varthabharthi

ವಿಶೇಷ-ವರದಿಗಳು

ನೋಟು ಬವಣೆಗೆ ಒಂದು ವರ್ಷ!

ವಾರ್ತಾ ಭಾರತಿ : 8 Nov, 2017

ಪ್ರಧಾನಿ ಮೋದಿ ಓರ್ವ ಢೋಂಗಿ

ನೋಟುಗಳ ಅಮಾನ್ಯದಿಂದ ಕಪ್ಪುಹಣ ಹೊಂದಿರುವವರ ನಿದ್ದೆಗೆಡಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅವರು ಯಾರೂ ನಿದ್ದೆಗೆಡಲಿಲ್ಲ. ಅವರ ಬದಲು ಬಡವರು, ಕೂಲಿ ಕಾರ್ಮಿಕರು, ರೈತರು ಆರ್ಥಿಕವಾಗಿ ಸಂಕಷ್ಟಗಳಿಗೆ ಸಿಲುಕಿಕೊಂಡರು. ಹಲವು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು. ಬಡವರು ಬ್ಯಾಂಕುಗಳ ಕಡೆಗೆ ಸುಳಿಯದಂತೆ ಮಾಡಿದರು. ಪ್ರಧಾನಿ ಮೋದಿ ಓರ್ವ ಢೋಂಗಿ.

 ಸಿದ್ದರಾಮಯ್ಯ, ಮುಖ್ಯಮಂತ್ರಿ

-------------------------------------------------------------------

ಜನ ಸಾಮಾನ್ಯರಿಗೆ ದುಸ್ವಪ್ನ

‘ನೋಟು ಅಮಾನ್ಯೀಕರಣ ಪ್ರಕ್ರಿಯೆ ಈ ದೇಶದ ಜನಸಾಮಾನ್ಯರಿಗೆ ಒಂದು ದುಸ್ವಪ್ನ..! ಇದನ್ನು ಸರಳೀಕರಿಸಿ ಹೇಳುವುದಾದರೆ ಜನಸಾಮಾನ್ಯರ ಆರ್ಥಿಕ ಚೈತನ್ಯವನ್ನು ಕುಗ್ಗಿಸಿ, ಬಂಡವಾಳಿಗರನ್ನು ಸಬಲೀಕರಿಸುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಈಗಿನ ಬಿಜೆಪಿ, ಹಿಂದೆ ಜನಸಂಘವಾಗಿದ್ದಾಗ ಡಾ.ರಾಮಮನೋಹರ ಲೋಹಿಯಾ ಒಂದು ಮಾತನ್ನು ಹೇಳುತಿದ್ದರು. ಈ ಜಗತ್ತಿನಲ್ಲಿ ಆರ್ಥಿಕ ನೀತಿಯೇ ಇಲ್ಲದ ರಾಜಕೀಯ ಪಕ್ಷವೊಂದಿದೆ ಎಂದರೆ ಅದು ಜನಸಂಘ ಎಂದು. ಇಂದಿನ ಬಿಜೆಪಿಗೆ ಆರ್ಥಿಕ ನೀತಿ ಇದೆ ಎನ್ನುವುದಾದರೆ ಅದು ಎಂತಹ ಆರ್ಥಿಕ ನೀತಿ? ಅದು ಯಾರ ಹಿತ ಕಾಯಲು ಇದೆ? ಎನ್ನಲಿಕ್ಕೆ ನಮ್ಮ ಕಣ್ಣ ಮುಂದಿರುವ ಉತ್ತರ. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಅಂತಹ ಎಡವಟ್ಟುಗಳಷ್ಟೆ...!
ಈ ದೇಶದ ಉದ್ಯಮಿಗಳು, ಬಂಡವಾಳಿಗರು, ವ್ಯಾಪಾರಸ್ಥರು ಮತ್ತು ಪುರೋಹಿತಶಾಹಿಗಳ ಹಿತಕಾಯಲು ಉದಯಿಸಿದ ಪಕ್ಷವೊಂದರ ಸರಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಇಂದು ಶೇಖರ್ ಗುಪ್ತ ಅವರ ಕಾಲಂ ಓದುತಿದ್ದೆ. ಅವರು ಜೋಸೆಪ್ ಹೆಲ್ಲರ್ ಎಂಬ ವಿಡಂಬನಾತ್ಮಕ ಕಾದಂಬರಿಕಾರನ ‘ಕ್ಯಾಚ್-22’ ಬಗ್ಗೆ ಬರೆಯುತ್ತಾ. ಲೆಪ್ಟಿನೆಂಟ್ ಮಿಲೊ ಮಿಂಡರ್ ಬಿಡರ್, ತನ್ನೊಂದಿಗೇ ವ್ಯಾಪಾರ ನಡೆಸುವ ಮೂಲಕ ಖ್ಯಾತಿಗೆ ಒಳಗಾಗಿರುತ್ತಾನೆ.
ಪ್ರತಿಯೊಬ್ಬರೂ ಒಳಗೊಂಡಿರುವ ವರ್ತುಲ ವ್ಯವಸ್ಥೆಯ ವಹಿವಾಟಿನಲ್ಲಿ ಸರಕಾರದ ಬೊಕ್ಕಸದಿಂದ ಹರಿದು ಬರುವ ಲಾಭವು ಕೊನೆಯಲ್ಲಿ ಒಬ್ಬನಲ್ಲಿಯೇ ಸಂಗ್ರಹಗೊಳ್ಳುವ ವಿಶಿಷ್ಟ ವಹಿವಾಟಿನ ಸ್ವರೂಪ ಅದಾಗಿರುತ್ತದೆ. ಹೀಗೆ ಮುಂದುವರೆಯುವ ಕತೆ ಕಡೆಗೆ ಮೋದಿ ಸರಕಾರದ ಆರ್ಥಿಕ ದ್ವಂದ್ವವನ್ನು ಅನಾವರಣಗೊಳಿಸುತ್ತದೆ’.

 ಡಾ.ಸಿ.ಎಸ್.ದ್ವಾರಕಾನಾಥ್
 ಹಿಂ.ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ

ದೇಶದ ಹಿತಕ್ಕಾಗಿ ದಿಟ್ಟ ನಿರ್ಧಾರ

ನೋಟುಗಳನ್ನು ನಿಷೇಧಿಸಿದಾಗ ದೇಶಾದ್ಯಂತ ಹಾಹಾಕಾರ ಎದ್ದಿತ್ತು. ಎಟಿಎಂಗಳಲ್ಲಿ ಕೆಲವು ದಿನಗಳ ಕಾಲ ಕೃತಕ ಕೊರತೆಯನ್ನು ಸೃಷ್ಟಿಸಲಾಯಿತು. ಆದರೆ ದಿನಗಳೆದಂತೆ ಜನತೆಗೆ ಪ್ರಧಾನಿಯವರ ಕ್ರಮದ ಹಿಂದಿನ ನಿಜವಾದ ಉದ್ದೇಶ ಅರ್ಥವಾಯಿತು. ಇದು ಆಗಲೇಬೇಕಿತ್ತು ಎಂದು ಅವರು ಹೇಳತೊಡಗಿದರು. ಕಳ್ಳನೋಟು ಹಾಗೂ ಕಪ್ಪು ಹಣವನ್ನು ಹೊರಗೆಳೆಯಲು ಇದೇ ಆಗಲೇ ಬೇಕಿತ್ತು. ಇದೊಂದು ದಿಟ್ಟತನದ ನಿರ್ಧಾರ ಎಂದು ಅವರಿಗೆ ಮನವರಿಕೆಯಾಗಿತ್ತು.
ಇದೀಗ ಒಂದು ವರ್ಷದ ಬಳಿಕ ಇದರ ಧನಾತ್ಮಕ ಅಂಶಗಳು ಗೋಚರಿಸುತ್ತಿವೆ. ದೇಶದ ಶೇ.90ರಷ್ಟು ಜನರಿಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ಅವರು ಇದರ ಲಾಭವನ್ನು ಪಡೆಯುತಿದ್ದಾರೆ. ಶೇ.10ರಷ್ಟು ಮಂದಿಗೆ ಅಲ್ಪಸ್ವಲ್ಪ ಸಮಸ್ಯೆಯಾದರೂ, ಅವರೂ ಇದಕ್ಕೆ ಹೊಂದಿಕೊಂಡಿದ್ದಾರೆ. ದೇಶದಲ್ಲೀಗ ಕಪ್ಪುಹಣ, ಕಳ್ಳನೋಟುಗಳೆಲ್ಲ ಕಡಿಮೆಯಾಗಿದ್ದು, ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಹೀಗಾಗಿ ದೇಶದ ಹಿತಕ್ಕಾಗಿಯೇ ಪ್ರಧಾನಿ ಮೋದಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆಂಬುದು ಸಾಬೀತಾಗಿದೆ.
 ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ

ದೊಡ್ಡ ಬಂಡವಾಳಿಗರಿಗೆ ಅನುಕೂಲ

ಗರಿಷ್ಠ ಮೊತ್ತದ ನೋಟು ರದ್ದು ಭಯೋತ್ಪಾದಕ ನಿಗ್ರಹ, ಕಪ್ಪುಹಣ ಪತ್ತೆ ಮಾತು ಸುಳ್ಳಾಗಿದೆ. ಅಮಾನ್ಯೀಕರಣದಿಂದ ಕೆಳ ಮಧ್ಯಮ ವರ್ಗ ಹಾಗೂ ಅಸಂಘಟಿತ ವಲಯದ ಬಡವರು ಸೇರಿ ನಿತ್ಯದ ವ್ಯವಹಾರವನ್ನು ನಗದು ಮೂಲಕವೇ ನಡೆಸುತ್ತಿದ್ದ ಗ್ರಾಮೀಣ ಸಮೂಹಕ್ಕೆ ದೊಡ್ಡ ಹೊಡೆತ ಬಿದಿದ್ದೆ.
ಅಂತಾರಾಷ್ಟ್ರೀಯ ಆರ್ಥಿಕ ನೀತಿ ಹೇರಿಕೆಯ ಮೂಲಕ ತೃತೀಯ ರಾಷ್ಟ್ರಗಳಲ್ಲಿನ ಸಣ್ಣ ವ್ಯಾಪಾರಿ ವಲಯದ ಕತ್ತು ಹಿಸುಕಿ ದೊಡ್ಡ ಬಂಡವಾಳಿಗರಿಗೆ ಅನುಕೂಲ ಕಲ್ಪಿಸಲು 500 ರೂ., 1000 ರೂ.ನೋಟುಗಳ ಅಮಾನ್ಯೀಕರಣ ಮಾಡಲಾಗಿದೆ ಎಂಬ ಸತ್ಯವನ್ನು ಸಾಮಾನ್ಯ ಜನರು ಅರಿತುಕೊಳ್ಳಬೇಕು.

-ವಸಂತರಾಜ್, ಜನಶಕ್ತಿ ಸಂಪಾದಕ

ನಕಲಿ ನೋಟುಗಳಿಗೆ ಕಡಿವಾಣ

ನೋಟು ನಿಷೇಧದಿಂದ ನಮ್ಮ ಶತ್ರು ರಾಷ್ಟ್ರಗಳಿಂದ ಬರುತ್ತಿದ್ದ ಬರುತ್ತಿದ್ದ ನಕಲಿ ನೋಟುಗಳಿಗೆ ಕಡಿವಾಣ ಬಿದ್ದಿದೆ. ಇದರಿಂದ ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಸಂಪೂರ್ಣವಾಗಿ ಕಡಿಮೆಯಾಗಿವೆ. ಅಲ್ಲದೆ, ಜನ ಸಾಮಾನ್ಯರು ನೋಟು ನಿಷೇಧದ ವಿಷಯವನ್ನು ಮರೆತು ಪ್ರಸ್ತುತ ಸ್ಥಿತಿಗೆ ಹೊಂದಿಕೊಂಡಿದ್ದಾರೆ.

-ರಾಜೇಶ ನಾಯಕ್, ಬಿಜೆಪಿ ಜಿಲ್ಲಾ ವಕ್ತಾರ

ಕೇಂದ್ರ ಸರಕಾರದ ದುಡುಕಿನ ನಿರ್ಧಾರ

ನೋಟು ಅಮಾನ್ಯೀಕರಣದಿಂದಾಗಿ ದೇಶದ್ರೋಹಿ ಸಂಘಟನೆಗಳು ಸಂಗ್ರಹಿಸಿಟ್ಟಿದ್ದ ಕಪ್ಪುಹಣದ ಚಲಾವಣೆಗೆ ಕಡಿವಾಣ ಬಿದ್ದಿದೆ. ಆದರೆ, ನೋಟು ಅಮಾನೀಕರಣದ ಬೆನ್ನಲ್ಲೇ ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಗೆ ತಂದಿರುವುದು ಕೇಂದ್ರ ಸರಕಾರದ ದುಡುಕಿನ ನಿರ್ಧಾರ.

-ಹರೀಶ್ ಜಿ.ಆಚಾರ್ಯ, ಜಿಲ್ಲಾಧ್ಯಕ್ಷರು, ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್

ಒಳ್ಳೆಯ ಕ್ರಮವೇ. ಆದರೆ, ಸಿದ್ಧತೆ ಇರಲಿಲ್ಲ

ನೋಟು ನಿಷೇಧ ಲಾಭದಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿತ್ತು. ನೋಟು ನಿಷೇಧದ ಮೂಲಕ ಬಡವರ ಉದ್ಧಾರ, ಧನಿಕರ ಕಪ್ಪುಹಣ ಸಂಹಾರ ಆಗಬೇಕಿತ್ತು. ಆದರೆ, ಅದಾಗಲಿಲ್ಲ. ಕಪ್ಪುಹಣ ವಿವಿಧ ಮಾರ್ಗಗಳ ಮೂಲಕ ಬ್ಯಾಂಕಿಗೆ ಜಮಾ ಆಗಿ ಹೋಯಿತು. ಹೀಗೆ ಜಮಾ ಆದ ಹಣವನ್ನು ನಿರ್ವಹಿಸುವ ಕಷ್ಟ ಬ್ಯಾಂಕ್ ಮತ್ತು ತೆರಿಗೆ ಇಲಾಖೆಯ ಮುಂದಿದೆ. ಲಾಭ ಆಗಬೇಕಿತ್ತು. ಆಗಲಿಲ್ಲ. ಇದರಿಂದ ನಷ್ಟವೇ ಆಗಿದೆ. ಹೊಸ ನೋಟುಗಳ ಮುದ್ರಣ, ಹಳೆ ನೋಟುಗಳ ನಾಶ ಮತ್ತು ಇದನ್ನೆಲ್ಲಾ ನಿರ್ವಹಿಸಲು ಬ್ಯಾಂಕ್ ಮತ್ತು ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಸಂಬಳ ಹೀಗೆ ದೇಶಕ್ಕೆ ನಷ್ಟವೇ ಆಗಿದೆ.

ಒಳ್ಳೆಯ ಕ್ರಮವೇ. ಆದರೆ, ಸಿದ್ಧತೆ ಇರಲಿಲ್ಲ. ನಮ್ಮ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಒಳ ವೈರಿಯಾಯಿತು. ಜನ ಸಾಮಾನ್ಯನ ಸಹಕಾರದ ನಡುವೆಯೂ ನೋಟು ನಿಷೇಧ ಒಂದು ಸರಕಾರಿ ಕಾರ್ಯಕ್ರಮದಂತೆ ಆಗಿ ಹೋಗಿದ್ದು ದುರಂತ. ಉಳ್ಳವರ ಖಜಾನೆಯಲ್ಲಿ ಹಳೆ ನೋಟುಗಳ ಭಾಗದಲ್ಲಿ ಹೊಸ ನೋಟುಗಳು ಶೇಖರವಾದವು. ಜನ ಸಾಮಾನ್ಯ ಎಂದಿನಂತೆ ಹಣದುಬ್ಬರದ ನಡುವಿನ ಜೀವನವನ್ನು ಒಪ್ಪಿಕೊಂಡ

 ಶಿವಕುಮಾರ್ ಚಾರ್ಟರ್ಡ್ ಅಕೌಂಟೆಂಟ್, ಬೆಂಗಳೂರು

ಪಟ್ಟ ಬವಣೆಗೆ ಪ್ರತಿಫಲ ಇನ್ನೂ ಸಿಕ್ಕಿಲ್ಲ

ಒಂದು ಉತ್ತಮ ಯೋಜನೆ ಸರಕಾರದ ಪೂರ್ವ ತಯಾರಿ ಇಲ್ಲದೆ ವಿಫಲವಾಗಿದೆ. ನೋಟು ಅಮಾನ್ಯೀಕರಣ ಕಪ್ಪು ಹಣ, ಖೋಟಾ ನೋಟು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಹರಿದುಬರುತ್ತಿದ್ದ ಹಣಕಾಸಿನ ಮೂಲವನ್ನು ಕಡಿತಗೊಳಿಸುವುದು ಎಂದಿದ್ದ ಸರಕಾರದ ಮಾತು ಹುಸಿಯಾಗಿದೆ. ನೋಟು ಅಮಾನ್ಯೀಕರಣದಿಂದ ಹೊಡೆತದಿಂದ ಸಣ್ಣ, ಮಧ್ಯಮ ಮತ್ತು ಕಿರು ಕೈಗಾರಿಕೆಗಳು, ರಿಯಲ್ ಎಸ್ಟೇಟ್ ವಲಯ, ಸಹಕಾರಿ ಕ್ಷೇತ್ರ ಇನ್ನೂ ಚೇತರಿಸಿಕೊಂಡಿಲ್ಲ.

ಉದ್ಯೋಗ ಸೃಷ್ಟಿಯ ಮೇಲೆಯೂ ಹೊಡೆತ ಬಿದ್ದಿದ್ದು, ಆರ್ಥಿಕ ಬೆಳವಣಿಗೆಯೂ ಕುಸಿದಿದೆ. ಬಹುತೇಕ ರಾಜ್ಯ ಸರಕಾರಗಳಿಗೆ ಸ್ಟಾಂಪ್ ಡ್ಯೂಟಿಯಿಂದ ಬೊಕ್ಕಸಕ್ಕೆ ಬರುತ್ತಿದ್ದ ಹಣ ಕಡಿಮೆಯಾಗಿದೆ. ಬ್ಯಾಂಕ್‌ಗಳಲ್ಲಿ ಹಣವಿದ್ದರೂ ಸಾಲ ಸೃಷ್ಟಿಯಾಗುತ್ತಿಲ್ಲ. ಮೇಲ್ನೋಟಕ್ಕೆ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಗದುರಹಿತ ಹಾಗೂ ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸರಕಾರ ಸೈಬರ್ ಕ್ರೈಮ್ ತಡೆಯುವಲ್ಲಿ ವಿಫಲವಾದರೆ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಲಿದೆ. ಸಾಮಾನ್ಯ ಜನ ಪಟ್ಟ ಬವಣೆಗೆ ಪ್ರತಿಫಲ ಇನ್ನೂ ಸಿಕ್ಕಿಲ್ಲ.
 ಡಾ.ಎಸ್.ಆರ್.ಕೇಶವ್, 
ಅರ್ಥಶಾಸ್ತ್ರ ಪ್ರಾಧ್ಯಾಪಕರು, ಬೆಂಗಳೂರು ವಿವಿ

ಆರ್ಥಿಕ ಭಯೋತ್ಪಾದನೆ!

‘ಚರಿತ್ರೆಯ ಈಚಿನ ಅತಿ ಭೀಕರ ಅನಾಹುತಗಳನ್ನು ಆಯಾ ದಿನಾಂಕಗಳಿಂದ ನೆನೆಸಿಕೊಳ್ಳುವ ವಾಡಿಕೆ ಹುಟ್ಟಿಕೊಂಡಿದೆಯಲ್ಲ, ‘ನೈನ್ ಇಲವೆನ್’, ‘ಟ್ವೆಂಟಿಸಿಕ್ಸ್ ಇಲವೆನ್’.... ಹಾಗೇ ನೋಟು ರದ್ದಿನ ಅನಾಹುತವನ್ನೂ ‘ಎಯ್ಟ್ ಇಲವೆನ್’ ಎಂದು ನೆನೆಸಿಕೊಂಡರೇನೂ ತಪ್ಪಿಲ್ಲ. ಯಾಕೆಂದರೆ ಸರಕಾರವೇ ಇಂಥದೊಂದು ಆರ್ಥಿಕ ಭಯೋತ್ಪಾದನೆಯ ಕೃತ್ಯ ನಡೆಸಿದ ಮತ್ತೊಂದು ಉದಾಹರಣೆಯೇ ದೇಶದಲ್ಲಿಲ್ಲ.
ಯಾವ ಪೂರ್ವಸಿದ್ಧತೆಯೂ ಇಲ್ಲದೆ, ರಿಸರ್ವ್ ಬ್ಯಾಂಕನ್ನೂ ಕಡೆಗಣಿಸಿ, ಏಕಾಏಕಿ ಶೇಕಡಾ 86ರಷ್ಟು ನಗದನ್ನು ಹಿಂತೆಗೆದುಕೊಂಡು, ಅಸಂಘಟಿತ ಅರ್ಥವ್ಯವಸ್ಥೆಯನ್ನು ಸಂಪೂರ್ಣ ನಾಮಾವಶೇಷ ಮಾಡಿ, ನೂರಕ್ಕೂ ಹೆಚ್ಚು ಜನ ಬರೀ ಕ್ಯೂಗಳಲ್ಲಿ ಕೊನೆಯುಸಿರೆಳೆಯುವಂತೆ ಮಾಡಿ, ಆ ಹೊಡೆತಕ್ಕೆ ದೇಶವಿನ್ನೂ ಏದುಬ್ಬಸಪಡುವಾಗ, ಸೊಲ್ಲೆತ್ತಿದರೆ ‘ಗಡಿಗಳಲ್ಲಿ ನಮ್ಮ ಯೋಧರು ಕಾಯುತ್ತಿಲ್ಲವೇ?’ ಎಂಬ ಅಸಂಬದ್ಧ ದುರಹಂಕಾರದ ಮಾತುಗಳನ್ನು ಉಚಾಯಿಸಿಯೂ, 56 ಇಂಚು ಎದೆ ಉಬ್ಬಿಸಿ ತಿರುಗುವವರನ್ನು ಕೊಂಡಾಡುತ್ತಿರುವ ಭಕ್ತಗಣವನ್ನು ಪಡೆದ ಭಾರತವೇ ಧನ್ಯ ಧನ್ಯ...!’

 ಎನ್.ಎಸ್.ಶಂಕರ್, ಹಿರಿಯ ಪತ್ರಕರ್ತ, ಚಿತ್ರ ನಿರ್ದೇಶಕ, ಬೆಂಗಳೂರು

ಅಕ್ರಮವಾಗಿ ಸಂಗ್ರಹಿಸಿದ್ದ ಹಣವೆಲ್ಲ ನಾಶ

ನೋಟ್ ನಿಷೇಧದಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಹಣವೆಲ್ಲ ನಾಶವಾಗಿದೆ. ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಉಳಿದುಕೊಂಡಿದೆ. ಇದರಿಂದ ಜನರಿಗೆ ಅನುಕೂಲವಾಗಿದೆ. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಯುವುದು ತಪ್ಪುತ್ತದೆ.

 ಗುರುಮೂರ್ತಿ ಬೈಯಪ್ಪನಹಳ್ಳಿ, ಶಿಡ್ಲಘಟ್ಟ

ಆಶಾದಾಯಕ ಬೆಳವಣಿಗೆ

ನೋಟು ನಿಷೇಧದಿಂದ ಸದ್ಯ ಆರ್ಥಿಕ ವ್ಯವಹಾರಕ್ಕೆ ಸ್ವಲ್ಪ ಮಟ್ಟಿನ ಹೊಡೆತ ಬಿದ್ದಿರಬಹುದು. ಆದರೆ ಅದು ತಾತ್ಕಾಲಿಕ. ನಗದು ವ್ಯವಹಾರ ಕಡಿಮೆಯಾದರೂ ಇ-ಕಾಮರ್ಸ್ ವ್ಯವಹಾರ ವೃದ್ಧಿಯಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ಭವಿಷ್ಯದಲ್ಲಿ ಈಗಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ.

 ವಾಟಿಕಾ ಪೈ, ಅಧ್ಯಕ್ಷೆ, ಕೆನರಾ ಛೇಂಬರ್ ಆಫ್ ಕಾಮರ್ಸ್, ಮಂಗಳೂರು

ನಿರುದ್ಯೋಗ ಹೆಚ್ಚಳ

ನೋಟು ಬ್ಯಾನ್ ಮಾಡಿದ್ದು ಒಳ್ಳೆಯದೇ ಆದರೆ, ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಬ್ಯಾನ್ ಮಾಡಿದ್ದು ಸರಿಯಲ್ಲ. ದಿಢೀರ್ ಆಗಿ ನೋಟ್ ಬ್ಯಾನ್ ಮಾಡಿದ್ದರಿಂದ ಹಾಗೂ 2 ಸಾವಿರ ರೂ. ಹೊಸ ನೋಟುಗಳನ್ನು ಜಾರಿಗೆ ತಂದಿದ್ದರಿಂದ ಬಡವರು ಹಾಗೂ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಹಾಗೂ ದೇಶದಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋದವು. ಇದರಿಂದ ನಿರುದ್ಯೋಗ ಹೆಚ್ಚಾಯಿತು’

 ಶಂಕರಪ್ಪ ಹೈಕೋರ್ಟ್, ಹಿರಿಯ ನ್ಯಾಯವಾದಿ

ಹುಸಿಯಾದ ನಿರೀಕ್ಷೆ

ನೋಟ್ ನಿಷೇಧದಿಂದಾಗಿ ಕಪ್ಪು ಹಣವು ನಿರ್ಮೂಲನೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಬಿಳುಪಾಗಿಸಿಕೊಂಡಿದ್ದಾರೆ. ಅದನ್ನು ತಡೆಯಲು ಕೇಂದ್ರ ಸರಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಸುಧಾರಣೆಯಾಗಿಲ್ಲ.

 ಪ್ರೇಮ.ಎಸ್. ವಿದ್ಯಾರ್ಥಿನಿ ಶಿಡ್ಲಘಟ್ಟ

ಭವಿಷ್ಯದಲ್ಲಿ ಒಳ್ಳೆಯ ಪರಿಣಾಮ

ಭಾರತ ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿದ್ದು ನೋಟು ನಿಷೇಧದಿಂದ ನಮ್ಮ ದೇಶಕ್ಕೆ ಒಳಿತಾಗಿದೆ. ಸದ್ಯಕ್ಕೆ ನೋಟು ನಿಷೇಧದಿಂದ ದೇಶ ಮತ್ತು ರಾಜ್ಯಕ್ಕೆ ಲಾಭ ನಷ್ಟವೇನು ಕಾಣುತ್ತಿಲ್ಲ.ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಪರಿಣಾಮ ಬಿರಲಿದೆ.

 ಟಿ.ಪಿ.ವಿಶ್ವನಾಥ್, ಉಪ ಪ್ರಾಂಶುಪಾಲರು ವಿದ್ಯೋಧಯ ಪದವಿ ಪೂರ್ವ ಕಾಲೇಜು ತಿ.ನರಸೀಪುರ

ಕಷ್ಟಗಳು ಮತ್ತಷ್ಟು ಹೆಚ್ಚಿವೆ

ನೋಟು ನಿಷೇಧದ ಕ್ರಮದ ಹಿಂದೆ ಯಾವುದೇ ಆರ್ಥಿಕ ಚಿಂತನೆ ಇದ್ದಂತೆ ಕಾಣುತ್ತಿಲ್ಲ. ಜನಸಾಮಾನ್ಯರ ಕಷ್ಟಗಳು ಪರಿಹಾರವಾಗುವ ಬದಲಿಗೆ ಕಷ್ಟಗಳು ಮತ್ತಷ್ಟು ಹೆಚ್ಚಿವೆ. ನೋಟು ನಿಷೇಧದಿಂದ ಕಪ್ಪುಹಣ, ಭ್ರಷ್ಟಾಚಾರಗಳನ್ನು ತಡೆಯಲಿಕ್ಕೆ ಸಾಧ್ಯ ಎಂಬ ಸರಕಾರದ ಈ ವಾದದ ತಲೆಬುಡವೇ ಅರ್ಥವಾಗುತ್ತಿಲ್ಲ. ಸರಕಾರ ತೆರಿಗೆ ವಂಚಕರನ್ನು ಪತ್ತೆಹಚ್ಚಬೇಕೆಂದರೆ ಸಂಬಂಧಿತ ಇಲಾಖೆಗಳ ಆಡಳಿತವನ್ನು ಸರಿಪಡಿಸಬೇಕು.

 ಎ.ಶಶಿಕುಮಾರ್ ಶಿಡ್ಲಘಟ್ಟ

ಭವಿಷ್ಯದ ದಿನಗಳಲ್ಲಿ ಇದಕ್ಕೆ ಪರಿಹಾರ

ನೋಟು ಅಮಾನ್ಯದ ಉದ್ದೇಶ ಒಳ್ಳೆಯದಿರಬಹುದು. ಆದರೆ, ಮಾಡಿದ ಸಂದರ್ಭ ಅದಕ್ಕೆ ಪೂರಕವಾಗಿರಲಿಲ್ಲ. ಅದರ ಬೆನ್ನಿಗೆ ಜಿಎಸ್‌ಟಿ ಕೂಡ ಬಂತು. ಇದು ವ್ಯಾಪಾರಿಗಳ ಆರ್ಥಿಕ ಸ್ಥಿತಿಯ ಮೇಲೆ ಭಾರೀ ಹೊಡೆತವನ್ನೇ ನೀಡಿತು. ವ್ಯಾಪಾರ-ವಹಿವಾಟು ಪ್ರತಿಯೊಂದು ಕ್ಷೇತ್ರದೊಂದಿಗೆ ಹೊಂದಾಣಿಕೆಯಲ್ಲೇ ನಡೆಯುತ್ತಿದೆ. ಹಾಗಾಗಿ ಶ್ರೀಮಂತನಿಂದ ಹಿಡಿದು ಬಡವರ ಮೇಲೆ ಇದರ ಪರಿಣಾಮ ಅಪಾರ. ಸದ್ಯ ಇದರಿಂದ ತೊಂದರೆಯಾದರೂ ಭವಿಷ್ಯದ ದಿನಗಳಲ್ಲಿ ಇದಕ್ಕೆ ಪರಿಹಾರ ಸಿಗಬಹುದೇನೋ?
 ಹಾಜಿ ಎಸ್.ಎಂ. ರಶೀದ್, ಅಧ್ಯಕ್ಷರು, ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ-ಮಂಗಳೂರು)

ಮೋದಿಯವರ ಹುಲಿ ಸವಾರಿ

ಮೋದಿಯವರ ಕೂಟ 2013ರ ನಂತರ ನೀಡುತ್ತಾ ಬಂದ ಚಿತ್ರಣ ಹಾಗೂ ಭರವಸೆಗಳು ವಾಸ್ತವಕ್ಕೆ ಬಲು ದೂರವಾಗಿದ್ದವು. ಆದರೆ, ಜನರನ್ನು ನಂಬಿಸಿದ್ದರಿಂದ ಮತ್ತು ಈ ಸುಳ್ಳುಗಳನ್ನು ದೊಡ್ಡ ಗಂಟಲಲ್ಲಿ ಪ್ರಚಾರ ಮಾಡಿದ ಭಾರೀ ದೊಡ್ಡ ಭಕ್ತ ಪಡೆಗಳನ್ನು ಸಾಕಿದ್ದರಿಂದ ಅವರೇ ತೊಂದರೆಗೆ ಸಿಲುಕಿದ್ದಾರೆ. ಇದೊಂದು ಹುಲಿ ಸವಾರಿ.

ಅದನ್ನು ತಣಿಸಬೇಕೆಂದರೆ ಹೊಸ ಹೊಸ ಸರ್ಕಸ್‌ಗಳನ್ನು ಮಾಡುತ್ತಾ ಇರಬೇಕಾಗುತ್ತದೆ. ಏಕಕಾಲದಲ್ಲಿ ತಾವು ಯಾರಿಗಾಗಿ ಅಧಿಕಾರಕ್ಕೇರಿದರೋ ಆ ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯಬೇಕು. ಇನ್ನೊಂದೆಡೆ ಭಕ್ತಗಣದ ಮುಂದೆ ರಾಷ್ಟ್ರಹಿತದ ಪೋಸು ದಿನೇ ದಿನೇ ದೊಡ್ಡ ಕಟೌಟಿನಲ್ಲಿ ಬಿತ್ತರವಾಗಬೇಕು.
ನೋಟು ರದ್ದತಿ, ಮಧ್ಯರಾತ್ರಿಯಲ್ಲಿ ಜಿಎಸ್‌ಟಿ ಎಲ್ಲವೂ ಅದರ ಭಾಗವೇ. ಹಾಗೆಯೇ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಪಿಎಂಕೆವಿವೈ ಇತ್ಯಾದಿಗಳು. ಈ ಆಟ ಹೆಚ್ಚು ದಿನ ನಡೆಯುವುದಿಲ್ಲ. ಹುಲಿಯನ್ನು ತಣಿಸುವುದು ಕಷ್ಟ’

 ಡಾ.ವಾಸು, ಸಾಮಾಜಿಕ ಹೋರಾಟಗಾರ

ನೋಟು ನಿಷೇಧ, ಜಿಎಸ್‌ಟಿಯಿಂದ ಲಾಭವಾಗಿಲ್ಲ

ನೋಟು ಅಮಾನ್ಯೀಕರಣದಿಂದ ಹೆಚ್ಚಿನ ಪರಿಣಾಮ ಬೀರಿದ್ದು, ದುರ್ಬಲ ವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ. ಜನರ ಬಳಿ ಹಣವಿಲ್ಲದೆ ವ್ಯಾಪಾರ ವಹಿವಾಟಿಗೂ ಹೊಡೆತ ಬಿತ್ತು. ಇದೆಲ್ಲದರಿಂದ ಹೊರ ಬರುವಷ್ಟರಲ್ಲಿ ಜಿಎಸ್‌ಟಿಯ ಏಟು ಬಿತ್ತು. ಜಿಎಸ್‌ಟಿ ಕ್ರಮವನ್ನು ಅನುಸರಿಸಲು ಸರಕಾರವೇ ಸಿದ್ಧವಿಲ್ಲ. ನೋಟು ಅಮಾನ್ಯದಿಂದ ರಾಷ್ಟ್ರಕ್ಕೇನು ಲಾಭವಿಲ್ಲ. ಆದರೆ ಎಲ್ಲರೂ ತಮ್ಮ ಹಣಕ್ಕೆ ದಾಖಲೆ ಇಡಲು ಅನುಕೂಲವಾಯಿತು. ಆದರೂ ಕಪ್ಪುಹಣವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

 ಸುರೇಶ್ ಕುಮಾರ್ ಜೈನ್, ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ

ಪೂರ್ವಸಿದ್ಧತೆ ಮತ್ತು ದೂರದೃಷ್ಟಿಯ ಕೊರತೆ

ನೋಟು ನಿಷೇಧದಿಂದ ಸಾಮಾನ್ಯ ಜನರ ವಹಿವಾಟಿಗೆ ಧಕ್ಕೆ ಉಂಟಾಗಿದೆ. ನಿರುದ್ಯೋಗ ಸಮಸ್ಯೆ ಉದ್ಭವವಾಗಿದೆ, ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗಾಗಿ ಜಿಡಿಪಿ ದರ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೀರಿಕ್ಷೆ ಹುಸಿಯಾಗಿದ್ದು, ಕಪ್ಪು ಹಣ ಹೊರತೆಗೆಯುತ್ತೀನಿ ಎಂದು ರೈತರು, ಸಾಮನ್ಯ ವರ್ಗದವರು, ಮಧ್ಯಮ ವರ್ಗದವರು ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಮೇಲ್ನೋಟಕ್ಕೆ ಒಳ್ಳೆಯ ಕ್ರಮವಾದರೂ ಪೂರ್ವಸಿದ್ಧತೆ ಮತ್ತು ದೂರದೃಷ್ಟಿ ಇಲ್ಲದೆ ವಿಫಲರಾಗಿದ್ದಾರೆ.

 ಬಡಗಲಪುರ ನಾಗೇಂದ್ರ, ರೈತ ಮುಖಂಡ

ನೋಟು ನಿಷೇಧದಿಂದ ಲಾಭ

ನೋಟು ನಿಷೇಧ ಕ್ರಮವು ಉತ್ತಮ ಹಾಗೂ ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವೂ ಹೌದು. ದೇಶ ಮತ್ತು ರಾಜ್ಯಕ್ಕೆ ನೋಟು ನಿಷೇಧದಿಂದ ಲಾಭವಾಗಿದೆ. ಭ್ರಷ್ಠ ರಾಜಕಾರಣಿಗಳು ಹಾಗೂ ಅಕ್ರಮ ಸಂಪತ್ತು ಕ್ರೋಢಿಕರಿಸಿದ್ದ ಉದ್ಯಮಿಗಳ ಕಪ್ಪು ಹಣವನ್ನು ನಾಶ ಪಡಿಸಲು ಒಳ್ಳೆಯ ಯೋಜನೆ. ನೋಟು ನಿಷೇಧದಿಂದ ಸಾಕಷ್ಟು ತೆರಿಗೆ ಬಂದು ದೇಶ ಮತ್ತು ನಾಡಿಗೆ ಲಾಭವಾಗಿದೆ. ಜಮ್ಮು ಕಾಶ್ಮೀರ ಕಣಿವೆ ರಾಜ್ಯಗಳಿಗೆ ಅಕ್ರಮ ಹಣ ಅರಿದು ಬರುವುದು ಸ್ಥಗಿತಗೊಂಡಿರುವುದರಿಂದ ಸೈನಿಕರ ಮೇಲೆ ಕಲ್ಲೆಸತ ಕಡಿಮೆಯಾಗಿದೆ.

ರಂಗು ನಾಯಕ್, ಬಿಜೆಪಿ ಮೈಸೂರು ಜಿಲ್ಲಾ ಎಸ್ಟಿ ಘಟಕದ ಅಧ್ಯಕ್ಷ

ಬೇಕಾಗಿತ್ತಾ ಎನ್ನುವ ಪ್ರಶ್ನೆ

ದಿಲ್ಲಿಯ ಬದಲು ಗುಜರಾತಿನ ಗಾಂಧಿನಗರಕ್ಕೆ ರಾಜಧಾನಿಯನ್ನು ಬದಲಾಯಿಸುತ್ತೇನೆ ಎಂದಿದ್ದರೆ, ಆಗುವುದಕ್ಕಿಂತ ದೊಡ್ಡ ಆಘಾತವಾಗಿದೆ ಈ ನೋಟು ಅಮಾನ್ಯೀಕರಣದಿಂದ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ನಾನು, ನವೆಂಬರ್ ಎಂಟರ ನಂತರದ ದಿನಗಳನ್ನು ಎದುರಿಸಲು ಮೂವತ್ತೇಳು ವರ್ಷಗಳ ಸಮಸ್ತ ಅನುಭವವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾಯಿತು. ಜೊತೆಗೆ ಸಾವಿರದ ನೋಟಿನ ಬದಲಿಗೆ ಎರಡು ಸಾವಿರದ ಹೊಸ ನೋಟು ಬಿಡುಗಡೆ ಮಾಡಿದ್ದು ಯಾರೂ ಮಾನ್ಯ ಮಾಡದ ಕ್ರಮ. ಇಂದಿಗೂ ಅದರ ಉದ್ದೇಶ ನಿಗೂಢವಾಗಿಯೇ ಇದೆ. ಎರಡು ಸಾವಿರದ ನೋಟಿಗೆ ಚಿಲ್ಲರೆ ಪಡೆಯಲು ಬಸವಳಿದದ್ದೇ ಆಯ್ತು. ಹಣ ತಂದು ಹಂಚುವುದೇ ಬ್ಯಾಂಕರುಗಳ ಕೆಲಸವಾಯಿತು. ಬೇರೆ ಬ್ಯಾಂಕಿಂಗ್ ಕೆಲಸಗಳು ಸ್ತಬ್ಧವಾದವು. ಒಮ್ಮಿಂದೊಮ್ಮೆಲೆ ಆರ್ಥಿಕ ವಹಿವಾಟು ನಿಧಾನಗತಿಗೆ ಜಾರಿದ್ದು ಇನ್ನೂ ಮೇಲೇಳಲು ಪರದಾಡುತ್ತಿದೆ. ಸಹಕಾರಿ ರಂಗದ ಬ್ಯಾಂಕ್‌ಗಳು ತಮ್ಮ ಹಳೆ ನೋಟಿಗೆ ಹೊಸ ಪಡೆಯದೇ ಹೋದದ್ದು ಕೇಂದ್ರ ಸರಕಾರದ ಎಡವಟ್ಟಿಗೆ ಹಿಡಿದ ಕೈಗನ್ನಡಿ. ಇಂದಿಗೂ ಆ ಬ್ಯಾಂಕ್‌ಗಳು ಸಹಜ ಸ್ಥಿತಿಗೆ ಮರಳಲು ಪರದಾಡುತ್ತಿವೆ. ಅಂದು ಮುಚ್ಚಿದ ಸಾವಿರಾರು ಎಟಿಎಂಗಳು ಇಂದಿಗೂ ಪುನರಾರಂಭವಾಗದಿರುವುದು ಶೋಚನೀಯ ಸಂಗತಿ.
ಇದರಿಂದ ನಿರುದ್ಯೋಗ ಹೆಚ್ಚುತ್ತಾ ಹೋಗಿ, ದೇಶದ ಆರ್ಥಿಕತೆ ಹಾಳಾಗಿ ಹೋಗಿದೆ. ಆಡಳಿತದ ಅನನುಭವವನ್ನು, ಜನರ ಗಮನ ಬೇರೆಡೆಗೆ ತಿರುಗಿಸಲು, ತಮ್ಮ ಕಳಪೆ ಸಾಧನೆ ಮುಚ್ಚಿಡಲು ಅಮಾನ್ಯೀಕರಣವೇ ಬೇಕಾಗಿತ್ತಾ ಎನ್ನುವ ಪ್ರಶ್ನೆ ಒಂದು ವರ್ಷವಾದರೂ ಇನ್ನೂ ಕಾಡುತ್ತಲೇ ಇದೆ’

-ಟಿ.ರಾಮಚಂದ್ರಪ್ಪ, ತುಂಗಭದ್ರ ಗ್ರಾಮೀಣ ಬ್ಯಾಂಕ್ ಮ್ಯಾನೇಜರ್, ಹೊಸಪೇಟೆ

ಜನ ವಿರೋಧಿ ಕ್ರಮ

ನೋಟ್ ಬ್ಯಾನ್‌ನಿಂದಾಗಿ ಭ್ರಷ್ಟಾಚಾರ ದ್ವಿಗುಣವಾಗಿದೆ. ಅಪರಾಧಗಳು ಹೆಚ್ಚಾಗಿವೆ. ಸಣ್ಣ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ದಿನಗೂಲಿಗಳು ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ನರೇಂದ್ರ ಮೋದಿ ಅವರು ಯಾವುದೇ ಮುಂದಾಲೋಚನೆ ಮಾಡದೆ ನೋಟ್ ಬ್ಯಾನ್ ಮಾಡಿರುವುದು ಜನ ವಿರೋಧಿ ಕ್ರಮವಾಗಿದೆ.
 ಸೂರ್ಯ ಮುಕುಂದರಾಜ್, ಹೈಕೋರ್ಟ್ ವಕೀಲ ಬೆಂಗಳೂರು

ಕಾರ್ಪೊರೇಟ್ ಹಿತಾಸಕ್ತಿ

‘ಕಾರ್ಪೊರೇಟ್ ಕಂಪೆನಿಗಳಿಗೆ ದೇಶದ ಸಂಪತ್ತನ್ನು ಒತ್ತೆಯಾಗಿಡುವುದಕ್ಕಾಗಿ ಕೇಂದ್ರ ಸರಕಾರ ನೋಟು ನಿಷೇಧ ಮಾಡಿದೆ. ಕ್ಯಾಶ್‌ಲೆಸ್ ಭಾರತವನ್ನು ನಿರ್ಮಿಸುವ ಮೂಲಕ ಸಣ್ಣಪುಟ್ಟ ವ್ಯಾಪಾರಿಗಳನ್ನು ಸರ್ವನಾಶ ಮಾಡುವಂತಹ ಕುತಂತ್ರ ನಡೆಯುತ್ತಿದೆ. ಹೀಗಾಗಿ ಕಳೆದ ಒಂದು ವರ್ಷದಿಂದ ರೈತರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ಸರಿಯಾಗಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸನೋಟು ನಿಷೇಧದ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದಿದ್ದು ಕೇವಲ ಸುಳ್ಳಿನ ಕಂತೆಯಷ್ಟೆ’

 ವೈ.ಜೆ.ರಾಜೇಂದ್ರ, ಪಿಯುಸಿಎಲ್ ಅಧ್ಯಕ್ಷ ಬೆಂಗಳೂರು

ಕಟಿಂಗ್ ಶಾಪ್‌ಗಳು ಡಲ್

ನೋಟ್ ಬ್ಯಾನ್‌ನಿಂದಾಗಿ ಕಟಿಂಗ್ ಶಾಪ್‌ಗಳು ಡಲ್ ಹೊಡೆದಿದ್ದು, ಪ್ರತಿ ತಿಂಗಳು ಕಟಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ ಜನರೂ ಈಗ ಎರಡ್ಮೂರು ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಇದರಿಂದ, ನಮ್ಮ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸೀಲುಕಿಕೊಂಡಿವೆ.

 ಎಂ.ರಾಜು, ಕಟಿಂಗ್ ಶಾಪ್ ಮಾಲಕ ಬೆಂಗಳೂರು

ನೋಟು ನಿಷೇಧದ ಅವಶ್ಯಕತೆ ಇರಲಿಲ್ಲ

ನೋಟು ನಿಷೇಧದಿಂದ ಸಣ್ಣ ವ್ಯಾಪಾರಿಗಳಾದ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬಿರಿದೆ. ವ್ಯಾಪಾರ ಕುಸಿತದಿಂದ ನಾವು ಹಾಕಿದ ಬಂಡವಾಳ ಎತ್ತಲು ಸಾಧ್ಯವಾಗದೆ ಸಾಲಗಾರರಾದೆವು. ಅಸ್ಪತ್ರೆ ವ್ಯಚ್ಚ ಮಕ್ಕಳ ವಿದ್ಯಾಭ್ಯಾಸ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಹಣ ಹೊಂದಿಸಲಾರದೆ ಹಲವಾರು ಸಂಕಷ್ಟಗಳನ್ನು ಎದುರಿಸಿದೆವು. ದೇಶಕ್ಕಾದ ಲಾಭ ನಷ್ಟಕ್ಕಿಂತ ನಮ್ಮ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಜೀವನೋಪಾಯಕ್ಕೆ ಕೆಲಸ ಅರಸಿ ಊರು ಊರು ಅಲೆಯುವಂತಾಯಿತು. ನೋಟು ನಿಷೇಧದಿಂದ ನಮಗೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿದ್ದೆವು. ಅಕ್ರಮ ಸಂಪತ್ತಿನ ತೆರಿಗೆ ಹಣ ಬಡವರ ಉದ್ದಾರಕ್ಕೆ ಬಳಸುತ್ತಾರೆಂಬ ನಂಬಿಕೆ ಇತ್ತು. ಆದರೆ ಅದು ಹುಸಿಯಾಗಿದೆ. ಆದ್ದರಿಂದ ನೋಟು ನಿಷೇಧದ ಅವಶ್ಯಕತೆ ಇರಲಿಲ್ಲ.

 ಸಾವಿತ್ರಿ, ತರಕಾರಿ ವ್ಯಾಪಾರಿ ತಿ.ನರಸೀಪುರ

ರೈತರು ನಿಟ್ಟುಸಿರು ಬಿಡುವಂತಾಗಿದೆ.

ಪ್ರಧಾನಿಯವರು ಒಂದು ಒಳ್ಳೆಯ ಉದ್ದೇಶದಿಂದ ನೋಟ್ ನಿಷೇಧವನ್ನು ಜಾರಿಗೊಳಿಸಿದ್ದಾರೆ. ಇದರಿಂದ ಆಂತರಿಕ ಭದ್ರತೆ ಹಾಗೂ ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ಬಗ್ಗೆ ಜನರಿಗೆ ಪ್ರಧಾನಿ ಅವರ ಮೇಲೆ ನಂಬಿಕೆಯಿದ್ದು, ಧನಾತ್ಮಕವಾಗಿ ಸ್ಪಂದಿಸಿದ್ದಾರೆ. . ಕೃಷಿರಂಗದಲ್ಲಿ ಒಂದೊಂದು ರೀತಿಯಲ್ಲಿ ತೆರಿಗೆಯಿತ್ತು. ರೈತರು ಬೆಳೆದ ಬೆಳೆಯನ್ನು ಇನ್ನೊಂದು ರಾಜ್ಯಕ್ಕೆ ಮಾರಾಟ ಮಾಡುವಾಗ ಅಲ್ಲಿಯೂ ಇನ್ನೊಂದು ರೀತಿಯ ತೆರಿಗೆ ಪಾವತಿಸುವ ವ್ಯವಸ್ಥೆಯಿತ್ತು. ಆದರೆ ಕೃಷಿಕ್ಷೇತ್ರದಲ್ಲಿ ಶೇ.0ರಷ್ಟು ತೆರಿಗೆ ಮತ್ತು ಒಂದೇ ರಿತಿಯ ಜಿಎಸ್‌ಟಿ ಜಾರಿಗೊಳಿಸಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.

 ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು, ಪ್ರಗತಿಪರ ಕೃಷಿಕರು, ಬಂಟ್ವಾಳ

ಮುಂದೊಂದು ದಿನ ಎಲ್ಲರೂ ಸ್ವಾಗತಿಸಲಿದ್ದಾರೆ

ಜನರಿಗೆ ಅಥವಾ ಗ್ರಾಹಕರಿಗೆ ಈಗ ಸ್ವಲ್ಪ ಸಮಸ್ಯೆಯಾಗಬಹುದು. ಆದರೆ ಭವಿಷ್ಯದಲ್ಲಿ ಇದರಿಂದ ಒಳ್ಳೆಯ ಪರಿಣಾಮವಿದೆ. ನೋಟ್ ನಿಷೇಧಿಸಿದ ತಕ್ಷಣ ಹಲವಾರು ಮಂದಿ ವಿರುದ್ಧ ಅಪಸ್ವರ ಎತ್ತಿದರು. ಕಳೆದೊಂದು ವರ್ಷದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಸ್ವಲ್ಪ ಕೆಟ್ಟ ಪರಿಣಾಮ ಬೀರಿದರೂ ಕೂಡ ಮುಂದೊಂದು ದಿನ ಇದನ್ನು ಎಲ್ಲರೂ ಸ್ವಾಗತಿಸಲಿದ್ದಾರೆ.

 ಗೌರವ್ ಹೆಗ್ಡೆ, ಅಧ್ಯಕ್ಷರು, ಕೆನರಾ ಸಣ್ಣ ಕೈಗಾರಿಕಾ ಸಂಘ, ಮಂಗಳೂರು

ಕ್ರಾಂತಿಕಾರಕ ನಿರ್ಧಾರ

ಪ್ರಧಾನಿ ನರೇಂದ್ರಮೋದಿ ಅವರು ಒಂದು ವರ್ಷದ ಹಿಂದೆ ನೋಟು ಅಮಾನೀಕರಣದ ದಿಟ್ಟ ಹೆಜ್ಜೆ ಇಟ್ಟಿದ್ದು, ಇಂದು ಶ್ರೀಮಂತರ ಬಳಿಯೇ ಹಣ ಕ್ರೋಢೀಕರಣವಾಗುತ್ತಿದ್ದ ಬೆಳವಣಿಗೆ ನಿಯಂತ್ರಣಕ್ಕೆ ಬಂದಿದೆ. ಕಾಳಧನಕೋರರಿಗೆ ತೊಂದರೆಯಾಗಿದೆಯೆ ಹೊರತು ಜನಸಾಮಾನ್ಯರು ತೃಪ್ತಿಯಿಂದ ಜೀವನ ಸಾಗಿಸುವಂತಾಗಿದೆ. ನೋಟು ಅಮಾನೀಕರಣ ಕ್ರಾಂತಿಕಾರಕ ನಿರ್ಧಾರವಾಗಿದ್ದು, ದೇಶದಲ್ಲಿ ಈಗಾಗಲೇ ಹಲವು ಬದಲಾವಣೆಗಳು ಗೋಚರಿಸಿದೆ. ಭ್ರಷ್ಟ ವ್ಯವಸ್ಥೆಯ ವಿರುದ್ಧದ ಈ ಹೋರಾಟಕ್ಕೆ ದೇಶವ್ಯಾಪಿ ಜನಬೆಂಬಲ ವ್ಯಕ್ತವಾಗಿದೆ.
 ಮಹೇಶ್ ಜೈನಿ, ನಗರಾಧ್ಯಕ್ಷರು, 
ಮಡಿಕೇರಿ ನಗರ ಕಾಂಗ್ರೆಸ್

ರೈತರಿಗೆ ತೊಂದರೆ

ನೋಟು ನಿಷೇಧದಿಂದ ಜನ ಸಾಮಾನ್ಯರಿಗೆ ಮತ್ತು ರೈತರಿಗೆ ತೊಂದರೆಯಾಯಿತು. ವ್ಯವಸಾಯ ಹಾಗೂ ಇನ್ನಿತರ ಕಾರ್ಯಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ ರೈತರು ಬೇಸಾಯದಲ್ಲಿ ನಷ್ಟ ಅನುಭವಿಸಬೇಕಾಯಿತು. ದೇಶಕ್ಕೆ ಮತ್ತು ರಾಜ್ಯಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ಕಪ್ಪು ಹಣ ಇಟ್ಟ ಶ್ರೀಮಂತರು ಪೂರ್ಣ ಪ್ರಮಾಣದಲ್ಲಿ ತಮ್ಮ ಸಂಪತ್ತನ್ನು ಘೋಷಿಸಿಕೊಳ್ಳಲಿಲ್ಲ. ಕೆಲವು ಭ್ರಷ್ಟ ಅಧಿಕಾರಿಗಳು ಕಾಳ ಧನಿಕರ ಬೆನ್ನಿಗೆ ನಿಂತಿದ್ದರ ಪರಿಣಾಮ ನೋಟು ನಿಷೇಧದ ಪ್ರಯೋಜನ ಸರಕಾರಕ್ಕೆ ಸಿಗಲಿಲ್ಲ್ಲ.
 ಕಿರಗಸೂರು ಶಂಕರ್, ರೈತ ಮುಖಂಡ ತಿ.ನರಸೀಪುರ

ಅನ್ನ ಕೊಟ್ಟ ವೃತ್ತಿ ಬಿಡುವಂತಾಗಿದೆ

ನಾನು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದೇನೆ. ಈ ವೃತ್ತಿಯೂ ನನಗೆ ಹಲವು ವರ್ಷಗಳಿಂದ ಅನ್ನ ಹಾಗೂ ಗೌರವ ತಂದುಕೊಟ್ಟಿದೆ. ಆದರೆ, ಕೇಂದ್ರ ಸರಕಾರ ನೋಟು ನಿಷೇಧ ಮಾಡಿದ ಕಳೆದ ಒಂದು ವರ್ಷದಿಂದ ನಿರುದ್ಯೋಗಿಯಾಗುವ ಹಂತಕ್ಕೆ ಮುಟ್ಟಿದ್ದೇನೆ. ನೋಟು ನಿಷೇಧ ಮಾಡಿದ ಪ್ರಾರಂಭದ ಎರಡು ತಿಂಗಳಲ್ಲಿ ಒಂದು ದಿನವೂ ಕೆಲಸ ಸಿಗದೆ ಪರದಾಡುವಂತಾಗಿದೆ. ಈಗ ನೋಟು ನಿಷೇಧಗೊಂಡು ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಕೈ ತುಂಬಾ ಕೆಲಸ ಮಾತ್ರ ಸಿಗುತ್ತಿಲ್ಲ. ಹೀಗಾಗಿ ಬೇರೆ ಯಾವುದಾದರು ಕಂಪೆನಿಗೆ ಸೇರಲು ಪ್ರಯತ್ನಿಸುತ್ತಿದ್ದೇನೆ.
 ಲಕ್ಷ್ಮಣ್, ಬಡಗಿ

ನ್ಯಾಯಾಲಯದಿಂದ ಬಡವರು ದೂರ
ಆರು ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದೇನೆ. ನನ್ನ ಬಳಿಗೆ ಬರುವ ಹೆಚ್ಚಿನ ಕಕ್ಷಿದಾರರು ಬಡವರೇ. ಹೀಗಾಗಿ ಒಂದು ವರ್ಷದಿಂದ ನನ್ನ ಅನುಭವ ಹಾಗೂ ನನ್ನ ಸಹದ್ಯೋಗಿಗಳ ಅನುಭವದ ಪ್ರಕಾರ ಬಡವರು ಹಾಗೂ ಮಧ್ಯಮ ವರ್ಗದವರು ತಮಗೆ ಅನ್ಯಾಯವಾದರೂ ಪ್ರಕರಣಗಳನ್ನು ದಾಖಲಿಸಲು ನ್ಯಾಯಾಲಯಗಳಿಗೆ ಬರುತ್ತಿಲ್ಲ. ಇದಕ್ಕೆ ನೋಟು ನಿಷೇಧವೇ ಪ್ರಮುಖ ಕಾರಣ.
 ಹೆಚ್ಚಿನದಾಗಿ ವಕೀಲರು ಹಾಗೂ ಕಕ್ಷಿದಾರರ ನಡುವೆ ನಗದು ರೂಪದಲ್ಲಿ ವ್ಯವಹಾರ ನಡೆಯುತ್ತಿದೆ. ಈ ಹಿಂದೆ ಸಣ್ಣ ಪ್ರಮಾಣದ ಜಮೀನು ವ್ಯಾಜ್ಯ ಪ್ರಕರಣಗಳನ್ನು ಮಾತುಕತೆ ನಡೆಸಿ 1ರಿಂದ 2, 3 ಲಕ್ಷ ರೂ. ಪರಿಹಾರ ನೀಡುವ ಮೂಲಕ ವ್ಯಾಜ್ಯಗಳು ಬಗೆ ಹರಿಯುತ್ತಿದ್ದವು. ಆದರೆ, ನೋಟು ನಿಷೇಧ ಮಾಡಿದಾಗಿನಿಂದ ಮಾತುಕತೆ ಮೂಲಕ ನಡೆಯುತ್ತಿದ್ದ ರಾಜಿ ಪ್ರಕರಣಗಳು ಇಲ್ಲವಾಗಿದೆ. ಇದರಿಂದ ವಕೀಲರಿಗೂ ಕಕ್ಷಿದಾರರಿಗೂ ಸಂಕಷ್ಟವಾಗಿದೆ.
 ಪುರುಷೋತ್ತಮ ಚಿಕ್ಕಹಾಗಡೆ, ನ್ಯಾಯವಾದಿ

ಇನ್ನಷ್ಟು ಸುಧಾರಿಸಬೇಕಿದೆ

ನೋಟು ನಿಷೇಧ ಮಾಡಿದ ಬಳಿಕ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸಿದ್ದರು. ನೋಟು ಬದಲಾವಣೆ ಮಾಡಿಕೊಳ್ಳುವಾಗಲೂ ತೊಂದರೆ ಮುಂದುವರಿದಿತ್ತು. ಪ್ರಾರಂಭದಲ್ಲಿ ಲಭ್ಯವಾಗುತ್ತಿದ್ದ 2000 ರೂ. ನೋಟು ಈಗ ಲಭ್ಯವಾಗುತ್ತಿಲ್ಲ. ನೋಟಿನ ಕೊರತೆಯಿಂದಾಗಿ ಹೆಚ್ಚಿನ ವೇಳೆ ಎಟಿಎಂಗಳ ಬಾಗಿಲು ಮುಚ್ಚಲಾಗುತ್ತಿದೆ. ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಾರೆ. ಈ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಾಗಿದೆ.

 ನಝೀರ್ ಅಹ್ಮದ್ ಯು. ಶೇಖ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರು.

ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ.

ಆರ್ಥಿಕ ರಂಗದ ಮೇಲೆ ದುಷ್ಪರಿಣಾಮ ಬೀರಿರುವ ನೋಟು ಅಮಾನ್ಯವು ದೇಶದ ಕೋಟ್ಯಂತರ ಜನತೆಯ ಪಾಲಿಗೆ ಕರಾಳ ದಿನವಾಗಿದೆ. ಕಪ್ಪು ಹಣ ತರುತ್ತೇವೆ, ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂ. ಜಮೆ ಮಾಡುವೆವು ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಈ ಕರಾಳ ದಿನಕ್ಕೆ ವರ್ಷ ತುಂಬುವಾಗಲಾದರೂ ಉತ್ತರಿಸಬೇಕಿದೆ. ದೇಶದಲ್ಲಿ ನಿರುದ್ಯೋಗದ ಭೀತಿ ಆವರಿಸಿದೆ. ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಕಪ್ಪು ಹಣದ ಮೊತ್ತ ಎಷ್ಟೆಂದು ಬಹಿರಂಗಪಡಿಸಿಲ್ಲ. ಅಡುಗೆ ಅನಿಲ ದರ ವಿಪರೀತ ಏರಿಕೆಯಾಗುತ್ತಲೇ ಇದೆ. ಮಹಿಳೆಯರಂತೂ ಸಮಸ್ಯೆಯಿಂದ ತತ್ತರಿಸಿದ್ದಾರೆ. ಒಟ್ಟಿನಲ್ಲಿ ನೋಟು ಅಮಾನ್ಯದ ಮೂಲಕ ಕೇಂದ್ರ ಸರಕಾರ ಜನತೆಯನ್ನು ಕತ್ತಲಲ್ಲಿಟ್ಟಿದೆ. ಈ ಆಟ ಹೆಚ್ಚು ದಿನ ನಡೆಯುವುದಿಲ್ಲ. ಜನತೆ ಖಂಡಿತಾ ಪಾಠ ಕಲಿಸಲಿದ್ದಾರೆ.

 ಬಿ.ರಮಾನಾಥ ರೈ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ

ಶೇ.50ರಷ್ಟು ವ್ಯವಹಾರ ಕುಂಠಿತ

ನೋಟು ನಿಷೇಧದಿಂದ ಸಾರಿಗೆ ಕ್ಷೇತ್ರದ ಮೇಲೆ ಅದರಲ್ಲೂ ಬಸ್ ಸಂಚಾರದ ಮೇಲೆ ತುಂಬಾ ಪರಿಣಾಮ ಬೀರಿದೆ. ಕೂಲಿ ಕಾರ್ಮಿಕರು, ಸಣ್ಣ ಪುಟ್ಟ ಕೆಲಸ ಮಾಡುವವರೇ ಬಸ್ಸಿನ ಪ್ರಯಾಣಿಕರು. ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡ ಕಾರಣ ಕೂಲಿಯಾಳುಗಳಿಗೆ ಕೆಲಸವಿಲ್ಲದಂತಾಗಿದೆ. ಹೆಚ್ಚಿನ ಕಾರ್ಮಿಕರು ತಮ್ಮ ಊರಿಗೆ ಮರಳಿದ್ದಾರೆ. ಹಾಗಾಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಶೇ.50ರಷ್ಟು ವ್ಯವಹಾರ ಕೂಡ ಈಗ ಇಲ್ಲದಂತಾಗಿದೆ. ತೈಲ ಮತ್ತು ಬಿಡಿಭಾಗಗಳ ಬೆಲೆಯಲ್ಲೇನೂ ಇಳಿಕೆಯಾಗಿಲ್ಲ. ಹಾಗಾಗಿ ಬಸ್ ಮಾಲಕರು ಸಾರಿಗೆ ಕ್ಷೇತ್ರದಿಂದ ದೂರು ಸರಿಯುವಂತಹ ವಾತಾವರಣ ಸೃಷ್ಟಿಯಾಗಿವೆ.

 ಅಝೀಝ್ ಪರ್ತಿಪ್ಪಾಡಿ, ಅಧ್ಯಕ್ಷರು, ದ.ಕ.ಜಿಲ್ಲಾ ಬಸ್ ಮಾಲಕರ ಸಂಘ, ಮಂಗಳೂರು

ಬಂಡವಾಳಶಾಹಿಗಳಿಗೆ ಅನುಕೂಲ

ದೇಶದ ಶೇ.85ರಷ್ಟು ಮಂದಿಯನ್ನು ಬ್ಯಾಂಕ್‌ನ ಮುಂದೆ ಸರದಿ ಸಾಲಿನಲ್ಲಿ ನಿಲ್ಲಿಸಿದ ಪ್ರಧಾನಿ ಮೋದಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ, ಕಪ್ಪು ಹಣ ತರುತ್ತೇವೆ ಎಂದಿದ್ದರು. ಆದರೆ ವರ್ಷವಾದರೂ ಅದ್ಯಾವುದನ್ನೂ ಅವರಿಗೆ ಮಾಡಲು ಸಾಧ್ಯವಾಗಿಲ್ಲ. ಬದಲಾಗಿ ಬಡ-ಮಧ್ಯಮ ವರ್ಗದ ಜನರ ಹಣವನ್ನು ಬ್ಯಾಂಕ್‌ನಲ್ಲಿ ತುಂಬಿಸುವಂತೆ ಮಾಡಿ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾವೇ ನಮ್ಮ ಶಕ್ತಿಮೀರಿ ದುಡಿದು ಸಂಪಾದಿಸಿದ ಹಣವನ್ನು ಮರಳಿ ಪಡೆಯಲು ಇನ್ನಿಲ್ಲದ ತೊಂದರೆ ಎದುರಿಸುವಂತಾಗಿದೆ. ನನ್ನ ಮನೆಯಲ್ಲಿ ಅಡುಗೆ ಅನಿಲವಿಲ್ಲ. ಆದರೆ, ಅಡುಗೆ ಅನಿಲವಿದ್ದವರು ಬೆಲೆ ಏರಿಕೆಯನ್ನು ತಾಳಿಕೊಳ್ಳಲಾಗದೆ ಕಟ್ಟಿಗೆಯ ಮೊರೆ ಹೋಗುವಂತಾಗಿದೆ.

 ಅತ್ರಾಡಿ ಅಮೃತಾ ಶೆಟ್ಟಿ, ಸಾಹಿತಿ, ಹೋರಾಟಗಾರ್ತಿ

ಸಿಹಿಯಾದ ಕೊಡುಗೆ ಕೊಟ್ಟಿಲ್ಲ

ಮೋದಿ ಸರಕಾರವು ನೋಟು ಅಮಾನ್ಯ ಮಾಡಿದ್ದೇ ಬಂಡವಾಳಶಾಹಿಗಳನ್ನು ರಕ್ಷಿಸಲು. ಅದರಲ್ಲಿ ಅವರು ಯಶಸ್ವಿಯಾದರೂ ಕೂಡ ಜನರ ಮನಸ್ಸಿನಲ್ಲಿ ಅವರೆಂದೂ ಆದರ್ಶರಾಗಿ ಉಳಿಯಲು ಸಾಧ್ಯವಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳ ಸಹಿತ ಕೂಲಿ ಕಾರ್ಮಿಕರು ಕೂಡ ನೋಟು ಅಮಾನ್ಯದಿಂದ ತತ್ತರಿಸಿದ್ದಾರೆ. ಇಸ್ಲಾಮ್ ಧರ್ಮಕ್ಕೂ ಭಯೋತ್ಪಾದನೆಗೂ ತಳಕು ಹಾಕಿ ಭಯೋತ್ಪಾದನೆ ನಿಗ್ರಹಕ್ಕಾಗಿ ಈ ಕ್ರಮ ಎಂದರು. ನೋಟು ಅಮಾನ್ಯಗೊಳಿಸಿ ವರ್ಷವಾದರೂ ಕಪ್ಪುಹಣದ ಲೆಕ್ಕವನ್ನು ಈವರೆಗೂ ಕೊಡಲು ಮೋದಿಗೆ ಸಾಧ್ಯವಾಗಿಲ್ಲ. ಮೋದಿ ದೇಶದ ಜನತೆಗೆ ಕೊಟ್ಟದ್ದು ಇಂತಹ ಕಹಿ ಕೊಡುಗೆಗಳೇ ಹೊರತು ಸಿಹಿಯಾದ ಕೊಡುಗೆಯನ್ನು ಕೊಟ್ಟಿಲ್ಲ.

 ಅಲಿ ಹಸನ್, ಅಧ್ಯಕ್ಷರು, ಮುಸ್ಲಿಂ ವರ್ತಕರ ಸಂಘ ಮಂಗಳೂರು

ಮಹಿಳೆಯರ ಮೇಲೆ ದುಷ್ಪರಿಣಾಮ

ನೋಟು ರದ್ಧತಿಯ ಬಗ್ಗೆ ನನ್ನ ಆಕ್ಷೇಪವಿಲ್ಲ. ಆಡಳಿತಾತ್ಮಕ ಕಾರಣಕ್ಕೆ ಅದು ಅಗತ್ಯವಿರಬಹುದು ಮತ್ತು ಹಾಗೆ ಮಾಡುವ ಅಧಿಕಾರ ಚುನಾಯಿತ ಸರಕಾರಕ್ಕೆ ಇದ್ದೇ ಇರುತ್ತದೆ. ಆಕ್ಷೇಪ ಇರುವುದು, ದುಡುಕಿನಿಂದ ಮತ್ತು ಸೂಕ್ತ ತಯಾರಿಯಿಲ್ಲದೆ ಅದನ್ನು ಜಾರಿಗೊಳಿಸಿದ ಬಗ್ಗೆ. ಭಾರತದಲ್ಲಿ ಶೇ. 53 ರಷ್ಟು ಮಂದಿ ಮಾತ್ರ ಬ್ಯಾಂಕಿಂಗ್ ಸೇವೆಯ ಫಲಾನುಭವಿಗಳು. ಇನ್ನುಳಿದ ಶೇ.47 ಮಂದಿ ಅದರ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ನಾವು ಮಹಿಳೆಯರು ಸಾಮಾನ್ಯವಾಗಿ ಈ ಶೇ.47ರಲ್ಲಿ ಕಾಣಿಸಿಕೊಳ್ಳುವವರು. ನಗದು ವಹಿವಾಟಿಗೆ ತೊಂದರೆಯಾದಾಗಲೆಲ್ಲ ಅದರ ಮೊದಲ ಭೀಕರ ಪರಿಣಾಮ ಉಂಟಾಗುವುದು ಮಹಿಳೆಯರ ಮೇಲೆ. ವಿಶೇಷವಾಗಿ ಕುಟುಂಬದ ವಿಷಯಕ್ಕೆ ಬಂದಾಗ ಮಹಿಳೆಯರು ಯಾವಾಗಲೂ ದೂರದೃಷ್ಟಿಯುಳ್ಳವರು. ಕಷ್ಟಕಾಲಕ್ಕೆ ಬೇಕಾದೀತು ಎಂದು ತಮ್ಮ ಮನೆಯ ಗಂಡಸರಿಗೆ ಕಾಣದಂತೆ, ಸೀರೆಗಳಲ್ಲಿ ಮಡಿಕೆಗಳೆಡೆಯಲ್ಲಿ, ಸಾಸಿವೆ ಡಬ್ಬಿಯಲ್ಲಿ ಮೂರು ಕಾಸು ಕೂಡಿಡುವವರು. ನೋಟು ರದ್ಧತಿಯಿಂದಾಗಿ ಇಂತಹ ಹಣ ಕಳೆದುಕೊಂಡದ್ದು ಬಹುವಾಗಿ ಮಹಿಳೆಯರು! ಹಣ ಕಳೆದುಕೊಂಡುದುದು ಮಾತ್ರವಲ್ಲ, ಅದು ಕಪ್ಪುಹಣ ಎಂಬ ದುಬಾರಿ ಪಾಠವನ್ನೂ ಅವರು ಕಟ್ಟಿಕೊಳ್ಳುವಂತಾಯಿತು! ನೋಟು ನಿಷೇಧದ ಪ್ರತಿಕೂಲ ಪರಿಣಾಮದಿಂದ ಅನೇಕ ಸಣ್ಣ ಸಣ್ಣ ಹೊಟೇಲ್‌ಗಳು, ಅಂಗಡಿಗಳು ಮುಚ್ಚಿಹೋದವು. ಅವುಗಳಲ್ಲಿ ದುಡಿಯುತ್ತಿದ್ದ ಮಹಿಳೆಯರೆಲ್ಲ ಕೆಲಸ ಕಳೆದು ಕೊಂಡರು. ಮಹಿಳೆಯರ ಆತ್ಮಗೌರವಕ್ಕೂ ಧಕ್ಕೆಯಾಯಿತು, ಆತ್ಮಸ್ಥೈರ್ಯವೂ ಉಡುಗಿತು. ಪುರುಷರೂ ಕೆಲಸ ಕಳೆದು ಕೊಂಡರು. ಆಗ ಕುಟುಂಬ ನಿರ್ವಹಣೆಯ ಹೊರೆ ಮತ್ತೆ ಬಿದ್ದುದು ಮಹಿಳೆಯರ ಮೇಲೆ. ಜನಸಾಮಾನ್ಯರ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸೂಕ್ತ ತಯಾರಿಯೊಂದಿಗೆ ನೋಟು ರದ್ಧತಿ ಮಾಡಿದ್ದರೆ ಸದ್ಯದ ಸಂಕಷ್ಟ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೋ ಏನೋ?. ಹಾಗಾಗಿ ಸರಕಾರ ಈ ವಿಷಯದಲ್ಲಿ ಎಡವಿದೆ. ಇದು ಸರಕಾರದ ಅಕ್ಷಮ್ಯ ತಪ್ಪುಎನ್ನುವುದರಲ್ಲಿ ಎರಡು ಮಾತಿಲ್ಲ.

 ಗುಲಾಬಿ ಬಿಳಿಮಲೆ, ಮಂಗಳೂರು ಸಾಮಾಜಿಕ ಕಾರ್ಯಕರ್ತೆ

ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ

ನೋಟು ರದ್ದತಿಯಿಂದ ಈವರೆಗೂ ನಾವು ಸಂಕಷ್ಟ ಅನುಭವಿಸುತ್ತಾ ಬಂದಿದ್ದೇವೆ. ವ್ಯವಹಾರದಲ್ಲಂತೂ ಹಣ ಹೊಂದಿಸಲು ಪರದಾಡುವ ಸ್ಥಿತಿ ಈಗಲೂ ಇದೆ. ವೈದ್ಯರ ಬಳಿ ಹೋಗುವಾಗ, ಅಂಗಡಿ-ಹೊಟೇಲ್‌ಗಳಿಗೆ ಹೋಗುವಾಗ ನಾವು ಎದುರಿಸಿದ ಸಮಸ್ಯೆ ಅಷ್ಟಿಷ್ಟಲ್ಲ. ಅದನ್ನು ನೆನಪಿಸುವಾಗ ಮನಸ್ಸು ಈಗಲೂ ಕುದಿಯುತ್ತಿವೆ. ನೋಟು ರದ್ದಾಗಿ ವರ್ಷವಾಗುತ್ತಾ ಬಂದರೂ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಸಮಸ್ಯೆಗಳಿಗೆ ಪರಿಹಾರವೂ ಸಿಕ್ಕಿಲ್ಲ.

 ಎಂ.ಪಿ. ರಝಾಕ್, ಚಿಕ್ಕು ವ್ಯಾಪಾರಿ -ಸೆಂಟ್ರಲ್ ಮಾರ್ಕೆಟ್, ಮಂಗಳೂರು

ಲಾಭಕ್ಕಿಂತ ನಷ್ಟವೇ ಹೆಚ್ಚು

ಜನರಿಗೆ ಅನುಕೂಲವಾಗಿಲ್ಲ. ಕಾರ್ಮಿಕರು, ಕೇಂದ್ರದ ನಿರ್ಧಾರದಿಂದಾಗಿ ರೈತರು ಕೆಲಸ ಕಳೆದುಕೊಂಡಿದ್ದಾರೆ. ಲಾಭಕ್ಕಿಂತ ಹೆಚ್ಚಿನ ರೀತಿಯಲ್ಲಿ ನಷ್ಟವಾಗಿದೆ. ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಬಂಡವಾಳಶಾಹಿಗಳಿಗೆ ಒಳ್ಳೆಯದಾಗಿದೆ ಹೊರತು ಸಾಮಾನ್ಯ ಜನರಿಗೆ ಒಳ್ಳೆಯದಾಗಿಲ್ಲ.

 ಸತೀಶ್ ಅರವಿಂದ್, ಕಾರ್ಮಿಕ ಮುಖಂಡ ದಾವಣಗೆರೆ

ಒಂದು ಉತ್ತಮ ಕ್ರಮ

ನೋಟು ನಿಷೇಧ ಮೊದಲು ಒಳ್ಳೆಯದೆಂದು ಅನಿಸಿತು. ಕ್ರಮೇಣ ಸಾಮಾನ್ಯ ಜನರಿಗೆ ಬಹಳಷ್ಟು ಸಮಸ್ಯೆಯಾಯಿತು. ದೇಶದಲ್ಲಿನ ಅಕ್ರಮವಾಗಿ ಹಣ ಸಂಪಾದನೆಗೆ ಕಡಿವಾಣ ಹಾಕಲಾಯಿತು. ಇದರಿಂದ ದೇಶಕ್ಕೆ ಲಾಭವಾಗಿದೆ. ನೋಟು ನಿಷೇಧ ಒಂದು ಉತ್ತಮ ಕ್ರಮವೇ.

 ಪರಮೇಶ್ ಕುಂದೂರು, ಚಿಂತಕ

ಕ್ರಮ ಸರಿಯಲ್ಲ

ರೈತರಿಗೆ ಒಳ್ಳೆಯದಾಗಿಲ್ಲ. ಎಪಿಎಂಸಿಗಳಲ್ಲಿ ನಗದು ವ್ಯವಹಾರಕ್ಕೆ ಕಷ್ಟವಾಗಿತ್ತು. ಅಲ್ಲದೇ ಸಣ್ಣ ವ್ಯಾಪಾರಿಗಳಿಗೆ ಕಷ್ಟವಾಗಿದೆ. ನೋಟು ನಿಷೇಧದಿಂದ ಯಾವುದೇ ಲಾಭವಾಗಿಲ್ಲ. ರಾತ್ರೋ ರಾತ್ರಿ ನೋಟು ನಿಷೇಧ ಮಾಡಿದ ಕ್ರಮ ಸರಿಯಲ್ಲ.

ಅರುಣ್ ಕುಮಾರ್ ಕುರುಡಿ, ರಾಜ್ಯ ರೈತ ಸಂಘದ ಉಪಾಧ್ಯಕ್ಷ

ನನ್ನ ಕೆಲಸದ ಮೇಲೆ ಹೊಡೆತ ಬಿದ್ದಿಲ್ಲ

ನೋಟ್ ಬ್ಯಾನ್‌ನ ಹೊಡೆತ ನನ್ನ ಕೆಲಸದ ಮೇಲೆ ಬಿದ್ದಿಲ್ಲ. ನೋಟ್ ಬ್ಯಾನ್ ಮಾಡಿದುದರ ಪರಿಣಾಮದ ಬಗ್ಗೆ ಹೇಳುವಷ್ಟು ತಿಳುವಳಿಕೆ ನನ್ನಲ್ಲಿಲ್ಲ. ಆದರೆ, ನನ್ನಂತೆ ಬೀದಿಬದಿಯಿದ್ದು ಕೆಲಸ ಮಾಡುವ ಅದೆಷ್ಟೋ ಮಂದಿಗೆ ಸರಿಯಾದ ವ್ಯಾಪಾರವಿಲ್ಲದೆ ಸಮಸ್ಯೆ ಎದುರಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಬ್ಯಾನ್ ಆದ ಬಳಿಕ ಮೊದಲಿನಂತೆ ವ್ಯಾಪಾರ ಜೋರು ಇಲ್ಲ.

 ಶಂಕರ್ ಬಿಕರ್ನಕಟ್ಟೆ, ಚಪ್ಪಲಿ ರಿಪೇರಿಗಾರ, ಮಂಗಳೂರು

ಸಂಸಾರ ಸಾಗಿಸಲು ಕಷ್ಟ

ನಾನು ಕಳೆದ ಐದಾರು ವರ್ಷದಿಂದ ರಸ್ತೆ ಬದಿ ಹಣ್ಣು ಹಂಪಲು ಮಾರಿ ಜೀವನ ಸಾಗಿಸುತ್ತಿದ್ದೇನೆ. ಮೊದಲು ದಿನಕ್ಕೆ 5-6 ಸಾವಿರ ರೂಪಾಯಿಯ ವ್ಯಾಪಾರವಾಗುತ್ತಿತ್ತು. ಕಳೆದ ವರ್ಷ ನೋಟು ರದ್ದತಿಯಿಂದ ವ್ಯಾಪಾರ ಕುಸಿದಿದೆ. ಈಗ ಹೆಚ್ಚೆಂದರೆ 2 ಸಾವಿರ ರೂ. ವ್ಯಾಪಾರವಾಗುತ್ತಿದೆ. ಅದರಿಂದ ಬರುವ ಲಾಭದಿಂದ ಸಂಸಾರ ಸಾಗಿಸಲು ಕಷ್ಟವಾಗುತ್ತಿದೆ. ಸಾಲದ ಮೇಲೆ ಸಾಲವಾಗುತ್ತಿದೆ. ಕೈಯಲ್ಲಿ ಹಣ ಕೂಡ ಚಲಾವಣೆಯಾಗುತ್ತಿಲ್ಲ.

 ಹಸನಬ್ಬ ಮದಕ, ಅಂಬ್ಲಮೊಗರು, ಹಣ್ಣು ಹಂಪಲು ವ್ಯಾಪಾರಿ, ಮಂಗಳೂರು

ಇದು ಮೋದಿ ಸರಕಾರದ ಗಿಮಿಕ್

ಪ್ರಧಾನಿ ನರೇಂದ್ರಮೋದಿ ತನ್ನ ಈವರೆಗಿನ ಆಡಳಿತದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೊಳಿಸಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿಯಂತಹ ಯೋಜನೆಗಳ ಜಾರಿಯಿಂದ ಜನರಿಗೆ ಸಮಸ್ಯೆಗಳೇ ಹೆಚ್ಚಾಗಿವೆ. ಆದರೆ, ಮೋದಿ ಅವರು ಜನರಲ್ಲಿ ಭ್ರಮೆ ಹುಟ್ಟಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ನೋಟು ನಿಷೇಧದಿಂದ ಏನೋ ದೊಡ್ಡ ಬದಲಾವಣೆ ಆಗಿಬಿಡುತ್ತದೆ, ಕಪ್ಪುಹಣ ಸರಕಾರದ ತೆಕ್ಕೆಗೆ ಬಂದು ಖಜಾನೆ ತುಂಬಿ ಬಿಡುತ್ತದೆ ಎಂದೆಲ್ಲಾ ಮೊದಲು ಅಂದುಕೊಳ್ಳಲಾಯಿತು. ಆದರೆ, ಅದೆಲ್ಲಾ ಬರೀ ಭ್ರಮೆ ಎಂಬುದು ನಂತರ ತಿಳಿದಿದೆ. ಅನುಕೂಲವಾಗದಿದ್ದರೆ ಪರವಾಗಿಲ್ಲ, ಆದರೆ, ನೋಟು ನಿಷೇಧ ತಂದ ಅವಾಂತರ, ಹತಾಶೆೆ, ಸಾವು, ನೋವು ಊಹಿಸಲೂ ಸಾಧ್ಯವಿಲ್ಲ. ಇದರಿಂದಾಗಿ ಹಳ್ಳಿಗಾಡಿನ ರೈತಾಪಿ ಜನ, ಮಹಿಳೆಯರು, ಕೃಷಿಕೂಲಿಕಾರರು ಕೆಲಸಬಿಟ್ಟು ತಿಂಗಳುಗಳ ಕಾಲ ಬ್ಯಾಂಕ್‌ಗಳ ಮುಂದೆ ನಿಂತು ನರಳಬೇಕಾಯಿತು. ಎಷ್ಟೋ ಜನ ಸತ್ತು ಹೋದರು. ಮೋದಿ ಸರಕಾರದ ಇಂತಹ ಗಿಮಿಕ್‌ಗಳೆಲ್ಲಾ ಜನರಿಗೆ ಅರ್ಥವಾಗಿದೆ. ಅದಕ್ಕೆ ತಕ್ಕ ಪಾಠ ಕಲಿಸುವ ಕಾಲವು ಬರುತ್ತಿದೆ.

 ಬೋರಾಪುರ ಶಂಕರೇಗೌಡ, ಜಿಲ್ಲಾಧ್ಯಕ್ಷರು, ರೈತಸಂಘ(ಪ್ರತ್ಯೇಕ ಬಣ), ಮಂಡ್ಯ.

ನಾವು ಬೀದಿ ಪಾಲಾದೆವು

ಕಳೆದ ಎರಡು ವರ್ಷಗಳಿಂದ ನಾನಿಲ್ಲಿ ಕಡಲೆ ವ್ಯಾಪಾರ ಮಾಡುತ್ತಿದ್ದೇನೆ. ಮೊದಲು ದಿನಕ್ಕೆ 2-3 ಸಾವಿರ ರೂ. ವ್ಯಾಪಾರವಾಗುತ್ತಿತ್ತು. ಈಗ ಆ ವ್ಯಾಪಾರವೇ ಇಲ್ಲ. ಮೋದಿ ನೋಟ್ ಬ್ಯಾನ್ ಮಾಡಿಬಿಟ್ಟು ನಮ್ಮನ್ನು ಬೀದಿ ಪಾಲು ಮಾಡಿದರು.
 ತೌಫೀಕ್ ಕಲ್ಲಾಪು, ಕಡಲೆ ವ್ಯಾಪಾರಿ, ಮಂಗಳೂರು

ಉತ್ತಮ ಕೆಲಸ

ಪ್ರಧಾನಿ ಮೋದಿ ನೋಟ್ ಬ್ಯಾನ್ ಮಾಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಕಪ್ಪುಹಣಕ್ಕೆ ಕಡಿವಾಣ ಹಾಕಿದ್ದಾರೆ. ಉದ್ಯಮಿಗಳಿಗೆ ಬಡವರ, ಸಾಮಾನ್ಯರ ಜನರ ಕಷ್ಟ ಅರಿವಾಗಿದೆ. ಕಾಂಗ್ರೆಸ್ ಸರಕಾರವಿದ್ದಾಗ ಟೊಮಟೊ, ಈರುಳ್ಳಿ, ತೊಗರಿಬೇಳೆಗೆ ಬೆಲೆ ಜಾಸ್ತಿಯಾಗಿತ್ತು. ಆವಾಗ ಯಾರಿಗೂ ಅದು ದೊಡ್ಡ ಸಮಸ್ಯೆ ಆಗಲಿಲ್ಲ. ಈಗ ಬಿಜೆಪಿ ಸರಕಾರದ ಸಂದರ್ಭ ಬೆಲೆ ಏರಿಕೆಯಾದೊಡನೆ ಎಲ್ಲರೂ ಬೊಬ್ಬೆ ಹಾಕುತ್ತಿದ್ದಾರೆ. ಇದು ಸರಿಯಲ್ಲ.

 ಶಿವಗಿರೀಶ್ ಗೌಡ, ಹಾಸನ (ಸಿಯಾಳ ವ್ಯಾಪಾರಿ-ಮಂಗಳೂರು

ಅವೈಜ್ಞಾನಿಕ ನಿರ್ಧಾರ

500 ಹಾಗೂ 1000 ರೂ. ಮುಖಬೆಲೆಯ ನೋಟ್‌ಗಳ ಚಲಾವಣೆ ರದ್ದುಗೊಳಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರ ಅತೀ ದೊಡ್ಡ ‘ಬ್ಲಂಡರ್’. ಭಾರತ ಮಾತ್ರವಲ್ಲ, ವಿಶ್ವದ ಆರ್ಥಿಕ ಇತಿಹಾಸದಲ್ಲಿಯೇ ದೊಡ್ಡ ಕಪ್ಪುಚುಕ್ಕೆ. ಮೋದಿಯವರ ಅವೈಜ್ಞಾನಿಕ ನಿರ್ಧಾರದಿಂದ ದೇಶವಿಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

 ಮಂಜುನಾಥ ಭಂಡಾರಿ, ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ (ಎಐಸಿಸಿ) ಸದಸ್ಯ.

ಅರ್ಥವ್ಯವಸ್ಥೆಯಲ್ಲಿ ಕರಿಛಾಯೆ

ಪ್ರಧಾನಿಯವರ ನೋಟ್ ನಿಷೇಧ ನಿರ್ಧಾರವು ಒಳ್ಳೆಯದ್ದಾಗಿದೆ. ಸಂವಿಧಾನದ ಆಶಯದಂತೆ ನೋಡುದಾದರೆ ಈ ನಿರ್ಧಾರ ಸ್ವಾಗತಾರ್ಹ. ನೋಟ್ ಬ್ಯಾನ್‌ನಿಂದ ಶ್ರೀಮಂತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಸಾಮಾನ್ಯ ಮತ್ತು ಮಧ್ಯಮ ಜನರಿಗೆ ಸಮಸ್ಯೆಯಾಗಿದೆ. ಇದರಿಂದ ಉತ್ತಮ ಫಲಿತಾಂಶ ಬರಬಹುದು ಎಂದು ಜನರು ನಿರೀಕ್ಷೆಯಲ್ಲಿ ಇರುವಾಗ ಏಕಾಎಕಿ ಜಿಎಸ್‌ಟಿ ಜಾರಿಗೊಳಿಸಿರುವುದು ಸರಿಯಲ್ಲ. ನೋಟ್ ಬ್ಯಾನ್‌ನಿಂದ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕರಿಛಾಯೆ ಮೂಡಿದೆ. ಇದರಿಂದ ಚೇತರಿಸಿಕೊಳ್ಳಲು ಇನ್ನೂ ಎರಡು-ಮೂರು ವರ್ಷ ಬೇಕಾಗಬಹುದು. ಇದರ ಫಲಿತಾಂಶ ನಮಗೆ ಸಿಗದಿದ್ದರೂ ಮುಂದಿನ ಯುವಜನಾಂಗಕ್ಕೆ ಸಹಕಾರಿಯಾಗಲಿದೆ.

 ಡಾ. ಈಶ್ವರ್ ಎಂ. ಪಾಟೀಲ್, ವಕೀಲರು, ಹೈಕೋರ್ಟ್ ಬಾದಾಮಿ/ಬಾಗಲಕೋಟೆ

ಬಿಸಿ ಮುಟ್ಟಿದೆ

ನೋಟು ನಿಷೇಧದ ಸಂದರ್ಭ ನನ್ನಲ್ಲಿ 1,570 ರೂ. ಇದ್ದವು. ನೋಟ್ ಬದಲಾವಣೆಗಾಗಿ ನನ್ನಲ್ಲಿದ್ದ ಹಣವನ್ನು ತಾಯಿಯ ಬ್ಯಾಂಕ್ ಖಾತೆಗೆ ಹಾಕಿದ್ದೆ. ಕೆಲವು ತಿಂಗಳ ನಂತರ, ಕಾಲೇಜಿನ ಪರೀಕ್ಷಾಶುಲ್ಕಕ್ಕಾಗಿ ಹಣಬೇಕಿತ್ತು. ಇಲ್ಲಿನ ಎಲ್ಲ ಸ್ಥಳೀಯ ಎಟಿಎಂಗಳು ಹಣವಿಲ್ಲದೆ ನಿಷ್ಕ್ರಿಯವಾಗಿತ್ತು. ಇದಕ್ಕಾಗಿ ನಾನು ಮಂಗಳೂರಿನಲ್ಲಿರುವ ಕೆಲವೊಂದು ಎಟಿಎಂಗಳಿಗೆ ಹೋಗಿ, ಹಣವಿಲ್ಲದೆ ಬರಿಗೈಯಲ್ಲಿ ಬಂದದ್ದು ನನಗೆ ಈಗಲೂ ನೆನಪಿದೆ. ಇದರಿಂದ ನನಗೆ ನೋಟ್ ಬ್ಯಾನ್ ಬಿಸಿ ಮುಟ್ಟಿದೆ.
ರಕೀಬ್ ರಿಫಾಝ್, ವಿದ್ಯಾರ್ಥಿ, ಬಂಟ್ವಾಳ

ರಿಯಲ್‌ಎಸ್ಟೇಟ್‌ಗೆ ದೊಡ್ಡ ಹೊಡೆತ

ನೋಟ್ ನಿಷೇಧದಿಂದ ರಿಯಲ್‌ಎಸ್ಟೇಟ್ ಕ್ಷೇತ್ರದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ರಿಯಲ್ ಎಸ್ಟೇಟ್‌ನಲ್ಲಿ ತೊಡಗಿಕೊಂಡವರಲ್ಲಿ ಶೆ.2ರಷ್ಟು ಮಂದಿಗೆ ಮಾತ್ರ ಇದರಿಂದ ಅನುಕೂಲವಾಗಿದೆಯೇ ಹೊರತು ಶೇ. 98ರಷ್ಟು ಮಂದಿಗೆ ತೊಂದರೆಯಾಗಿದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುವಾಗ ಇಂತಹ ನಿರ್ಧಾರ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಅಲ್ಲದೆ ವ್ಯವಹಾರವೂ ಮೊದಲಿನಂತಿಲ್ಲ. ಕಪ್ಪುಹಣಕ್ಕೆ ಕಡಿವಾಣ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ದೇಶದ ಜನರು ಕಪ್ಪುಹಣಕ್ಕೆ ಕಾಯುವ ಪರಿಸ್ಥಿತಿ ಉಂಟಾಗಿದೆ.

 ಮುಹಮ್ಮದ್ ಅಶ್ರಫ್ ಆರ್.ಕೆ. ಉದ್ಯಮಿ, ಅನಿವಾಸಿ ಭಾರತೀಯ

ಯಾವುದೇ ಅನುಕೂಲವಾಗಿಲ್ಲ.

ಸಾಕಷ್ಟು ನೀರಿಕ್ಷೆಯೊಂದಿಗೆ ನೋಟ್ ಬ್ಯಾನ್ ಆಗಿದ್ದು, ಪ್ರಾಥಮಿಕ ಮಟ್ಟದಲ್ಲಿ ಸಾಮಾನ್ಯ ಜನರಿಗೆ ತೊಂದರೆಯಾಗಿದೆಯೇ ಹೊರತು ಯಾವುದೇ ಅನುಕೂಲವಾಗಿಲ್ಲ. ಅಲ್ಲದೆ ಪ್ರಧಾನಿ ಅವರು ಹಿರಿಯ ಆರ್ಥಿಕ ತಂತಜ್ಞರ ಸಲಹೆ ಪಡೆಯದೇ ಈ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ಇದರಿಂದ ಕಾಳಧನ, ಭಯೋತ್ಪಾದನೆ ಸೇರಿದಂತೆ ಭ್ರಷ್ಟಾಚಾರವನ್ನು ನಿರ್ಮೂಲನೆಯಾಗುತ್ತದೆ ಎಂದು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ ಜನ ಸಮಾನ್ಯರಿಗೆ ಯಾವುದೇ ಉತ್ತಮ ಫಲಿತಾಂಶ ಬಂದಿಲ್ಲ. ಭ್ರಷ್ಟಾಚಾರದ ಕಡಿವಾಣಕ್ಕೆ ಹಲವಾರು ಮಾರ್ಗಗಳು ಇದ್ದವು. ಇಂತಹ ಸಂದರ್ಭದಲ್ಲಿ ಏಕಾಏಕಿ ನೋಟ್ ಬ್ಯಾನ್ ಮಾಡಿದ್ದು ಸರಿಯಲ್ಲ. ದೇಶದಲ್ಲಿ ಏಷ್ಟೋ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿವೆೆ. ಅದನ್ನು ಪರಿಹರಿಸುವುದನ್ನು ಬಿಟ್ಟು ನೋಟ್‌ಬ್ಯಾನ್ ಹಾಗೂ ಜಿಎಸ್‌ಟಿಯನ್ನು ಜಾರಿ ಮಾಡುವ ಮೂಲಕ ಮತ್ತಷ್ಟು ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದೆ. ಇದೆಲ್ಲದರ ನಡುವೆ ಜನರು ಆರ್‌ಬಿಐ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ.

-ನರಸಿಂಹ. ಸಂಶೋಧನಾ ವಿದ್ಯಾರ್ಥಿ, ಮಂಗಳೂರು

ಸಾಲ ವಸೂಲಾತಿಯಲ್ಲಿ ಕುಸಿತ

ನೋಟು ಬ್ಯಾನ್‌ನಿಂದಾಗಿ ಬಹಳಷ್ಟು ವ್ಯವಹಾರಗಳು ಕುಸಿತ ಕಂಡಿವೆ. ಇದರಿಂದ ಸಹಕಾರಿ ಕ್ಷೇತ್ರದಲ್ಲಿ ಸಾಲ ವಸೂಲಾತಿಯಲ್ಲೂ ಕುಸಿತಗಳಾಗಿವೆ. ಆರಂಭದ ಆರು ತಿಂಗಳ ಅವಧಿಯಲ್ಲಿ ನೋಟುಗಳೇ ಸಿಗು ತ್ತಿರಲ್ಲಿಲ್ಲ. ಇದು ಆರ್ಥಿಕ ವ್ಯವಹಾರಗಳ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಈ ಕ್ರಮದಿಂದ ದೇಶಕ್ಕೆ ನಷ್ಟವೇ ಹೆಚ್ಚು ಹೊರತು ಯಾವುದೇ ಲಾಭ ಆಗಿಲ್ಲ. ಜನಸಾಮಾನ್ಯರಿಗೆ ಹಾಗೂ ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ನಷ್ಟ ಆಗಿದೆ. ಒಟ್ಟಾರೆ ನೋಟು ರದ್ಧತಿಯ ಪರಿಣಾಮ ಮಾತ್ರ ಕೆಟ್ಟದ್ದಾಗಿದೆ.
 ಕಿಶನ್ ಹೆಗ್ಡೆ ಕೊಳ್ಕೆಬೈಲು, ಅಧ್ಯಕ್ಷರು, ಸಹಕಾರಿ ಸಂಘಗಳ ಒಕ್ಕೂಟ, ಉಡುಪಿ ಜಿಲ್ಲೆ.

ಬಡವರಿಗೆ ಮಾಡಿದ ಮೋಸ

ನೋಟು ನಿಷೇಧವು ಉದ್ದೇಶಪೂರ್ವಕವಾಗಿ, ವ್ಯವಸ್ಥಿತವಾಗಿ ಈ ದೇಶದ ಬಡವರಿಗೆ ಮಾಡಿದ ಬಹಳ ದೊಡ್ಡ ಮೋಸವಾಗಿದೆ. ಇದರಿಂದ ಬಡವರಿಗೆ ಸಾಕಷ್ಟು ತೊಂದರೆಯಾಗಿದೆ. ಈ ಕ್ರಮದಿಂದ ದೇಶದ ಬಡವರಿಗೆ ಲಾಭ ಆಗಲು ಸಾಧ್ಯವೇ ಇಲ್ಲ. ಒಟ್ಟಾರೆ ನಷ್ಟದ ಕ್ರಮ ಇದಾಗಿದೆ. ಮೋರಾರ್ಜಿ ದೇಸಾಯಿ ಕಾಲದಲ್ಲಿ ನೋಟು ನಿಷೇಧ ಮಾಡಿದಾಗ ಒಂದು ಉದ್ದೇಶ ಇತ್ತು. ಆದರೆ ಅಂತಹ ಯಾವುದೇ ಉದ್ದೇಶ ಈಗ ಇರಲಿಲ್ಲ. ನಿಷೇಧದ ಬಳಿಕ ಹೊಸ ನೋಟು ಮುದ್ರಿಸಲು ಕೋಟ್ಯಂತರ ರೂ. ಹಣ ವ್ಯಯಿಸಲಾಗಿದೆ. ಹಾಗಾಗಿ ಈ ಕ್ರಮ ಇಡೀ ದೇಶಕ್ಕೆ ನಷ್ಟ ಉಂಟು ಮಾಡಿದೆ.

-ಶ್ರೀಧರ್ ಭಟ್, ಕಲ್ಯಾಣಪುರ, ನಿವೃತ್ತ ಶಿಕ್ಷಕರು

ಕ್ರಮ ಸರಿಯಲ್ಲ

ಕೃಷಿ ಕ್ಷೇತ್ರಕ್ಕೆ ನೋಟು ರದ್ದತಿಯಿಂದ ಶೇ.90ರಷ್ಟು ಪರಿಣಾಮ ಆಗಿದೆ. ಆನ್ ಲೈನ್ ಮೂಲಕ ಕೃಷಿ ಸಂಬಂಧಿ ಲೆಕ್ಕ, ದಾಖಲೆ ಕೊಡಲು ಆಗಲ್ಲ. ಕ್ಯಾಶ್ ಲೆನ್ ವ್ಯವಹಾರ ನಮಗೆ ಗೊತ್ತಿಲ್ಲ. ಈ ಕ್ರಮದಿಂದ ದೇಶಕ್ಕೆ ಲಾಭ ಆಗಿದೆಯೋ ಗೊತ್ತಿಲ್ಲ, ನನಗಂತೂ ಸಾಕಷ್ಟು ನಷ್ಟ ಆಗಿದೆ. ಕೃಷಿಕರ ದೃಷ್ಟಿಯಲ್ಲಿ ನೋಡಿದರೆ ಈ ಕ್ರಮ ಸರಿಯಲ್ಲ.

-ಸುರೇಶ್ ನಾಯಕ್ ಹಿರಿಯಡ್ಕ, ಕೃಷಿಕ

ವ್ಯಾಪಾರ ತುಂಬಾ ಕುಸಿತ

ನೋಟು ರದ್ಧತಿಯಿಂದ ವ್ಯಾಪಾರ ತುಂಬಾ ಕುಸಿತ ಆಗಿದೆ. ಮಾರುಕಟ್ಟೆಯಲ್ಲಿ ಜನ ವಸ್ತುಗಳನ್ನು ಖರೀದಿಸಲು ಬರುತ್ತಿಲ್ಲ. ಮೊದಲು 10ರೂ. ಖರ್ಚು ಮಾಡುತ್ತಿದ್ದವರು ಈಗ 2 ರೂ. ಖರ್ಚು ಮಾಡುತ್ತಿದ್ದಾರೆ. ವ್ಯಾಪಾರಕ್ಕೆ ಬೇಕಾದ ಹಣ ಟರ್ನ್‌ಓವರ್ ಆಗುತ್ತಿಲ್ಲ. ನೋಟು ರದ್ದತಿಯಿಂದ ಇಡೀ ದೇಶಕ್ಕೆ ನಷ್ಟ ಆಗಿದೆ. ಜನರ ಬಳಿ ಹಣ ಇದ್ದರೆ ಮಾತ್ರವೇ ದೇಶದ ಪ್ರಗತಿ ಸಾಧ್ಯವಾಗುತ್ತದೆ. ಸರಕಾರ ನೋಟು ರದ್ದು ಮಾಡುವ ಬದಲು ವಿದೇಶಿದಲ್ಲಿರುವ ಕಪ್ಪು ಹಣ ವಾಪಸು ತರುತ್ತಿದ್ದರೆ ದೇಶಕ್ಕೆ ತುಂಬಾ ಲಾಭ ಆಗುತ್ತಿತ್ತು. ಅದು ಬಿಟ್ಟು ಸರಕಾರ ಜನರ ಹಣವನ್ನೇ ಕಸಿದುಕೊಂಡು ನಷ್ಟಕ್ಕೆ ಅವಕಾಶ ಮಾಡಿಕೊಟ್ಟಿದೆ.

- ಹುಸೈನ್ ಹೈಕಾಡಿ, ವ್ಯಾಪಾರಸ್ಥರು ಕುಂದಾಪುರ.

ಇದು ತಾತ್ಕಾಲಿಕ ತೊಂದರೆ

ನೋಟು ನಿಷೇಧದಿಂದ ಒಳ್ಳೇಯದೇ ಆಗಿದೆ. ಈಗ ಬಂದಿರುವುದು ತಾತ್ಕಾಲಿಕ ತೊಂದರೆ ಅಷ್ಟೇ. ಮುಂದೆ ಒಳ್ಳೆಯದಾಗಲಿದೆ. ಮಧ್ಯಮ ವರ್ಗಕ್ಕೆ ಯಾವುದೇ ತೊಂದರೆ ಆಗಿಲ್ಲ. ಖೋಟಾ ನೋಟು ಹಾವಳಿಗೆ ಕಡಿವಾಣ ಬಿದ್ದಿದೆ. ಭ್ರಷ್ಟಚಾರ ಕಡಿಮೆಯಾಗಿದೆ. ಗಗನಕ್ಕೆರಿದ್ದ ರಿಯಲ್‌ಎಸ್ಟೇಟ್ ತಹಬದಿಗೆ ಬಂದಿದೆ. ದೇಶಕ್ಕೆ ನಷ್ಟವಾಗಿಲ್ಲ, ಲಾಭವಾಗಿದೆ. ಯಾವುದೇ ಒಳ್ಳೆಯ ಕೆಲಸವಾಗಬೇಕಾದರೆ ಸಮಯಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿದೆ.
-ಡಾ.ಮಂಜುನಾಥ ಗೌಡ , 22 ಕೆರೆಗಳ ಏತನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರು.

ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು

ನೋಟು ನಿಷೇಧದಿಂದ ಜನರಿಗೆ ಬಹಳ ತೊಂದರೆಯಾಗಿದೆ. ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ನೋಟು ನಿಷೇಧದಿಂದ ಏನು ಉಪಯೋಗವಾಗಿಲ್ಲ. ಜನರು ತುಂಬ ಸಂಕಷ್ಟ ಅನುಭವಿಸಿದ್ದಾರೆ. ಶ್ರೀಮಂತರಿಗೆ ಬಹಳ ಅನುಕೂಲವಾಗಿದೆ. ಬಡ ಮತ್ತು ಮಧ್ಯಮ ವರ್ಗಕ್ಕೆ ತೊಂದರೆ ಆಗಿರುವುದೇ ಹೆಚ್ಚು. ನೋಟು ನಿಷೇಧದಿಂದ ದೇಶದ ಅರ್ಥಿಕಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ. ಜಿಡಿಪಿ ದರವೇ ಕುಸಿದೆ. ಇದೊಂದು ಕೆಟ್ಟಯೋಜನೆ.
 ಅಜ್ಜಂಪುರ ಮೃತ್ಯುಂಜಯ, ವೀರಶೈವ ಕ್ರೆಡಿಟ್ ಕೋ ಅಪರೇಟಿವ ಸೊಸೈಟಿ ಅಧ್ಯಕ್ಷರು.

ನೋಟು ನಿಷೇಧ ಸಂಪೂರ್ಣ ವಿಫಲ

ಕೇಂದ್ರದ ನೋಟು ನಿಷೇಧ ಸಂಪೂರ್ಣ ವಿಫಲವಾಗಿದೆ. ಇದರಿಂದ ದೇಶಕ್ಕೆ ಯಾವುದೇ ರೀತಿಯಿಂದ ಲಾಭವಾಗಿಲ್ಲ, ರೈತರಿಗೆ, ಮಧ್ಯಮವರ್ಗ ಮತ್ತು ಕೂಲಿ ಕಾರ್ಮಿಕರಿಗೆ ಸಂಪೂರ್ಣ ಹೊರೆಯಾಗಿದೆ. ನೋಟು ನಿಷೇಧ ದೇಶದ ದೊಡ್ಡ ದುರಂತ.
 ಮೌಲಾನಾಯ್ಕ ಎಸ್, ರೈತ ಮುಖಂಡ, ದಾವಣಗೆರೆ

ವಿಫಲ ಯೋಚನೆ

ನೋಟು ಅಮಾನ್ಯೀಕರಣ ಒಂದು ವಿಫಲ ಯೋಚನೆ ಮತ್ತು ಯೋಜನೆಯಾಗಿದೆ. ಆರಂಭದಿಂದಲೂ ದೇಶಾದ್ಯಂತ ಅವಘಡಗಳ ಸರಮಾಲೆ ಸೃಷ್ಟಿಸಿದ ಈ ಯೋಜನೆಯು ಪೂರ್ವ ತಯಾರಿ ಇಲ್ಲದಿದ್ದರಿಂದ ಪ್ರತಿಕೂಲ ಪರಿಣಾಮ ಬೀರಿದೆ. ಇದೀಗ ಒಂದು ವರ್ಷವಾದರೂ ಉದ್ದೇಶಿತ ಫಲಿತಾಂಶ ಸಿಗದಿರುವುದರಿಂದ ಯೋಜನೆ ಸಂಪೂರ್ಣ ವಿಫಲವಾಗಿದೆ. ನೋಟು ರದ್ದತಿಯಿಂದ ದೇಶಕ್ಕೆ ನಷ್ಟವಾಗಿದ್ದೇ ಹೆಚ್ಚು. ಶೇ.35 ಉದ್ಯೋಗಿಗಳನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಇದರೊಂದಿಗೆ ದೇಶದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂ.ನಷ್ಟ ಉಂಟಾಗಿದೆ. ನೋಟು ಅಮಾನ್ಯೀಕರಣ ಮಾಡಿದ ಕೇಂದ್ರಸರಕಾರದಿಂದ ಸಾಮಾನ್ಯ ಜನರ ಏಳಿಗೆ, ರೈತರ ಅಭಿವೃದ್ಧಿ ಮತ್ತು ದೇಶದ ಪ್ರಗತಿ ನಿರೀಕ್ಷಿಸುವುದು ಸರಿಯಲ್ಲ.
  ಗುರುಶಾಂತಪ್ಪ, ರೈತ ಮುಖಂಡರು, ಚಿಕ್ಕಮಗಳೂರು

ಆಕ್ರಂದನ ಹೆಚ್ಚುತ್ತಿದೆ

ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗದ ಮೋದಿ ಸರಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡಿದ ವಿಫಲ ರಾಜಕೀಯ ನಾಟಕವಾಗಿದೆ ನೋಟು ಅಮಾನ್ಯೀಕರಣ. ನೋಟ್ ಅಮಾನ್ಯೀಕರಣದಿಂದ ಸಣ್ಣ ವ್ಯಾಪಾರಸ್ಥರು, ರೈತರು, ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ನಿರುದ್ಯೋಗ ಹೆಚ್ಚಾಗುವ ಮೂಲಕ ಉದ್ಯೋಗ ಕಳೆದುಕೊಂಡವರ ಆಕ್ರಂದನ ಹೆಚ್ಚುತ್ತಿದೆ.
  ಬಿ.ಅಮ್ಜದ್, ಸಿಪಿ ಮುಖಂಡರು ಚಿಕ್ಕಮಗಳೂರು.

ತುಘಲಕ್ ದರ್ಬಾರ್

ಕೇಂದ್ರ ಸರಕಾರದ ತುಘಲಕ್ ದರ್ಬಾರ್ ರೀತಿಯ ಆರ್ಥಿಕ ನೀತಿಗಳಿಂದ ಪ್ರಸ್ತುತ ದೇಶದ ಆರ್ಥಿಕ ವ್ಯವಸ್ಥೆ ಅಧೋಗತಿಗೆ ಕುಸಿಯುತ್ತಿದೆ. ಕಳೆದ ಒಂದು ದಶಕದ ಅವಧಿಯಲ್ಲಿಯೇ ಜಿಡಿಪಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದಕ್ಕೆಲ್ಲ ನೋಟ್ ಅಮಾನ್ಯೀಕರಣ ಮುಖ್ಯ ಕಾರಣವಾಗಿದೆ. ಮೋದಿಯವರ ಸರ್ವಾಧಿಕಾರಿತನದ ಆಡಳಿತದಿಂದ ದೇಶದ ಜನಸಾಮಾನ್ಯರು ತೊಂದರೆ ಪಡುವಂತಾಗಿದೆ.

 ಪಲ್ಲವಿ , ಜಿಲ್ಲಾಧ್ಯಕ್ಷೆ , ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ.

ಆರ್ಥಿಕ ವ್ಯವಸ್ಥೆ ಅಧಃಪತನ

ನೋಟ್‌ಗಳ ಚಲಾವಣೆ ರದ್ದುಗೊಳಿಸುವ ನಿರ್ಧಾರ ಕೈಗೊಂಡಿದ್ದು ಸಂಪೂರ್ಣ ಆತುರದ, ಅವೈಜ್ಞಾನಿಕ ನಿರ್ಧಾರ. ಈ ನಿರ್ಧಾರದಿಂದ ದೇಶದ ಆರ್ಥಿಕ ವ್ಯವಸ್ಥೆ ಅಧಃಪತನಗೊಂಡಿತು. ಜನಸಾಮಾನ್ಯರು ಪರದಾಟ ಇಂದಿಗೂ ನಿಂತಿಲ್ಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಉದ್ಯೋಗ ಆಧಾರಿತ ಕ್ಷೇತ್ರಗಳಲ್ಲಿ ನೀರಸ ವಾತಾವರಣ ಮುಂದುವರಿದಿದೆ. ಉದ್ಯೋಗವಿಲ್ಲದೆ ಬಡವರು ಪರದಾಡುವಂತಾಗಿದೆ.
 ಮುಹಮ್ಮದ್ ಯೂಸುಫ್, ಜಿಲ್ಲಾಧ್ಯಕ್ಷರು, ಜೆಡಿಎಸ್ ಅಲ್ಪಸಂಖ್ಯಾತ ವಿಭಾಗ ಚಿಕ್ಕಮಗಳೂರು.

ಕ್ಷಣಿಕ ಸಮಸ್ಯೆ

ನೋಟು ರದ್ದತಿ ಮಾಡಿದ ಸಂದರ್ಭದಲ್ಲಿ ಅಡಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ತುಂಬಾ ಕಷ್ಟ ಆಯಿತು. ಆ ವೇಳೆ ಅಡಿಕೆಗೆ ಉತ್ತಮ ಬೆಲೆ ಇತ್ತು. ಆದರೆ ಖಾಸಗಿಯವರು ಯಾರು ಕೂಡ ಖರೀದಿ ಮಾಡುತ್ತಿರಲಿಲ್ಲ. ಕ್ಯಾಂಪ್ಕೊದವರು ವಾರಕ್ಕೆ 20,000ರೂ. ಮೊತ್ತದ ಉತ್ಪನ್ನಗಳನ್ನು ಮಾತ್ರ ಖರೀದಿಸುತ್ತಿ ದ್ದರು. ಇದು ಕೃಷಿಕರ ಮೇಲೆ ದೊಡ್ಡ ಹೊಡೆತ ಬಿತ್ತು. ಅದೇ ರೀತಿ ಅಡಿಕೆ ಮತ್ತು ಕಾಳು ಮೆಣಸಿನ ದರ ಇಳಿಕೆಯಾಗಿ ಕೃಷಿಕರಿಗೆ ತುಂಬಾ ನಷ್ಟ ಉಂಟಾಯಿತು. ನೋಟು ರದ್ದತಿ ಕ್ರಮವು ಆ ಕ್ಷಣಕ್ಕೆ ತೊಂದರೆಯಾದರೂ ಮುಂದೆ ಅಷ್ಟೊಂದು ಸಮಸ್ಯೆಯಾಗಲಿಲ್ಲ.

 ಕುದಿ ಶ್ರೀನಿವಾಸ ಭಟ್, ಕೃಷಿಕರು

ಇಂತಹ ಕ್ರಮ ಅಗತ್ಯ

ಪ್ರಧಾನಿ ಮೋದಿ ಕಳೆದ ವರ್ಷದ ನ.8ರಂದು ರಾತ್ರಿ ಘೋಷಿಸಿದ ನೋಟು ನಿಷೇಧದಿಂದ ಇಡೀ ದೇಶಕ್ಕೆ ಒಳ್ಳೆಯದಾಗಿದೆ. ಕಪ್ಪುಹಣದ ಹಾವಳಿ ನಿಲ್ಲುವಂತಾಗಿದೆ. ಇದರಿಂದ ಯಾರಿಗೂ ನಷ್ಟವಾಗಿಲ್ಲ. ಪ್ರತಿಯೊಬ್ಬರ ಬಳಿ ಇದ್ದ ನೋಟಿಗೆ ಬದಲಿಯನ್ನು ನೀಡಲಾಗಿದೆ. ಸಮಾಜವನ್ನು ಸ್ವಚ್ಛಗೊಳಿಸಲು ಆಗಾಗ ಇಂಥ ಕ್ರಮ ಬೇಕಾಗುತ್ತದೆ. ಆರಂಭದಲ್ಲಿ ಆರ್ಥಿಕ ಪರಿಸ್ಥಿತಿ ಸ್ವಲ್ಪ ಏರುಪೇರಾದರೂ, ಶೀಘ್ರವೇ ಇದನ್ನು ಸರಿಪಡಿಸಲಾಯಿತು.
ಬಡವರಿಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ. ದೇಶಕ್ಕೆ ಈ ಕ್ರಮದಿಂದ ಖಂಡಿತ ಲಾಭವಾಗಿದೆ. ಮುಂದೆ ಆಗಾಗ ಇಂಥ ಕ್ರಮ ತೆಗೆದುಕೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ.
 ಶ್ರೀಕೃಷ್ಣ ರಾವ್ ಕೊಡಂಚ, ಉಡುಪಿ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ

ಒಳ್ಳೆಯ ಕ್ರಮ

ನೋಟು ನಿಷೇಧ ಕ್ರಮ ಒಳ್ಳೆಯದು. ಕೇಂದ್ರ ಸರಕಾರ ಒಳ್ಳಯ ಪ್ರಯತ್ನ ಮಾಡಿದೆ. ಆದರೆ, ನಿರೀಕ್ಷೆಯಷ್ಟು ಯಶಸ್ಸು ಸಿಕ್ಕಿಲ್ಲ. ಇದರಿಂದ ದೇಶಕ್ಕೆ ಲಾಭ. ಹೇಗೆಂದರೆ ಭೂಮಿ ಮಾಫಿಯಾಕ್ಕೆ ಕಡಿವಾಣ ಬಿದ್ದಿದೆ. ಇದಕ್ಕೆ ಬಳಕೆಯಾಗುತ್ತಿದ್ದ ಬಹುತೇಕ ಅಂದರೆ, ಶೇ.50ರಷ್ಟು ಕಪ್ಪುಹಣಕ್ಕೆ ಕಡಿವಾಣ ಬಿದ್ದಿದೆ. ಹಾಗಾಗಿ ಕಪ್ಪುಹಣ ಚಲಾವಣೆ ಕಂಟ್ರೋಲ್ ಆಗಿದೆ. ನೋಟು ಅಮಾನ್ಯೀಕರಣ ವ್ಯಾಪಾರ-ವಹಿವಾಟಿನ ಮೇಲೆ ಅಷ್ಟೇನು ಪರಿಣಾಮ ಬೀರಿಲ್ಲ.
 ಮಹೇಂದ್ರಬಾಬು, ಜಿಲ್ಲಾಧ್ಯಕ್ಷರು, ಛೇಂಬರ್ಸ್‌ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಮಂಡ್ಯ.

ಕಾರ್ಪೊರೇಟ್ ಶಕ್ತಿಗಳು ಬಲಿಷ್ಠ

ನೋಟ್ ಬ್ಯಾನ್‌ನಿಂದಾಗಿ ರೀಯಲ್ ಎಸ್ಟೇಟ್ ಉದ್ಯಮ, ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳ ಬೆಳವಣಿಗೆಗಳು ಕುಂಠಿತವಾಗುತ್ತಿವೆ. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಮೋದಿ ಅವರು ಆಶ್ವಾಸನೆ ನೀಡಿದ್ದರು. ಆದರೆ, ಉದ್ಯೋಗ ಸೃಷ್ಟಿಯಾಗುವ ಬದಲು 60 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ. ನೋಟ್ ಬ್ಯಾನ್‌ನಿಂದಾಗಿ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸೀಲುಕಿದರೆ, ಕಾರ್ಪೊರೇಟ್ ಶಕ್ತಿಗಳು ಆರ್ಥಿಕವಾಗಿ ಮತ್ತಷ್ಟು ಬಲಿಷ್ಠವಾಗಿವೆ.

 ಮಾರುತಿ ಮಾನ್ಪಡೆ, ಕರ್ನಾಟಕ ಪ್ರಾಂತ ಸಂಘ

ದುಷ್ಪರಿಣಾಮ ಅಪಾರ

ವರ್ಷದ ಹಿಂದೆ ನೋಟುಗಳನ್ನು ನಿಷೇಧಿಸಿದಾಗ ಅತ್ಯುತ್ತಮ ದಿನಗಳು ಬರಲಿವೆ, ಕಪ್ಪುಹಣ ತರಲಾಗುವುದು ಎಂಬ ಭ್ರಮೆಯನ್ನು ಹುಟ್ಟಿಸಲಾಗಿತ್ತು. ಆದರೆ ಕಪ್ಪು ಹಣ ಬಿಡಿ, ಬಿಳಿಹಣವೇ ಕೈಯಲ್ಲಿ ಚಲಾವಣೆಗೆ ಬರುತ್ತಿಲ್ಲ. ಯಾವುದೇ ವ್ಯವಹಾರ ಸುಸೂತ್ರವಾಗಿ ನಡೆಯುತ್ತಿಲ್ಲ. ಜನಸಾಮಾನ್ಯರು ಮಾತ್ರವಲ್ಲ ಉದ್ಯಮಿಗಳು ಕೂಡ ಹಣವಿಲ್ಲದೆ ಪರದಾಡುವಂತಾಗಿದೆ. ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣ ಕುಸಿದಿದೆ. ಇದರಿಂದ ಕೂಲಿ ಕಾರ್ಮಿಕರಿಗೂ ಕೆಲಸವಿಲ್ಲ. ಜಿಎಸ್‌ಟಿ ಏನೂಂತ ಗೊತ್ತಿಲ್ಲದವರಿಗೂ ಜಿಎಸ್‌ಟಿಯ ಬಿಸಿ ಮುಟ್ಟಿಸಲಾಗಿದೆ. ನೋಟು ಅಮಾನ್ಯ, ಜಿಎಸ್‌ಟಿ ಜಾರಿಯಿಂದ ಸರಕಾರಕ್ಕೆ ಆದಾಯ ಹರಿದು ಬಂದಿರಬಹುದು. ಆದರೆ, ಜನರ ಬವಣೆ ಹೇಳತೀರದು. ಅವರನ್ನು ಕತ್ತಲಲ್ಲಿಟ್ಟಂತಾಗಿದೆ. ತನ್ನ ಸ್ವಂತ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡಿದರೂ ಕಷ್ಟ, ಮರಳಿ ಪಡೆದರೂ ಕಷ್ಟ. ಹಾಗಾಗಿ ಗ್ರಾಹಕರು ಬ್ಯಾಂಕ್‌ನ ಬಾಗಿಲಿಗೆ ಬಾರದ ಸ್ಥಿತಿ ಉಂಟಾಗಿದೆ. ಕೈಗಾರಿಕೆ, ಉದ್ಯಮಗಳಿಗೆ ಉತ್ತೇಜನ ನೀಡಬೇಕಿದ್ದ ಸರಕಾರ ಎಲ್ಲದಕ್ಕೂ ಹೊಡೆತ ನೀಡಿದೆ. ಜಿಲ್ಲೆಯ ಮಟ್ಟಿಗೆ ಅದರಲ್ಲೂ ಶಿಕ್ಷಣ ಕ್ಷೇತ್ರದ ಮೇಲೆ ಇದರ ದುಷ್ಪರಿಣಾಮ ಅಪಾರ.

 ಡಾ.ಎಂ.ಎನ್.ರಾಜೇಂದ್ರ ಕುಮಾರ್, ಅಧ್ಯಕ್ಷರು ಎಸ್‌ಸಿಡಿಸಿಸಿ ಬ್ಯಾಂಕ್, ಮಂಗಳೂರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)