varthabharthi

ಗಲ್ಫ್ ಸುದ್ದಿ

ಸೌದಿ ರಾಜಕುಮಾರರ ಸೆರೆಮನೆಯಾಗಿ ಪರಿವರ್ತನೆಯಾದ ಐಶಾರಾಮಿ ಹೊಟೇಲ್

ವಾರ್ತಾ ಭಾರತಿ : 8 Nov, 2017

ರಿಯಾದ್, ನ. 8: ಸೌದಿ ಅರೇಬಿಯದ ರಿಯಾದ್‌ನಲ್ಲಿರುವ ಭವ್ಯ ರಿಝ್ ಕಾರ್ಲ್‌ಟನ್ ಹೊಟೇಲ್ ಎರಡು ವಾರಗಳ ಹಿಂದೆ ಸೌದಿ ಅರೇಬಿಯವನ್ನು ಹೂಡಿಕೆ ತಾಣವಾಗಿ ಬಿಂಬಿಸುವ ಅಂತಾರಾಷ್ಟ್ರೀಯ ಸಮ್ಮೇಳನವೊಂದು ನಡೆದ ಸ್ಥಳವಾಗಿತ್ತು. 3,000ಕ್ಕೂ ಅಧಿಕ ಅಧಿಕಾರಿಗಳು ಮತ್ತು ವಾಣಿಜ್ಯ ಕ್ಷೇತ್ರದ ಮುಂದಾಳುಗಳು ಅಲ್ಲಿ ನೆರೆದಿದ್ದರು.

ಈಗ ಈ ಹೊಟೇಲ್ ದೇಶದ ಕೆಲವು ರಾಜಕೀಯ ಮತ್ತು ವ್ಯಾಪಾರಿ ಕುಳಗಳನ್ನು ಬಂಧಿಸಿಡುವ ತಾತ್ಕಾಲಿಕ ಐಶಾರಾಮಿ ಬಂದೀಖಾನೆಯಾಗಿ ಮಾರ್ಪಟ್ಟಿದೆ. ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯಡಿ ಬಂಧಿಸಲ್ಪಟ್ಟ ರಾಜಕುಮಾರರು ಮತ್ತು ವ್ಯಾಪಾರಿ ಕುಳಗಳನ್ನು ಅಲ್ಲಿ ಬಂಧನದಲ್ಲಿಡಲಾಗಿದೆ.

ಈ ಭವ್ಯ ಹೊಟೇಲ್‌ನ ‘ಬಾಲ್‌ರೂಮ್ ಬಿ’ಯ ಒಳಗೆ ಸರಕಾರದ ಮಂತ್ರಿಗಳು, ವ್ಯಾಪಾರಿಗಳು ಮತ್ತು ಹಲವು ರಾಜಕುಮಾರರನ್ನು ಇರಿಸಲಾಗಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಸೋಮವಾರ ವರದಿ ಮಾಡಿದೆ.

ಭವ್ಯ ಹೊಟೇಲ್‌ನ ನೆಲದ ಮೇಲೆ ಹಾಸಲಾದ ಚಾಪೆಗಳಲ್ಲಿ ಬಂಧಿತರು ಮಲಗಿರುವುದನ್ನು ತೋರಿಸುವ ವೀಡಿಯೊವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ.

ರಿಝ್ ಹೊಟೇಲ್‌ನ ಕೋಣೆಗಳಲ್ಲಿ ಹಲವು ವಿಐಪಿಗಳನ್ನೂ ಇಡಲಾಗಿದೆ ಪತ್ರಿಕೆ ಹೇಳಿದೆ.

ಪಟ್ಟದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನೂತನವಾಗಿ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ದಳವು ಡಝನ್‌ಗಟ್ಟಲೆ ಅಧಿಕಾರಿಗಳು ಮತ್ತು ವ್ಯಾಪಾರಿ ಕುಳಗಳನ್ನು ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ. ಸೌದಿ ಆರ್ಥಿಕತೆಯನ್ನು ದಶಕಗಳ ಕಾಲ ಹದಗೆಡಿಸಿದೆಯೆನ್ನಲಾದ ಪೋಷಣೆ ಮತ್ತು ಲಂಚ ಪಾವತಿ ವ್ಯವಸ್ಥೆಗಳಿಗೆ ಕಡಿವಾಣ ಹಾಕಲು ಸೌದಿ ಯುವರಾಜ ಮುಂದಾಗಿದ್ದಾರೆ ಎನ್ನಲಾಗಿದೆ.

ಭ್ರಷ್ಟಾಚಾರ ಶಂಕಿತರ ಬ್ಯಾಂಕ್ ಖಾತೆಗಳು ಸ್ಥಗಿತ

ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ಬಂಧಿಸಲ್ಪಟ್ಟಿರುವ ಶಂಕಿತರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೌದಿ ಅರೇಬಿಯನ್ ಮನಿಟರಿ ಏಜನ್ಸಿ ಘೋಷಿಸಿದೆ.

ಶಂಕಿತರ ಖಾಸಗಿ ಬ್ಯಾಂಕ್ ಖಾತೆಗಳನ್ನಷ್ಟೇ ಸ್ಥಗಿತಗೊಳಿಸಲಾಗಿದೆ, ಅವರ ಒಡೆತನದ ಕಂಪೆನಿಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ಅದು ಹೇಳಿದೆ.

ಶಂಕಿತರ ಒಡೆತನದ ಕಂಪೆನಿಗಳ ಖಾತೆಗಳನ್ನು ಈ ಹಿಂದೆ ಅಮಾನತಿನಲ್ಲಿಟ್ಟಿದ್ದರೆ, ಅವುಗಳನ್ನು ಈಗ ತೆರವುಗೊಳಿಸಲಾಗಿದೆ ಹಾಗೂ ಸೂಕ್ತ ಬ್ಯಾಂಕಿಂಗ್ ವಿಧಾನಗಳ ಮೂಲಕ ಹಣ ವರ್ಗಾವಣೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿಕೆಯೊಂದರಲ್ಲಿ ಏಜನ್ಸಿ ತಿಳಿಸಿದೆ.

 

Comments (Click here to Expand)