varthabharthi

ಸಿನಿಮಾ

ಹಾಲಿವುಡ್ ರೈಸನ್ ನಲ್ಲಿ ಕಿಚ್ಚ ಸುದೀಪ್

ವಾರ್ತಾ ಭಾರತಿ : 10 Nov, 2017

ತೆಲುಗು, ತಮಿಳು, ಬಾಲಿವುಡ್ ಬಳಿಕ ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಇದೀಗ ಹಾಲಿವುಡ್‌ಗೂ ಲಗ್ಗೆಯಿಟ್ಟಿದ್ದಾರೆ. ‘ರೈಸನ್’ ಎಂಬ ಬಿಗ್‌ಬಜೆಟ್ ಹಾಲಿವುಡ್ ಚಿತ್ರದಲ್ಲಿ ಅವರು ಸೇನಾಧಿಕಾರಿಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಡ್ಡಿ ಆರ್ಯ ಚಿತ್ರದ ನಿರ್ದೇಶಕ. ವೈಜ್ಞಾನಿಕ ಥ್ರಿಲ್ಲರ್ ಕಥಾವಸ್ತುವಿರುವ ಚಿತ್ರದ ಶೂಟಿಂಗ್ ಅಮೆರಿಕದ ವಿವಿಧೆಡೆ ಬಿರುಸಿನಿಂದ ಸಾಗುತ್ತಿದೆ. ಈ ನಡುವೆ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಅಂತರ್ಜಾಲ ತಾಣಗಳಲ್ಲಿ ಬಿಡುಗಡೆಗೊಂಡಿದ್ದು, ಕಿಚ್ಚನ ಅಭಿಮಾನಿಗಳನ್ನು ಪುಳಕಗೊಳಿಸಿದೆ. ಅಲಾಸ್ಕದ ಪುಟ್ಟ ಪಟ್ಟಣವೊಂದರಲ್ಲಿ ಉಲ್ಕಾ ಶಿಲೆಯ ಪತನದಿಂದಾಗಿ ಇಡೀ ನಗರ ಅಪಾಯಕ್ಕೆ ಸಿಲುಕಿಕೊಳ್ಳುವ ಕಥೆಯಿರುವ ಈ ಚಿತ್ರವು, ರಶ್ಯದ ಪ್ರಾಂತವೊಂದರಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ನೈಜ ಘಟನೆಯಿಂದ ಸ್ಫೂರ್ತಿ ಪಡೆದಿದೆಯಂತೆ.

ಇಷ್ಟಕ್ಕೂ ಸುದೀಪ್‌ಗೆ ಆರ್ಮಿ ಆಫೀಸರ್ ಪಾತ್ರವೇನೂ ಹೊಸದಲ್ಲ. ‘ಹೆಬ್ಬುಲಿ’ಯಲ್ಲಿ ಸೇನಾಧಿಕಾರಿಯಾಗಿ ನಟಿಸಿ ಅವರು ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ್ದರು. ರೈಸಿಂಗ್ ಮೂಲಕ ಕಿಚ್ಚ ಸುದೀಪ್‌ನ ಖ್ಯಾತಿ ಹಾಲಿವುಡ್‌ಗೂ ವಿಸ್ತರಿಸಲಿ ಎಂದು ಅವರ ಸಹಸ್ರಾರು ಅಭಿಮಾನಿಗಳ ಹಾರೈಕೆಯಾಗಿದೆ.

ಪ್ರಸ್ತುತ ಸುದೀಪ್ ಸ್ಯಾಂಡಲ್‌ವುಡ್ ಚಿತ್ರ ‘ದಿ ವಿಲನ್’ನಲ್ಲಿ ಬ್ಯುಸಿಯಾ ಗಿದ್ದಾರೆ. ಶಿವರಾಜ್‌ಕುಮಾರ್ ಕೂಡಾ ನಟಿಸುತ್ತಿರುವ ಈ ಅದ್ದೂರಿ ಚಿತ್ರವನ್ನು ಜೋಗಿ ಖ್ಯಾತಿಯ ಪ್ರೇಮ್ ನಿರ್ದೇಶಿಸುತ್ತಿದ್ದಾರೆ. ವಿಲನ್ ಮೂಲಕ ಬಾಲಿವುಡ್ ಬೆಡಗಿ ಆ್ಯಮಿ ಜಾಕ್ಸನ್ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ವಿಲನ್ ಚಿತ್ರದ ಶೂಟಿಂಗ್ ಮುಗಿಸಿದ ಬಳಿಕ ಸುದೀಪ್, ‘ರೈಸನ್’ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ಹಾಲಿವುಡ್‌ಗೆ ಹಾರಲಿದ್ದಾರೆ.

 

Comments (Click here to Expand)