varthabharthi

ನಿಮ್ಮ ಅಂಕಣ

ಕಪ್ಪು ಆರ್ಥಿಕತೆ ಎಂದರೆ ಕೇವಲ ನೋಟುಗಳಲ್ಲ

ವಾರ್ತಾ ಭಾರತಿ : 10 Nov, 2017
ವಿಕಾಸ ಆರ್ ಮೌರ್ಯ, ಬೆಂಗಳೂರು

ಭಾಗ-1

ಭಾರತದ ಬಡವರು ಮತ್ತು ಮಧ್ಯಮವರ್ಗದವರಿಗೆ ಕಳೆದ ವರ್ಷದ ನವೆಂಬರ್ 8 ಎಂದಿಗೂ ಮರೆಯಲಾರದ ಕರಾಳ ದಿನ. ಇದ್ದಕ್ಕಿದ್ದಂತೆ ಭಾರತದ ಪ್ರಧಾನಿಗಳಾದ ನರೇಂದ್ರ ಮೋದಿಯವರು ಟಿ.ವಿ ಮುಂದೆ ಪ್ರತ್ಯಕ್ಷರಾಗಿ 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿಬಿಟ್ಟಿದ್ದರು. ಇದು ಅಂದು ಭಾರತದಲ್ಲಿದ್ದ ನಗದಿನ ಶೇ. 86 ರಷ್ಟಾಗಿತ್ತು. ಒಬ್ಬ ಮನುಷ್ಯನಿಂದ ಶೇ. 86ರಷ್ಟು ರಕ್ತ ತೆಗೆದ ಮೇಲೆ ಕನಿಷ್ಠ ಪಕ್ಷ ಆತನು ಉಳಿಯಲು ಶೇ. 50ರಷ್ಟು ರಕ್ತವನ್ನಾದರೂ ಶೇಖರಿಸಿಕೊಳ್ಳಬೇಕಿತ್ತು. ಆದರೆ ವಾಸ್ತವದಲ್ಲಿ ಕೊಟ್ಟದ್ದು ಶೇ.5 ಮಾತ್ರ. ಮಿಕ್ಕಿದ್ದನ್ನು ನೀಡಲು ಬೇಕಾದದ್ದು ಬರೋಬ್ಬರಿ 6 ತಿಂಗಳು!

ಇರಲಿ, ಈ ನೋಟು ರದ್ದತಿಗೆ ಪ್ರಧಾನಿ ಮೋದಿಯವರು ನೀಡಿದ ಪ್ರಬಲ ಕಾರಣ ಕಪ್ಪುಹಣ ಮಟ್ಟಹಾಕುವುದು. ಸುಮಾರು 3 ಲಕ್ಷ ಕೋಟಿಗಳಷ್ಟು ಕಪ್ಪು ಹಣವನ್ನು ಬ್ಯಾಂಕ್ ವ್ಯವಸ್ಥೆಗೆ ಮರಳದಂತೆ ಮಾಡುವುದು. ಆದರೆ ಇದು ಶುದ್ಧ ಸುಳ್ಳಾಗಿ ಹೋಯಿತು. ಶೇ. 99 ರಷ್ಟು ಹಣ ವಾಪಾಸಾಗಿದೆ. ಆರ್‌ಬಿಐ ಘೋಷಿಸಿದಂತೆ ಬ್ಯಾಂಕ್ ವ್ಯವಸ್ಥೆಗೆ ಮರಳದೇ ಇರುವ ಹಣ ಕೇವಲ 16 ಸಾವಿರ ಕೋಟಿ. ಆದರೆ ನೋಟು ಅಮಾನ್ಯೀಕರಣದಿಂದ ದೇಶಕ್ಕಾಗಿರುವ ನಷ್ಟ ಬಹುಪಾಲು ದೊಡ್ಡದು. ಸರಳವಾಗಿ ಹೇಳಬೇಕೆಂದರೆ ಹೊಸ ನೋಟುಗಳನ್ನು ಪ್ರಿಂಟ್ ಮಾಡಿ ಜನರಿಗೆ ತಲುಪಿಸಲು ಖರ್ಚಾಗಿರುವುದು 23 ಸಾವಿರ ಕೋಟಿ. ಇದು ನೋಟು ರದ್ದತಿಯಿಂದ ವ್ಯವಸ್ಥೆಗೆ ಮರಳದ ಹಣಕ್ಕಿಂತ ಹೆಚ್ಚು. ಇದಕ್ಕೆ ಸಾಮಾನ್ಯ ಜನರೂ ಸಹ ಹೇಳಿದ್ದು ಮೋದಿಯವರು ಗುಡ್ಡ ಅಗೆದು ಇಲಿ ಹಿಡಿದರು ಎಂದು.

ದೇಶಕ್ಕಾದ ಹಾನಿ ಇಷ್ಟೇ ಅಲ್ಲ. ದೇಶದಲ್ಲಿ ಶೇ. 94 ರಷ್ಟು ಅಸಂಘಟಿತ ಕಾರ್ಮಿಕರಿರುವ ಕಾರಣ 2 ಲಕ್ಷ ಉದ್ಯೋಗಗಳು ಕಡಿತಗೊಂಡವು, ರೈತರು-ವ್ಯಾಪಾರಿಗಳು ನಷ್ಟ ಅನುಭವಿಸಿದರು, ಹಲವು ಕಾರ್ಖಾನೆಗಳು ಕೆಲಸ ನಿಲ್ಲಿಸಿದವು, ಬಹಳ ದುಃಖದ ಸಂಗತಿಯೆಂದರೆ 100 ಕ್ಕೂ ಹೆಚ್ಚು ಭಾರತೀಯರು ಪ್ರಾಣ ಕಳೆದುಕೊಂಡರು. ದೇಶದ ಜಿಡಿಪಿ 5.4ಕ್ಕೆ ಕುಸಿಯಿತು. 2016 ಆಗಸ್ಟ್ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರು ಊಹಿಸಿದಂತೆ 8.6ಕ್ಕೆ ಏರಬೇಕಿದ್ದ ಜಿಡಿಪಿ ಪಾತಾಳಕ್ಕಿಳಿಯಿತು. ಇದರಿಂದ ಭಾರತಕ್ಕೆ ಸುಮಾರು 6 ಲಕ್ಷ ಕೋಟಿ ರೂ. ನಷ್ಟವಾಯಿತು. ಆದರೆ ಮತ್ತೊಂದು ಕಡೆ ಉದ್ಯಮಿಗಳಾಗಲಿ, ರಾಜಕಾರಣಿಗಳಾಗಲಿ, ಮೇಲ್ದರ್ಜೆ ನೌಕರರಾಗಲಿ ಬ್ಯಾಂಕಿನ ಮುಂದೆ ಒಂದು ಕ್ಷಣವೂ ಹಣಕ್ಕಾಗಿ ನಿಲ್ಲಲಿಲ್ಲ. ಅವರ ಆದಾಯದಲ್ಲಿ ಇಳಿಮುಖವಾಗಲಿಲ್ಲ. ಬದಲಾಗಿ ಇನ್ನೂ ಶ್ರೀಮಂತರಾದರು. ತಮ್ಮ ಮಕ್ಕಳಿಗೆ 500 ಕೋಟಿ ಖರ್ಚು ಮಾಡಿ ಮದುವೆ ಮಾಡಿದರು. ಜನ ಸಾಮಾನ್ಯರು ಮಾತ್ರ ದಿನನಿತ್ಯದ ದಿನಸಿಗಾಗಿ, ಮಕ್ಕಳ ಮದುವೆಗಾಗಿ, ದಶಕಗಳ ಕನಸಾದ ಮನೆಗಾಗಿ-ನಿವೇಶನಕ್ಕಾಗಿ, ಆಸ್ಪತ್ರೆ ಸೇರಿದ ಸಂಬಂಧಿಕರಿಗಾಗಿ, ಗೊಬ್ಬರ-ಔಷಧಿ ಇತ್ಯಾದಿಗಳಿಗಾಗಿ ಗಂಟೆಗಟ್ಟಲೆ ನಿಂತು ನಿತ್ರಾಣರಾಗಿ ಜೀವ ಕಳೆದುಕೊಂಡರು.

ಹೀಗಿರುವಾಗ ನೋಟು ರದ್ದತಿ ಯಾರಿಗೆ ಲಾಭ ತಂದು ಕೊಟ್ಟಿತು? 8/11ರ ರಾತ್ರಿಯಿಂದ ಬೆಳಗಿನ ಜಾವದವರೆಗೆ ಹಿಂದಿನ ದಿನಾಂಕಕ್ಕೆ 10 ಗ್ರಾಂ ಚಿನ್ನವನ್ನು 50 ಸಾವಿರ ಕೊಟ್ಟು ಕೊಂಡವರಿಗೆ ಲಾಭವಾಯಿತು. ಜನಧನ ಖಾತೆಗಳಿಂದ ಲೇವಾದೇವಿಗಾರರಿಗೆ ಲಾಭವಾಯಿತು. ಬ್ಯಾಂಕ್ ಸಿಬ್ಬಂದಿಯ ಸ್ನೇಹಿತರಿಗೆ ಲಾಭವಾಯಿತು. ವಿದೇಶಗಳಲ್ಲಿ ಬಂಡವಾಳ ಹೂಡಿದವರಿಗೆ, ತೆರಿಗೆ ಮುಕ್ತ ದೇಶಗಳ ಸಂಬಂಧ ಹೊಂದಿರುವ ಕಾರ್ಪೊರೇಟ್ ಕುಳಗಳಿಗೆ ಲಾಭವಾಯಿತು. ಪಕ್ಷಭೇದವಿಲ್ಲದೆ ಎಲ್ಲಾ ಭ್ರಷ್ಟ ರಾಜಕಾರಣಿಗಳಿಗೂ ಲಾಭವಾಯಿತು.

ಕಪ್ಪುಹಣದ ಕಣಜಗಳಾಗಿರುವ ಉದ್ಯಮಿಗಳನ್ನು, ರಾಜಕಾರಣಿಗಳನ್ನು, ಮೇಲ್ದರ್ಜೆ ನೌಕರರನ್ನು (ಸರಕಾರಿ-ಖಾಸಗಿ), ಖಾಸಗಿ ವಿದ್ಯಾ ಸಂಸ್ಥೆ ಮಾಲಕರನ್ನು ನೋಟು ರದ್ದತಿ ಕೊಂಚವೂ ಅಲ್ಲಾಡಿಸಲೇ ಇಲ್ಲ. ಏಕೆ? ಅವರೆಲ್ಲಾ ಸ್ವಚ್ಛ ಹಸ್ತರೇ? ಅಲ್ಲವೇ ಅಲ್ಲ. ಇದಕ್ಕೆ ಕಾರಣ ಕಪ್ಪುಹಣ ನಗದಿನಲ್ಲಿರುವುದು ಕೇವಲ ಶೇ.1 ರಷ್ಟು ಮಾತ್ರ.

ಖ್ಯಾತ ಅರ್ಥಶಾಸ್ತ್ರಜ್ಞ ಅರುಣ್‌ಕುಮಾರ್ ಅವರು ಹೇಳುವಂತೆ ‘‘ಕಪ್ಪು ಆರ್ಥಿಕತೆಯು ನಗದು ಪ್ರಮಾಣದಲ್ಲಿ ಕಡಿಮೆ ಇದ್ದು ಸಂಪತ್ತು ಮತ್ತು ಆದಾಯದಲ್ಲಿಯೇ ಹೆಚ್ಚು ಕ್ರೋಡೀಕೃತವಾಗುತ್ತದೆ. ಅಂದರೆ ಕಪ್ಪು ಹಣ, ಕಪ್ಪುಆದಾಯ ಮತ್ತು ಕಪ್ಪುಸಂಪತ್ತು ಇವುಗಳಲ್ಲಿ ದೇಶದ ಕಪ್ಪುಆರ್ಥಿಕತೆ ಅಡಗಿ ಕೂತಿದೆ. ಈ ಕಪ್ಪುಆರ್ಥಿಕತೆ ಸೃಷ್ಟಿಗೂ ರಾಜಕಾರಣಿಗಳು-ಉದ್ಯಮಿಗಳು-ಮೇಲ್ದರ್ಜೆ ನೌಕರರ ಭ್ರಷ್ಟತೆಗೂ ನೇರಾ ನೇರ ಸಂಬಂಧವಿದೆ.

ಕಪ್ಪು ಆರ್ಥಿಕತೆ ಎಲ್ಲಾ ಅಭಿವೃದ್ಧಿಶೀಲ ರಾಷ್ಟ್ರಗಳ ಬಹುದೊಡ್ಡ ಸಮಸ್ಯೆ ಯಾಗಿದೆ. ಹಾಗೆಂದು ಅಮೆರಿಕ, ಇಂಗ್ಲೆಂಡ್, ಜಪಾನ್ ದೇಶಗಳನ್ನೂ ಇದು ಬಿಟ್ಟಿಲ್ಲ. ಭಾರತದಲ್ಲಿ ಈ ಕಪ್ಪುಆರ್ಥಿಕತೆಯ ಪ್ರಮುಖ ಕ್ಷೇತ್ರ ಕಾರ್ಪೊರೇಟ್ ಸಂಸ್ಥೆಗಳು, ಬೃಹತ್ ವ್ಯಾಪಾರ, ರಿಯಲ್ ಎಸ್ಟೇಟ್, ಖಾಸಗಿ ವಿದ್ಯಾಸಂಸ್ಥೆಗಳು, ಗುತ್ತಿಗೆ ಪದ್ಧತಿ, ಸಾಗಾಣೆೆ, ಬ್ರೋಕರ್ ವ್ಯವಸ್ಥೆ, ಸಿನೆಮಾ ಪ್ರೊಡಕ್ಷನ್ ಇತ್ಯಾದಿ. ಇವರೆಲ್ಲ ತೆರಿಗೆ ಬಚಾವು ಮಾಡಿಕೊಳ್ಳಲು ಸೃಷ್ಟಿಸಿರುವ ಜಾಲ ಕಪ್ಪು ಆರ್ಥಿಕತೆಯ ಬಹುದೊಡ್ಡ ತಾಣವಾಗಿದೆ. ಇವರೊಂದಿಗೆ ಮಾದಕ ದ್ರವ್ಯ ವ್ಯವಹಾರ, ಕಳ್ಳಸಾಗಾಣೆ, ಗ್ಯಾಂಬ್ಲಿಂಗ್ ಮುಂತಾದವು ಕೈ ಜೋಡಿಸಿ ಕಪ್ಪು ಆರ್ಥಿಕತೆಯನ್ನು ಸಲಹುತ್ತಿವೆ.

ನಾವೆಲ್ಲರೂ ದೇಶದ ಭ್ರಷ್ಟ ನೌಕರರ ಲಂಚಗುಳಿತನದಿಂದ ಕಪ್ಪು ಆರ್ಥಿಕತೆ ಹೆಚ್ಚಿದೆ ಎಂದು ತಿಳಿದಿದ್ದೇವೆ. ಆದರೆ ಲಂಚದಿಂದ ಕೇವಲ ಶೇ. 5ರಿಂದ ಶೇ. 15ರಷ್ಟು ಮಾತ್ರ ಕಪ್ಪುಆರ್ಥಿಕತೆ ಸೃಷ್ಟಿಯಾಗುತ್ತಿದೆ. ಇನ್ನು ಉಳಿದ ಶೇ 85 ರಷ್ಟು ಪಾಲು ನಮ್ಮ ದೇಶದ ಭ್ರಷ್ಟ ರಾಜಕಾರಣಿ-ಕಾರ್ಪೊರೇಟ್-ನೌಕರಶಾಹಿಗಳಿಗೆ ಸೇರಿದ್ದು. ಇದನ್ನು ತಿಳಿಯಲು ಕಪ್ಪುಆರ್ಥಿಕತೆಯ ಮೂಲಕ್ಕೆ ಕೈ ಹಾಕಬೇಕಿದೆ.

ದೇಶಕ್ಕೆ ಜಾಗತೀಕರಣ ತನ್ನ ಕರಾಳ ಕಾಲುಗಳನ್ನಿಡುವ ಮುಂಚೆ ಕೆಲವೇ ಕೆಲವು ಹಗರಣಗಳನ್ನು ಮಾತ್ರ ಈ ದೇಶ ಕಂಡಿತ್ತು. ಉದಾಹರಣೆಗೆ ಬೋಫೋರ್ಸ್ ಹಗರಣ. ಇದು 64 ಕೋಟಿ ರೂಪಾಯಿಗಳದ್ದು. ಜಾಗತೀಕರಣದ ಪ್ರಭಾವದಿಂದ 90ರ ದಶಕದಲ್ಲಿ ಸುಮಾರು 23 ಹಗರಣಗಳು ಕಾಣಿಸಿಕೊಂಡವು. ಅವೆಲ್ಲವೂ 1000 ಕೋಟಿಯನ್ನು ಮೀರಿದ್ದವು. ಉದಾಹರಣೆಗೆ ಹರ್ಷದ್ ಮೆಹ್ತಾ ಹಗರಣ. ಇದು 3,128 ಕೋಟಿ ರೂಪಾಯಿಗಳದ್ದು. 2005ರಿಂದ 2008ರೊಳಗೆ ಹಗರಣಗಳ ಸಂಖ್ಯೆ 150ಕ್ಕೇರಿತು. ಈ ಬಾರಿ ಹಗರಣಗಳೆಲ್ಲವೂ ಹಲವು ಲಕ್ಷಕೋಟಿಗಳಾಗಿದ್ದವು.

ಉದಾಹರಣೆಗೆ 2ಜಿ ಹಗರಣ. ಇದರ ಜೊತೆಗೆ ಕಪ್ಪುಹಣದಲ್ಲಿನ ಪಾಲು ಸಹ ಏರುತ್ತಾ ಬಂದಿದೆ. 50 ರ ದಶಕದಲ್ಲಿ ಶೇ.5ರಷ್ಟಿದ್ದ ಕಪ್ಪುಆರ್ಥಿಕತೆ 90ರ ದಶಕದಲ್ಲಿ ಶೇ. 30ಕ್ಕೆ ಬಂದು ಈಗ ಅಂದರೆ 2016-17ನೆ ಸಾಲಿಗೆ ಶೇ. 62 ರಷ್ಟಕ್ಕೆ ಬಂದು ನಿಂತಿದೆ. ಅರುಣ್‌ಕುಮಾರ್ ಅವರ ಪ್ರಕಾರ ನಮ್ಮ ದೇಶದ ಒಟ್ಟು ಜಿಡಿಪಿ 150 ಲಕ್ಷ ಕೋಟಿ ಎಂದು ಅಂದಾಜಿಸಿದರೆ ನಮ್ಮ ದೇಶದ ಕಪ್ಪುಆರ್ಥಿಕತೆಯ ಮೊತ್ತ ಬರೋಬ್ಬರಿ 93 ಲಕ್ಷ ಕೋಟಿ. ಅಂದರೆ ನಮ್ಮ ದೇಶ ಕೃಷಿ ಕ್ಷೇತ್ರದಲ್ಲಿ ಉತ್ಪತ್ತಿ ಮಾಡುವ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು. ಈ ಕಪ್ಪುಆರ್ಥಿಕತೆಯಿಂದ ನಮ್ಮ ದೇಶ ಪ್ರತೀ ವರ್ಷ ಶೇ. 5ರಷ್ಟು ಅಭಿವೃದ್ಧ್ದಿಯನ್ನು ಕಳೆದುಕೊಂಡು ಬಂದಿದೆ. ಕಪ್ಪುಆರ್ಥಿಕತೆಯನ್ನು ಮಟ್ಟ ಹಾಕಿದ್ದಿದ್ದರೆ ಇಷ್ಟೊತ್ತಿಗೆ ನಮ್ಮ ದೇಶದ ಆರ್ಥಿಕತೆ 1,050 ಲಕ್ಷ ಕೋಟಿ ತಲುಪಿರುತ್ತಿತ್ತು. ಅಂದರೆ ಅಮೆರಿಕದ ನಂತರ ಎರಡನೆ ದೊಡ್ಡ ಶ್ರೀಮಂತ ದೇಶ. ಈಗಿರುವುದಕ್ಕಿಂತ 7 ಪಟ್ಟು ಸಂಪತ್ತನ್ನು ಭಾರತೀಯರು ಹೊಂದುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)