varthabharthi

ಕ್ರೀಡೆ

ಆ್ಯಶಸ್ ಸರಣಿ ಪೂರ್ವಾಭ್ಯಾಸ ಪಂದ್ಯ

ಕ್ರಿಕೆಟ್ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್ ಗೆ ಜಯ

ವಾರ್ತಾ ಭಾರತಿ : 12 Nov, 2017

ಅಡಿಲೇಡ್, ನ.11: ಆ್ಯಶಸ್ ಸರಣಿ ಪೂರ್ವಾಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್ ವಿರುದ್ಧ 192 ರನ್‌ಗಳ ಅಂತರದಿಂದ ಜಯಸಾಧಿಸಿದೆ. ಅಡಿಲೇಡ್ ಓವಲ್‌ನಲ್ಲಿ ನಾಲ್ಕನೆ ದಿನವಾದ ಶನಿವಾರ ಪಂದ್ಯ ಆರಂಭವಾಗಿ 30 ನಿಮಿಷ ಕಳೆಯುವಷ್ಟರಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ಇಂಗ್ಲೆಂಡ್‌ನ ಪರ ಕ್ರಿಸ್ ವೋಕ್ಸ್(4-17) ಯಶಸ್ವಿ ಬೌಲರ್ ಎನಿಸಿಕೊಂಡರೆ, ಕ್ರೆಗ್ ಓವರ್ಟನ್(3-15) ಹಾಗೂ ಜೇಮ್ಸ್ ಆ್ಯಂಡರ್ಸನ್(3-12) ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿದರು. ನಾಲ್ಕನೆ ದಿನದಾಟದ ಮೊದಲ ಓವರ್‌ನಲ್ಲಿ ಮ್ಯಾಟ್ ಶಾರ್ಟ್(28) ವಿಕೆಟ್‌ನ್ನು ಕಬಳಿಸಿದ ಒವರ್ಟನ್ ಆಸ್ಟ್ರೇಲಿಯಕ್ಕೆ ಶಾಕ್ ನೀಡಿದರು. ಹಿರಿಯ ವೇಗಿ ಆ್ಯಂಡರ್ಸನ್ ಕೊನೆಯ ವಿಕೆಟ್‌ಗಳನ್ನು ಕಬಳಿಸಿದರು.

ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 293 ರನ್ ಗಳಿಸಿ ಉತ್ತಮ ಆರಂಭ ಪಡೆದಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯ ಇಲೆವೆನ್ 9 ವಿಕೆಟ್‌ಗೆ 233 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ ಕೇವಲ 207 ರನ್‌ಗಳಿಸಿ ಆಲೌಟಾಯಿತು. ಆಸ್ಟ್ರೇಲಿಯ ಇಲೆವೆನ್ ಗೆಲುವಿಗೆ 268 ರನ್ ಗುರಿ ನೀಡಿತು.

ಇಂಗ್ಲೆಂಡ್ ತಂಡ ಬೌಲರ್‌ಗಳ ಗಾಯದ ಸಮಸ್ಯೆ ಎದುರಿಸುತ್ತಿದೆ. ಬೆನ್ ಸ್ಟೋಕ್ಸ್ ಸರಣಿಗೆ ಅಲಭ್ಯರಾಗಿದ್ದರೆ, ಸ್ಟೀವನ್ ಫಿನ್ ಸರಣಿಯಿಂದ ಹೊರಗುಳಿದಿದ್ದಾರೆ. ಜಾಕ್ ಬಾಲ್ ತಾತ್ಕಾಲಿಕವಾಗಿ ಸರಣಿಯಿಂದ ಬದಿಗೆ ಸರಿದಿದ್ದಾರೆ.

ನ.23 ರಿಂದ ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿರುವ ಆ್ಯಶಸ್ ಟೆಸ್ಟ್ ಸರಣಿ ಆರಂಭಕ್ಕೆ ಮೊದಲು ಇಂಗ್ಲೆಂಡ್ ಮುಂದಿನ ವಾರ ಟೌನ್ಸ್‌ವಿಲ್ಲೆಯಲ್ಲಿ ಮತ್ತೊಂದು ಅಭ್ಯಾಸ ಪಂದ್ಯ ಆಡಲಿದೆ. ಆಲ್‌ರೌಂಡರ್ ಮೊಯಿನ್ ಅಲಿ ಗಾಯದಿಂದ ಚೇತರಿಸಿಕೊಂಡು 2ನೆ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)