varthabharthi

ಅನುಗಾಲ

ನೆಮ್ಮದಿಯ ಬಿಸಿಲುಗುದುರೆಗಳು

ವಾರ್ತಾ ಭಾರತಿ : 9 Nov, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಈಗ ಸ್ಪರ್ಧೆಯಿರುವುದು ಆಧುನಿಕತೆ, ಅಭಿವೃದ್ಧಿ, ಪ್ರಯೋಗ ಎಂಬ ಮುನ್ನೋಟಗಳಿಗೂ ಸ್ವಾರ್ಥ, ಭ್ರಷ್ಟತೆ, ಪರಂಪರೆಯ/ಸಂಪ್ರದಾಯದ ಹೆಸರಿನ ಮೂಢನಂಬಿಕೆಗಳು ಮುಂತಾದ ಹಿನ್ನೋಟಗಳಿಗೂ ಎಂದರೆ ಸರಿಯಾಗಬಹುದೇನೋ?


ಪ್ರಕಾಶ ರೈ ತಮ್ಮ ಅಭಿಪ್ರಾಯವನ್ನು ಹೇಳಿದ ಬೆನ್ನಿಗೇ ಮೊನ್ನೆ ಮೊನ್ನೆ ಖ್ಯಾತ ನಟ ಕಮಲ್ ಹಾಸನ್ ‘‘ಉಗ್ರರು ಎಲ್ಲ ಸಮುದಾಯದಲ್ಲೂ ಇದ್ದಾರೆ; ಸಹಿಷ್ಣುತೆಯನ್ನೇ ತನ್ನ ಲಕ್ಷಣವೆಂದು ಬಿಂಬಿಸುವ ಹಿಂದೂ ಧರ್ಮದಲ್ಲೂ ಉಗ್ರ ಭಯೋತ್ಪಾದನೆಯಿದೆ’’ ಎಂದು ಹೇಳಿದಾಗ ಅವರು ಉಳಿದ ಧರ್ಮಗಳಿಗೆ ವಿನಾಯಿತಿ ನೀಡಿಲ್ಲವಾದರೂ ಅವರೇನೋ ಹಿಂದೂ ಧರ್ಮದ್ರೋಹಿಯಂತೆ ಕಂಡು ಹಿಂದೂ ಮಹಾಸಭಾದ ನಾಯಕರೊಬ್ಬರು ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂಬ ಕರೆ ಕೊಟ್ಟರು.

ಈ ನಾಯಕರಿಗೆ ಅಸಂಖ್ಯಾತ ಮಂದಿ ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲದ ಸಂದೇಶವನ್ನು ನೀಡಿದ್ದನ್ನು ಗಮನಿಸಿದರೆ ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂದು ಆರೋಗ್ಯವಂತ ಮನಸ್ಸುಗಳಿಗೆ ಅನಿಸದಿರದು. ಆದರೆ ಹೀಗೆ ಕರೆಕೊಟ್ಟವರನ್ನು ಇನ್ನೂ ಬಂಧಿಸಿಲ್ಲ. ‘ಮೆರ್ಸೆಲ್’ ಎಂಬ ತಮಿಳು ಸಿನೆಮಾದಲ್ಲಿ ಭಾರತದ ಪ್ರಸಕ್ತ ಸ್ಥಿತಿಯ ಬಗ್ಗೆ (ಮುಖ್ಯವಾಗಿ ವೈದ್ಯಕೀಯ ವಲಯ ಮತ್ತು ಜಿಎಸ್‌ಟಿ) ತಮಿಳು ನಟ ವಿಜಯ್ ವಿರುದ್ಧ ಕೇಸರಿ ಪ್ರತಿಭಟನೆ ನಡೆಯಿತು. ವಿಜಯ್ ಒಬ್ಬ ಕ್ರಿಶ್ಚಿಯನ್ ಎಂದು ಅನೇಕರಿಗೆ ಗೊತ್ತಾದದ್ದೇ ಈ ಪ್ರತಿಭಟನೆಯ ಮೂಲಕ! ಹೇಗೂ ಇರಲಿ, ಈ ಸಿನೆಮಾ ಇದೇ ಕಾರಣಕ್ಕಾಗಿ ಎಂಬಂತೆ ಇನ್ನೂರು ಕೋಟಿ ರೂಪಾಯಿ ಸಂಪಾದಿಸಿ ಗಲ್ಲಾಪೆಟ್ಟಿಗೆಯಲ್ಲಿ ವಿಜಯ್ ಹೊಸ ದಾಖಲೆ ಬರೆಯುವಂತೆ ಮಾಡಿತು.

ಅದೇ ಸಮಯಕ್ಕೆ ತಮಿಳುನಾಡಿನಲ್ಲಿ ವ್ಯಂಗ್ಯ ಚಿತ್ರಕಾರ ಬಾಲಕೃಷ್ಣರನ್ನು ಅವರು ರೈತನೊಬ್ಬನು ತನ್ನ ಸಂಸಾರದೊಂದಿಗೆ ಮಾಡಿಕೊಂಡ ಆತ್ಮಹತ್ಯೆಯ ವ್ಯಂಗ್ಯಚಿತ್ರದ ಮೂಲಕ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಯನ್ನು ಅವಮಾನಿಸಿದರೆಂಬ ಆಪಾದನೆಯ ಮೇಲೆ ಬಂಧಿಸಲಾಯಿತು. ಮಳೆ ಬರುವುದೂ ಅಷ್ಟೇ: ನಮ್ಮ ಮೇಲೆ ಮಳೆ ಬರುತ್ತಿರುವಾಗ ದೃಷ್ಟಿಗೆ ಸಿಗಬಹುದಾದ ಅಳತೆಯ ದೂರದಲ್ಲಿ ಬಿಸಿಲಿರುತ್ತದೆ; ಮಳೆ ಹನಿಹಾಕುವುದಿಲ್ಲ. ಇದು ಸಮಾಜದ ಎಲ್ಲ ಕ್ಷೇತ್ರಗಳನ್ನು ಕಾಡುತ್ತಿರುವುದಂತೂ ಸತ್ಯ. ಉದಾಹರಣೆಗಳನ್ನು ‘ಸ್ಲೈಡ್ ಶೋ’ವಿನಂತೆ ಕಣ್ಮುಂದೆ ಹಾಯಿಸಬಹುದು.

ಕೇಂದ್ರ ಮಂತ್ರಿಗಳು ಮತ್ತು ಕೋಮು ನೀತಿಯನ್ನು ಬೆಂಬಲಿಸುವ ವಿಚಾರವಂತರನ್ನೊಳಗೊಂಡ ‘ಇಂಡಿಯಾ ಫೌಂಡೇಷನ್’ ಎಂಬ ಸಂಸ್ಥೆಯು ಭಾರತವನ್ನು ಕೋಮುವಾದದ ಭದ್ರ ಬುನಾದಿಯ ಮೇಲೆ ನಡೆಸುವ ಹಾದಿಯಲ್ಲಿದೆ. ಈ ಬಗ್ಗೆ ಇನ್ನೂ ಚರ್ಚೆಯಾಗಲೇ ಇಲ್ಲ. ಡಿಸೆಂಬರ್ 9ನ್ನು ವಿಶ್ವಾದ್ಯಂತ ಭ್ರಷ್ಟಾಚಾರ ವಿರೋಧಿ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಈ ಆಚರಣೆ ಸೋಗಿಗಷ್ಟೇ ನಡೆಯುತ್ತಿದೆ ಯೆಂಬುದನ್ನು ಪುಟ್ಟ ಮಗುವೂ ಹೇಳಬಲ್ಲುದು. ಅಕ್ಟೋಬರ್ 30ರಿಂದ ನವೆಂಬರ 4ರ ವರೆಗೆ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಆಂದೋಲನವನ್ನು ಕೇಂದ್ರ ಜಾಗೃತ ಆಯೋಗ ಆಚರಿಸಿತು. ಎಲ್ಲೆಡೆ ಜನರು ಭ್ರಷ್ಟಮುಕ್ತ ಭಾರತದ ಕುರಿತು ಕೂಗಾಡಿದರು. ಆದರೆ ‘ಪನಾಮ ಪೇಪರ್ಸ್‌’ ಎಂದು ಖ್ಯಾತವಾದ ಹಣಕಾಸಿನ ದೊಡ್ಡ ವಂಚನೆಯ ಪ್ರಕರಣದ ಕುರಿತು ಪಾಕಿಸ್ತಾನ ಕ್ರಮ ಕೈಗೊಂಡರೂ ಭಾರತದಲ್ಲಿ ಆ ಕುರಿತು ಆಡಳಿತ ಇನ್ನೂ ಎಚ್ಚರವಾಗಲೇ ಇಲ್ಲ.

ಬದಲಾಗಿ ಈ ಜಾಗೃತಿ ಆಂದೋಲನದ ಮುಕ್ತಾಯಕ್ಕೆ ಕಲಶವಿಟ್ಟಂತೆ ನವೆಂಬರ್ 6ರಂದು ‘ಪ್ಯಾರಡೈಸ್ ಪೇಪರ್ಸ್‌’ ಎಂಬ ಹೆಸರಿನ ಇನ್ನೊಂದು ತೆರಿಗೆ ವಂಚನೆಯ ಪ್ರಕರಣವು ಬೆಳಕಿಗೆ ಬಂದು ಅದರಲ್ಲಿ ಪಕ್ಷಾತೀತವಾಗಿ 714 ಭಾರತೀಯರು (ಎಲ್ಲರೂ ಖ್ಯಾತನಾಮಧೇಯರು) ಇರುವುದರಿಂದ ಇದೂ ಕಾಲಗರ್ಭದಲ್ಲಿ ಹೂತು ಹೋಗುವ ಸಾಧ್ಯತೆಗಳೇ ಹೆಚ್ಚು. ಪ್ರತಿಯೊಬ್ಬ ಆಪಾದಿತರೂ ತಾವೇಕೆ ಮುಗ್ಧರು ಮತ್ತು ತಪ್ಪಿತಸ್ಥರಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ನವೆಂಬರ 8ರಂದು ದೇಶಾದ್ಯಂತ ನೋಟು ಅಮಾನ್ಯೀಕರಣದ ವಾರ್ಷಿಕೋತ್ಸವ ಮತ್ತು ಪುಣ್ಯತಿಥಿ ಎರಡೂ ಆಚರಿಸಲಾಗಿದೆ. ಕಳೆದ ವರ್ಷ ನಡೆದ ಈ ಮಹತ್ತರ ಘಟನೆಗಳ ಕಾವಿನಿಂದ ಬಡ ಭಾರತೀಯ ಇನ್ನೂ ಹೊರಗೆ ಬರಲಾಗುತ್ತಿಲ್ಲ. ಎಲ್ಲೆಡೆ ವ್ಯಾಪಾರ ವ್ಯವಹಾರ ನನೆಗುದಿಗೆ ಬಿದ್ದಿದೆ. ಈ ಯೋಜನೆಯನ್ನು ಬಹಿರಂಗವಾಗಿ ಬೆಂಬಲಿಸುವವರೂ ಒಳಗೊಳಗೇ ಅಳುತ್ತಾರೆ. ಹಳೇಕಾಲದ ಬಾಲವಿಧವೆಯರಂತೆ ಮುಸುಕು ಮುಚ್ಚಿ ಅಳುತ್ತಾ ಮುಸುಕು ತೆರೆದಾಗ ನಗುವಿನ ಮುಖವಾಡ ಧರಿಸುತ್ತಾರೆ.

ಇದರ ಜೊತೆಗೇ ಜಿಎಸ್‌ಟಿ ಎಂಬ ಆಯುಧದೊಂದಿಗೆ ಸರಕಾರವು ಬಿದ್ದವನು ಮೇಲೇಳದಂತೆ ಕೊರಳೊತ್ತಿ ಹಿಡಿದಿದೆ. ಗುಣಾವಗುಣಗಳನ್ನು ವಿವೇಚಿಸದೆಯೇ ಇಂತಹ ಕ್ರಮವನ್ನು ಕೈಗೊಂಡಾಗ ಅದನ್ನು ನಿಯಂತ್ರಿಸಬೇಕಾದ ಭೀಷ್ಮಾಚಾರ್ಯರು, ದ್ರೋಣ-ಕೃಪಾಚಾರ್ಯರು ಮೌನಸಮ್ಮತಿ ನೀಡಿ ವಸ್ತ್ರಾಪಹಾರವು ನಡೆಯುವಂತೆ ನೋಡಿಕೊಂಡರು. ಅದೀಗ ಅವರನ್ನೇ ಸುಡದಿರದು.

ಕರ್ನಾಟಕದಲ್ಲಿ ನವೆಂಬರ್ 10ರಂದು ಟಿಪ್ಪು ಜಯಂತಿಯನ್ನಾಚರಿಸ ಲಾಗುತ್ತಿದೆ. ಅದಕ್ಕೆ ರಾಜಕೀಯ ಕಾರಣಗಳಿಗಾಗಿಯೇ ಕೋಮು ಬಣ್ಣಹಚ್ಚಿ ರಾಜ್ಯವನ್ನು, ಅಥವಾ ಕನಿಷ್ಠ ಪಕ್ಷ ಕೊಡಗನ್ನಾದರೂ ಸುಡುವುದಕ್ಕೆ ರಣರಂಗ ಸಜ್ಜಾಗುತ್ತಿದೆ. ಕರಾವಳಿಯ ಜನರು ಈ ದೃಷ್ಟಿಯಿಂದ ಹೆಚ್ಚು ಬುದ್ಧಿವಂತರಾಗಿ ಕಾಣಿಸುತ್ತಾರೆೆ. ಅಲ್ಲಿನ ಕ್ರೈಸ್ತರು ತಮ್ಮ ಅಸಮಾಧಾನವನ್ನು ಹಂಚಿಕೊಂಡರೂ ವಿವೇಕ ಅವರನ್ನು ಕಾಪಾಡಿದೆಯೆಂದು ಹೇಳಬಹುದು.

ತಮಾಷೆಯೆಂದರೆ, ಹೊಸ ಜಗತ್ತಿನಲ್ಲಿ ಎಲ್ಲರೂ ಇತಿಹಾಸಕಾರರು, ಎಲ್ಲರೂ ಆರ್ಥಿಕ ತಜ್ಞರು. ಇಂತಹ ವಿಚಾರಗಳ ಬಗ್ಗೆ ಬೀಸುಹೇಳಿಕೆಗಳು ಸಾಮಾನ್ಯವಾಗತೊಡಗಿವೆ. ಅವಾಚ್ಯ, ಅಶ್ಲೀಲ, ಅಪಚಾರ, ಅಪಪ್ರಚಾರ ಇವುಗಳ ಗಡಿ ಮರೆಯಾಗಿದೆ; ಅಥವಾ ಮರೆಯಾಗುತ್ತಿದೆ.

ಹೀಗೆ ಬದುಕು, ದಿನನಿತ್ಯದ ಘಟನಾವಳಿಗಳು ಪಲ್ಲಟಗಳನ್ನು ಸೂಚಿಸು ತ್ತವೆಯೇ ವಿನಾ ಸುಸಂಬದ್ಧತೆಯನ್ನಲ್ಲ. ಇದು ಕರ್ನಾಟಕದಲ್ಲೆಂದರೂ ಸರಿಯೆ, ಭಾರತದಲ್ಲೆಂದರೂ ಸರಿಯೆ, ಏಷ್ಯಾಖಂಡದಲ್ಲೆಂದರೂ ಸರಿಯೆ ಅಥವಾ ಇಡೀ ವಿಶ್ವದಲ್ಲೆಂದರೂ ಸರಿಯೆ. ನೆಮ್ಮದಿಯನ್ನು ಬಿಸಿಲುಗುದುರೆಯಾಗಿ ಕಾಣುವವರಷ್ಟೇ ಸುಖಿಗಳೆಂದೆನ್ನಬಹುದು.

ಇಷ್ಟು ವೇಗವಾಗಿ ಜಗತ್ತು ಬದಲಾದ ಕಾಲ ಇನ್ನೊಂದಿರದು. ಹಿಂದೆಲ್ಲಾ ಒಂದು ಸಂಶೋಧನೆ, ಒಂದು ಯೋಚನೆ ಪ್ರಕಟವಾದರೆ ಅದು ವಿಕಾಸದ ಬಹಳ ದೊಡ್ಡ ಹೆಜ್ಜೆಯೆಂದು ತಿಳಿಯಲಾಗುತ್ತಿತ್ತು. ವಿಜ್ಞಾನಕ್ಕೆ ಸಲ್ಲುವ ನೊಬೆಲ್ ಪ್ರಶಸ್ತಿಯ ಕಾರಣಗಳೂ ಸಾಮಾನ್ಯನಿಗೂ ತಿಳಿಯುವಂತಹದ್ದಾಗಿರುತ್ತಿತ್ತು. ಆದರೆ ಈಗ ಸಾಮಾನ್ಯರಿಗೆ ಅರ್ಥವಾಗದ ಅತ್ಯಂತ ಸೂಕ್ಷ್ಮ ಸಂಗತಿಗಳು ಸಾಧನೆಯ ಹಂತಗಳಾಗಿ ಗುರುತಿಸಲ್ಪಡುತ್ತಿವೆ. ಸಾಹಿತ್ಯದ ಕ್ಷೇತ್ರದಲ್ಲೂ ಅಷ್ಟೇ: ಯಾವುದು ಮಹತ್ತರವಾದದ್ದು ಎಂದು ತಿಳಿಯುವುದು ಕಷ್ಟವಾಗುತ್ತಿದೆ. ಕ್ರೀಡಾಜಗತ್ತಿನಲ್ಲಿ ದಾಖಲೆಗಳು ದಿನನಿತ್ಯ ಎಂಬಂತೆ ಮುರಿಯಲ್ಪಡುತ್ತವೆ. ಇಪ್ಪತ್ತನೆ ಶತಮಾನದಲ್ಲಿ ಭಾರೀ ಸಂಗತಿಗಳೆಂದು ತಿಳಿದುಕೊಂಡದ್ದು ಅಷ್ಟೇ ವೇಗವಾಗಿ ಅವಶೇಷವಾಗುತ್ತಿವೆ.

ಜಗತ್ತು ಬಹಳ ವೇಗವಾಗಿ ಹೆಜ್ಜೆಯಿಡುತ್ತಿದೆ. ಬದಲಾಗುತ್ತಿದೆ. ಬದಲಾವಣೆಯು ಅತ್ಯಂತ ಸಹಜವಾದದ್ದೇ. ಆದರೆ ಅದಕ್ಕೂ ತಾಳ್ಮೆಯ ಕಾಲಗತಿಯನ್ನು ಮನುಷ್ಯನು ನಿರ್ಮಿಸಿಕೊಳ್ಳದಿದ್ದರೆ ಅದರ ಬಲೆಗೆ ಮನುಷ್ಯನ ಬುದ್ಧಿಮತ್ತೆ ಬಲಿಯಾದರೆ ಮನುಷ್ಯ ಪ್ರಪಂಚವು ಅಳಿಯುವುದಕ್ಕೆ ಹೆಚ್ಚು ಕಾಲ ಬೇಡ. ಇದನ್ನು ಹೇಳುವಾಗ ಮನುಷ್ಯನ ಚಿಂತನೆಯ ಪ್ರಭಾವದಿಂದ ಇನ್ನೂ ಹೊಸದೇನಾದರೂ ಸೃಷ್ಟಿಯಾಗುತ್ತದೇನೋ ಮತ್ತು ಆ ಮೂಲಕ ಹೊಸ ಜಗತ್ತೇ ಸೃಷ್ಟಿಯಾಗುತ್ತದೇನೋ ಎಂದು ಅನ್ನಿಸದಿರದು. ಏಕೆಂದರೆ ಎಲ್ಲೋ ಯಾರೋ ಸಾರ್ವಭೌಮತ್ವದ ಆಕಾಂಕ್ಷಿಯಾಗಿರುತ್ತಾನೆ ಮತ್ತು ಆತನಿಗೆ ಅನುಕೂಲವಾದ ಗುಲಾಮರ ಸಂಖ್ಯೆ ಸದಾ ಸಿದ್ಧವಾಗಿರುತ್ತದೆ. ಹೀಗಾಗಿ ಮನುಷ್ಯ ಎಷ್ಟೇ ಆಧುನಿಕನಾದರೂ ಎಷ್ಟೇ ಹೊಸ ತಲೆಮಾರಿನವನಾದರೂ ತನ್ನ ಎಲ್ಲ ಹೊಸ ಜಾಣತನವನ್ನು, ಜಾಣ್ಮೆಯನ್ನು, ಆತ ತನ್ನ ಇರವನ್ನು ಮತ್ತು ತಾನೊಬ್ಬನೇ ಇರುವುದನ್ನು ಬಯಸುವ ರೀತಿಯ ಯೋಜನೆಗಳಲ್ಲಿ ವಿನಿಯೋಗಿಸಲು ಯತ್ನಿಸುತ್ತಾನೆ.

ಒಂದೆಡೆ ಹೊಸ ಹೊಸ ಔಷಧಿಗಳನ್ನು ಸಂಶೋಧಿಸಿ ಮನುಷ್ಯನನ್ನು ಅಜರಾಮರವಾಗಿಸಲು ವೈದ್ಯಕೀಯ ಜಗತ್ತು ಪ್ರಯತ್ನಿಸಿದರೆ, ಅದಕ್ಕೆ ಸವಾಲೆಸೆಯುವ ಹೊಸ ಹೊಸ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಸೃಷ್ಟಿಯಾಗುತ್ತಿವೆ. ಸಮಾಜದ ಎಲ್ಲ ಬಗೆಯ ಸಾಮಾಜಿಕ ಜಾಡ್ಯಗಳನ್ನು ನಿವಾರಿಸಲು ಒಂದೆಡೆ ಪ್ರಜ್ಞಾವಂತರು ಯತ್ನಿಸಿದರೆ ಇನ್ನೊಂದೆಡೆ ಸಮಸ್ಯೆಗಳ ಸೃಷ್ಟಿಗೆ ಕಾದುಕೊಂಡು ಹೊಂಚು ಹಾಕುತ್ತಿರುವ, ಸಂಚು ಹೂಡುತ್ತಿರುವ ಗುಂಪು ವಿಜೃಂಭಿಸುತ್ತಿದೆ. ರೊಬೋಗಳನ್ನು ಸೃಷ್ಟಿಸಿದ ಮನುಷ್ಯ ಅದರ ಕೈಗೊಂಬೆಯಾಗಿ ಮುಂದೆ ಮನುಷ್ಯನ ಅಗತ್ಯಗಳೇ ಬಾರದೆ ಎಲ್ಲವನ್ನೂ ರೋಬೋಗಳೇ ಮಾಡಬಹುದೆಂಬ ಪ್ರಮೇಯ ಸಿದ್ಧವಾಗುತ್ತಿದೆ. ದೇವರೆಷ್ಟೇ ಮುಂದುವರಿದರೂ ಸೈತಾನ ಅವನಿಗಿಂತ ಒಂದು ಹೆಜ್ಜೆ ಮುಂದಿರುತ್ತಾನೆ.

ಇವೆಲ್ಲದರೊಂದಿಗೆ ಜಗತ್ತಿನ ಎಲ್ಲ ಕಷ್ಟಕೋಟಲೆಗಳು ಪರಿಹರಿಸಲಸಾಧ್ಯ ವೆಂಬಂತಹ ಪರಿಸ್ಥಿತಿಯಿದೆ. ಬುದ್ಧ ಮಹಾವೀರರಿರಲಿ, ಯೇಸು, ಪೈಗಂಬರರಿರಲಿ, ಗಾಂಧಿ-ಅಂಬೇಡ್ಕರರಿರಲಿ, ಸಮಾಜ ಬೇರೆ ಜಗತ್ತು ಬೇರೆ ಎಂದು ತಿಳಿದವರಲ್ಲ. ತಮ್ಮ ಸುತ್ತಲಿನ ಪಿಡುಗುಗಳ ನಿವಾರಣೆಗೆ ಅವರು ತಾವು ನಂಬಿದ ಕೆಲವು ಸತ್ಯಗಳನ್ನು ಪ್ರಕಾಶಿಸಿದರು. ಇದನ್ನು ನಂಬಿ ಸಮಾಜ ನಡೆದಿದ್ದರೆ ಪ್ರಾಯಃ ಆಗಾಗ ಪರಿವರ್ತನೆಯ ಅಗತ್ಯವೇ ಬರುತ್ತಿರಲಿಲ್ಲ. ಆದರೆ ಕಾಲಾನುಕಾಲಕ್ಕೆ ಸಮಾಜವು ಬಿರುಕುಗಳನ್ನು ಸೃಷ್ಟಿಸುತ್ತಲೇ ಬಂದಿರುವುದರಿಂದ ಮತ್ತು ಅವಕ್ಕೆ ಬೇಕಾದ ಅಂಟು, ನಂಟು ಅಷ್ಟೇ ಪ್ರಭಾವಯುತವಾಗಿ, ಪರಿಣಾಮಕಾರಿಯಾಗಿ, ಒದಗಿಬರದಿರುವುದರಿಂದ ಎಲ್ಲ ನಾವಿನ್ಯವನ್ನು ಮೀರಿ ಸಮಾಜವು ಶಿಥಿಲವಾಗುವುದು ಕಂಡುಬರುತ್ತಿದೆ.

ಈಗ ಸ್ಪರ್ಧೆಯಿರುವುದು ಆಧುನಿಕತೆ, ಅಭಿವೃದ್ಧಿ, ಪ್ರಯೋಗ ಎಂಬ ಮುನ್ನೋಟಗಳಿಗೂ ಸ್ವಾರ್ಥ, ಭ್ರಷ್ಟತೆ, ಪರಂಪರೆಯ/ಸಂಪ್ರದಾಯದ ಹೆಸರಿನ ಮೂಢನಂಬಿಕೆಗಳು ಮುಂತಾದ ಹಿನ್ನೋಟಗಳಿಗೂ ಎಂದರೆ ಸರಿಯಾಗಬಹುದೇನೋ?

ಇಷ್ಟು ಅಸಂಗತವಾಗಿ ತಾತ್ವಿಕವಾಗಿ ಯೋಚಿಸಬೇಕಾದ ಅನಿವಾರ್ಯಕ್ಕೆ ಪ್ರಜ್ಞಾವಂತರು ಬರಲು ಕಾರಣಗಳಿವೆ: ಭಾರತ-ಪಾಕಿಸ್ತಾನ ಅಂತಲ್ಲ, ಅತ್ಯಂತ ವಿನಾಶಕಾರಿಯಾದ ಅಣ್ವಸ್ತ್ರಗಳನ್ನು ಶೇಖರಿಸಿದ ದೇಶಗಳು ಕೂಡಾ ತಮ್ಮ ಈ ಶ್ರೀಮಂತಿಕೆಯ ಕುರಿತು ಚಿಂತಿತವಾಗಿವೆ. ಪ್ರಯೋಗಿಸುವಂತಿಲ್ಲ; ಏಕೆಂದರೆ ಇತರರು ಕೂಡಾ ಅಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ ಮತ್ತು ಅವನ್ನು ಅವರೂ ಪ್ರತಿಯಾಗಿ ಬಳಸುವುದರಿಂದ ಜಗತ್ತಿಗೆ ಕೇಡಾಗುತ್ತದೆ ಎಂಬುದರಿಂದಲೂ ಹೆಚ್ಚಾಗಿ ತಮಗೆ ಕೇಡಾದರೆ ಎಂಬ ಸಂಶಯ ಎಲ್ಲ ಶಕ್ತರಿಗಿದೆ. ತಮ್ಮ ಅಹಂಕಾರವನ್ನು ಬದಿಗೊತ್ತಿ ವಿಶ್ವಕ್ಕೆ ಒಳಿತಾಗಲಿ ಎಂದು ಎಲ್ಲರೂ ಯೋಚಿಸಿದ್ದರೆ ಯುದ್ಧದ ಅಗತ್ಯವೇ ಬರುತ್ತಿರಲಿಲ್ಲ. ಆದರೆ ಇಂದು ಎಲ್ಲವೂ ಸ್ಫೋಟದ ಸ್ಥಿತಿಯಲ್ಲಿದೆ.

ವಿಶ್ವಸಂಸ್ಥೆಯೆಂಬ ಒಂದು ಹಿರಿಯಣ್ಣ ಆಟ ಮತ್ತು ಲೆಕ್ಕ ಇವುಗಳ ನಡುವೆ ತನ್ನ ಸ್ಥಾನವೇನು, ಸ್ಥಿತಿಗತಿಯೇನು ಎಂದು ಯೋಚಿಸುವ ಪಾಡಿನಲ್ಲಿದೆ. ಮೂರ್ತ ಮತ್ತು ಅಮೂರ್ತ ಜಗತ್ತಿನಲ್ಲಿ ನಿಜಕ್ಕೂ ತನ್ನ ಪಾಡಿಗೆ ತಾನು ಬದುಕಬಲ್ಲವರನ್ನು ಹುಡುಕಿ ಸನ್ಮಾನಿಸಬಹುದು. ನಮ್ಮ ಕೆಲವು ಸಾಹಿತಿಗಳು, ಸಂಗೀತಗಾರರು, ಕ್ರೀಡಾಪಟುಗಳು ಹೀಗಿದ್ದಾರೆ. ಅವರನ್ನು ದೇಶದ, ಸಮಾಜದ, ಕೊನೆಗೆ ತನ್ನ ನೆರೆಹೊರೆಯ ಯಾವ ಸಮಸ್ಯೆಯೂ ಕಾಡದು. ಸಂಭಾವನೆ ಅಥವಾ ಪ್ರಚಾರ ಸಿಗುವುದಾದರೆ ಅವರು ಯಾವುದರ ಪ್ರಚಾರವನ್ನೂ ಕೈಗೊಳ್ಳಬಲ್ಲರು; ಯಾವ ವೇದಿಕೆಯಿಂದಲೂ ಮಾತನಾಡಬಲ್ಲರು. ಎಲ್ಲಿಯೂ ಹಾಡಬಲ್ಲರು. ಎಲ್ಲಿಯೂ ಆಡಬಲ್ಲರು. ಮನುಷ್ಯಪ್ರಜ್ಞೆ ಜಿಜ್ಞಾಸೆಯಿಲ್ಲದೆ ಬಳಲಿದರೆ ವೈಯಕ್ತಿಕ ಅಥವಾ ಸಾಮೂಹಿಕ ಬದುಕಿಗೆ ಭವಿಷ್ಯವೆಲ್ಲಿದೆ? ಅರ್ಥವೆಲ್ಲಿದೆ? ಒಳ್ಳೆಯ ಆಸೆ-ಆಶಯಗಳು ಬಿಸಿಲುಗುದುರೆಗಳಾಗಬಾರದು ಅಲ್ಲವೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)