varthabharthi

ಸಂಪಾದಕೀಯ

ನ್ಯಾಯ ವ್ಯವಸ್ಥೆಯ ಕಣ್ಣಾಮುಚ್ಚಾಲೆ

ವಾರ್ತಾ ಭಾರತಿ : 11 Nov, 2017

ಆರುಷಿ ಎನ್ನುವ ಬಾಲಕಿಯ ಬರ್ಬರ ಕೊಲೆ ಮತ್ತು ಅದರ ಸುದೀರ್ಘ ವಿಚಾರಣಾ ಪ್ರಕ್ರಿಯೆ ಈ ದೇಶದಲ್ಲಿ ತಲ್ಲಣವನ್ನು ಸೃಷ್ಟಿಸಿತ್ತು. ಪಾಲಕರೇ ಆ ಹೆಣ್ಣು ಮಗುವನ್ನು ಕೊಂದು ಹಾಕಿದರೇ ಎಂಬ ಪ್ರಶ್ನೆ ಈಗಲೂ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಆರುಷಿಯ ಕೊಲೆ ಆರೋಪದಿಂದ ಪಾಲಕರು ಪಾರಾಗಿದ್ದಾರೆ. ಹಾಗಾದರೆ ಆರುಷಿಯನ್ನು ಕೊಂದವರು ಯಾರು? ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ ಆರುಷಿ ಹಾಗಾದರೆ ಕೊಲೆಯಾಗಲೇ ಇಲ್ಲವೇ? ಹಾಗಾದರೆ ಆ ಮೃತದೇಹ ಯಾರದು? ಈ ಪ್ರಶ್ನೆಗೆ ಉತ್ತರ ಹೇಳಬೇಕಾದವರು ತನಿಖಾಧಿಕಾರಿಗಳು ಮತ್ತು ನಮ್ಮ ನ್ಯಾಯವ್ಯವಸ್ಥೆ.

ಈ ಹಿಂದೆ ಜೆಸ್ಸಿಕಾಲಾಲ್ ಎಂಬ ತರುಣಿಯ ಕೊಲೆಯೂ ಇದೇ ರೀತಿ ಸುದ್ದಿಯಾಗಿ ತಣ್ಣಗಾಯಿತು. ತನಿಖೆ ನಡೆದು ಆರೋಪಿಗಳನ್ನು ಬಂಧಿಸಲಾಯಿತಾದರೂ ವಿಚಾರಣಾ ಪ್ರಕ್ರಿಯೆಯಲ್ಲಿ ಅವರು ನಿರಪರಾಧಿಗಳೆಂದು ಘೋಷಿಸಲ್ಪಟ್ಟರು. ಇದಾದ ಬಳಿಕ ‘‘ಜೆಸ್ಸಿಕಾಳನ್ನು ಯಾರೂ ಕೊಲೆ ಮಾಡಲಿಲ್ಲ’’ ಎಂಬ ಒಂದು ಸಿನೆಮಾವೇ ಹೊರ ಬಂತು. ತಲ್ವಾರ್ ಪ್ರಕರಣವನ್ನು ಆಧರಿಸಿಯೂ ಎರಡೆರಡು ಸಿನೆಮಾಗಳು ಹೊರ ಬಂದುವಾದರೂ, ಕೊಲೆಯಾದ ತರುಣಿಗೆ ಮಾತ್ರ ನ್ಯಾಯ ಸಿಗಲೇ ಇಲ್ಲ. ಈ ಕೊಲೆಯ ತನಿಖೆ ಕ್ಲೈಮಾಕ್ಸ್ ಹಂತ ತಲುಪಲೇ ಇಲ್ಲ.

ಇದೀಗ ಇನ್ನೊಂದು ಕೊಲೆ ಸುದ್ದಿಯಲ್ಲಿದೆ. ಹೊಸದಿಲ್ಲಿಯ ರ್ಯಾನ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಎರಡನೆಯ ತರಗತಿಯ ಪ್ರದ್ಯುಮ್ನ ಠಾಕೂರ್ ಎನ್ನುವ ಎಳೆ ಮಗುವನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಅಷ್ಟೇ ಅಲ್ಲ, ಅದೇ ದಿನ ಆರೋಪಿಯನ್ನೂ ಬಂಧಿಸಲಾಯಿತು. ಶಾಲೆಯ ಬಸ್‌ನ ಕಂಡಕ್ಟರ್ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ಬಳಿಕ ಹತ್ಯೆಗೈದಿದ್ದಾನೆ ಎನ್ನುವುದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಪೊಲೀಸರು ಆರೋಪಿಯನ್ನು ಬಂಧಿಸಿದರು ಮಾತ್ರವಲ್ಲ, ಆತನ ವಿರುದ್ಧ ಪ್ರಕರಣವನ್ನೂ ದಾಖಲಿಸಿದರು. ಕೊಲೆಗೆ ಬಳಸಿದ್ದ ಚೂರಿಯನ್ನೂ ವಶಪಡಿಸಿಕೊಂಡರು. ದೇಶಾದ್ಯಂತ ಈ ಕೊಲೆ ಚರ್ಚೆಯಾಯಿತು. ಎಲ್ಲ ಶಾಲಾ ವಾಹನಗಳ ಬಸ್ ಕಂಡಕ್ಟರ್‌ಗಳು, ಚಾಲಕರು ಆರೋಪಿ ಸ್ಥಾನದಲ್ಲಿ ನಿಂತರು. ಶಾಲಾ ವಾಹನಗಳ ಚಾಲಕರು ಹೇಗೆಲ್ಲಾ ಮಕ್ಕಳನ್ನು ದುರ್ಬಳಕೆ ಮಾಡಬಹುದು ಎನ್ನುವುದೂ ಚರ್ಚೆಗೊಳಗಾಯಿತು.

ಈ ಚರ್ಚೆಯ ಮಧ್ಯೆ ಶಾಲಾ ಆಡಳಿತ ಮಂಡಳಿಯ ಹೊಣೆಗಾರಿಕೆ ಬದಿಗೆ ಸರಿಯಿತು. ಆದರೆ ಈ ಪ್ರಕರಣದ ತನಿಖೆ ಕೆಲವು ಅನುಮಾನಗಳನ್ನು ಉಳಿಸಿಕೊಂಡಿದ್ದರಿಂದ ಪ್ರದ್ಯುಮ್ನನ ಪಾಲಕರು ಸಿಬಿಐ ತನಿಖೆಗೆ ಒತ್ತಾಯಿಸಿದರು. ಯಾವಾಗ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿತೋ, ಕೊಲೆಯ ಇನ್ನೊಂದು ಬರ್ಬರ ಮುಖ ಅನಾವರಣಗೊಂಡಿತು. ಪ್ರದ್ಯುಮ್ನನನ್ನು ಕೊಂದಿರುವುದು ಬಸ್‌ನ ನಿರ್ವಾಹಕ ಅಲ್ಲ, ಬದಲಿಗೆ ಅದೇ ಶಾಲೆಯ ಇನ್ನೊಬ್ಬ ಹಿರಿಯ ವಿದ್ಯಾರ್ಥಿ ಕ್ಷುಲ್ಲಕ ಕಾರಣಕ್ಕಾಗಿ ಆತನನ್ನು ಕೊಲೆಯ ಮಾಡಿದ್ದಾನೆ ಎನ್ನುವುದು ಬಹಿರಂಗವಾಯಿತು. ಸಣ್ಣ ಪುಟ್ಟ ಅನುಮಾನಗಳು ಇನ್ನೂ ಉಳಿದಿವೆಯಾದರೂ, ಕೊಲೆಯಲ್ಲಿ ಈ ಹಿರಿಯ ವಿದ್ಯಾರ್ಥಿಯ ಪಾತ್ರವಿರುವುದು ಸ್ಪಷ್ಟವಾಗಿದೆ. ಕೊಲೆಯಲ್ಲಿ ಬಸ್ ನಿರ್ವಾಹಕನ ಪಾತ್ರವಿಲ್ಲ ಎನ್ನುವುದನ್ನು ಸಿಬಿಐ ತಿಳಿಸಿದೆ. ಇದೀಗ ನಿರಪರಾಧಿಯೆಂದು ಘೋಷಿಸಲ್ಪಟ್ಟಿರುವ ಬಸ್‌ನಿರ್ವಾಹಕ ತನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ.

ಬಾಲಕನ ಹತ್ಯೆಯ ಬರ್ಬರತೆಗೆ ಹಲವು ಮುಖಗಳಿವೆ. ಮುಖ್ಯವಾಗಿ ಒಂದು ಎಳೆಯ ಮಗುವಿನ ಬರ್ಬರ ಸಾವಿನ ತನಿಖೆಯನ್ನು ತಮಗೆ ಬೇಕಾದಂತೆ ತಿರುಚಿ, ಅಮಾಯಕನೊಬ್ಬನನ್ನು ಕೊಲೆಗಾರನಾಗಿಸಲು ಹೊರಟ ಪೊಲೀಸರು ಕಾನೂನು ವ್ಯವಸ್ಥೆಯನ್ನೇ ಕೊಲೆಗೈದಿದ್ದಾರೆ. ಬಸ್‌ನಿರ್ವಾಹಕನ ವಕೀಲರು ಹೇಳುವಂತೆ, ಪೊಲೀಸರು ಈ ಕೊಲೆಯ ಆರೋಪವನ್ನು ಹೊತ್ತುಕೊಳ್ಳಲು ಬಸ್ ನಿರ್ವಾಹಕನಿಗೆ ಬಲವಂತಪಡಿಸಿದ್ದಾರೆ. ಚೂರಿಯನ್ನು ತನ್ನದೆಂದು ಹೇಳಲು ಒತ್ತಡ ಹಾಕಿದ್ದಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಆತನ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಿಜವಾದ ಕೊಲೆಗಾರನನ್ನು ರಕ್ಷಿಸುವ ಉದ್ದೇಶದಿಂದಲೇ ಪೊಲೀಸರು ತನಿಖೆಯ ದಾರಿಯನ್ನು ತಪ್ಪಿಸಿದ್ದಾರೆ. ಸಿಸಿ ಕ್ಯಾಮರಾದಲ್ಲಿರುವ ದೃಶ್ಯಗಳು ಅಸ್ಪಷ್ಟವಾಗಿದೆ ಎಂದು ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಈ ದೃಶ್ಯವನ್ನು ಸಿಬಿಐ ಪರಿಶೀಲಿಸಿದಾಗ ನಿಜವಾದ ಕೊಲೆಗಾರ ಯಾರು ಎನ್ನುವುದು ಬಹಿರಂಗವಾಯಿತು.

ಬಸ್ ನಿರ್ವಾಹಕನಿಗೆ ಅನ್ಯಾಯವಾಗಿರುವುದು ಬರೇ ಪೊಲೀಸರಿಂದ ಮಾತ್ರವಲ್ಲ. ಸ್ಥಳೀಯ ನ್ಯಾಯವಾದಿಗಳ ಸಂಘಟನೆ, ಬಸ್ ನಿರ್ವಾಹಕನ ಪರವಾಗಿ ಯಾರೂ ನ್ಯಾಯಾಲಯದಲ್ಲಿ ವಾದಿಸಬಾರದು ಎಂದು ‘ಫತ್ವಾ’ ಹೊರಡಿಸಿತು. ಓರ್ವ ನ್ಯಾಯವಾದಿ ಮಾನವೀಯ ನೆಲೆಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳದೇ ಇದ್ದರೆ, ಇಂದು ಜಗತ್ತಿನ ಮುಂದೆ ಆ ಬಸ್‌ನಿರ್ವಾಹಕನೇ ಶಾಶ್ವತ ಕೊಲೆಗಾರನಾಗಿ ಬಿಂಬಿತನಾಗುತ್ತಿದ್ದ. ಒಂದೆಡೆ ಪೊಲೀಸರು ಪ್ರಕರಣವನ್ನು ಹಾದಿ ತಪ್ಪಿಸಿದರೆ, ಮತ್ತೊಂದೆಡೆ ನ್ಯಾಯವಾದಿಗಳೂ ನ್ಯಾಯದ ಕದವನ್ನು ಮುಚ್ಚಲು ಯತ್ನಿಸಿದರು. ಅಷ್ಟೇ ಅಲ್ಲ, ಮಾಧ್ಯಮಗಳೆಲ್ಲವೂ ವರ್ಣರಂಜಿತ ಕತೆಗಳ ಜೊತೆಗೆ ಈತನ ಮಾನಹರಣ ಮಾಡಿದವು. ಒಂದು ವೇಳೆ ಸಿಬಿಐ ಈ ತನಿಖೆಯನ್ನು ಕೈಗೆತ್ತಿಕೊಳ್ಳದೇ ಇದ್ದರೆ ಬಾಲಕನ ಕೊಲೆ ಆರೋಪದಲ್ಲಿ ಈತ ಗಲ್ಲಿಗೇರುವ ಸಂದರ್ಭವೂ ಎದುರಾಗಿ ಬಿಡುತ್ತಿತ್ತೇನೋ. ಇದೀಗ ಆತನ ಚಾರಿತ್ರದ ಮೇಲೆ ನಡೆದಿರುವ ದಾಳಿ ಯಾವ ಗಲ್ಲು ಶಿಕ್ಷೆಗಿಂತಲೂ ಕಡಿಮೆಯಿಲ್ಲ ಎನ್ನುವುದನ್ನು ನಾವು ಮರೆಯಬಾರದು.

ಪ್ರಕರಣದ ಇನ್ನೊಂದು ಬರ್ಬರ ಮುಖವೆಂದರೆ, ಆ ಮಗುವಿನ ಕೊಲೆ ಆರೋಪಿ ಇನ್ನೋರ್ವ ವಿದ್ಯಾರ್ಥಿಯೇ ಆಗಿರುವುದು. ಇಷ್ಟಕ್ಕೂ ಕೊಲೆ ಮಾಡುವುದಕ್ಕೆ ಅವನಿಗಿದ್ದ ಕಾರಣ, ಅಂದಿನ ಪರೀಕ್ಷೆಯನ್ನು ಮುಂದೂಡುವುದು. ಪಿಯುಸಿ ಕಲಿಯುವ ವಿದ್ಯಾರ್ಥಿಯ ಮನಸ್ಸಿನೊಳಗೆ ಇಷ್ಟೊಂದು ಕ್ರೌರ್ಯ, ಹಿಂಸೆ ತುಂಬಿರುವುದಕ್ಕೆ ಸಾಧ್ಯವೇ ಎಂದು ನಾವೆಲ್ಲ ಆಘಾತಕೀಡಾಗುವಂತಿದೆ ಈ ಕೃತ್ಯ. ಪುಟಾಣಿ ಮಗುವಿನ ಜೀವಕ್ಕಿಂತ ಈ ವಿದ್ಯಾರ್ಥಿಗೆ ಪರೀಕ್ಷೆ ದೊಡ್ಡದಾಗಿ ಬಿಟ್ಟದ್ದು ಹೇಗೆ? ಈ ಬಾಲಕ ಎದುರಿಸುತ್ತಿರುವ ಮಾನಸಿಕ ಸಮಸ್ಯೆ ಏನು? ಇವೆಲ್ಲವೂ ಚರ್ಚೆಯಾಗಬೇಕಾದಂತಹ ವಿಷಯವೇ ಆಗಿದೆ. ಪ್ರಕರಣದ ಮಗದೊಂದು ಬರ್ಬರ ಮುಖ, ಆರೋಪಿಯನ್ನು ರಕ್ಷಿಸುವುದಕ್ಕೆ ಪರೋಕ್ಷವಾಗಿ ಶಾಲೆಯ ಆಡಳಿತ ಮಂಡಳಿಯೂ ಸಹಕರಿಸಿದ್ದು. ತನ್ನ ಸಂಸ್ಥೆಯ ಹೆಸರು ಕೆಡದಂತೆ ನೋಡಿಕೊಳ್ಳುವುದಷ್ಟೇ ಆಡಳಿತ ಮಂಡಳಿಗೆ ಮುಖ್ಯವಾಯಿತು.

ಈ ಸಂದರ್ಭದಲ್ಲಿ ಒಬ್ಬ ಅಮಾಯಕ ಕಾರ್ಮಿಕ ಕೊಲೆ ಆರೋಪ ಹೊತ್ತು ಜೈಲುಪಾಲಾದುದು ಇವರ್ಯಾರಿಗೂ ಆಘಾತವುಂಟು ಮಾಡಲಿಲ್ಲ. ಬಹುಶಃ ಆರೋಪಿ ವಿದ್ಯಾರ್ಥಿಯ ಕೌಟುಂಬಿಕ ಹಿನ್ನೆಲೆಯೂ ಪೊಲೀಸರ ಮೇಲೆ ಒತ್ತಡ ಬೀರಿರಬಹುದು. ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ಎರಡು ಕೊಲೆ ನಡೆದಿದೆ. ಒಂದು, ಪುಟಾಣಿ ಪ್ರದ್ಯುಮ್ನನ ಕೊಲೆ. ಮತ್ತೊಂದು, ಅಮಾಯಕನನ್ನು ಕೊಲೆಗಾರನಾಗಿಸುವ ಪ್ರಯತ್ನದಲ್ಲಿ ನ್ಯಾಯ ವ್ಯವಸ್ಥೆಯ ಕೊಲೆ. ಒಟ್ಟಿನಲ್ಲಿ ಪ್ರಕರಣ ಇಲ್ಲಿಗೇ ಮುಗಿಯಿತು ಎಂದು ಭಾವಿಸುವಂತಿಲ್ಲ. ತಲ್ವಾರ್ ಪ್ರಕರಣ ತೆಗೆದುಕೊಂಡ ತಿರುವುಗಳನ್ನು ಗಮನಿಸಿದರೆ ನಾಳೆ ಇದು ಇನ್ನೊಂದು ತಿರುವು ಪಡೆದರೂ ಅದರಲ್ಲಿ ಅಚ್ಚರಿಯಿಲ್ಲ.

ಅದೇನೇ ಆಗಿರಲಿ, ಆರೋಪಿಗಳ ಬಂಧನವಾಗಲಿ, ಆಗದೇ ಇರಲಿ. ಆದರೆ ಮುಖ್ಯವಾಗಿ ಅಮಾಯಕನನ್ನು ಅಪರಾಧಿಯನ್ನಾಗಿಸುವ ಪ್ರಯತ್ನ ನಡೆಸಿದವರಿಗೆ ಶಿಕ್ಷೆಯಾಗಲೇ ಬೇಕಾಗಿದೆ. ಜೊತೆಗೆ, ಬಸ್ ನಿರ್ವಾಹಕ ಈ ಕೊಲೆಯಲ್ಲಿ ಯಾವುದೇ ಪಾತ್ರವಹಿಸಿಲ್ಲದೇ ಇದ್ದರೆ, ಆತನಿಗೆ ಸೂಕ್ತ ಪರಿಹಾರ ನೀಡುವುದು ಸರಕಾರದ ಕರ್ತವ್ಯ. ಹಾಗೆಯೇ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಿ, ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಿ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದೂ ಸಿಬಿಐ ಅಧಿಕಾರಿಗಳ ಹೊಣೆಗಾರಿಕೆಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)