ಬಾಡಿಗೆ ಒಪ್ಪಂದಕ್ಕೆ ಸಹಿ ಮಾಡುವ ಮುನ್ನ ಈ ಅಂಶಗಳನ್ನು ಸರಿಯಾಗಿ ಗಮನಿಸಿ
ಉದ್ಯೋಗ-ವ್ಯವಹಾರಗಳಿಗಾಗಿ ತಮ್ಮ ಹುಟ್ಟೂರು ತೊರೆದು ಇತರ ಊರುಗಳಿಗೆ ತೆರಳುವವರಿಗೆ ಮೊದಲು ಆಶ್ರಯ ನೀಡುವುದೇ ಬಾಡಿಗೆ ಮನೆಗಳು. ಬಾಡಿಗೆಗೆ ಮನೆಗಳನ್ನು ನೀಡುವವರು ಬಾಡಿಗೆದಾರನೊಂದಿಗೆ ಒಪ್ಪಂದವನ್ನು ಮಾಡಿಕೊಂಡ ಬಳಿಕವೇ ಮನೆಯ ಚಾವಿಯನ್ನು ನೀಡುತ್ತಾರೆ. ಬಾಡಿಗೆದಾರರು ಮನೆಯನ್ನು ಪ್ರವೇಶಿಸುವ ಮೊದಲು ಬಾಡಿಗೆ ಒಪ್ಪಂದವನ್ನು ಸರಿಯಾಗಿ ಓದಿಕೊಳ್ಳುವುದರಿಂದ ಭವಿಷ್ಯದಲ್ಲಿನ ಸಂಭಾವ್ಯ ತೊಂದರೆಗಳಿಂದ ಪಾರಾಗಬಹುದು.
ನೀವು ಪಡೆಯಲಿರುವ ಮನೆಯ ಬಾಡಿಗೆ ಮತ್ತು ವಾರ್ಷಿಕ ಏರಿಕೆಯ ಕರಾರು ನೀವು ಒಪ್ಪಂದದಲ್ಲಿ ಮೊದಲು ಪರಿಶೀಲಿಸಬೇಕಾದ ವಿಷಯವಾಗಿದೆ. ಒಪ್ಪಂದದಲ್ಲಿ ವಾರ್ಷಿಕ ಏರಿಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೆ ಕೆಲವು ತಿಂಗಳ ಬಳಿಕ ಮಾಲಿಕ ಬಾಡಿಗೆಯನ್ನು ಹೆಚ್ಚಿಸಲು ಮುಂದಾದರೆ ನೀವು ಸುಲಭವಾಗಿ ಅದನ್ನು ವಿರೋಧಿಸ ಬಹುದು.
ಸಾಮಾನ್ಯವಾಗಿ ಬಾಡಿಗೆಯನ್ನು ವರ್ಷದ ಬಳಿಕ ಶೇ.10ರಷ್ಟು ಹೆಚ್ಚಿಸಲಾಗುತ್ತದೆ. ನೀವು ಮತ್ತು ಮನೆಮಾಲಿಕರು ಪರಸ್ಪರ ಒಪ್ಪಿಕೊಂಡಿರುವ ಶೇಕಡಾವಾರು ಏರಿಕೆಯ ಮೊತ್ತವನ್ನು ಸರಿಯಾಗಿ ನಮೂದಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಬಾಡಿಗೆ ಒಪ್ಪಂದವನ್ನು ಸಾಮಾನ್ಯವಾಗಿ 11 ತಿಂಗಳಿಗೊಮ್ಮೆ ನವೀಕರಿಸಲಾಗುತ್ತದೆ. ಏಕೆಂದರೆ ಒಂದು ವರ್ಷದ್ದಾದರೆ ಅದನ್ನು ರಿಜಿಸ್ಟರ್ ಮಾಡಿಸಬೇಕಾಗುತ್ತದೆ. ಭದ್ರತಾ ಠೇವಣಿ ಕುರಿತು ಮತ್ತು ನೀವು ಮನೆಯನ್ನು ತೆರವು ಮಾಡುವಾಗ ಅದನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ವಿವರವೂ ಒಪ್ಪಂದದಲ್ಲಿರಲಿ. ನೀವೇ ಮನೆ ಖಾಲಿ ಮಾಡುವುದಿದ್ದರೆ ಅಥವಾ ಮಾಲಿಕನೇ ಮನೆಯನ್ನು ಖಾಲಿ ಮಾಡಿಸುವುದಿದ್ದರೆ ನೋಟಿಸ್ ಅವಧಿಯೂ ಒಪ್ಪಂದದಲ್ಲಿ ಉಲ್ಲೇಖವಾಗಿರಲಿ. ಯಾವುದೇ ಗೊಂದಲವನ್ನು ನಿವಾರಿಸಿ ಕೊಳ್ಳಲು ಬಾಡಿಗೆ ಪಾವತಿ ವಿಧಾನವು ಮೊದಲೇ ನಿರ್ಧಾರವಾಗಿದ್ದರೆ ಒಳ್ಳೆಯದು.
ಬಾಡಿಗೆ ಪಾವತಿಯಲ್ಲಿ ವಿಳಂಬವಾದರೆ ದಂಡದ ಬಗ್ಗೆ ಒಪ್ಪಂದದಲ್ಲಿ ತಿಳಿಸಲಾಗಿದೆಯೇ ಎನ್ನುವುದನ್ನು ಪರಿಶೀಲಿಸಿ. ಯಾವ ತಾರೀಖಿನೊಳಗೆ ಬಾಡಿಗೆಯನ್ನು ಪಾವತಿಸಬೇಕು ಮತ್ತು ಆ ತಾರೀಖಿನೊಳಗೆ ನೀಡದಿದ್ದರೆ ಎಷ್ಟು ಶುಲ್ಕ ತೆರಬೇಕು ಎನ್ನುವುದು ಒಪ್ಪಂದದಲ್ಲಿ ಸ್ಪಷ್ಟವಾಗಿರಲಿ. ಹೌಸಿಂಗ್ ಸೊಸೈಟಿಯಲ್ಲಿ ಬಾಡಿಗೆಗಿದ್ದರೆ ಜಿಮ್, ಪಾರ್ಕಿಂಗ್, ಕ್ಲಬ್ ಮತ್ತು ಈಜುಗೊಳದಂತಹ ಸೌಲಭ್ಯಗಳನ್ನು ನೀವು ಬಳಸಿಕೊಳ್ಳದಿದ್ದರೂ ನೀವು ಶುಲ್ಕಗಳನ್ನು ಪಾವತಿಸಬೇಕಾಗಬಹುದು.
ನೀವು ತೆರಬೇಕಾದ ಎಲ್ಲ ಶುಲ್ಕಗಳು ಒಪ್ಪಂದದಲ್ಲಿ ಕಾಣಿಸಿರಬೇಕು. ನೀವು ಮನೆಯನ್ನು ಪ್ರವೇಶಿಸುವಾಗ ವಿದ್ಯುತ್, ನೀರಿನ ಬಿಲ್ ಇತ್ಯಾದಿ ಹಳೆಯ ಯಾವುದೇ ಬಾಕಿಯಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
ಮನೆಯ ಮಾಲಿಕರು ಸಾಮಾನ್ಯ ಷರತ್ತುಗಳನ್ನು ಹೊರತುಪಡಿಸಿ ವಿಶೇಷ ಷರತ್ತುಗಳ ನ್ನೇನಾದರೂ ಒಪ್ಪಂದದಲ್ಲಿ ಸೇರಿಸಿದ್ದಾರೆಯೇ ಎನ್ನುವುದನ್ನು ನೋಡಿಕೊಳ್ಳಿ. ಉದಾಹರಣೆಗೆ ಅವರು ಸಾಕುಪ್ರಾಣಿಗಳಿಗೆ, ತಡರಾತ್ರಿಯಲ್ಲಿ ಮನೆಗೆ ಬರುವುದಕ್ಕೆ ಅಥವಾ ಲೇಟ್ನೈಟ್ ಪಾರ್ಟಿಗಳಿಗೆ, ಜೋರಾಗಿ ಸಂಗೀತ ಹಾಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಬಹುದು. ಇಂತಹ ಆಕ್ಷೇಪಗಳಿದ್ದರೆ ಅವು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಾಗಿರಬೇಕು ಮತ್ತು ಇದರಿಂದ ಆ ಸ್ಥಳ ನಿಮಗೆ ಸೂಕ್ತವೇ ಅಲ್ಲವೇ ಎನ್ನುವುದನ್ನು ನೀವು ನಿರ್ಧರಿಸಬಹುದಾಗಿದೆ.
ನಿಜವಾದ ಮಾಲಿಕನೇ ಮನೆಯನ್ನು ಬಾಡಿಗೆಗೆ ನೀಡುತ್ತಿದ್ದಾನೆಯೇ ಅಥವಾ ಮಾಲಿಕನಿಗೆ ಗೊತ್ತಿಲ್ಲದೆ ಮೊದಲೇ ಇರುವ ಬಾಡಿಗೆದಾರ ಅಥವಾ ಕೇರ್ಟೇಕರ್ ನಿಮಗೆ ಬಾಡಿಗೆಗೆ ನೀಡುತ್ತಿದ್ದಾನೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮನೆಯ ಒಡೆತನ ಯಾರ ಹೆಸರಿನಲ್ಲಿದೆ ಎನ್ನುವುದನ್ನು ಹಿಂದಿನ ವಿದ್ಯುತ್ ಬಿಲ್ ಅಥವಾ ಇತರ ದಾಖಲೆ ಗಳನ್ನು ಪರಿಶೀಲಿಸುವುದರಿಂದ ಸುಲಭವಾಗಿ ತಿಳಿದುಕೊಳ್ಳಬಹುದು. ನೀವು ಬಾಡಿಗೆಗೆ ಪಡೆಯುವ ಮನೆ ಹೌಸಿಂಗ್ ಸೊಸೈಟಿಯಲ್ಲಿದ್ದರೆ ಅದರ ನಿರಾಕ್ಷೇಪಣಾ ಪತ್ರ ಮುಖ್ಯವಾಗಿರುತ್ತದೆ.
ಮನೆಯನ್ನು ಪ್ರವೇಶಿಸುವ ಮುನ್ನ ನೆಲ, ಗೋಡೆಗಳು, ಬಣ್ಣ, ವಿದ್ಯುತ್ ಉಪಕರಣಗಳು, ಸ್ವಿಚ್ಬೋರ್ಡ್ಗಳು ಮತ್ತು ವೈರಿಂಗ್, ನೀರಿನ ಸಂಪರ್ಕ, ಅಡುಗೆಮನೆ ಮತ್ತು ವಾಷ್ರೂಮ್ನಲ್ಲಿಯ ಪ್ಲಂಬಿಂಗ್ ಸಾಧನ ಇತ್ಯಾದಿಗಳು ಸುಸ್ಥಿತಿಯಲ್ಲಿವೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಮನೆಯನ್ನು ಪ್ರವೇಶಿಸುವ ಮುನ್ನ ಮಾಲಿಕ ಅದನ್ನು ರಿಪೇರಿ ಮಾಡಿಸುವಂತೆ ನೋಡಿಕೊಳ್ಳಿ. ಇವುಗಳನ್ನು ಮೊದಲೇ ಮಾಲಿಕನ ಗಮನಕ್ಕೆ ತರುವುದಿಂದ ನೀವು ಮನೆಯಲ್ಲಿ ವಾಸಿಸತೊಡಗಿದ ಬಳಿಕ ಅವುಗಳಿಗೆ ನೀವು ಹೊಣೆಯಾಗುವುದಿಲ್ಲ.
ನೀವು ಮನೆಯಲ್ಲಿ ವಾಸ ಮಾಡತೊಡಗಿದ ಬಳಿಕ ವಿದ್ಯುತ್ ವೈರಿಂಗ್ ಅಥವಾ ಪ್ಲಂಬಿಂಗ್ ವ್ಯವಸ್ಥೆಯ ಬದಲಾವಣೆಗಳೇನಾದರೂ ಅಗತ್ಯವಾದರೆ ಅದಕ್ಕೆ ಯಾರು ಹಣ ಪಾವತಿಸಬೇಕು ಎನ್ನುವದು ಒಪ್ಪಂದದಲ್ಲಿ ಸ್ಪಷ್ಟವಾಗಿರಲಿ. ಮನೆಗೆ ಆಕಸ್ಮಿಕವಾಗಿ ಏನಾದರೂ ಹಾನಿಯಾದರೆ ಅದರ ದುರಸ್ತಿ ವೆಚ್ಚವನ್ನು ಮಾಲಿಕ ಪಾವತಿಸುತ್ತಾನೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಮನೆಯ ರಿಪೇರಿ ಮತ್ತು ನಿರ್ವಹಣೆ ವೆಚ್ಚಗಳನ್ನು ಯಾರು ಪಾವತಿಸಬೇಕು ಎನ್ನುವುದು ಮೊದಲೇ ನಿರ್ಧಾರವಾಗಿರಲಿ.