varthabharthi

ಕ್ರೀಡೆ

ಅಭ್ಯಾಸ ಪಂದ್ಯ: ಶ್ರೀಲಂಕಾ 411/6

ವಾರ್ತಾ ಭಾರತಿ : 12 Nov, 2017

ಕೋಲ್ಕತಾ, ನ.11: ಮಂಡಳಿ ಅಧ್ಯಕ್ಷರ ಇಲೆವೆನ್ ವಿರುದ್ಧದ ಎರಡು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನ ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆ ಹಾಕಿದೆ. ಇಲ್ಲಿನ ಜೋಧಪುರ ವಿವಿ ಕ್ರೀಡಾಂಗಣದಲ್ಲಿ ದಿನದ ಆಟ ಕೊನೆಗೊಂಡಾಗ ಶ್ರೀಲಂಕಾ ತಂಡ 88 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 411 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಲಂಕಾದ ನಾಲ್ಕು ಮಂದಿ ದಾಂಡಿಗರು ಅರ್ಧಶತಕ ದಾಖಲಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ತಯಾರಿ ನಡೆಸಿದ್ದಾರೆ.

ಆರಂಭಿಕ ದಾಂಡಿಗ ಸಾದೀರ ಸಮರವಿಕ್ರಮ 77 ಎಸೆತಗಳಲ್ಲಿ 13 ಬೌಂಡರಿಗಳ ಸಹಾಯದಿಂದ 74 ರನ್ ದಾಖಲಿಸುವ ಮೂಲಕ ತಂಡದ ಪರ ಗರಿಷ್ಠ ಸ್ಕೋರ್ ದಾಖಲಿಸಿದರು. ವಿಕೆಟ್ ಕೀಪರ್ ನಿರೋಶನ್ ಡಿಕ್ವೆಲ್ಲಾ ಔಟಾಗದೆ 73 ರನ್ ಗಳಿಸಿದರು.

 ಕೇರಳದ ವೇಗಿ ಸಂದೀಪ್ ವಾರಿಯರ್ 60ಕ್ಕೆ 2 ವಿಕೆಟ್ ಪಡೆಯುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಆಕಾಶ್ ಭಂಡಾರಿ 111ಕ್ಕೆ 2 ವಿಕೆಟ್ ಪಡೆದರು. ಸಮರವಿಕ್ರಮ ಮತ್ತು ದಿಮುತ್ ಕರುಣರತ್ನೆ ಮೊದಲ ವಿಕೆಟ್‌ಗೆ 23.3 ಓವರ್‌ಗಳಲ್ಲಿ 134 ರನ್ ದಾಖಲಿಸಿದರು. ಗಾಯದಿಂದ ಚೇತರಿಸಿಕೊಂಡಿರುವ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 93 ಎಸೆತಗಳಲ್ಲಿ 54 ರನ್ ಗಳಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಅವರು ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಮ್ಯಾಥ್ಯೂಸ್ 6 ಬೌಂಡರಿ ಬಾರಿಸಿದ್ದರು.ಅವರು 53 ರನ್ ಗಳಿಸಿದ್ದಾಗ ಜಲಜ್ ಸಕ್ಸೇನಾ ಬೌಲಿಂಗ್‌ನಲ್ಲಿ ಜೀವನ್‌ಜ್ಯೋತ್ ಸಿಂಗ್ ಕ್ಯಾಚ್ ಕೈ ಚೆಲ್ಲುವ ಮೂಲಕ ಜೀವದಾನ ನೀಡಿದರು. ಆದರೆ ಬಳಿಕ ಮ್ಯಾಥ್ಯೂಸ್ ಈ ಮೊತ್ತಕ್ಕೆ 1 ರನ್ ಸೇರಿಸಿ ಗಾಯಗೊಂಡು ನಿವೃತ್ತರಾದರು.

ದಿಮುತ್ ಕರುಣರತ್ನೆ 50ರನ್ ಗಳಿಸಿದರು. ಆದರೆ ಲಹಿರು ತಿರಿಮನ್ನೆ (17) ದೊಡ್ಡ ಸ್ಕೋರ್ ದಾಖಲಿಸುವಲ್ಲಿ ಎಡವಿದರು. ನಾಯಕ ದಿನೇಶ್ ಚಾಂಡಿಮಾಲ್ ಕಳೆದ ಪಾಕ್ ವಿರುದ್ಧದ ಸರಣಿಯ 4 ಇನಿಂಗ್ಸ್‌ಗಳಲ್ಲಿ 224 ರನ್ ಗಳಿಸಿದ್ದರು. ಆದರೆ ಅವರು ಅಭ್ಯಾಸ ಪಂದ್ಯದಲ್ಲಿ 29 ರನ್ ಗಳಿಸಿ ಪೆವಿಲಿಯನ್ ಸೇರಿದರು.ದಿಲ್ರುವಾನ್ ಪೆರೆರಾ ಅವರು 44 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 48 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

►ಶ್ರೀಲಂಕಾ 88 ಓವರ್‌ಗಳಲ್ಲಿ 411/6ಡಿಕ್ಲೇರ್( ಸಮರವಿಕ್ರಮ 74, ಡಿಕ್ವೆಲ್ಲಾ ಔಟಾಗದೆ 73, ಆ್ಯಂಜೆಲೊ ಮ್ಯಾಥ್ಯೂಸ್ 54, ದಿಮುತ್ ಕರುಣರತ್ನೆ 50; ಸಂದೀಪ್ ವಾರಿಯರ್ 60ಕ್ಕೆ 2).

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)