varthabharthi

ಕ್ರೀಡೆ

ನ.11 ರಿಂದ ಶ್ರೀಲಂಕಾ-ಮಂಡಳಿ ಅಧ್ಯಕ್ಷರ ಇಲೆವೆನ್ ಅಭ್ಯಾಸ ಪಂದ್ಯ

ವಾರ್ತಾ ಭಾರತಿ : 10 Nov, 2017

ಕೋಲ್ಕತಾ, ನ.10: ಭಾರತಕ್ಕೆ ಆಗಮಿಸಿರುವ ಶ್ರೀಲಂಕಾ ಕ್ರಿಕೆಟ್ ತಂಡ ಶನಿವಾರ ಜೋಧಪುರ ವಿವಿ ಎರಡನೆ ಕ್ಯಾಂಪಸ್‌ನಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಎದುರಿಸುವ ಮೂಲಕ ಟೆಸ್ಟ್ ಸರಣಿಗೆ ತಯಾರಿ ನಡೆಸಲಿದೆ.

ಶ್ರೀಲಂಕಾ 2009-10 ಸರಣಿಯ ಬಳಿಕ ಭಾರತದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಲಿದೆ. 1982-2017 ಈ ಅವಧಿಯಲ್ಲಿ ಶ್ರೀಲಂಕಾ ತಂಡ ಭಾರತದಲ್ಲಿ ಆಡಿರುವ 16 ಟೆಸ್ಟ್‌ಗಳಲ್ಲಿ 10ರಲ್ಲಿ ಸೋತಿದೆ. ಈ ವರೆಗೆ ಭಾರತದ ನೆಲದಲ್ಲಿ ಟೆಸ್ಟ್ ಗೆಲ್ಲಲು ಸಾಧ್ಯವಾಗಿಲ್ಲ.

 ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ ಅವರು ಭಾರತದಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಅವರ ತಂಡದಲ್ಲಿ ಮಾಜಿ ನಾಯಕರಾದ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು ರಂಗನ ಹೆರಾತ್ ಇದ್ದಾರೆ. ಮ್ಯಾಥ್ಯೂಸ್ ಮತ್ತು ಹೆರಾತ್ ಅವರು ಏಳು ವರ್ಷಗಳ ಹಿಂದೆ ಭಾರತದಲ್ಲಿ 0-2 ಅಂತರದಲ್ಲಿ ಸೋಲು ಅನುಭವಿಸಿದ್ದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು.

 ತವರಿನಲ್ಲಿ ಎರಡು ತಿಂಗಳ ಹಿಂದೆ ಭಾರತದ ವಿರುದ್ಧ ಮೂರು ಮಾದರಿಯ ಕ್ರಿಕೆಟ್‌ಗಳಲ್ಲಿ 0-9 ಅಂತರದಲ್ಲಿ ಶ್ರೀಲಂಕಾ ಸೋಲು ಅನುಭವಿಸಿತ್ತು. ಶ್ರೀಲಂಕಾ ತಂಡ ನ.16ರಿಂದ ಡಿ.24ರ ತನಕ ಭಾರತದಲ್ಲಿ ನಡೆಯಲಿರುವ ಪ್ರವಾಸ ಸರಣಿಯಲ್ಲಿ 3 ಟೆಸ್ಟ್, 3 ಏಕದಿನ ಮತ್ತು 3 ಟ್ವೆಂಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ.

ಶ್ರೀಲಂಕಾ ಯುಎಇಯಲ್ಲಿ ಕಳೆದ ತಿಂಗಳು ಪಾಕಿಸ್ತಾನ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲುವು ದಾಖಲಿಸಿದ ಖುಷಿಯಲ್ಲಿದೆ. ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ನಾಯಕತ್ವದ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಎದುರಿಸುತ್ತಿದೆ.

ರಣಜಿ ಟ್ರೋಫಿಗೆ ಹೆಚ್ಚು ಒತ್ತು ನೀಡಿರುವ ಬಿಸಿಸಿಐ ಅಧ್ಯಕ್ಷರ ಮಂಡಳಿಯು ಹೈದರಾಬಾದ್, ಕೇರಳ, ಮಧ್ಯಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡಿದೆ.

ಶ್ರೀಲಂಕಾ ತಂಡ: ದಿನೇಶ್ ಚಾಂಡಿಮಾಲ್(ನಾಯಕ), ದಿಮುತ್ ಕರುಣರತ್ನೆ, ಸದೀರಾ ಸಮರವಿಕ್ರಮ, ಲಹಿರು ತಿರಿಮನ್ನೆ (ಉಪನಾಯಕ), ನಿರೋಶನ್ ದಿಕ್ವೆಲ್ಲಾ (ವಿಕೆಟ್ ಕೀಪರ್), ದಿಲ್ರುವಾನ್ ಪೆರೆರಾ, ರಂಗನ ಹೆರಾತ್, ಸುರಂಗ ಲಕ್ಮಲ್, ಲಹಿರು ಗಾಮಗೆ, ಧನಂಜಯ್ ಡಿ’ಸಿಲ್ವ, ಆ್ಯಂಜೆಲೊ ಮ್ಯಾಥ್ಯೂಸ್, ಲಕ್ಷಣ್ ಸಂಡಕನ್, ವಿಶ್ವ ಫೆರ್ನಾಂಡೊ, ದಾಸನ್ ಶಣಕ, ರೋಶನ್ ಡಿ’ ಸಿಲ್ವ.

ಮಂಡಳಿ ಅಧ್ಯಕ್ಷರ ಇಲೆವೆನ್: ಸಂಜು ಸ್ಯಾಮ್ಸನ್(ನಾಯಕ), ಅಭಿಷೇಕ್ ಗುಪ್ತಾ, ಆಕಾಶ್ ಭಂಡಾರಿ, ಅವೇಶ್ ಖಾನ್, ಜಲಜ್ ಸಕ್ಸೆನಾ, ಜೀವಂಜ್ಯೋತ್ ಸಿಂಗ್,ರವಿ ಕಿರಣ್, ರೋಹನ್ ಪ್ರೇಮ್, ಬಿ.ಸಂದೀಪ್, ತನ್ಮಯ್ ಅಗರ್‌ವಾಲ್, ಸಂದೀಪ್ ವಾರಿಯರ್ ಮತ್ತು ಅಮೋಲ್‌ಪ್ರೀತ್ ಸಿಂಗ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)