varthabharthi

ಸಿನಿಮಾ

ಟ್ರೇಲರ್‌ನಲ್ಲೇ ಟೈಗರ್ ಮೋಡಿ

ವಾರ್ತಾ ಭಾರತಿ : 10 Nov, 2017

ಬಾಲಿವುಡ್ ಚಿತ್ರರಸಿಕರ ಬಹುದಿನಗಳ ಕಾತರದ ನಿರೀಕ್ಷೆ ಕೊನೆಗೂ ಈಡೇರಿದೆ. ಸಲ್ಮಾನ್‌ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ‘ಟೈಗರ್ ಜಿಂದಾ ಹೈ’ ಚಿತ್ರದ ಚೊಚ್ಚಲ ಟ್ರೇಲರ್ ಬಿಡುಗಡೆಗೊಂಡಿದ್ದು, ಎಲ್ಲೆಡೆ ಮುಕ್ತಕಂಠದ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಯಾವುದೇ ಬಿಗ್‌ಬಜೆಟ್ ಹಾಲಿವುಡ್ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಚಿತ್ರವು ಮೂಡಿಬಂದಿದೆಯೆಂದು ಟ್ರೇಲರ್ ನೋಡಿದ ಸಲ್ಮಾನ್ ಅಭಿಮಾನಿಗಳು ಭರವಸೆ ಹೊಂದಿದ್ದಾರೆ. ಉಗ್ರರ ವಿರುದ್ಧ ಕಾದಾಡುವ ಭಾರತೀಯ ಗೂಢಚಾರನಾಗಿ ಸಲ್ಮಾನ್ ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಬಾಲಿವುಡ್ ಈ ತನಕ ಕಂಡಿರದಂತಹ ರೋಮಾಂಚಕಕಾರಿ ಚೇಸಿಂಗ್ ಹಾಗೂ ಆ್ಯಕ್ಷನ್ ದೃಶ್ಯಗಳಿಗೆ ‘ಟೈಗರ್ ಜಿಂದಾ ಹೈ’ ಸಾಕ್ಷಿಯಾಗಲಿದೆಯಂತೆ.

ಟ್ರೇಲರ್‌ನಲ್ಲಿ ಸಲ್ಮಾನ್ ಹೇಳುವ, ‘ಶಿಕಾರ್ ತೋ ಸಬ್ ಕರ್‌ತೆ ಹೈ, ಲೇಖಿನ್ ಟೈಗರ್ ಸೆ ಬೆಹತರ್ ಶಿಕಾರ್ ಕೋಯಿ ನಯೀ ಕರ್‌ತಾ’ (ಎಲ್ಲರೂ ಬೇಟೆ ಯಾಡುತ್ತಾರೆ. ಆದರೆ ಹುಲಿಗಿಂತ ಚೆನ್ನಾಗಿ ಯಾರೂ ಬೇಟೆಯಾಡಲು ಸಾಧ್ಯವಿಲ್ಲ) ಎಂಬ ಡೈಲಾಗ್ ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಆ್ಯಕ್ಷನ್ ಕಟ್ ಹೇಳಿರುವ ‘ಟೈಗರ್ ಜಿಂದಾ ಹೈ’ ಆಸ್ಟ್ರಿಯ, ಮೊರಾಕ್ಕೊ ಸೇರಿದಂತೆ ಐದು ದೇಶಗಳಲ್ಲಿ ಚಿತ್ರೀಕರಣಗೊಂಡಿದೆ.

ಈ ಚಿತ್ರದ ಮೂಲಕ ಸಲ್ಮಾನ್ ಮತ್ತೆ ಆ್ಯಕ್ಷನ್ ಪಾತ್ರಗಳಿಗೆ ಮರಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಲ್ಮಾನ್ ಭಜರಂಗಿ ‘ಬಾಯಿಜಾನ್’, ‘ಸುಲ್ತಾನ್’, ‘ಟ್ಯೂಬ್‌ಲೈಟ್’ ಸೇರಿದಂತೆ ಸೆಂಟಿಮೆಂಟಲ್ ಟಚ್ ಇರುವ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದರು.

ಆ್ಯಕ್ಷನ್ ಪ್ರಿಯರಿಗೆ ಸಾಹಸದೃಶ್ಯಗಳ ಭರ್ಜರಿ ರಸದೌತಣದ ನಿರೀಕ್ಷೆ ಹುಟ್ಟಿಸಿರುವ ‘ಟೈಗರ್ ಜಿಂದಾ ಹೈ’ ಡಿಸೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಘರ್ಜಿಸಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)