varthabharthi

ವಿಶೇಷ-ವರದಿಗಳು

ಕೋಟೆಯ ಸುತ್ತಮುತ್ತ ಬೆಳೆದ ಗಿಡಗಂಟಿಗಳು

ಆಡಳಿತ ವರ್ಗ ಮರೆತ ಸುಲ್ತಾನ್ ಬತ್ತೇರಿ ಕೋಟೆ

ವಾರ್ತಾ ಭಾರತಿ : 9 Nov, 2017
- ಹಂಝ ಮಲಾರ್

►ತಿಂಡಿ-ತಿನಿಸುಗಳನ್ನು ತಿಂದೆಸೆದ ಪ್ಲಾಸ್ಟಿಕ್ ಚೀಲಗಳ ರಾಶಿ
►ಕೋಟೆಯುದ್ದಕ್ಕೂ ಪ್ರೇಮಿಗಳ ಚಿತ್ತಾರ-ಸಲ್ಲಾಪದ ಬರಹಗಳು

ಮಂಗಳೂರು, ನ.9: ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲು ಅತ್ಯುತ್ಸಾಹ ತೋರುವ ರಾಜ್ಯ ಸರಕಾರವು ನಗರದ ಬೋಳೂರಿನಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ಸುಲ್ತಾನ್ ಬತ್ತೇರಿ ಕೋಟೆಯನ್ನು ಮರೆತಂತಿದೆ. ಸರಕಾರ ಟಿಪ್ಪು ಜಯಂತಿಯ ಪರ ಹಾಗೂ ಬಿಜೆಪಿ ಮತ್ತು ಕೆಲವು ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತುತ್ತಿವೆ. ಕಳೆದ ಎರಡ್ಮೂರು ವರ್ಷಗಳಿಂದ ನ.10 ಟಿಪ್ಪು ಜಯಂತಿಯ ಪರ ಮತ್ತು ವಿರೋಧಕ್ಕೆ ಆಹಾರವಾಗುತ್ತಿದೆಯೇ ವಿನಃ ವಾಸ್ತವದಲ್ಲಿ ಟಿಪ್ಪು ಸುಲ್ತಾನ್‌ನ ನೆನಪಿಗೆ ಏನು ಮಾಡಬೇಕಿತ್ತೋ ಅದು ಆಗಿಲ್ಲ.

ಸುಲ್ತಾನ್ ಬತ್ತೇರಿಯು ಕೇಂದ್ರ ಸರಕಾರದ ಅಧೀನದಲ್ಲಿದ್ದು, ಜಿಲ್ಲಾಡಳಿತ, ಜಿಲ್ಲಾ ಪ್ರವಾಸೋ ದ್ಯಮ, ಜಿಲ್ಲಾ ಪ್ರಾಚ್ಯವಸ್ತು ಇಲಾಖೆಯು ಈ ಬಗ್ಗೆ ಹೆಚ್ಚು ಗಮನ ಹರಿಸಿದಂತಿಲ್ಲ. ಹಾಗಾಗಿ ಸುಲ್ತಾನ್ ಬತ್ತೇರಿಯ ಸ್ಥಿತಿ ಇದ್ದೂ ಇಲ್ಲದಂತಾಗಿದೆ.

ಈ ಕೋಟೆಯ ನಿರ್ಮಾಣಕ್ಕೂ ಒಂದು ಐತಿಹಾಸಿಕ ಕಾರಣವಿದೆ. ಅಂದರೆ ಗುರುಪುರ ನದಿಗೆ ಯುದ್ಧ ನೌಕೆಗಳು ಬರುವುದನ್ನು ತಡೆಯಲು ಟಿಪ್ಪು ಸುಲ್ತಾನನು ಕಾವಲು ಕೋಟೆಯಾಗಿ ಈ ಸುಲ್ತಾನ್ ಬತ್ತೇರಿಯನ್ನು ನಿರ್ಮಿಸಿದನು. ಇದು ಸಣ್ಣದಾದ ಒಂದು ಕಾವಲು ಗೋಪುರವಾದರೂ ಸಹ ಕೋಟೆಯಂತೆ ಕಾಣುತ್ತಿದೆ. ಪಿರಂಗಿಗಳ ಮೂಲಕ ಗುಂಡುಗಳನ್ನು ಹಾರಿಸುವ ಸಲುವಾಗಿ ಇದು ರಚಿತವಾಗಿದೆ ಎಂದು ಇಲ್ಲಿ ಅಳವಡಿಸಲಾದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.

1784ರಲ್ಲಿ ಗುರುಪುರ ನದಿಯ ತಟದಲ್ಲಿ ನಿರ್ಮಾಣಗೊಂಡ ಈ ಕೋಟೆಯು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀನಕ್ಕೊಳ ಪಟ್ಟಿವೆ. ಅಂದರೆ ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 1985ರ ಪ್ರಕಾರ ಸಂರಕ್ಷಿತ ಸ್ಮಾರಕ ಅಂದರೆ ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿದೆ. ಇದನ್ನು ನಾಶಪಡಿಸಿದರೆ, ಹಾನಿಗೈದರೆ, ವಿಕೃತಗೊಳಿಸಿದರೆ 2 ವರ್ಷ ಕಾರಾಗೃಹ ಶಿಕ್ಷೆ ಅಥವಾ 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

ಕೋಟೆಯ ಮಹತ್ವವನ್ನು ಸಾರುವ ಫಲಕ ವೊಂದು ಎಡಬದಿಯಲ್ಲಿದ್ದರೆ, ಹಾನಿಗೈದರೆ ಶಿಕ್ಷೆ ಅಥವಾ ದಂಡದ ಎಚ್ಚರಿಕೆ ಫಲಕವು ಬಲ ಬದಿಯಲ್ಲಿದೆ. ಅದು ಬಿಟ್ಟರೆ ಇಲ್ಲಿ ಬೇರೇನೂ ಇಲ್ಲ. ಅಂದರೆ ಐತಿಹಾಸಿಕ ಸ್ಮಾರಕವಾಗಿ ಗುರುತಿ ಸಲ್ಪಟ್ಟಿರುವ ಈ ಕೋಟೆಯು ವಸ್ತುಶಃ ಪಾಳು ಬಿದ್ದಂತಾಗಿದೆ. ಇದರ ರಕ್ಷಣೆಗೆ ಕಾವಲುಗಾರನಿಲ್ಲ, ಆವರಣ ಗೋಡೆಯೂ ಇಲ್ಲ. ವಿದೇಶದಿಂದ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಮಾರ್ಗದರ್ಶಿಯೂ ಇಲ್ಲ. ಕೋಟೆಯ ಗೇಟು ಸದಾ ತೆರೆದಿರುತ್ತದೆ. ಹಾಗಾಗಿ ಯಾರು ಯಾವ ಹೊತ್ತಿಗೆ ಬೇಕಾದರೂ ಈ ಕೋಟೆ ಹತ್ತಬಹುದು, ರಾತ್ರಿ ಹಗಲೆನ್ನದೆ ಕಾಲ ಕಳೆಯಬಹುದು. ಕೋಟೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದಿವೆ. ಗೋಡೆಯಲ್ಲಿ ಪ್ರೇಮಿಗಳ ಚಿತ್ತಾರವಿದೆ. ಸಲ್ಲಾಪದ ಬರಹಗಳಿವೆ. ಕೋಟೆಯ ಮೇಲ್ಗಡೆ ಮುರಿದು ಬಿದ್ದಂತಹ ನಾಲ್ಕು ಕಲ್ಲು ಬೆಂಚುಗಳಿವೆ. ಎಲ್ಲೆಡೆ ತಿಂಡಿ-ತಿನಿಸುಗಳನ್ನು ತಿಂದೆಸೆದ ಪ್ಲಾಸ್ಟಿಕ್ ಚೀಲಗಳಿವೆ.

ಕೋಟೆಯ ಎಡಬದಿಯ ಸಣ್ಣ ಗೇಟಿಗೆ ಬೀಗ ಜಡಿಯಲಾಗಿದೆ. ಇಣುಕಿ ನೋಡಿದಾಗ ಮರದ ಕೆಲವು ಸಾಮಗ್ರಿಗಳು ಕಾಣುತ್ತವೆ. ಕೆಲವು ವರ್ಷಗಳ ಹಿಂದೆ ಈ ಗೇಟಿನ ಬೀಗ ಮುರಿದು ಜಾನುವಾರೊಂದನ್ನು ಒಳಗೆ ಕಳುಹಿಸಲಾಗಿತ್ತು. ಹಾಗೇ ಹೋದ ಜಾನುವಾರು ಮರಳಿ ಬಂದಿಲ್ಲವೆನ್ನಲಾಗಿದೆ. ಆ ಬಳಿಕ ಯಾರೂ ಅದರೊಳಗೆ ಹೋಗುವ ಪ್ರಯತ್ನ ಮಾಡಿಲ್ಲ. ಆದರೆ, ಅದರೊಳಗೆ ಏನಿದೆ ಎಂಬ ಕುತೂಹಲ ಇದ್ದೇ ಇದೆ.

ಗುರುಪುರ ನದಿ ನೀರಿನ ಅಬ್ಬರದಿಂದ ಕೋಟೆಗೆ ಹಾನಿಯಾಗಬಾರದು ಎಂಬ ನಿಟ್ಟಿನಲ್ಲಿ ಮಣ್ಣು ತುಂಬಿಸಲಾಗಿದೆ. ಹಾಗಾಗಿ ಇಲ್ಲೊಂದು ರಸ್ತೆಯೂ ಸೃಷ್ಟಿಯಾಗಿದ್ದು, ವಾಹನಗಳು ಸದಾ ಇದರಲ್ಲೇ ಓಡಾಡುತ್ತಿವೆ.

2005ರಲ್ಲೇ ನಗರ ಯೋಜನಾ ಇಲಾಖೆಯು ಇದನ್ನು ಸರ್ವೇ ಕಂಟ್ರೋಲ್ ಪಾಯಿಂಟ್ ಎಂದು ಗುರುತಿಸಿವೆ. ವಿದೇಶಿ ಪ್ರವಾಸಿಗರು ಆಗಾಗ ಬರುತ್ತಿದ್ದರೂ ಕೂಡ ಜಿಲ್ಲೆ ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ಸಂಜೆ ಹೊತ್ತು ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ ನಿತ್ಯ ಪ್ರವಾಸಿಗರನ್ನು ಆಕರ್ಷಿಸಲು ಸಂಬಂಧಪಟ್ಟ ಇಲಾಖೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಂತಿಲ್ಲ.

ಕಳೆದ 50 ವರ್ಷದಿಂದ ಈ ಪರಿಸರದಲ್ಲಿ ಗುಜಿರಿ ವ್ಯಾಪಾರ ಮಾಡುತ್ತಿರುವ ಸುಮಾರು 70ರ ಹರೆಯದ ಕಾವೂರು ಶಾಂತಿನಗರ ನಿವಾಸಿ ಇಬ್ರಾಹೀಂ ‘‘ವಾರ್ತಾಭಾರತಿ’’ಯೊಂದಿಗೆ ಮಾತನಾಡಿ, ನಾನು ಸಣ್ಣದಿಂದಲ್ಲೇ ಈ ಕೋಟೆಯನ್ನು ನೋಡುತ್ತಾ ಬಂದಿದ್ದೇನೆ. ಹಿಂದೆ ತುಂಬಾ ಜನರು ಬರುತ್ತಿದ್ದರು. ಆದರೆ ಈಗ ಆ ಸಂಖ್ಯೆ ಕಡಿಮೆಯಾಗಿದೆ. ಇದೊಂದು ಐತಿಹಾಸಿಕ ಕಟ್ಟಡ. ಇದನ್ನು ಸ್ಮಾರಕವಾಗಿ ಉಳಿಸುವ ಹೊಣೆ ಸರಕಾರದ್ದಾಗಿದೆ ಎಂದರು.

ಸುಲ್ತಾನ್ ಬತ್ತೇರಿ ಎಂಬ ಈ ಕೋಟೆಯ ಮೇಲ್ಭಾಗಕ್ಕೆ ಕೆಲವು ವರ್ಷಗಳ ಹಿಂದೆ ಸಾರಣೆ ಮಾಡಲಾಗಿತ್ತು. ಇದೀಗ ಅಲ್ಲಲ್ಲಿ ಈ ಗೋಡೆಯು ಅಲ್ಲಲ್ಲಿ ಕಿತ್ತು ಬಿದ್ದಂತಿವೆ. ಅಲ್ಲದೆ ಕೋಟೆಯ ನಿರ್ವಹಣೆ ಮಾಡದ ಕಾರಣ ಪಾಳು ಬಿದ್ದಂತಿದೆ. ಇದು ಸ್ವತಃ ಟಿಪ್ಪುವಿಗೆ ಅವಮಾನ ಮಾಡಿದಂತೆ ಎಂದರೂ ಅತಿಶಯೋಕ್ತಿ ಎನಿಸದು.

ಟಿಪ್ಪು ಜಯಂತಿ ಆಚರಿಸಲು ಅತ್ಯುತ್ಸಾಹ ತೋರುವ ಸರಕಾರ ಮತ್ತು ಟಿಪ್ಪು ಜಯಂತಿ ಪರ ಧ್ವನಿ ಎತ್ತುವ ಹಾಗೂ ಅದೇ ರೀತಿ ಟಿಪ್ಪುವಿಗೆ ಐತಿಹಾಸಿಕ ಸ್ಥಾನಮಾನ ನೀಡುವ ಸಂಘಟನೆಗಳು ಸುಲ್ತಾನ್ ಬತ್ತೇರಿಯನ್ನು ಸಂರಕ್ಷಿಸಲು ಪಣ ತೊಡಬೇಕಿದೆ. ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ ಬಿಜೆಪಿ, ಸಂಘಪರಿವಾರ ಹಾಗೂ ಕೆಲವು ಕ್ರೈಸ್ತ ಸಂಘಟನೆಗಳು ಟಿಪ್ಪುವಿನ ಹೋರಾಟ, ಸಾಧನೆಯ ಬಗ್ಗೆ ತಿಳಿಯಲು ಸುಲ್ತಾನ್ ಬತ್ತೇರಿಯ ಮಹತ್ವ ಅರಿಯಲಿ.
-ಅಲಿ ಹಸನ್
ಅಧ್ಯಕ್ಷರು, ಮಂಗಳೂರು ಸೆಂಟ್ರಲ್ ಕಮಿಟಿ

ರಾಜ್ಯ ಸರಕಾರವು ಪ್ರತೀ ವರ್ಷ ಅಪ್ರತಿಮ ಸಾಧಕರಿಗೆ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು, ಮಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಹೆಜ್ಜೆಗಳ ಕುರಿತು ಸಂಶೋಧನಾ ಕೃತಿ ರಚಿಸಿ ಪ್ರಕಟಿಸುವುದು, ಟಿಪ್ಪು ಸ್ಮಾರಕ ಕಟ್ಟಡಗಳು, ಉದ್ಯಾನವನಗಳ ಸಂರಕ್ಷಣೆ ಮತ್ತು ಪುನರುಜ್ಜೀವನಗೊಳಿಸಲು ಸರಕಾರ ಮುಂದಾಗಬೇಕು, ಉಳ್ಳಾಲದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು ಎಂದು ಟಿಪ್ಪು ಕುರಿತು ನ.4ರಂದು ಮಂಗಳೂರಿನಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಅದನ್ನು ಜಾರಿಗೊಳಿಸಲು ಸಮಿತಿಯು ಕಾರ್ಯಪ್ರವೃತ್ತವಾಗಲಿದೆ.
-ಪಿ.ಎಚ್.ಎಂ.ರಫೀಕ್ ಕಾಟಿಪಳ್ಳ
ಅಧ್ಯಕ್ಷರು, ಟಿಪ್ಪು ಸುಲ್ತಾನ್ ಇತಿಹಾಸ ಸಂಶೋಧನಾ ಸಮಿತಿ

ಸುಲ್ತಾನ್ ಬತ್ತೇರಿ ವಸ್ತುಶಃ ಪಾಳು ಬಿದ್ದಿದೆ. ಇದನ್ನು ಸಂರಕ್ಷಿಸದಿದ್ದರೆ ಖಂಡಿತಾ ಇದು ನೆಲಸಮವಾದೀತು. ಇನ್ನು ಟಿಪ್ಪು ಪರ ಧ್ವನಿ ಎತ್ತುವ ಸಂಘಟನೆಗಳು, ಹೋರಾಟಗಾರರು ಇಲ್ಲೇ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ವಿದ್ಯಾರ್ಥಿಗಳು, ಪ್ರವಾಸಿಗರನ್ನು ಆಕರ್ಷಿಸುವಂತಹ ಪ್ರಯತ್ನ ಮಾಡಬೇಕು.
ಹಾಜಿ ಎಸ್.ಎಂ.ರಶೀದ್
ಅಧ್ಯಕ್ಷರು, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)