varthabharthi

ಅಂತಾರಾಷ್ಟ್ರೀಯ

ಚೀನಾಕ್ಕೆ ಪರೋಕ್ಷ ತರಾಟೆ

ಇನ್ನು ಅಮೆರಿಕವನ್ನು ಬಳಸಿಕೊಳ್ಳಲು ಯಾರಿಗೂ ಬಿಡುವುದಿಲ್ಲ: ಟ್ರಂಪ್

ವಾರ್ತಾ ಭಾರತಿ : 10 Nov, 2017

ಡನಂಗ್ (ವಿಯೆಟ್ನಾಂ), ನ. 10: ಇನ್ನು ಮುಂದೆ ವ್ಯಾಪಾರದ ವಿಷಯದಲ್ಲಿ ಅಮೆರಿಕವನ್ನು ಬಳಸಿಕೊಳ್ಳಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವಿಯೆಟ್ನಾಂನ ಡನಂಗ್ ನಗರದಲ್ಲಿ ಇಂದು ಆರಂಭವಾದ ಏಶ್ಯ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಭಾಗವಾಗಿ ನಡೆದ ಸಿಇಒಗಳ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

‘‘ಇಂದಿನಿಂದ ನಾವು ನ್ಯಾಯ ಮತ್ತು ಸಮಾನತೆಯ ಆಧಾರದಲ್ಲಿ ಸ್ಪರ್ಧಿಸುತ್ತೇವೆ. ನಾವು ಯಾವತ್ತೂ ಅಮೆರಿಕಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡುತ್ತೇವೆ’’ ಎಂದು ಟ್ರಂಪ್ ಘೋಷಿಸಿದರು.

  ಚೀನಾ ಪ್ರವಾಸ ಮುಗಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದು, ಈ ಮೂಲಕ ಅವರು ಚೀನಾವನ್ನು ಬಲವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವ್ಯಾಪಕವಾಗಿ ಭಾವಿಸಲಾಗಿದೆ.

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರದಲ್ಲಿ, ಚೀನಾ ಹೆಚ್ಚು ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿರುವುದನ್ನು ಸ್ಮರಿಸಬಹುದಾಗಿದೆ. ಅಮೆರಿಕದ ರಫ್ತು ಚೀನಾದ ಮಟ್ಟಕ್ಕೆ ಏರಿಲ್ಲ. ಈ ಬಗ್ಗೆ ಟ್ರಂಪ್ ಪದೇ ಪದೇ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಗುರುವಾರವಷ್ಟೆ ಚೀನಾದಲ್ಲಿದ್ದ ಅವರು, ಉಭಯ ದೇಶಗಳ ನಡುವಿನ ವ್ಯಾಪಾರ ಅಸಮಾನತೆಯನ್ನು ಪ್ರಸ್ತಾಪಿಸಿದರಾದರೂ, ಅದಕ್ಕೆ ತಾನು ಚೀನಾವನ್ನು ದೂರುವುದಿಲ್ಲ ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ಅಮೆರಿಕದ ಆರ್ಥಿಕ ಪುನರುಜ್ಜೀವನದಿಂದ ಇಡೀ ಜಗತ್ತು ಚೇತರಿಸಿದೆ ಹಾಗೂ ತಾನು ಅಧ್ಯಕ್ಷನಾಗಿ ಆಯ್ಕೆಯಾದಂದಿನಿಂದ ಹೊಸ ಭರವಸೆಯ ಗಾಳಿ ಅಮೆರಿಕದಾದ್ಯಂತ ಬೀಸುತ್ತಿದೆ’’ ಎಂದು ಏಶ್ಯ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕದ ಅಧ್ಯಕ್ಷರು ಅಭಿಪ್ರಾಯಪಟ್ಟರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)