varthabharthi

ಗಲ್ಫ್ ಸುದ್ದಿ

ಐತಿಹಾಸಿಕ ನಿರ್ಧಾರ:

ಕತರ್ ಶೂರಾ ಕೌನ್ಸಿಲ್ ಗೆ ಪ್ರಪ್ರಥಮ ಬಾರಿ ಮಹಿಳೆಯರ ನೇಮಕ

ವಾರ್ತಾ ಭಾರತಿ : 10 Nov, 2017

ದೋಹಾ, ನ.10: ದೇಶದ ಅತ್ಯುನ್ನತ ಸಲಹಾ ಸಂಸ್ಥೆಯಾದ ಶೂರಾ ಕೌನ್ಸಿಲ್‌ಗೆ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮಹಿಳೆಯರನ್ನು ನೇಮಕ ಮಾಡಲಾಗಿದೆ ಎಂದು ಕತರ್‌ನ ದೊರೆ ಪ್ರಕಟಿಸಿದ್ದಾರೆ.

45 ಮಂದಿಯ ಈ ಪ್ರಬಲ ಮಂಡಳಿಯಲ್ಲಿ ನಾಲ್ವರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ಸಚಿವ ಸಂಪುಟ ಅಂಗೀಕರಿಸಿದ ಕರಡು ನಿಯಮಾವಳಿಗಳು, ಸರ್ಕಾರದ ಸಾಮಾನ್ಯ ನೀತಿನಿಯಮಗಳು, ದೇಶದ ಕರಡು ಬಜೆಟ್ ಮತ್ತಿತರ ವಿಷಯಗಳನ್ನು ಈ ಮಂಡಳಿ ಚರ್ಚಿಸುವ ಅಧಿಕಾರ ಹೊಂದಿದೆ ಎಂದು ದೊರೆಯ ಆದೇಶ ಪ್ರಕಟಿಸಿದೆ.

"ಕತರ್‌ನ ಅಮೀರ್ ಶೇಖ್ ತಮಿಮ್ ಬಿನ್ ಹಮದ್ ಅಲ್ ಥಾನಿ ರಾಜಾದೇಶವನ್ನು ಹೊರಡಿಸಿದ್ದು, ಕೆಲ ಶೂರಾ ಕೌನ್ಸಿಲ್ ಸದಸ್ಯರ ಸದಸ್ಯತ್ವ ನವೀಕರಿಸಿದ್ದಾರೆ ಹಾಗೂ 28 ಹೊಸ ಸದಸ್ಯರನ್ನು ನೇಮಕ ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇದರಲ್ಲಿ ಮಹಿಳೆಯರೂ ಸೇರಿದ್ದಾರೆ" ಎಂದು ಸರ್ಕಾರಿ ಸ್ವಾಮ್ಯದ ಕತರ್ ಸುದ್ದಿಸಂಸ್ಥೆ ಹೇಳಿಕೆ ನೀಡಿದೆ.

ಹೆಸ್ಸಾ ಅಲ್ ಜಬೆರ್, ಆಯಿಷಾ ಯೂಸುಫ್ ಅಲ್ ಮನ್ನಾಯ್, ಹಿಂದ್ ಅಬ್ದುಲ್ ರಹ್ಮಾನ್ ಅಲ್ ಮುಫ್ತಾ ಮತ್ತು ರೀಮ್ ಅಲ್ ಮನ್ಸೂರಿ ನೇಮಕಗೊಂಡಿದ್ದಾರೆ. ಹಲವು ವರ್ಷಗಳಿಂದ ಗಲ್ಫ್ ದೇಶಗಳ ನಡುವೆ ಕಠಿಣ ರಾಜತಾಂತ್ರಿಕ ಸಂಬಂಧವನ್ನು ಎದುರಿಸುತ್ತಿರುವ ಕತರ್‌ಗೆ ಆರ್ಥಿಕ ಹಾಗೂ ರಾಜಕೀಯವಾಗಿ ನೆರೆಯ ರಾಷ್ಟ್ರಗಳು ನಿರ್ಬಂಧ ಹೇರಿರುವ ಪರಿಸ್ಥಿತಿಯ ನಡುವೆಯೇ ಈ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)