varthabharthi

ಅಂತಾರಾಷ್ಟ್ರೀಯ

ರೂಪಾಯಿ 98 ಕೋಟಿ ವ್ಯವಹಾರ

ಟರ್ಕಿ ಭಿನ್ನಮತೀಯ ಗುಲೇನ್ ರನ್ನು ಹಸ್ತಾಂತರಿಸಲು ಫ್ಲಿನ್ ಯೋಚಿಸಿದ್ದರೇ?

ವಾರ್ತಾ ಭಾರತಿ : 11 Nov, 2017

ಗುಲೇನ್‌, ಮೈಕಲ್ ಫ್ಲಿನ್

ವಾಶಿಂಗ್ಟನ್, ನ. 11: ಟರ್ಕಿ ಮೂಲದ ಮುಸ್ಲಿಮ್ ಧರ್ಮಗುರು ಫತೇವುಲ್ಲಾ ಗುಲೇನ್‌ರನ್ನು ಬಂಧಿಸಿ 15 ಮಿಲಿಯ ಡಾಲರ್ (ಸುಮಾರು 98 ಕೋಟಿ ರೂಪಾಯಿ) ಮೊತ್ತಕ್ಕೆ ಟರ್ಕಿಗೆ ಹಸ್ತಾಂತರಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಾಜಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಮೈಕಲ್ ಫ್ಲಿನ್ ಯೋಜನೆ ರೂಪಿಸಿದ್ದರೆ ?

ಈ ಬಗ್ಗೆ ಅಮೆರಿಕದ ವಿಶೇಷ ವಕೀಲ ರಾಬರ್ಟ್ ಮುಲ್ಲರ್ ತನಿಖೆ ನಡೆಸುತ್ತಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಶುಕ್ರವಾರ ವರದಿ ಮಾಡಿದೆ.

 ಟರ್ಕಿಯಲ್ಲಿ 2016ರ ಜುಲೈಯಲ್ಲಿ ನಡೆದ ಸೇನಾ ಕ್ಷಿಪ್ರ ಕ್ರಾಂತಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಟರ್ಕಿ ಧರ್ಮ ಗುರು ಗುಲೇನ್‌ರ ಪಾತ್ರವಿದೆ ಎಂಬುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಆರೋಪಿಸಿದ್ದಾರೆ ಹಾಗೂ ದೇಶದಲ್ಲಿರುವ ಅವರ ಬೆಂಬಲಿಗರನ್ನು ಬಂಧಿಸಿದ್ದಾರೆ.

ಯೋಜನೆಯ ಪ್ರಕಾರ, ಗುಲೇನ್‌ರನ್ನು ಅಮೆರಿಕದಲ್ಲಿರುವ ಅವರ ಮನೆಯಿಂದ ಬಲವಂತವಾಗಿ ಹೊರಗಟ್ಟಿ ಟರ್ಕಿ ಸರಕಾರಕ್ಕೆ ಹಸ್ತಾಂತರಿಸಿದರೆ, ಫ್ಲಿನ್ ಮತ್ತು ಅವರ ಮಗ ಮೈಕಲ್ ಫ್ಲಿನ್ ಜೂನಿಯರ್ 15 ಮಿಲಿಯ ಡಾಲರ್ ಪಡೆಯುವವರಿದ್ದರು ಎಂದು ತನಿಖೆಯಲ್ಲಿ ತೊಡಗಿರುವ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆದ ಸಭೆಯ ಬಗ್ಗೆ ಎಫ್‌ಬಿಐ ತನಿಖಾಧಿಕಾರಿಗಳು ಕನಿಷ್ಠ ನಾಲ್ವರಲ್ಲಿ ಪ್ರಶ್ನಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ. ಆ ಸಭೆಯಲ್ಲಿ ಫ್ಲಿನ್ ಮತ್ತು ಟರ್ಕಿ ಸರಕಾರದ ಪ್ರತಿನಿಧಿಗಳು ಗುಲೇನ್ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಗುಲೇನ್‌ರನ್ನು ಟರ್ಕಿಯ ಬಂದಿಖಾನೆ ದ್ವೀಪ ಇಮ್ರಾಲಿಗೆ ಖಾಸಗಿ ವಿಮಾನವೊಂದರಲ್ಲಿ ಸಾಗಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿತ್ತು ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)