varthabharthi

ನಿಮ್ಮ ಅಂಕಣ

ಕನ್ನಡಮ್ಮನ ಮರಾಠಿ ಶೈಲಿ!

ವಾರ್ತಾ ಭಾರತಿ : 10 Nov, 2017
ಪ್ರವೀಣ್ ಎಸ್. ಶೆಟ್ಟಿ , ಮಂಗಳೂರು

ಮಾನ್ಯರೆ,

ಮೊನ್ನೆ ನವೆಂಬರ್ ಒಂದಕ್ಕೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿವಿಧ ಭಂಗಿಯ ಕನ್ನಡಮ್ಮ ಎಲ್ಲೆಡೆ ಕಂಡು ಬಂದಳು. ಆದರೆ ಈ ವರ್ಷ ಕೆಲವು ಕಡೆ ಕನ್ನಡಮ್ಮನಿಗೆ ಎರಡು ಹೆಚ್ಚುವರಿ ಕೈಗಳನ್ನು ಜೋಡಿಸಲಾಗಿತ್ತು. ಅಂದರೆ ಹಿಂದೆಲ್ಲಾ ಕೇವಲ ಎರಡೇ ಕೈ ಹೊಂದಿರುತ್ತಿದ್ದ ಕನ್ನಡಮ್ಮ ಒಂದು ಕೈಯಲ್ಲಿ ಕನ್ನಡ ಧ್ವಜ ಹಿಡಿದು ಇನ್ನೊಂದು ಕೈ ಆಶೀರ್ವದಿಸುವ ಭಂಗಿಯಲ್ಲಿ ಇರುತಿತ್ತು. ಆದರೆ ಈ ವರ್ಷ ಅವಳ ಹೆಚ್ಚುವರಿ ಕೈಯಲ್ಲಿ ರಾಜಕೀಯ ಪಕ್ಷದ ಚಿನ್ಹೆ ಇತ್ತು. ಬಲಗೈಯಲ್ಲಿ ಗುಲಾಬಿ ಬಣ್ಣದ ಕಮಲ ಮತ್ತು ಎಡಗೈಯಲ್ಲಿ ಬಿಳಿ ಬಣ್ಣದ ಕಮಲ.

ಕನ್ನಡಮ್ಮ ಕನ್ನಡಿಗಳೋ ಅಥವಾ ಮರಾಠಿಗಳೋ ಎಂಬ ಸಂಶಯ ಕೆಲವೊಮ್ಮೆ ಕಾಡುತ್ತದೆ. ಯಾಕೆಂದರೆ ಕರ್ನಾಟಕದ ಎಲ್ಲಡೆ ಪ್ರದರ್ಶಿಸುವ ಕನ್ನಡಮ್ಮನಿಗೆ ಸೀರೆ ಉಡಿಸುವ ಶೈಲಿ ಮಾತ್ರ ಮರಾಠಿಗರ ಕಚ್ಚೆಯಂತೆ ಇರುತ್ತದೆ. ಅಂದರೆ ತೊಡೆಯಿಂದ ಕಾಲಿನ ಕಡೆಗೆ ಸಪೂರವಾಗುತ್ತಾ ಹೋಗುವ ಶೈಲಿ. ಅಪ್ಪಟ ರಾಜಾ ರವಿವರ್ಮನ ಶೈಲಿಯಿದು. ರವಿವರ್ಮ ಕೇರಳದವನಾದರೂ ಅವನು ಮುಂಬೈಯಲ್ಲಿ ನೆಲೆಸಿದ್ದು ಅವನ ಮೊದಲ ಹೆಂಡತಿ ಮಲೆಯಾಳಿ ಆಗಿದ್ದರೂ ಎರಡನೆ ಹೆಂಡತಿ ಮರಾಠಿ ಸಾರಸ್ವತಳಾಗಿದ್ದಳು ಮತ್ತ್ತು ಅವಳು ಮುಂಬೈಯಲ್ಲಿ ಅಕಾಲ ಮರಣಕ್ಕೆ ತುತ್ತಾದಾಗ ರವಿವರ್ಮ ಅವಳ ದುಖದಲ್ಲಿ ಮನೋರೋಗಿಯಾಗುತ್ತಾನೆ ಹಾಗೂ ನಂತರ ಅವನು ಪ್ರತಿಯೊಂದು ಹೆಣ್ಣು ದೇವರ ಚಿತ್ರಗಳನ್ನೂ ತನ್ನ ಎರಡನೆ ಹೆಂಡತಿಯ ಚಹರೆಯುಳ್ಳ ಕಚ್ಚೆ ಹಾಕಿದ ಶೈಲಿಯಲ್ಲಿಯೇ ಚಿತ್ರಿಸ ತೊಡಗುತ್ತಾನೆ. ನಂತರ ಅದುವೇ ಎಲ್ಲಾ ಭಾರತೀಯ ಚಿತ್ರಕಾರರ ಸಾಮಾನ್ಯ ಶೈಲಿ ಆಯಿತು. ಅದರಿಂದಾಗಿಯೇ ಲಕ್ಷ್ಮೀ, ಪಾರ್ವತಿ, ಸರಸ್ವತಿ, ದುರ್ಗೆ ಇವರೆಲ್ಲಾ ಮರಾಠಿ ಶೈಲಿಯ ಕಚ್ಚೆ ಸೀರೆ ಉಟ್ಟಿರುವಂತೆಯೇ ಭಾರತದೆಲ್ಲೆಡೆ ಚಿತ್ರಿಸಲಾಗುತ್ತದೆ. ಬಹುಶ ಅದರಿಂದಾಗಿ ಕನ್ನಡಮ್ಮನಿಗೂ ಆ ಮರಾಠಿಯಮ್ಮನ ಶೈಲಿಯೇ ಬಂದು ಬಿಟ್ಟಿದೆ.

 

Comments (Click here to Expand)