varthabharthi

ಅಂತಾರಾಷ್ಟ್ರೀಯ

ಉಗ್ರರೆಂದು ನಿಂದಿಸುತ್ತಿದ್ದ ಮೆರೈನ್ ತರಬೇತುದಾರ

ಅಮೆರಿಕ: ಮುಸ್ಲಿಂ ಅಭ್ಯರ್ಥಿಗಳ ಮೇಲೆ ದೌರ್ಜನ್ಯವೆಸಗಿದವನಿಗೆ 10 ವರ್ಷ ಜೈಲು

ವಾರ್ತಾ ಭಾರತಿ : 11 Nov, 2017

ವಾಷಿಂಗ್ಟನ್,ನ.11: ಸೇನೆಯ ಒಂದು ಭಾಗವಾಗಿರುವ ಮರೈನ್ ಕಾರ್ಪ್ಸ್ ಡ್ರಿಲ್ ನ ಡಜನಿಗೂ ಅಧಿಕ ಮುಸ್ಲಿಂ ಅಭ್ಯರ್ಥಿಗಳ ಮೇಲೆ ದೌರ್ಜನ್ಯ ನಡೆಸಿ ಅವರಲ್ಲೊಬ್ಬನ ಸಾವಿಗೆ ಕಾರಣನಾದ ಮರೈನ್ ಕಾರ್ಪ್ಸ್ ಡ್ರಿಲ್ ಶಿಕ್ಷಕನೊಬ್ಬನಿಗೆ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. 

ಗುರುವಾರವಷ್ಟೇ ನ್ಯಾಯಾಲಯ  ಗನ್ನರಿ ಸಾರ್ಜೆಂಟ್ ಜೋಸೆಫ್ ಫೆಲಿಕ್ಸ್ ಅವರನ್ನು ದೋಷಿಯೆಂದು ಘೋಷಿಸಿತ್ತು. ಪಾರ್ರಿಸ್ ದ್ವೀಪದ ದಕ್ಷಿಣ ಕ್ಯಾರೊಲಿನಾ ನೆಲೆಯಲ್ಲಿರುವ ತರಬೇತಿ ವೇಳೆ ಫೆಲಿಕ್ಸ್ ದೌರ್ಜನ್ಯ ನಡೆಸಿದ್ದನೆನ್ನಲಾಗಿದೆ.

ತರಬೇತಿಗೆ ಆಯ್ಕೆಯಾದ ಮುಸ್ಲಿಮರನ್ನು ಉಗ್ರರು ಎಂದು ದೂಷಿಸಿ ಅವರನ್ನು ತರಬೇತಿ ನೆಪದಲ್ಲಿ ಬಹಳಷ್ಟು ದಂಡಿಸಿದ್ದ ಆರು ಮಂದಿ ತರಬೇತುದಾರರಲ್ಲಿ ಇರಾಕ್ ಯುದ್ಧದಲ್ಲಿ ಭಾಗಿಯಾಗಿದ್ದ ಫೆಲಿಕ್ಸ್ ಅತ್ಯಂತ ಘೋರವಾಗಿ ವರ್ತಿಸಿದ್ದ ಎಂದು ನ್ಯಾಯಾಲಯ ಕಂಡುಕೊಂಡಿತ್ತು.

ತರಬೇತಿ ಪಡೆಯುತ್ತಿದ್ದ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು  ಕೈಗಾರಿಕೆಗಳಲ್ಲಿ ಉಪಯೋಗಿಸಲಾಗುವ ಬಟ್ಟೆ ಒಣಗಿಸುವ ಯಂತ್ರದೊಳಗೆ ತುರುಕಿಸಲಾಗಿತ್ತಲ್ಲದೆ ಒಮ್ಮೆ ಒಬ್ಬನನ್ನು ಯಂತ್ರದೊಳಗೆ ಹಾಕಿದ ನಂತರವೂ ಆತ ತನ್ನ ಧರ್ಮ ಬದಲಾಯಿಸುವುದಿಲ್ಲವೆಂದು ಹೇಳಿದಾಗ ಯಂತ್ರವನ್ನು ಚಾಲೂ ಮಾಡಲಾಗಿತ್ತು.

ತರಬೇತಿ ಪಡೆಯುತ್ತಿದ್ದ ಒಬ್ಬ ಯುವಕ ರಹೀಲ್ ಸಿದ್ದೀಖಿ ಮಾರ್ಚ್ 2016ರಲ್ಲಿ ತನ್ನ ಮೇಲೆ ನಡೆಯುತ್ತಿದ್ದ ದೌರ್ಜನ್ಯದಿಂದ ಬೇಸತ್ತು ಮೂರನೇ ಮಹಡಿಯಿಂದ ಹಾರಿ ಮೃತಪಟ್ಟಿದ್ದ. ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ನಂತರ ತರಬೇತುದಾರರು ಹೇಳಿಕೊಂಡಿದ್ದರೂ ಆತನ ಕುಟುಂಬ 100 ಮಿಲಿಯನ್ ಡಾಲರ್ ಪರಿಹಾರ ಆಗ್ರಹಿಸಿ ಕೋರ್ಟಿನ ಮೆಟ್ಟಿಲೇರಿತ್ತಲ್ಲದೆ ಬೇರೊಬ್ಬ ಹಿರಿಯ ಅಧಿಕಾರಿ ಆತನನ್ನು ಬಾಲ್ಕನಿಗೆ ತಳ್ಳಿದ್ದರು ಎಂದು ವಾದಿಸಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)