varthabharthi

ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 11 Nov, 2017

  •        ಯೆಚೂರಿ ಎಲ್ಲಿ?

ಅಕ್ಟೋಬರ್ ಕ್ರಾಂತಿ ಅಥವಾ ಸೋವಿಯತ್ ಒಕ್ಕೂಟದವರು ಕರೆಯುತ್ತಿದ್ದ ಗ್ರೇಟ್ ಅಕ್ಟೋಬರ್ ಸೋಶಲಿಸ್ಟ್ ರೆವಲ್ಯೂಶನ್ ವಾಸ್ತವವಾಗಿ ನಡೆದದ್ದು 1917ರ ನವೆಂಬರ್ 7-8ರ ಮಧ್ಯರಾತ್ರಿ. ಭಾರತದ ಕಮ್ಯುನಿಸ್ಟ್ ಪಕ್ಷದ ಮುಖಂಡರನ್ನು ಈ ಶತಮಾನೋತ್ಸವ ಸಂಭ್ರಮಾಚರಣೆಗಾಗಿ ಮಾಸ್ಕೊಗೆ ಆಹ್ವಾನಿಸಲಾಗಿತ್ತು. ಭಾರತದಿಂದ ಸೀತಾರಾಂ ಯೆಚೂರಿ ಪ್ರಮುಖ ಆಹ್ವಾನಿತರಾಗಿ ತೆರಳಿದ್ದರು. ಸಿಪಿಎಂನ ಇತರ ಮುಖಂಡರು ನೋಟು ರದ್ದತಿ ವಿರುದ್ಧ ಕರಾಳ ದಿನವನ್ನು ಆಚರಿಸುವಲ್ಲಿ ನಿರತರಾಗಿದ್ದರು. ಯೆಚೂರಿ ಅವರ ಗೈರುಹಾಜರಿ ದಿಲ್ಲಿಯ ಸಿಪಿಎಂ ಮುಖಂಡರಿಗೆ ಆಘಾತ ತಂದಿತ್ತು. ಆದರೆ ಅವರು ನೋಟ್‌ಬಂದಿಯ ದುಷ್ಪರಿಣಾಮಗಳ ಬಗ್ಗೆ ಅಂಕಿ ಅಂಶಗಳ ಸಹಿತ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದರು. ದಿಲ್ಲಿಯಲ್ಲಿ ಮುಖ್ಯ ರ್ಯಾಲಿಯ ನೇತೃತ್ವವನ್ನು ಬೃಂದಾ ಕಾರಟ್ ಮತ್ತು ಇತರ ಮುಖಂಡರು ವಹಿಸಿದ್ದರು. ಕಾರ್ಯಕರ್ತರು ಯೆಚೂರಿ ಬಗ್ಗೆ ಮುಖಂಡರನ್ನು ಕೇಳಿದಾಗ, ಅವರು ತಡವಾಗಿ ಬರಬಹುದು ಎಂಬ ಉತ್ತರ ಸಿಕ್ಕಿತು. ಅದರೆ ವಾಸ್ತವವಾಗಿ ಯೆಚೂರಿ ರಾಜಧಾನಿಗೆ ಆಗಮಿಸಿದ್ದು ನವೆಂಬರ್ 8ರ ರಾತ್ರಿ!

  •     ಗಡ್ಕರಿ ಮಹತ್ವಾಕಾಂಕ್ಷೆ

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಲವು ಟೊಪ್ಪಿ ಧರಿಸುತ್ತಿದ್ದಾರೆ (ಹೊಣೆ ನಿಭಾಯಿಸುತ್ತಿದ್ದಾರೆ). ಭೂಸಾರಿಗೆಯ ಜತೆಗೆ ಇದೀಗ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನದ ಹೊಣೆಯೂ ಅವರ ಹೆಗಲಿಗೆ ಬಿದ್ದಿದೆ. ಗಂಗೆಯನ್ನು ಮೂಲ ಸ್ವರೂಪಕ್ಕೆ ತರುವ ಬಗ್ಗೆ ದೊಡ್ಡದಾಗಿ ಬೊಬ್ಬೆ ಹೊಡೆಯುತ್ತಿದ್ದ ಉಮಾಭಾರತಿಯ ಸ್ಥಿತಿ ಏನು? ಉಮಭಾರತಿ ಇದರಲ್ಲಿ ವಿಫಲರಾಗಿದ್ದು, ಗಡ್ಕರಿಯವರ ಶಕ್ತಿ ಹಾಗೂ ಉದ್ಯಮಶೀಲತೆ ಸಾಧ್ವಿಯ ಮುಖ ಗಂಟಿಕ್ಕಲು ಕಾರಣವಾಗಬಹುದು ಎನ್ನುವುದು ಹಲವರ ನಂಬಿಕೆ. ನಿಯಮಗಳಿಗೆ ಅಂಟಿಕೊಳ್ಳುವ ನಿರ್ಧಾರಗಳಿಗೆ ಹೆಸರಾದ ಬಿಜೆಪಿ ಮುಖಂಡ, ಈ ಕಾರ್ಯವನ್ನು ಪೂರೈಸಲು ಗಡುವನ್ನೂ ವಿಧಿಸಿದ್ದಾರೆ. ಬಾಬೂಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಆದೇಶವನ್ನೂ ನೀಡಿದ್ದಾರೆ. ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಹಿರಿಯ ಅಧಿಕಾರಿಗಳು ವಾರಕ್ಕೊಮ್ಮೆ ವರದಿ ನೀಡಬೇಕು. ಗಡ್ಕರಿ ತಮ್ಮ ಸಮಯವನ್ನು ಶ್ರಮಶಕ್ತಿ ಭವನ ಮತ್ತು ಸಾರಿಗೆ ಸಚಿವಾಲಯದ ನಡುವೆ ದಿನವಹಿ ಹಂಚಿಕೊಳ್ಳುತ್ತಿದ್ದಾರೆ. ಎರಡೂ ಸಚಿವಾಯಗಳು ಪರ್ಯಾಯ ಮಾರ್ಗಗಳಲ್ಲಿವೆ. ಆದರೆ ಅದೃಷ್ಟವಶಾತ್ ಈ ಅಂತರವನ್ನು ಎರಡು ನಿಮಿಷದ ನಡಿಗೆಗೆ ಸೀಮಿತವಾಗಿಸುವ ಒಳದಾರಿ ಇದೆ. ಆದರೆ ಕೆಲಸದ ವಿಷಯದಲ್ಲಿ ಇಂಥ ಅಡ್ಡದಾರಿಗಳನ್ನು ಗಡ್ಕರಿ ಸಹಿಸುವುದಿಲ್ಲ. ಆದ್ದರಿಂದ ಜಲ ಸಂಪನ್ಮೂಲ ಸಚಿವಾಲಯದಲ್ಲಿರುವ ಕೆಲ ಉದ್ದಮುಖದ ಬಾಬೂಗಳು ಸಾಧ್ವಿಯ ಪರವಾಗಿರಬಹುದು!

  •   ಧುಮಾಲ್ ದ ಕಿಂಗ್!

73 ವರ್ಷದ ಪ್ರೇಮ್‌ಕುಮಾರ್ ಧುಮಾಲ್ ಅವರನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದಾಗ, ಬಿಜೆಪಿ ಮಾರ್ಗದರ್ಶಕ ಮಂಡಳಿಯ ಎಲ್ಲ ಸದಸ್ಯರಲ್ಲಿ ಹತಾಶೆ ವ್ಯಕ್ತವಾಯಿತು. ಅಡ್ವಾಣಿ, ಮುರಳಿ ಮನೋಹರ ಜೋಶಿ, ಯಶವಂತ ಸಿನ್ಹಾ ಅವರಂಥ ಮಹಾನ್ ನಾಯಕರನ್ನೇ ಮೂಲೆಗುಂಪುಮಾಡುವ ಸಲುವಾಗಿ ರೂಪುಗೊಂಡದ್ದೇ ಮಾರ್ಗದರ್ಶಕ ಮಂಡಲಿ ಎಂಬ ಅಧಿಕಾರ ರಹಿತ, ಸ್ಪಷ್ಟ ರೂಪುರೇಷೆ ಇಲ್ಲದ ಸಂಸ್ಥೆ. ಗುಜರಾತ್‌ನಲ್ಲಿ ಪಾಟಿದಾರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಆನಂದಿ ಬೆನ್ ಪಟೇಲ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆದರೆ ಮುಖ ಉಳಿಸಿಕೊಳ್ಳುವ ಸಲುವಾಗಿ ನೀಡಿದ ಕಾರಣ, ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರು ಸಿಎಂ ಆಗಿ ಮುಂದು ವರಿಯಲು ಇಚ್ಛಿಸುವುದಿಲ್ಲ ಎನ್ನುವುದು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸುವ ಎಲ್ಲ ಸಾಧ್ಯತೆಗಳೂ ಇರುವ ಹಿನ್ನೆಲೆಯಲ್ಲಿ ಧುಮಾಲ್ ಸಿಎಂ ಆಗುವುದು ನಿಚ್ಚಳ. 75 ವರ್ಷದ ಗರಿಷ್ಠ ವಯೋಮಿತಿಯನ್ನು ತಲುಪಲು ಅವರಿಗೆ ಇನ್ನೂ ಎರಡು ವರ್ಷ ಇದೆ ಎನ್ನುವುದು ಅವರ ವಾದ. ಆದರೆ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಹಾಗೂ ರಾಜ್ಯವನ್ನು ಐದು ವರ್ಷ ಕಾಲ ಆಳ್ವಿಕೆ ಮಾಡಲು ಧಮಾಲ್ ಅವರನ್ನು ಆಯ್ಕೆ ಮಾಡಿದ್ದನ್ನು ಹಲವು ಮಂದಿ ಒಪ್ಪುವುದಿಲ್ಲ. ಅವರು ಹೇಳುವಂತೆ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿ ಬದಲಾಗಬಹುದು!

  •     ಅಯ್ಯರ್ ಹತಾಶೆ

ಮಣಿಶಂಕರ ಅಯ್ಯರ್ ಕಟ್ಟಾ ಕಾಂಗ್ರೆಸ್ಸಿಗ ಹಾಗೂ ತಮ್ಮ ಕಾರ್ಯವನ್ನು ಗಂಭೀರವಾಗಿ ನಿರ್ವಹಿಸುವವರು. ರಾಜೀವ್‌ಗಾಂಧಿ ಸಂಪುಟದಲ್ಲಿ ಸಚಿವರಾಗಿದ್ದ ಕಾರಣ ಹಾಗೂ 1989ರ ಚುನಾವಣೆಯಲ್ಲಿ ಮಾಧ್ಯಮ ಸಲಹೆಗಾರರಾಗಿದ್ದರಿಂದ, ಅವರಿಗೆ ಮಾಧ್ಯಮ ಹಾಗೂ ಸಂವಹನದ ಅಗತ್ಯತೆ ಬಗ್ಗೆ ಅರಿವು ಇದೆ. ಆದರೆ ಇತ್ತೀಚೆಗೆ ಅಯ್ಯರ್ ಗೊಂದಲಕ್ಕೀಡಾಗಿದ್ದಾರೆ. ಜುಲೈನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್‌ನ ಅತ್ಯುನ್ನತ ನಾಯಕರ ಗುಂಪನ್ನು ರಚಿಸಿ, ಕಾಂಗ್ರೆಸ್‌ನ ಸಂಪರ್ಕ ವಿಭಾಗಕ್ಕೆ ನೆರವಾಗುವ ನಿಟ್ಟಿನಲ್ಲಿ ಇದು ಪ್ರತಿದಿನ ಸಭೆ ಸೇರಬೇಕು ಎಂದು ಹೊಣೆಗಾರಿಕೆ ವಹಿಸಿದರು. ಈ ಗುಂಪಿನಲ್ಲಿ ಪ್ರಭಾವಿ ನಾಯಕರಾದ ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರರು ಇದ್ದರು. ಆದರೆ ಅಯ್ಯರ್‌ಗೆ ಅಚ್ಚರಿ ತಂದದ್ದು ಅವರು ಕೇಂದ್ರ ನಾಯಕತ್ವದ ಜತೆಗೆ ಸಂಪರ್ಕ ಸಾಧಿಸಲು ಮುಂದಾದಾಗ, ಸೋನಿಯಾ ಅಥವಾ ರಾಹುಲ್ ಅವರಿಗಾಗಲೀ ದೈನಂದಿನ ಸಭೆಗಳು ನಡೆದಿವೆಯೇ ಎಂದು ಖಾತ್ರಿಪಡಿಸಿಕೊಳ್ಳಲು ಸಮಯಾವಕಾಶ ಇಲ್ಲ ಎನ್ನುವುದು. ಈ ಸಮಿತಿ ಪ್ರತಿದಿನ ಪಕ್ಷದ ವಕ್ತಾರರಿಗೆ ಮತ್ತು ಪಕ್ಷದ ಮುಖವಾಣಿಯಾಗಿ ಟಿವಿ ಚಾನೆಲ್‌ಗಳ ಎದುರು ಬರುವವರಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಬೇಕು. ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಈ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಆದರೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಈ ಬಗ್ಗೆ ಗಂಭೀರವಾಗಿಯೂ ಇಲ್ಲ ಅಥವಾ ನಿರ್ಲಕ್ಷ್ಯ ಹೊಂದಿದ್ದಾರೆ; ಇಲ್ಲವೇ ಈ ಪ್ರಮುಖ ಆಯಾಮದ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟು ಸಯಮಾವಕಾಶ ಅವರಿಗಿಲ್ಲ!

  •      ಸಚಿವರಿಲ್ಲದ ಸಂಭ್ರಮ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಕೃಷ್ಣನ್ ಪಾಲ್ ಗುರ್ಜಾರ್ ಅವರು ರಾಜಧಾನಿಯಿಂದ ಅನತಿ ದೂರದಲ್ಲಿರುವ ಫರೀದಾಬಾದ್ ಕ್ಷೇತ್ರದ ಸಂಸದ. ಈ ಅಲ್ಪಅಂತರದ ಹಿನ್ನೆಲೆಯಲ್ಲಿ ಗುರ್ಜಾರ್ ತಮ್ಮ ಅಧಿಕೃತ ನಿವಾಸವನ್ನು ತುಘಲಕ್ ಲೇನ್‌ನಲ್ಲೇ ಮಾಡಿಕೊಂಡಿದ್ದಾರೆ. ಇದೇ ಕಟ್ಟಡ ಅವರ ಕಚೇರಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ. ಒಂದು ದಿನ ಸಂಸತ್ತಿನ ಗೃಹ ಅಧಿಕಾರಿಗಳ ಗುಂಪಿಗೆ ಭಡ್ತಿ ಸಿಕ್ಕಿತು ಹಾಗೂ ಅವರು ಗುರ್ಜಾರ್ ಅವರ ನಿವಾಸ ಮತ್ತು ಕಚೇರಿಯಲ್ಲಿ ಸಂಭ್ರಮಾಚರಣೆಗೆ ಮುಂದಾದರು. ಆದರೆ ಈ ಆಚರಣೆ ತಡರಾತ್ರಿವರೆಗೂ ಮುಂದುವರಿಯಿತು ಹಾಗೂ ಇದು ಆ ಪ್ರದೇಶದ ಇತರ ನಿವಾಸಿಗಳಿಗೆ ಸಹ್ಯವೆನಿಸಲಿಲ್ಲ. ಗುರ್ಜಾರ್ ಅವರ ನೆರೆಮನೆಯ ಸೇನಾ ಅಧಿಕಾರಿಯೊಬ್ಬರು ಶಬ್ದ ಮಾಲಿನ್ಯ ಬಗ್ಗೆ ದೂರು ನೀಡಿದರು. ಸಾಮಾನ್ಯವಾಗಿ ಈ ನಿಶ್ಶಬ್ದ ಪ್ರದೇಶದಲ್ಲಿ ಈ ಸಮಸ್ಯೆ ಇರುವುದಿಲ್ಲ. ಆ ಬಳಿಕ ಗುರ್ಜಾರ್ ಆ ಸಮಯದಲ್ಲಿ ತಾವು ಇರಲಿಲ್ಲ ಹಾಗೂ ಆ ಗದ್ದಲಕ್ಕೂ ತಮಗೂ ಸಂಬಂಧವಿಲ್ಲ ಎಂದು ವಿವರಣೆ ನೀಡಬೇಕಾಯಿತು. ಆದರೆ ಅವರ ಪಕ್ಷದ ಸದಸ್ಯರೇ ಅವರ ಕಾಲೆಳೆಯುವ ಸಲುವಾಗಿ ಏಕೆ ಅಷ್ಟು ಗದ್ದಲ ಮಾಡಬೇಕಿತ್ತು ಎಂದು ಕಿಚಾಯಿಸುತ್ತಿದ್ದಾರೆ. ‘ನಾನವನಲ್ಲ’ ಎಂದು ಸಚಿವರು ಸಮುಜಾಯಿಷಿ ನೀಡುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)