varthabharthi

ಸಂಪಾದಕೀಯ

ಟಿಪ್ಪು ಜಯಂತಿ: ಪ್ರಚೋದನೆ ಬೇಡ

ವಾರ್ತಾ ಭಾರತಿ : 9 Nov, 2017

ರಾಜ್ಯ ಸರಕಾರದ ವತಿಯಿಂದ ನವೆಂಬರ್ 10ರಂದು ಆಚರಿಸಲಾಗುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಜಿ.ರಮೇಶ್ ಮತ್ತು ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸರಕಾರದಿಂದ ಆಚರಿಸಲಾಗುವ ಸಾರ್ವತ್ರಿಕ ಜಯಂತಿಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ ಯಾವುದಾದರೂ ಉದಾಹರಣೆ ಇದ್ದರೆ ಕೊಡಿ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು. ಟಿಪ್ಪು ಜಯಂತಿಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದರೂ, ಆಚರಣೆಯನ್ನು ತಡೆಯಲು ಹೊರಟ ಬಿಜೆಪಿ ನಾಯಕರ ಆರ್ಭಟ ಕಡಿಮೆಯಾಗಿಲ್ಲ. ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ವಿರೋಧಿಸಲು ವಿಷಯಗಳೇ ಇಲ್ಲದ ಬಿಜೆಪಿ ನಾಯಕರಿಗೆ ಈಗ ಟಿಪ್ಪು ಜಯಂತಿ ಎಂಬ ಹೊಸ ಅಸ್ತ್ರ ಸಿಕ್ಕಿದೆ.

ಇದನ್ನೇ ನೆಪ ಮಾಡಿಕೊಂಡು ರಾಜ್ಯದಲ್ಲಿ ಕಾನೂನು ಮತ್ತು ಶಾಂತಿಗೆ ಭಂಗ ತರುವ ಚಟುವಟಿಕೆಯಲ್ಲಿ ಇವರು ತೊಡಗಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ‘‘ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸುವುದಾದರೆ, ಈ ದಿನಾಚರಣೆಯು ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ’’ ಎಂದು ಬೆಳಗಾವಿಯ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ದಾರೆ. ‘ಟಿಪ್ಪು ಜಯಂತಿ ಹಿಂದೂ ವಿರೋಧಿ’ ಎಂದು ಹೇಳಿರುವ ಸಂಜಯ್ ಪಾಟೀಲ್ ‘ಸಿದ್ದರಾಮಯ್ಯನವರು ಮೈಸೂರಿನಲ್ಲಿ ಹುಟ್ಟಿದ್ದಾರೋ ಇಲ್ಲ ಲಾಹೋರ್‌ನಲ್ಲಿ ಹುಟ್ಟಿದ್ದಾರೋ’ ಎಂದು ಕೇಳಿದ್ದಾರೆ. ಈ ಶಾಸಕನಿಗೆ ತಾನು ಶಾಸಕನಾಗುವ ಮುನ್ನ ತಾನು ಸ್ವೀಕರಿಸಿದ ಪ್ರಮಾಣ ವಚನದ ಬಗ್ಗೆ ಅರಿವಿದ್ದರೆ, ಈ ರೀತಿ ಮಾತನಾಡುತ್ತಿರಲಿಲ್ಲ.

ಇಂತಹವರು ನಮ್ಮ ಶಾಸಕರಾಗಿರುವುದು ನಮ್ಮ ನಾಡಿನ ದುರಂತ. ಸಂಜಯ್ ಪಾಟೀಲ್ ಇಂತಹ ಮಾತನ್ನು ಆಡುವ ಮುನ್ನ ತಮ್ಮ ಪಕ್ಷದ ಸರಕಾರ ರಾಜ್ಯದಲ್ಲಿ ಇದ್ದಾಗ ಏನು ನಡೆಯಿತು ಎಂಬ ಬಗ್ಗೆ ಯೋಚಿಸಬೇಕಾಗಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ವತಃ ಅವರೇ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ, ಟಿಪ್ಪು ಮಾದರಿಯ ಪೇಟ ಧರಿಸಿ ಸಂಭ್ರಮಿಸಿದ್ದರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಅವರು ಮತ್ತು ಅಂದಿನ ಗೃಹ ಸಚಿವ ಆರ್.ಅಶೋಕ್ ಟಿಪ್ಪು ವೇಷ ಧರಿಸಿ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೆ, ಖ್ಯಾತ ಇತಿಹಾಸಕಾರ ಶೇಖ್ ಅಲಿ ಬರೆದ ಟಿಪ್ಪು ಕುರಿತ ಪುಸ್ತಕಕ್ಕೆ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ.

ತಮ್ಮ ಪಕ್ಷದ ಈ ಇಬ್ಬರು ನಾಯಕರನ್ನು ಸಂಜಯ್ ಪಾಟೀಲರು ಯಾವ ದೇಶಕ್ಕೆ ಕಳುಹಿಸುತ್ತಾರೆ? ಸಂಜಯ್ ಪಾಟೀಲ್ ಈ ರೀತಿ ಮಾತನಾಡಿದ್ದರೆ, ಸದಾ ವಿವಾದಕ್ಕೆ ಹೆಸರಾದ ಮೈಸೂರಿನ ಬಿಜೆಪಿ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಮುಖ್ಯಮಂತ್ರಿಯನ್ನು ಸುಲ್ತಾನ್ ಸಿದ್ದರಾಮಯ್ಯ ಎಂದು ಛೇಡಿಸಿದ್ದಾರೆ. ಇವರಿಬ್ಬರಲ್ಲದೇ, ಇತಿಹಾಸ ಗೊತ್ತಿಲ್ಲದ ಬಿಜೆಪಿಯ ಚಿಕ್ಕಪುಟ್ಟ ನಾಯಕರೂ ಬಾಯಿಗೆ ಬಂದಂತೆ ಮಾತನಾಡಿ ತಮ್ಮ ನಾಲಗೆಯ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಟಿಪ್ಪು ಸುಲ್ತಾನ್ ಜಯಂತಿಯ ನೆಪ ಮಾಡಿಕೊಂಡು ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಹಿಂದೂ ವೋಟ್ ಬ್ಯಾಂಕ್ ನಿರ್ಮಿಸುವ ದುಸ್ಸಾಹಸಕ್ಕೆ ಬಿಜೆಪಿ ಕೈಹಾಕಿದೆ.

ಆದರೆ, ಬಹುಸಂಖ್ಯಾತ ಹಿಂದೂಗಳು ಪ್ರಜ್ಞಾವಂತರಾಗಿರುವುದರಿಂದ ಇಂತಹ ಕೋಮು ರಾಜಕೀಯಕ್ಕೆ ಅವರು ಬಲಿಯಾಗುವುದಿಲ್ಲ. ಮತದಾರರು ಹಿಂದೊಮ್ಮೆ ಅಧಿಕಾರ ನೀಡಿದಾಗ ಗಣಿ ಲೂಟಿ, ರಿಯಲ್ ಎಸ್ಟೇಟ್ ಭ್ರಷ್ಟಾಚಾರದಂತಹ ಹಗರಣಗಳನ್ನು ಮಾಡಿ ಜೈಲಿಗೆ ಹೋಗಿ ಬಂದ ಬಿಜೆಪಿ ನಾಯಕರಿಗೆ ಈಗ ಜನರ ಬಳಿಗೆ ಹೋಗಲು ವಿಷಯಗಳಿಲ್ಲ. ಜನರ ಮುಂದೆ ಹೇಳಿಕೊಳ್ಳಲು ತಮ್ಮ ಸರಕಾರದ ಸಾಧನೆಗಳಿಲ್ಲ. ಅದಕ್ಕಾಗಿ ಇತಿಹಾಸದ ಗೋರಿಯನ್ನು ಕೆದಕಿ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಕೊಡಗು, ದಕ್ಷಿಣಕನ್ನಡ, ಚಿತ್ರದುರ್ಗ ಮುಂತಾದ ಜಿಲ್ಲೆಗಳಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರೇ ಪ್ರಚೋದನಾಕಾರಿಯಾಗಿ ಮಾತನಾಡುತ್ತಿರುವುದರಿಂದ ಅಲ್ಲಿಯೂ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. ಒಂದೆಡೆ ಬಿಜೆಪಿ ನಾಯಕರು ಪರಿವರ್ತನಾ ಯಾತ್ರೆ ನಡೆಸಿದ್ದಾರೆ.

ಹೊಸ ಕರ್ನಾಟಕ ನಿರ್ಮಿಸುವ ಭರವಸೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡುತ್ತಿದ್ದಾರೆ. ಇನ್ನೊಂದೆಡೆ ಅವರದ್ದೇ ಪಕ್ಷದ ನಾಯಕರು ಟಿಪ್ಪು ಜಯಂತಿ ವಿರೋಧಿಸುವ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಹಿಂದೊಮ್ಮೆ ಈ ರಾಜ್ಯವನ್ನು ಆಳಿದ ಪಕ್ಷ, ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಈ ರೀತಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಉಂಟು ಮಾಡುವಂತಹ ಚಟುವಟಿಕೆ ನಡೆಸುವುದು ಶೋಭೆ ತರುವುದಿಲ್ಲ.

 ಚರಿತ್ರೆಯಲ್ಲಿ ಗತಿಸಿ ಹೋದ ರಾಜ ಮಹಾರಾಜರ ಬಗ್ಗೆ ಸಮಾಜದಲ್ಲಿ ಮತ್ತು ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯ ಇರುವುದು ಸಹಜ. ಅದೇ ರೀತಿ ಉಳಿದವರ ಅಭಿಪ್ರಾಯಕ್ಕೂ ಬಿಜೆಪಿ ಅಭಿಪ್ರಾಯಕ್ಕೂ ವ್ಯತ್ಯಾಸವಿರಬಹುದು. ಉಳಿದವರೆಲ್ಲ ತನ್ನ ಅಭಿಪ್ರಾಯವನ್ನೇ ಒಪ್ಪಿಕೊಳ್ಳಬೇಕೆಂದು ಒತ್ತಡ ಹೇರುವುದು ಸರಿಯಲ್ಲ. ಸರಕಾರ ನಡೆಸುತ್ತಿರುವ ಟಿಪ್ಪು ಸುಲ್ತಾನ್ ಆಚರಣೆಗೆ ವಿರೋಧವಾಗಿ ಬಿಜೆಪಿಯೂ ಪ್ರತ್ಯೇಕವಾದ ಸಭೆ ಅಥವಾ ವಿಚಾರಸಂಕಿರಣಗಳನ್ನು ನಡೆಸಿದರೆ ಅಭ್ಯಂತರವಿಲ್ಲ. ಆದರೆ, ಸರಕಾರ ನಡೆಸುವ ಕಾರ್ಯಕ್ರಮವನ್ನು ತಡೆಯುವುದಾಗಿ ಹೇಳುವುದು ಸರಿಯಲ್ಲ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ದೀನದಯಾಳ್ ಉಪಾಧ್ಯಾಯ, ಹೆಡಗೇವಾರ್ ಮುಂತಾದ ಸಂಘಪರಿವಾರದ ನಾಯಕರ ಬಗ್ಗೆ ಸರಕಾರದ ದೃಶ್ಯ ಮಾಧ್ಯಮದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇವರ ಹೆಸರಿನಲ್ಲಿ ಅನೇಕ ಯೋಜನೆಗಳನ್ನೂ ಜಾರಿಗೆ ತರಲಾಗಿದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯ ವಿವಾದಾಸ್ಪದ ಜಾಗಕ್ಕೆ ಹೋಗಿ ಅಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಬಗ್ಗೆ ವಿರೋಧ ಪಕ್ಷಗಳಿಗೆ ಭಿನ್ನಾಭಿಪ್ರಾಯವಿದ್ದರೂ ಕೇಂದ್ರ ಸರಕಾರದ ಯಾವುದೇ ಯೋಜನೆ ಅಥವಾ ಕಾರ್ಯಕ್ರಮಗಳಿಗೆ ಪ್ರತಿಪಕ್ಷಗಳು ತಡೆಯುಂಟುಮಾಡಿಲ್ಲ. ಆದರೆ, ರಾಜ್ಯದ ಬಿಜೆಪಿ ನಾಯಕರು ಟಿಪ್ಪು ಜಯಂತಿಯನ್ನು ವಿರೋಧಿಸುವ ನೆಪದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶಗಳಾದ ಕೊಡಗು, ದಕ್ಷಿಣಕನ್ನಡ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಆತಂಕದ ವಾತಾವರಣವನ್ನು ಉಂಟುಮಾಡಿದ್ದಾರೆ. ಚಿತ್ರದುರ್ಗದಲ್ಲಿ ನಾಯಕ ಸಮುದಾಯವನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಚಟುವಟಿಕೆಗೆ ಪ್ರಚೋದನೆ ನೀಡುತ್ತಿದೆ. ದಕ್ಷಿಣಕನ್ನಡದಲ್ಲಿ ಟಿಪ್ಪು ಜಯಂತಿ ದಿನವೇ ಬಿಜೆಪಿ ಪರಿವರ್ತನಾ ಯಾತ್ರೆ ಸಮಾವೇಶ ನಡೆಯಲಿರುವುದರಿಂದ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿದೆ. ಕಳೆದವರ್ಷ ಟಿಪ್ಪು ಜಯಂತಿಯ ಸಂದರ್ಭದಲ್ಲೇ ಹಿಂಸಾತ್ಮಕ ಘಟನೆಗಳು ನಡೆದಿದ್ದ ಕೊಡಗಿನಲ್ಲಿ ಹಾಗೂ ಇತ್ತೀಚೆಗೆ ಮತೀಯ ದ್ವೇಷದ ಕೆಲವು ಗಲಭೆಗಳಿಗೆ ಸಾಕ್ಷಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಯಂತ್ರಿಸಲು ಅಲ್ಲಿನ ಜಿಲ್ಲಾಡಳಿತ ಹೆಣಗಾಡುತ್ತಿದೆ.

ಇಂತಹ ಸ್ಥಿತಿಯಲ್ಲಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕಾಗಿತ್ತು. ಸಾರ್ವಜನಿಕರಲ್ಲಿ ಉಂಟಾಗಿರುವ ಆತಂಕ, ಭೀತಿಯ ವಾತಾವರಣದ ನಿವಾರಣೆಗೆ ಬಿಜೆಪಿ ನಾಯಕರು ಮುಂದಾಗಬೇಕಾಗಿತ್ತು. ಆದರೆ, ಪಕ್ಷದ ಚುನಾಯಿತ ಪ್ರತಿನಿಧಿಗಳೇ ಪ್ರಚೋದನಾಕಾರಿಯಾಗಿ ಮಾತನಾಡುತ್ತಿರುವುದು ವಿಷಾದದ ಸಂಗತಿಯಾಗಿದೆ. ಈಗಲೂ ಕಾಲಮಿಂಚಿಲ್ಲ. ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಏನೇ ಭಿನ್ನಾಭಿಪ್ರಾಯವಿರಲಿ, ಬಿಜೆಪಿ ಶಾಸಕರು ಅದನ್ನು ವ್ಯಕ್ತಪಡಿಸಲಿ. ಆದರೆ, ಟಿಪ್ಪು ಜಯಂತಿ ಆಚರಣೆಯ ದಿನ ಅದನ್ನು ನಡೆಯಲು ಬಿಡುವುದಿಲ್ಲ ಎನ್ನುವುದು, ಕಾನೂನು ಸುವ್ಯವಸ್ಥೆಗೆ ಸಮಸ್ಯೆಯನ್ನು ಉಂಟುಮಾಡುವುದು ಸರಿಯಲ್ಲ.

ಬಿಜೆಪಿಯ ಹಿರಿಯ ನಾಯಕರು ಮರುಆಲೋಚನೆ ನಡೆಸಿ ತಮ್ಮ ತೀರ್ಮಾನವನ್ನು ಕೈಬಿಡಬೇಕು. ಯಾವುದೇ ಪ್ರತಿಭಟನೆಗಿಂತ ಸಾರ್ವಜನಿಕರ ಶಾಂತಿ ಮುಖ್ಯ ಎಂಬುದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ತಂದು ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜನರ ಬಳಿಗೆ ಹೋಗಿ ಇವರು ಏನು ಹೇಳುತ್ತಾರೆ? ಜನ ಪ್ರಶ್ನಿಸಿದರೆ ಏನು ಉತ್ತರ ಕೊಡುತ್ತಾರೆ? ಆದ್ದರಿಂದ ಪ್ರಚೋದನಾಕಾರಿ ಚಟುವಟಿಕೆ ಮತ್ತು ಮಾತುಗಳಿಗೆ ಬಿಜೆಪಿ ನಾಯಕರು ಕಡಿವಾಣ ಹಾಕುವುದು ಸೂಕ್ತ.

ಇಂತಹ ಗಂಭೀರ ಸನ್ನಿವೇಶದಲ್ಲಿ ರಾಷ್ಟ್ರಮಟ್ಟದ ಬಿಜೆಪಿ ನಾಯಕರು ಮಧ್ಯ ಪ್ರವೇಶ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ತಮ್ಮ ಪಕ್ಷದ ರಾಜ್ಯ ನಾಯಕರಿಗೆ ಹಿತವಚನ ನೀಡುವುದು ಸೂಕ್ತ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)