varthabharthi

ಅಂತಾರಾಷ್ಟ್ರೀಯ

ಶಾಲಾ ಮಕ್ಕಳ ಮಟ್ಟಕ್ಕಿಳಿದ ಟ್ರಂಪ್-ಕಿಮ್ ಜಟಾಪಟಿ!

ಕಿಮ್ ‘ಕುಳ್ಳ ಮತ್ತು ದಡಿಯ’ ಎಂದು ನಾನು ಯಾವತ್ತಾದರೂ ಹೇಳಿದ್ದೇನೆಯೇ?

ವಾರ್ತಾ ಭಾರತಿ : 12 Nov, 2017

ಹನೋಯ್ (ವಿಯೆಟ್ನಾಂ), ನ. 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ನಡುವಿನ ಬೈಗುಳಗಳ ವಿನಿಮಯ ಈಗ ಶಾಲಾ ಮಕ್ಕಳ ಮಟ್ಟಕ್ಕಿಳಿದಿದೆ!

 ‘‘ಮುದಿ ಹುಚ್ಚನೊಬ್ಬನ ಬೇಜವಾಬ್ದಾರಿಯ ಮಾತುಗಳು’’ ಎಂಬ ಉತ್ತರ ಕೊರಿಯದ ಹೇಳಿಕೆಗೆ ಹನೋಯ್‌ನಿಂದ ರವಿವಾರ ಟ್ರಂಪ್ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

‘‘ನನ್ನನ್ನು ‘ಮುದುಕ’ ಎಂದು ಕರೆಯುವ ಮೂಲಕ ಕಿಮ್ ಜಾಂಗ್ ಉನ್ ನನ್ನನ್ನು ಯಾಕೆ ಅವಮಾನಿಸುತ್ತಿದ್ದಾರೆ? ಅವರು ‘ಕುಳ್ಳ ಮತ್ತು ದಡಿಯ’ ಎಂದು ನಾನು ಯಾವತ್ತಾದರೂ ಹೇಳಿದ್ದೇನೆಯೇ?’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ವ್ಯಂಗ್ಯವನ್ನು ಮುಂದುವರಿಸುತ್ತಾ, ‘‘ಆದರೆ, ನಾನು ಮಾತ್ರ ಅವರ ಗೆಳೆಯನಾಗಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಒಂದು ದಿನ ನಾವಿಬ್ಬರು ಸ್ನೇಹಿತರಾಗಲೂ ಬಹುದು’’ ಎಂದಿದ್ದಾರೆ.

ಏಶ್ಯ ಪ್ರವಾಸದಲ್ಲಿರುವ ಟ್ರಂಪ್, ಉತ್ತರ ಕೊರಿಯದ ಪರಮಾಣು ಕಾರ್ಯಕ್ರಮಗಳ ಬಗ್ಗೆ ಜಾಗತಿಕ ಒತ್ತಡ ನಿರ್ಮಿಸುವುದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ.

ಮಂಗಳವಾರ ದಕ್ಷಿಣ ಕೊರಿಯದ ಸಂಸತ್ತಿನಲ್ಲಿ ಭಾಷಣ ಮಾಡಿದ ಟ್ರಂಪ್, ‘‘ನೀವು ಸಂಗ್ರಹಿಸುತ್ತಿರುವ ಅಸ್ತ್ರಗಳು ನಿಮ್ಮನ್ನು ಸುರಕ್ಷಿತವಾಗಿಸುವುದಿಲ್ಲ. ಅವುಗಳು ನಿಮ್ಮ ಆಡಳಿತವನ್ನು ಅಪಾಯಕ್ಕೆ ಒಡ್ಡುತ್ತವೆ’’ ಎಂದು ಉತ್ತರ ಕೊರಿಯಕ್ಕೆ ಎಚ್ಚರಿಕೆ ನೀಡಿದ್ದರು.

ಟ್ರಂಪ್ ಉತ್ತರ ಕೊರಿಯವನ್ನು ಅಂತಾರಾಷ್ಟ್ರೀಯ ಸಮುದಾಯದಿಂದ ಬೇರ್ಪಡಿಸುವ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಶನಿವಾರ ಆರೋಪಿಸಿತ್ತು.

‘‘ಟ್ರಂಪ್‌ರಂಥ ಮುದಿ ಹುಚ್ಚನೊಬ್ಬನ ಬೇಜವಾಬ್ದಾರಿಯುತ ಮಾತುಗಳು ನಮ್ಮನ್ನು ಹೆದರಿಸುವುದಿಲ್ಲ ಹಾಗೂ ನಮ್ಮ ಹಾದಿಯನ್ನು ತಡೆಯುವುದಿಲ್ಲ’’ ಎಂದು ಉತ್ತರ ಕೊರಿಯದ ವಿದೇಶ ಸಚಿವಾಲಯ ಪ್ರಕಟನೆಯೊಂದರಲ್ಲಿ ಹೇಳಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)