varthabharthi

ನಿಮ್ಮ ಅಂಕಣ

ಶೋಷಣೆಗೆ ಹಲವು ಮುಖ

ವಾರ್ತಾ ಭಾರತಿ : 13 Nov, 2017
- ಸಿದ್ದಯ್ಯ ಚಿಕ್ಕಮಾದೇಗೌಡ ಟಿ.ನರಸಿಪುರ

ಮಾನ್ಯರೆ,

ಭಾರತದಲ್ಲಿ ಜಾತಿ ಹೆಸರಿನಲ್ಲೂ ಶೋಷಣೆ ನಡೆಯುತ್ತಿದೆ. ಅದೇ ರೀತಿ ಜಾತಿ, ಧರ್ಮ ಮೀರಿದ ದುಡಿಯುವ ವರ್ಗದ ಶೋಷಣೆಯೂ ನಡೆಯುತ್ತಿದೆ. ಸಾಮಾಜಿಕ ಅಸಮಾನತೆಯ ವಿರುದ್ಧದ ಹೋರಾಟದ ಜೊತೆ ಜೊತೆಗೆ ಆರ್ಥಿಕ ಅಸಮಾನತೆ ಮತ್ತು ಅಲ್ಪ ಸಂಖ್ಯೆಯ ಶೋಷಕರಿಂದ ಆಗುತ್ತಿರುವ ಬಹುಸಂಖ್ಯೆಯ ಶ್ರಮಿಕರ ಶೋಷಣೆ ವಿರುದ್ಧ ಹೋರಾಟ ಮಾಡಿದರೆ ಮಾತ್ರ ಜಾತಿ ಜಾತಿಗಳ ನಡುವಿನ ಅಸಮಾನತೆ ತೊಲಗಿಸಲು ಸಾಧ್ಯ. ಅದಕ್ಕಾಗಿ ಶ್ರಮಿಕ ವರ್ಗದ ಜನರಲ್ಲಿ ವರ್ಗಜಾಗೃತಿ ಮೂಡಿಸಬೇಕಾಗಿದೆ.

ಏನಿದು ವರ್ಗ? ಶೋಷಿತ ವರ್ಗ ಮತ್ತು ಶೋಷಣೆ ಮಾಡುವ ವರ್ಗ, ದುಡಿದು ತಿನ್ನುವ ವರ್ಗ ಮತ್ತು ಇತರರ ದುಡಿಮೆಯಲ್ಲೇ ಬದುಕುವ ವರ್ಗ. ಈ ವರ್ಗಗಳು ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಲ್ಲ. ಶಿಕ್ಷಣ ಸಂಸ್ಥೆ ಆಸ್ಪತ್ರೆ ಮಾಲಕ, ಕಾರ್ಖಾನೆ ಮಾಲಕ, ಸಾವಿರಾರು ಎಕರೆ ಭೂಮಿಯ ಒಡೆಯ, ರಿಯಲ್ ಎಸ್ಟೇಟ್ ಉದ್ಯಮಿ ದಲಿತರಾಗಿದ್ದರೂ, ಗೌಡ, ರೆಡ್ಡಿ, ಬ್ರಾಹ್ಮಣ ಅಥವಾ ಮುಸ್ಲಿಂ, ಕ್ರೈಸ್ತರಾಗಿದ್ದರೂ ಅವರೆಲ್ಲಾ ಶೋಷಕ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ. ಅವರ ಆಳುಗಳಾಗಿ, ಕಾರ್ಮಿಕರಾಗಿ ದುಡಿಯುವ ಎಲ್ಲರೂ ಶೋಷಿತರಾಗಿರುತ್ತಾರೆ. ತಮ್ಮದೇ ಜಾತಿಯವರು ಎಂಬ ಕಾರಣಕ್ಕೆ ತಮ್ಮ ಕಾರ್ಮಿಕರಿಗೆ ಉತ್ತಮ ಕೂಲಿಯನ್ನೇನೂ ಕೊಡುವುದಿಲ್ಲ, ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ತಮ್ಮದೇ ಜಾತಿಯ ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕವನ್ನೇನೂ ಪಡೆಯುವುದಿಲ್ಲ. ಆಸ್ಪತ್ರೆ ಸೇವಾ ಶುಲ್ಕ ಕಡಿತ ಮಾಡುವುದಿಲ್ಲ ಅಥವಾ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ, ಅಷ್ಟೇ ಏಕೆ ಮನೆಯೊಳಗೂ ಬಿಟ್ಟುಕೊಳ್ಳುವುದಿಲ್ಲ. ಅಲ್ಲಿ ಜಾತಿಗಿಂತ ಲಾಭ, ಆ ಮೂಲಕ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವುದೇ ಮಾಲಕರ ಮುಖ್ಯ ಗುರಿಯಾಗಿರುತ್ತದೆ. ಕಾರ್ಮಿಕರಿಂದ ಹೆಚ್ಚೆಚ್ಚು ದುಡಿಸಿಕೊಂಡು, ಸಾಧ್ಯವಾದಷ್ಟು ಕಡಿಮೆ ವೇತನ ಕೊಟ್ಟು, ತನ್ನ ವಸ್ತು ಅಥವಾ ಸೇವೆಗಳಿಗೆ ಹೆಚ್ಚಿನ ದರ ಪಡೆದು, ಸರಕಾರಕ್ಕೆ ತೆರಿಗೆ ವಂಚಿಸಿ, ಭೂಮಿ, ಪ್ರಕೃತಿ ಸಂಪತ್ತು ಮತ್ತು ಸಾರ್ವಜನಿಕ ಸಂಪತ್ತುಗಳನ್ನು ಕಬಳಿಸಲು ಅನುಕೂಲವಾಗುವಂತಹ ಕಾನೂನು ರೂಪಿಸಿಕೊಳ್ಳುತ್ತಾ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಬೇಕೆಂಬುದು ಶೋಷಕ ವರ್ಗದ ಗುರಿಯಾಗಿರುತ್ತದೆ. ಇವರು ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳಲು ವಿದೇಶಗಳ ತಮ್ಮ ವರ್ಗದವರ ಜೊತೆ ಕೈಜೋಡಿಸುತ್ತಾರೆ ಮತ್ತು ದೇಶದ ಸಂಪತ್ತನ್ನು ಇಬ್ಬರೂ ಸೇರಿ ಲೂಟಿ ಮಾಡುತ್ತಿರುತ್ತಾರೆ. 

 

Comments (Click here to Expand)