varthabharthi

ಸಂಪಾದಕೀಯ

ಉಸಿರಾಡುವ ಗಾಳಿಯೇ ವಿಷವಾದರೆ?

ವಾರ್ತಾ ಭಾರತಿ : 10 Nov, 2017

ದಿಲ್ಲಿ ತಾನೇ ಹೆಣೆದ ಬಲೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಆಂದೋಲನದ ನಿಜ ಮುಖವೂ ಬಟಾಬಯಲಾಗಿದೆ. ದಿಲ್ಲಿ, ಪಂಜಾಬ್, ಹರ್ಯಾಣ ಸಹಿತ ಉತ್ತರ ಭಾರತದ ಹಲವು ನಗರಗಳಲ್ಲಿ ಜನರು ಮುಖವಾಡ ಧರಿಸಿ ಹೊರಗೆ ಕಾಲಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭವಿಷ್ಯದಲ್ಲಿ ಇಂತಹದೊಂದು ಸನ್ನಿವೇಶ ಎದುರಾಗಬಹುದು ಎಂದು ಪರಿಸರವಾದಿಗಳು ಎಚ್ಚರಿಸಿದಾಗಲೆಲ್ಲ ಅವರನ್ನು ಅಭಿವೃದ್ಧಿ ವಿರೋಧಿಗಳೆಂದು ಬಾಯಿ ಮುಚ್ಚಿಸಿದ ವ್ಯವಸ್ಥೆಯೇ, ಇಂದು ವಾಯುಮಾಲಿನ್ಯದ ಕಾರಣಗಳನ್ನು ಹುಡುಕುತ್ತಾ ತಲೆಗೆಟ್ಟು ಕೂತಿದೆ.

ಸಾಧಾರಣವಾಗಿ ಅತೀ ಮಳೆ ಅಥವಾ ಬರಗಾಲಕ್ಕೆ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಂದರ್ಭ ಎದುರಾಗುತ್ತಿತ್ತು. ಆದರೆ ಇಂದು ವಾಯು ಮಾಲಿನ್ಯದ ಕಾರಣಕ್ಕಾಗಿ ಸರಕಾರ ಶಾಲೆ ಕಾಲೇಜುಗಳಿಗೆ ರಜೆ ನೀಡಬೇಕಾದಂತಹ, ಅಘೋಷಿತ ತುರ್ತು ಪರಿಸ್ಥಿತಿಯನ್ನು ಘೋಷಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ದಿಲ್ಲಿಗೆ ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಏಕಾಏಕಿ ಯಾವುದೇ ಕಾರ್ಖಾನೆ ಸ್ಫೋಟಿಸಿ ನಡೆದ ವಾಯುಮಾಲಿನ್ಯ ಇದಲ್ಲ. ಒಂದು ರೀತಿಯಲ್ಲಿ ನಮ್ಮ ನಗರಗಳು ಅಭಿವೃದ್ಧಿಯ ಹೆಸರಿನಲ್ಲಿ ಅತೀ ಲಾಲಸೆಗೆ ಕಟ್ಟುತ್ತಿರುವ ತೆರಿಗೆಯಾಗಿದೆ ಇದು. ನಮ್ಮ ಗಾಳಿ, ನೀರು, ಮಣ್ಣನ್ನು ಕಲುಷಿತಗೊಳಿಸಿ ನಡೆಸಿದ ಅಭಿವೃದ್ಧಿಯಿಂದಾಗಿ, ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಕೊಯ್ದು ಒಮ್ಮೆಲೇ ಶ್ರೀಮಂತನಾಗಲು ಆಸೆಪಟ್ಟ ಜಿಪುಣನಂತಾಗಿದೆ ನಮ್ಮ ಸ್ಥಿತಿ. ಎಚ್ಚೆತ್ತುಕೊಳ್ಳಬೇಕಾದ ಸಂದರ್ಭದಲ್ಲಿ ನಾವು ತೋರಿಸಿದ ಉಡಾಫೆಯೇ ಇಂದು ದಿಲ್ಲಿ ಯನ್ನು ಉಸಿರಡಲಾಗದ ಸ್ಥಿತಿಗೆ ತಂದು ನಿಲ್ಲಿಸಿದೆ.

ವಿಪರ್ಯಾಸವೆಂದರೆ, ವಾಯು ಮಾಲಿನ್ಯದ ಹಿಂದಿರುವ ವಾಸ್ತವವನ್ನು ಒಪ್ಪಿಕೊಂಡು, ಅದನ್ನು ಸರಿಪಡಿಸುವ ಬದಲು ಈ ವಾಯು ಮಾಲಿನ್ಯವನ್ನು ರೈತರ ತಲೆಗೆ ಕಟ್ಟುವ ಯತ್ನ ನಡೆಯುತ್ತಿದೆ. ವಾಯು ಮಾಲಿನ್ಯ ಈ ವಾರ ಅಪಾಯಕಾರಿ ಮಟ್ಟಕ್ಕೆ ತಲುಪಲು ಪಂಜಾಬ್, ಹರ್ಯಾಣ, ಉತ್ತರಪ್ರದೇಶದ ರೈತರು ಬೆಳೆ ತ್ಯಾಜ್ಯ ಉರಿಸಿರುವುದೇ ಕಾರಣ ಎಂದು ಒಂದು ತಜ್ಞರ ಗುಂಪು ವಾದಿಸುತ್ತಿದೆ. ಇದೇ ಸಂದರ್ಭದಲ್ಲಿ ನಗರಗಳಲ್ಲಿರುವ ಕಾರ್ಖಾನೆಗಳು ಉರಿಸುತ್ತಿರುವ ತ್ಯಾಜ್ಯ, ವಾಹನಗಳು ಉಗುಳುತ್ತಿರುವ ತ್ಯಾಜ್ಯಗಳ ಕುರಿತಂತೆ ಚರ್ಚಿಸಲು ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಇವುಗಳ ಕುರಿತಂತೆ ಚರ್ಚಿಸಿ, ಕಠಿಣ ಕ್ರಮವನ್ನು ತೆಗೆದುಕೊಂಡರೆ ದೊಡ್ಡ ಕುಳಗಳಿಗೆ ನಷ್ಟವಿದೆ. ಹೀಗಾಗಿ, ಪರಿಸರ, ಗಾಳಿ, ಮಳೆ ಉಳಿಯುವುದಕ್ಕೆ ಕಾರಣವಾಗಿರುವ ರೈತರ ಮೇಲೆಯೇ ತಪ್ಪನ್ನು ಹೊರಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನವನ್ನು ಕೆಲವರು ನಡೆಸುತ್ತಿದ್ದಾರೆ.

ಈಗಾಗಲೇ ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಕಡೆಗೆ ಜಾಗತಿಕ ಸಂಸ್ಥೆಗಳು ಬೆಟ್ಟು ಮಾಡಿವೆ. ಅಂತಾರಾಷ್ಟ್ರೀಯ ಸಂಸ್ಥೆಯಾಗಿರುವ ಒಇಸಿಡಿ ನೀಡಿರುವ ವರದಿಯೊಂದರಲ್ಲಿ, 2060ರ ಹೊತ್ತಿಗೆ ವಾಯುಮಾಲಿನ್ಯದಿಂದಾಗಿ ಸಾಯುವವರ ಸಂಖ್ಯೆ ವರ್ಷಕ್ಕೆ 90 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಉಲ್ಲೇಖಿಸಲಾಗಿದೆ. ಬರೇ ಸಾವುಗಳಷ್ಟೇ ಅಲ್ಲ, ರೋಗ ರುಜಿನಗಳೂ ಹೆಚ್ಚುವ ಬಗ್ಗೆ ಈ ವರದಿ ತಿಳಿಸಿದೆ. ಅನಾರೋಗ್ಯ ಹೆಚ್ಚುತ್ತದೆ, ವೈದ್ಯಕೀಯ ವೆಚ್ಚ ಅಧಿಕವಾಗುತ್ತದೆ ಹಾಗೂ ಕೃಷಿ ಉತ್ಪನ್ನಗಳು ಇಳಿಕೆಯಾಗುತ್ತದೆ ಎಂದು ಈ ವರದಿ ಅಂದಾಜಿಸಿದೆ. ಎಲ್ಲಕ್ಕಿಂತ ಆತಂಕಕಾರಿ ಅಂಶವೆಂದರೆ, ಈ ಸಾವು ನೋವುಗಳ ಅತೀ ದೊಡ್ಡ ಫಲಾನುಭವಿ ಭಾರತವಾಗಿದೆ. ತದನಂತರದ ಸ್ಥಾನದಲ್ಲಿ ಚೀನಾ ನಿಂತಿದೆ.

2010ಕ್ಕೆ ಹೋಲಿಸಿದರೆ 2060ರಲ್ಲಿ ಅವಧಿಪೂರ್ವ ಸಾವುಗಳ ಸಂಖ್ಯೆ ಚೀನಾದಲ್ಲಿ ಮೂರು ಪಟ್ಟು ಹೆಚ್ಚಳವಾದರೆ ಭಾರತದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಲಿದೆ ಎಂದು ವರದಿ ತಿಳಿಸಿದೆ. ಹೆಚ್ಚುತ್ತಿರುವ ವಿದ್ಯುತ್ ಸ್ಥಾವರಗಳು ಮತ್ತು ವಾಹನಗಳೇ ವಾಯುಮಾಲಿನ್ಯಗಳಿಗೆ ಮುಖ್ಯ ಕಾರಣವಾಗಿವೆ ಎಂದೂ ವರದಿ ಹೇಳುತ್ತದೆ. ದುರಂತವೆಂದರೆ, 2060ರವರೆಗೆ ಭಾರತ ಕಾಯುವುದಕ್ಕೆ ಸಿದ್ಧವಿಲ್ಲ ಎನ್ನುವಂತೆ, ನಗರಗಳನ್ನು ಈಗಲೇ ಅಧ್ವಾನ ಮಾಡಿಟ್ಟಿದೆ. ಸ್ವಚ್ಛತೆಗಾಗಿ ಸರಕಾರ ಕರವನ್ನೇನೋ ವಸೂಲಿ ಮಾಡುತ್ತಿದೆ. ಆದರೆ ಸ್ವಚ್ಛತೆ ಎಂದರೆ, ರಾಜಕಾರಣಿಗಳು ಒಂದು ದಿನ ರಸ್ತೆಗಿಳಿದು ಕಸ ಗುಡಿಸಿದಂತೆ ನಟಿಸುವುದು ಅಲ್ಲ. ಸ್ವಚ್ಛತೆ ಎಂದರೆ ಕೇವಲ ಕಸಗಳಷ್ಟೇ ಅಲ್ಲ. ನಾವು ಉಸಿರಾಡುವ ಗಾಳಿಯನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಈ ಆಂದೋಲನದ ವ್ಯಾಪ್ತಿಗೊಳಪಡುತ್ತದೆ. ಆದರೆ ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ ಕೈಗಾರಿಕೆಗಳು ಯಥೇಚ್ಛವಾಗಿ ತೆರೆದುಕೊಳ್ಳುತ್ತಿವೆ. ವಿದ್ಯುತ್ ಸ್ಥಾವರಗಳೂ ಒಂದರ ಹಿಂದೆ ಒಂದರಂತೆ ಸ್ಥಾಪನೆಯಾಗುತಿವೆ.

ಈ ದೇಶದಲ್ಲಿ ಪ್ರತಿಯೊಂದಕ್ಕೂ ನಿರ್ಬಂಧವಿದೆ. ಆದರೆ ಒಬ್ಬ ಶ್ರೀಮಂತ ಎಷ್ಟು ವಾಹನಗಳನ್ನು ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಮಾತ್ರ ನಿರ್ಬಂಧವಿಲ್ಲ. ಅವು ಉಗುಳುತ್ತಿರುವ ತ್ಯಾಜ್ಯಗಳಿಗೆ ಎಷ್ಟು ದಂಡಕಟ್ಟಲಾಗಿದೆ ಎನ್ನುವುದರ ಕುರಿತಂತೆ ಲೆಕ್ಕವಿಲ್ಲ. ದಿಲ್ಲಿಯಲ್ಲಿ ಸಂಭವಿಸುತ್ತಿರುವುದು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಂಭವಿಸುವ ದಿನ ದೂರವಿಲ್ಲ. ಕೆಲವು ದಿನಗಳ ಹಿಂದೆ ಒಂದು ಸುದೀರ್ಘ ಮಳೆ ಬೆಂಗಳೂರನ್ನು ಅಸ್ತವ್ಯಸ್ತಗೊಳಿಸಿತು. ಇದೇ ಸಂದರ್ಭದಲ್ಲಿ ವಾಯುಮಾಲಿನ್ಯದಲ್ಲೂ ಬೆಂಗಳೂರು ಕುಖ್ಯಾತವಾಗಿದೆ ಎನ್ನುವ ಅಂಶವನ್ನು ನಾವು ಮರೆಯಬಾರದು.

ಸುಮಾರು 800 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿ ನಿಂತಿರುವ ಬೆಂಗಳೂರು ಬೆಳೆಯುತ್ತಿದೆ ನಿಜ. ಆದರೆ ಅದರ ಜೊತೆ ಜೊತೆಗೆ ವಾಯುಮಾಲಿನ್ಯವೂ ಬೆಳೆಯುತ್ತಿದೆ. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ವಾಯು ಮಾಲಿನ್ಯವನ್ನು ಎದುರಿಸುತ್ತಿರುವ ನಗರ ಬೆಂಗಳೂರು. ಯಾವುದೇ ತಡೆಯಿಲ್ಲದೆ ಹಬ್ಬುತ್ತಿರುವ ಈ ವಾಯುಮಾಲಿನ್ಯದ ಪ್ರಮಾಣ ಶೇ. 57ರಷ್ಟು ಹೆಚ್ಚಿದೆ ಎಂದು ಸಿಎಸ್‌ಇ ಬಿಡುಗಡೆ ಮಾಡಿದ ವರದಿಯೊಂದು ಹೇಳುತ್ತದೆ. ಬೆಂಗಳೂರಿನ ಬಳಿಕ ವಿಜಯವಾಡ, ಹೈದರಾಬಾದ್, ಚೆನ್ನೈ, ಕೊಯಮತ್ತೂರು, ಮಧುರೈ ಹಂತಹಂತವಾಗಿ ವಾಯುಮಾಲಿನ್ಯವನ್ನು ಹಂಚಿಕೊಂಡಿವೆ.

ಬೆಂಗಳೂರಿನಲ್ಲಿ ವಾಯುಮಾಲಿನ್ಯದಿಂದ ಸಾಯುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಂಶವನ್ನು ಈ ವರದಿ ಹೇಳುತ್ತದೆ. ಅದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ, ವಿಷಕಾರಿ ಗಾಳಿಯುಳ್ಳ ಪ್ರದೇಶಗಳ ಪೈಕಿ ಇಡೀ ದೇಶಕ್ಕೆ ಬೆಂಗಳೂರು ಮುಂದಿದೆ. ಅತೀ ಹೆಚ್ಚು ವಾಹನ ಹೊಂದಿರುವ ಮೆಟ್ರೋನಗರಗಳ ಪೈಕಿ ದಿಲ್ಲಿ ಮೊದಲ ಸ್ಥಾನದಲ್ಲಿದೆ. ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಲ್ಲಿರುವ ವಾಹನಗಳ ಮಾಲಿನ್ಯವನ್ನು ಕೂಡಿಸಿದರೆ ಒಟ್ಟು ಮಾಲಿನ್ಯ ದಿಲ್ಲಿಯೊಂದರಲ್ಲೇ ಸೃಷ್ಟಿಯಾಗುತ್ತದೆ. ಹಾಗೆಯೇ ಅತ್ಯಧಿಕ ವಾಹನ ಹೊಂದಿರುವ ನಗರವಾಗಿ ಬೆಂಗಳೂರು ಎರಡನೆ ಸ್ಥಾನದಲ್ಲಿದೆ. ಆದುದರಿಂದ, ದೂರದ ದಿಲ್ಲಿಯಲ್ಲಿ ಇಂದು ಸಂಭವಿಸುತ್ತಿರುವುದು ನಾಳೆ ಬೆಂಗಳೂರಿನಲ್ಲಿ ಸಂಭವಿಸಲು ಹೆಚ್ಚು ದಿನಗಳ ಅಗತ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ವಾಯುಮಾಲಿನ್ಯ ಮುಂದಿನ ದಿನಗಳಲ್ಲಿ ನಿರ್ದಿಷ್ಟ ನಗರಗಳಿಗೆ ಸೀಮಿತವಾಗಿ ಉಳಿಯದೇ ದೇಶದ ಉದ್ದಗಲಕ್ಕೆ ವಿಸ್ತರಿಸಲಿದೆ. ಅದಕ್ಕೆ ಮುನ್ನ ನಾವು ಎಚ್ಚರಗೊಳ್ಳುವುದು ಅತ್ಯಗತ್ಯ.

ವಾಯುಮಾಲಿನ್ಯವನ್ನು ತಡೆಯುವುದಕ್ಕೆ ನಗರಗಳಿಗಿರುವ ಒಂದೇ ದಾರಿ, ವಾಹನ ದಟ್ಟಣೆಗಳಿಗೆ ನಿರ್ಬಂಧ ಹೇರುವುದು. ಕನಿಷ್ಠ ಒಂದಕ್ಕಿಂತ ಅಧಿಕ ವಾಹನಗಳನ್ನು ಹೊಂದಿರುವಾತನ ಮೇಲೆ ದುಬಾರಿ ದಂಡ ವಿಧಿಸುವುದು. ಅಥವಾ ನಿರ್ದಿಷ್ಟ ಸಂಖ್ಯೆಗಿಂತ ಅಧಿಕ ವಾಹನ ಹೊಂದದಂತೆ ನಿರ್ಬಂಧ ಹೇರುವುದು. ಹಾಗೆಯೇ ವಿದೇಶಗಳಲ್ಲಿ ತಿರಸ್ಕರಿಸಲ್ಪಟ್ಟ ವಿದ್ಯುತ್ ಸ್ಥಾವರಗಳ ಕುರಿತಂತೆ ಜಾಗ್ರತೆ ವಹಿಸುವುದು. ನಗರಗಳನ್ನು ಹೆಚ್ಚು ಹೆಚ್ಚು ಹಸಿರುಗೊಳಿಸುವುದು. ಇರುವ ಮರಗಳನ್ನು ಯಾವ ಕಾರಣಕ್ಕೂ ಕಡಿಯದೇ ಇರುವುದು. ಜೊತೆಗೆ ಸೌರ ಬಳಕೆಯ ವಾಹನಗಳ ಅಳವಡಿಕೆಯ ಬಗ್ಗೆ ಯೋಜನೆ ರೂಪಿಸುವುದು. ಮೆಟ್ರೊ ರೈಲುಗಳನ್ನು ಬಳಸುವುದು. ಹಾಗೆಯೇ ಜನರು ಸಾರ್ವಜನಿಕ ವಾಹನಗಳನ್ನೇ ಹೆಚ್ಚು ಹೆಚ್ಚು ಬಳಸುವಂತೆ ಮಾಡುವುದು ತಕ್ಷಣಕ್ಕೆ ನಾವು ವಾಯುಮಾಲಿನ್ಯ ಪಿಡುಗಿನಿಂದ ರಕ್ಷಿಸಿಕೊಳ್ಳುವುದಕ್ಕೆ ಇರುವ ಮಾರ್ಗಗಳು. ದಿಲ್ಲಿಯ ವಾಯುಮಾಲಿನ್ಯ ಈ ದೇಶದ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ಅದನ್ನು ಗಂಭೀರವಾಗಿ ಸ್ವೀಕರಿಸದೇ ಇದ್ದರೆ, ಅಭಿವೃದ್ಧಿಯ ಉರುಳಿಗೆ ದೇಶ ಒಂದಲ್ಲ ಒಂದು ದಿನ ನೇಣು ಹಾಕಿ ಕೊಳ್ಳಲೇ ಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)