಆರ್ಥಿಕ ನೀತಿಯನ್ನು ಸಮರ್ಥನೆಯಾಗಿ ಬಳಸಿಕೊಳ್ಳಲಾಗುತ್ತದೆ. ಅವು ಪ್ರಯೋಜನಕರವಾದ ಗುರಿಗಳಾಗಿರಬಹುದು. ಆದರೆ ಭಾರತವು ಪ್ರಸಕ್ತ ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಹಾಗೂ ಆದ್ಯತೆಗಳ ಸಾಲಿನಲ್ಲಿ ಅದನ್ನು ತಪ್ಪುಜಾಗದಲ್ಲಿರಿಸಲಾಗಿದೆ.
 ರಾಜಕೀಯ ಸನ್ನಿವೇಶಗಳ ಹೊರತಾಗಿಯೂ ದಶಕದಿಂದ ಭಾರತವು ವಿದೇಶಿ ಹೂಡಿಕೆಗೆ ಆಕರ್ಷಣೀಯ ತಾಣವಾಗಿತ್ತು. ಆದಕ್ಕಾಗಿ ನಾನು ಸಂತೋಷಪಡುತ್ತೇನೆ. ಭಾರತವನ್ನು ಕಾವಲು ಕಾಯುವ ಹಾಗೂ ಮಾರ್ಗದರ್ಶನ ಮಾಡುವ ಬಲಿಷ್ಠ ಸಂಸ್ಥೆಗಳಿಗೆ ಇದು ಸತ್ವಪರೀಕ್ಷೆಯಾಗಿದೆ. ಈ ಸಂಸ್ಥೆಗಳನ್ನು ರಕ್ಷಿಸುವುದು ಹಾಗೂ ಅವುಗಳ ಸ್ವಾತಂತ್ರ ಹಾಗೂ ವಿಶ್ವಸನೀಯತೆಯನ್ನು ಕಾಪಾಡಬೇಕಾಗಿದೆ. ಇದರಿಂದ ಮಾತ್ರವೇ ಭಾರತವು ದೀರ್ಘಾವಧಿಯ ಆರ್ಥಿಕ ಪ್ರಗತಿಯನ್ನು ಕಾಣಲು ಸಾಧ್ಯವಿದೆ.

 ಪ್ರವೀಣ್: ಭಾರತದ ದೀರ್ಘಾವಧಿಯ ಆರ್ಥಿಕ ಅಭಿವೃದ್ಧಿಗೆ ಸಂಸ್ಥೆಗಳ ಮಹತ್ವದ ಬಗ್ಗೆ ನೀವು ಮಾತನಾಡಿ ದ್ದೀರಿ. ಮಾಜಿ ಪ್ರಧಾನಿ ಮಾತ್ರವಲ್ಲ ಮಾಜಿ ಆರ್‌ಬಿಐ ಗವರ್ನರ್ ಕೂಡಾ ಆಗಿರುವ ನೀವು ಭಾರತದ ನೀತಿನಿರೂಪಣೆ ಹಾಗೂ ಆಡಳಿತ ಸಂಸ್ಥೆಗಳ ಮೇಲೆ ನಗದು ಅಮಾನ್ಯತೆಯ ನಿರ್ಧಾರದಿಂದ ಯಾವ ಪರಿಣಾಮವಾಗಿದೆ ಎಂದು ಹೇಳುವಿರಿ?.
ಮನಮೋಹನ್: ನಗದು ಅಮಾನ್ಯತೆಯು ಒಂದು ಸಂಸ್ಥೆಯಾಗಿ ಆರ್‌ಬಿಐನ ಸ್ವತಂತ್ರತೆ ಹಾಗೂ ವಿಶ್ವಸನೀ ಯತೆಯ ಮೇಲೆ ನಡೆದ ದಾಳಿ ಯಾಗಿದೆ. ಸ್ವತಂತ್ರ ಭಾರತದ ಅತ್ಯಂತ ಮಹತ್ವದ ಹಣಕಾಸು ನೀತಿ, ನಿರ್ಧಾರವೊಂದನ್ನು (ನಗದು ಅಮಾನ್ಯತೆ) ಕೈಗೊಂಡ ಸಂದರ್ಭದಲ್ಲಿ ಆರ್‌ಬಿಐನ್ನು ಬದಿಗೆ ಸರಿಸಲಾಗಿದೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ವಿಷಯದಲ್ಲಿ ಆರ್‌ಬಿಐಗೆ ಯಾವುದೇ ಆಯ್ಕೆಯಿರಲಿ ಲ್ಲವೆಂದು ನನಗೆ ಖಚಿತವಾಗಿದೆ. ಆರ್‌ಬಿಐ ಗವರ್ನರ್ ಅವರು ತನ್ನ ಸಂಸ್ಥೆಯ ವಿಶ್ವಸನೀಯತೆ ಹಾಗೂ ಸ್ವಾತಂತ್ರ ವನ್ನು ಮರಳಿ ಪಡೆಯಲು ಯತ್ನಿಸುವರೆಂಬ ಆತ್ಮವಿಶ್ವಾಸ ನನಗಿದೆ. ಇತರ ವಲಯಗಳ ಸಂಸ್ಥೆಗಳಲ್ಲಿ ವೌಲ್ಯಗಳು ಸವೆಯುತ್ತಿರುವ ಬಗ್ಗೆ ನಾನು ತುಂಬಾ ಆತಂಕ ಗೊಂಡಿದ್ದೇನೆ. ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯ ಜೊತೆಗೆ ಗುಜರಾತ್ ಚುನಾವಣಾ ದಿನಾಂಕ ವನ್ನು ಘೋಷಿಸದಿರುವ ಚುನಾವಣಾ ಆಯೋಗದ ನಿರ್ಧಾರವು ಸಾಂಸ್ಥಿಕ ಪ್ರಾಮಾಣಿಕತೆ ಸವೆಯುತ್ತಿದೆಯೆಂಬ ಭೀತಿಯನ್ನು ಪುಷ್ಟೀಕರಿಸಿದೆ. ಚುನಾವಣಾ ಆಯೋಗ, ಸಿಬಿಐ, ಆರ್‌ಬಿಐ ಇತ್ಯಾದಿ ಪ್ರಜಾಪ್ರಭುತ್ವ ಅಡಿಪಾಯಗಳಾಗಿವೆ. ನಮ್ಮ ದೇಶದ ಭವಿಷ್ಯದ ದೃಷ್ಟಿಯಿಂದಲಾದರೂ ತಮ್ಮ ಸಂಸ್ಥೆಗಳ ವಿಶ್ವಸನೀಯತೆ ಹಾಗೂ ಸ್ವಾತಂತ್ರವನ್ನು ಕಾಪಾಡಲು ಇವು ಹಾಗೂ ಇತರ ಸಂಸ್ಥೆಗಳು ಕಷ್ಟಪಟ್ಟು ಹೋರಾಡಬೇಕಾಗಿದೆ.

ಪ್ರವೀಣ್: ನಗದು ಅಮಾನ್ಯ ವಿಷಯವನ್ನು ಬದಿಗಿಟ್ಟು ಹೇಳುವುದಾದರೆ ಭಾರತದ ಅತ್ಯಂತ ಹಿರಿಯ ಮುತ್ಸದ್ಧಿಯಾಗಿ ನಮ್ಮ ದೇಶವು ಯಾವೆಲ್ಲಾ ಸವಾಲುಗಳನ್ನು ಎದುರಿಸುತ್ತಿದೆ ಎಂದು ನೀವು ಭಾವಿಸುವಿರಿ?. ನಮ್ಮ ದೇಶದ ಕೋಟ್ಯಂತರ ಯುವಜನರ ಭವಿಷ್ಯದ ಬಗ್ಗೆ ನೀವು ಹೇಗೆ ಆಶಾವಾದ ಹೊಂದಿದ್ದೀರಿ?.
ಮನಮೋಹನ್: ನಿರುದ್ಯೋಗ ಹಾಗೂ ಅಸಮಾನ ಆರ್ಥಿಕ ಬೆಳವಣಿಗೆಯು ನಮ್ಮ ದೇಶವು ಎದುರಿಸುತ್ತಿರುವ ಎರಡನೆ ಅತಿ ದೊಡ್ಡ ಆರ್ಥಿಕ ಸವಾಲುಗಳಾಗಿವೆ. ಪ್ರತೀ ವರ್ಷವೂ ಕೋಟ್ಯಂತರ ಯುವಜನರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಅವರೆಲ್ಲರಿಗೂ ಉತ್ಪಾದನಾಶೀಲ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಬಹುತೇಕ ನಮ್ಮ ಎಲ್ಲಾ ಆರ್ಥಿಕ ನೀತಿಯ ಉಪಕ್ರಮಗಳನ್ನು ಈ ಮಹತ್ವದ ಉದ್ದೇಶವನ್ನು ಈಡೇರಿಸುವುದಕ್ಕಾಗಿಯೇ ರೂಪಿಸಬೇಕಾದ ಅಗತ್ಯವಿದೆ. ನಮ್ಮ ಯುವಜನತೆಗೆ ಬೇಕಾದಷ್ಟು ಉದ್ಯೋಗಗಳನ್ನು ನಾವು ಸೃಷ್ಟಿಸುತ್ತಿಲ್ಲ.
ಅಸಮಾನತೆಯು ಇನ್ನೊಂದು ದೊಡ್ಡ ಸವಾಲಾಗಿದೆ. ಈ ಹಿಂದೆಯೂ ನಾನು ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಬಗ್ಗೆ ಮಾತನಾಡಿದ್ದೇನೆ. ನಾವು ನಮ್ಮ ಗಮನವನ್ನು ಇದರಿಂದ ದೂರ ಕೊಂಡೊಯ್ಯಬಾರದು.
ದೊಡ್ಡ ಗಾತ್ರ, ಸಂಕೀರ್ಣತೆ ಹಾಗೂ ವೈವಿಧ್ಯತೆಯನ್ನು ಹೊಂದಿರುವ ಭಾರತದಂತಹ ದೇಶಕ್ಕೆ ದೀರ್ಘ ಸಮಯದವರೆಗೆ ಅಸಮಾನತೆಯನ್ನು ಬಹುಕಾಲದವರೆಗೆ ಸಹಿಸಿಕೊಳ್ಳಲು ಸಾಧ್ಯವಾಗದು.
ಆರ್ಥಿಕ ಅಸಮಾನತೆಯು ತ್ವರಿತವಾಗಿ ಹೆಚ್ಚುತ್ತಿದೆಯೆಂಬು ದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಇದರ ಜೊತೆಗೆ ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಅಸಮಾನತೆ ಕೂಡಾ ಹೆಚ್ಚುತ್ತಿರುವುದನ್ನು ನಿಮ್ಮದೇ ಸಮೀಕ್ಷೆಯು ತೋರಿಸಿ ಕೊಟ್ಟಿದೆ. ಯಾವುದೇ ಭಾರತೀಯ ನಾಯಕನಿಗೂ ಇವು ಮಹತ್ವದ ಸವಾಲುಗಳಾಗಿವೆ. ಈ ಸವಾಲುಗಳನ್ನು ನಗದು ಅಮಾನ್ಯತೆಯಂತಹ ನಾವಾಗಿಯೇ ಮಾಡಿ ಕೊಂಡಂತಹ ಗಾಯಗಳ ಮೂಲಕ ಅವನ್ನು ಇನ್ನಷ್ಟು ಜಟಿಲಗೊಳಿಸಕೂಡದು. ಆರ್ಥಿಕ ಬೆಳವಣಿಗೆಯ ಗುಣಮಟ್ಟ ಹಾಗೂ ಗಾತ್ರಕ್ಕೆ ನಾವು ಸರಿಸಮಾನವಾದ ಗಮನ ವನ್ನು ನೀಡಬೇಕಾಗಿದೆ. ಕೇವಲ ತಲೆಬರಹದ ಜಿಡಿಪಿ ಬೆಳವಣಿಗೆ ಯ ಅಂಕಿಸಂಖ್ಯೆಗಳಿಗೆ ಮಾರುಹೋಗಕೂಡದು. ಹೆಚ್ಚು ಸಮಾನತೆಯ, ಹೆಚ್ಚು ಉತ್ಪಾದನಾಶೀಲ ಹಾಗೂ ಹೆಚ್ಚು ಸಮೃದ್ಧ ಭಾರತವನ್ನು ಕಾಣಬೇಕೆಂಬುದೇ ನನ್ನ ಕನಸಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)