varthabharthi

ನಿಮ್ಮ ಅಂಕಣ

ಪ್ರಧಾನಿ ಮೋದಿ: ಮಾತು ಮತ್ತು ಕೃತಿ

ವಾರ್ತಾ ಭಾರತಿ : 13 Nov, 2017
ಸುರೇಶ್ ಭಟ್ ಬಾಕ್ರಬೈಲು

ಎಲ್ಲರಿಗೂ ‘ಅಚ್ಛೇ ದಿನ್’ ತಂದುಕೊಡುತ್ತೇವೆ ಎಂದು ಚುನಾವಣೆಗೆ ಮೊದಲು ಭರವಸೆ ಕೊಟ್ಟ ಪ್ರಧಾನಿ ಮೋದಿ ಅದನ್ನು ಕೇವಲ ಕೆಲವು ಕಾರ್ಪೊರೇಟ್ ಕುಳಗಳಿಗೆ ಮಾತ್ರ ಸೀಮಿತಗೊಳಿಸಿ ಮಿಕ್ಕವರೆಲ್ಲಾ ಭಿಕ್ಷಾಪಾತ್ರೆ ಹಿಡಿಯಬೇಕಾದ ಕೆಟ್ಟ ದಿನಗಳನ್ನು ತಂದುಕೊಟ್ಟಿರುವ ವಾಸ್ತವ ಇಂದು ನಮ್ಮೆಲ್ಲರ ಮುಂದಿದೆ. ತಮ್ಮನ್ನು ಚುನಾಯಿಸಿದರೆ ಭ್ರಷ್ಟಾಚಾರವನ್ನು ನಿರ್ನಾಮಗೊಳಿಸುವೆವು, ವಿದೇಶಗಳಲ್ಲಿರುವ ಕಪ್ಪುಹಣ ತಂದು ಪ್ರತಿಯೊಬ್ಬನಿಗೂ ರೂ.15 ಲಕ್ಷ ಹಂಚುವೆವೆಂದು ಭರವಸೆ ಕೊಟ್ಟಿದ್ದ ಮೋದೀಜಿಯ ಸರಕಾರ ಅಸಲಿಗೆ ಇಂದು ವಿದೇಶದಲ್ಲಿರುವ ಕಪ್ಪುಹಣ ಬಿಡಿ, ಸ್ವದೇಶದಲ್ಲಿರುವ ಕಪ್ಪುಹಣವನ್ನು ಪತ್ತೆ ಹಚ್ಚುವಲ್ಲಿಯೂ ದಯನೀಯವಾಗಿ ಸೋತಿದೆ.

ಕಳೆದ ವರ್ಷ ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ಕಾಲದಲ್ಲಿ ಸನ್ಮಾನ್ಯರು ಏನು ಹೇಳಿದ್ದರು? ‘ಕಾಳದಂಧೆಕೋರರನ್ನು ಜೈಲಿಗಟ್ಟುವ ಮಾರ್ಗವೊಂದನ್ನು ಕಂಡುಕೊಳ್ಳುವೆ’. ಮಾರ್ಗ ಸಿಕ್ಕಿತೇ ಎಂದು ಕೊರಳುದ್ದ ಮಾಡಿದವರಿಗೆ ನಿರಾಸೆ ಕಾದಿದೆ. ಏಕೆಂದರೆ ಎಷ್ಟು ಕಾಳದಂಧೆಕೋರರ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಇತ್ತೀಚೆಗಷ್ಟೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಒಂದೂ ಇಲ್ಲ ಎಂಬ ಉತ್ತರ ಸಿಕ್ಕಿದೆ! ಹೋಗಲಿ, ಜೇಬಿಗೆ ಕಪ್ಪುಹಣ ಬೀಳದಿದ್ದರೂ ಪರವಾಗಿಲ್ಲ ಎಂದುಕೊಂಡರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ದಿನಬಳಕೆಯ ವಸ್ತುಗಳು ಇತ್ಯಾದಿಗಳ ಮೇಲೆ ಸಿಕ್ಕಾಪಟ್ಟೆ ತೆರಿಗೆ ಏರಿಸುವ ಮೂಲಕ ಪ್ರಜೆಗಳ ಜೇಬಿಗೇ ಕತ್ತರಿ ಹಾಕುವ ಕೆಲಸ ಪ್ರಾರಂಭವಾಗಿದೆ! ಕಾರ್ಪೊರೇಟುಗಳು ಬ್ಯಾಂಕುಗಳಿಂದ ಸಾಲ ಪಡೆದು ವಾಪಸ್ ಮಾಡದ ಹಲವು ಲಕ್ಷ ಕೋಟಿ ರೂಪಾಯಿಗಳನ್ನು ಅಂತಿಮವಾಗಿ ಪ್ರಜೆಗಳಿಂದಲೇ ಸಂಗ್ರಹಿಸಲಾಗುತ್ತಿದೆ! ಯಾವುದೇ ರಾಜಕೀಯ ಪಕ್ಷ ಇರಲಿ, ಅದರ ಕಾರ್ಯನೀತಿಗಳು, ಅದರ ಯೋಜನೆಗಳು ಮುಂತಾದವುಗಳ ಬಗ್ಗೆ ಅದರೊಳಗೇ ಟೀಕೆಗಳು ಮತ್ತು ಭಿನ್ನಾಭಿಪ್ರಾಯಗಳು ವ್ಯಕ್ತವಾಗುವುದು ಒಂದು ಸಹಜ ಪ್ರಕ್ರಿಯೆಯಾಗಿದೆ.

ಯಾವುದೇ ವಿಷಯದ ಬಗ್ಗೆ ಸಂಪೂರ್ಣ ಏಕಮತ ನಿರೀಕ್ಷಿಸುವುದು ಪ್ರಜಾತಾಂತ್ರಿಕವಲ್ಲ, ಅದು ಮಿಲಿಟರಿ ಶಿಸ್ತು. ಆದರೆ ನಮ್ಮ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೇ ಸೇನೆಯ ಶಿಸ್ತು ಬೇಕಾಗಿರುವಂತೆ ಕಾಣುತ್ತದೆ. ಮೊನ್ನೆ ಅಕ್ಟೋಬರ್ 28ರಂದು ಹೊಸದಿಲ್ಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ‘ದಿವಾಲಿ ಮಿಲನ್’ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಮಾನ್ಯರು, ಬಿಜೆಪಿಯೊಳಗಿಂದ ಭಿನ್ನ ಧ್ವನಿಗಳು ಹೊರಬೀಳುತ್ತಿವೆ ಎನ್ನುವ ಮೂಲಕ ಪಕ್ಷದ ಸದಸ್ಯರಿಗೆ ನಯವಾದ ಎಚ್ಚರಿಕೆಯೊಂದನ್ನು ನೀಡಿದರು. ಇದೇ ವೇಳೆ ಭಾರತದ ರಾಜಕೀಯ ಪಕ್ಷಗಳೆಲ್ಲ ಆಂತರಿಕ ಪ್ರಜಾಪ್ರಭುತ್ವದ ಕುರಿತು ಚರ್ಚೆ ನಡೆಸುವಂತೆಯೂ ಕರೆಕೊಟ್ಟರು. ಅಂತಹ ‘ನೈಜ ಪ್ರಜಾತಾಂತ್ರಿಕ ಕೆಚ್ಚನ್ನು’ ಬೆಳೆಸುವುದು ದೇಶದ ಭವಿಷ್ಯಕ್ಕೆ ಆವಶ್ಯಕವೆಂದು ಒತ್ತಿಹೇಳಿದರು. ಆದರೆ ನೋಟು ರದ್ದತಿ ಮತ್ತು ಜಿಎಸ್‌ಟಿ ಯೋಜನೆಗಳ ಕುರಿತು ಇತ್ತೀಚೆಗೆ ಯಶವಂತ ಸಿನ್ಹಾ ಮತ್ತು ಅರುಣ್ ಶೌರಿ ಮಾಡಿದಂತಹ ಮಿದು ಟೀಕೆಗಳನ್ನು ಸಹಿಸಲಾರದ ಸನ್ಮಾನ್ಯರು ಅವರಿಬ್ಬರನ್ನು ‘80ರ ಹರೆಯದ ಹತಾಶ ಉದ್ಯೋಗಾಕಾಂಕ್ಷಿಗಳು’ ಎಂದು ಗೇಲಿ ಮಾಡಿರುವುದು ಮೋದಿಯ ಮಾತು ಮತ್ತು ಕೃತಿಗಳ ನಡುವಿನ ಅಜಗಜಾಂತರವನ್ನು ಎತ್ತಿ ತೋರಿಸುತ್ತದೆ.

‘ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ಕುರಿತು ಆಗಾಗ ಚರ್ಚೆಗಳಾಗುತ್ತವೆ; ಆದರೆ ಅವುಗಳ ವೌಲ್ಯಗಳು, ಆಂತರಿಕ ಪ್ರಜಾಪ್ರಭುತ್ವ ಮತ್ತು ಹೊಸ ತಲೆಮಾರಿನವರಿಗೆ ಅವಕಾಶ ಒದಗಿಸುವ ಕುರಿತು ಯಾರೂ ಮಾತನಾಡುತ್ತಿಲ್ಲ’ ಎಂಬ ಮೋದಿಯ ಮತ್ತೊಂದು ಕಂಪ್ಲೇಂಟ್‌ಗೆ ಜನ ನಗದೆ ಇನ್ನೇನು ಮಾಡಬೇಕು! ಏಕೆಂದರೆ ನಗದುರಹಿತ ವಹಿವಾಟು ಹೆಚ್ಚಬೇಕೆಂದು ಹೇಳುವ ಮೋದೀಜಿ ರಾಜಕೀಯ ಪಕ್ಷಗಳ ದೇಣಿಗೆಯನ್ನು ಯಾಕೆ ಸಂಪೂರ್ಣ ನಗದುರಹಿತ ಮಾಡಿಲ್ಲ? ಹುಟ್ಟಿನಿಂದ ಸಾವಿನ ತನಕ ಎಲ್ಲದಕ್ಕೂ ಆಧಾರ್ ಜೋಡಣೆ ಮಾಡಬೇಕು ಎನ್ನುವವರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರಿಗೆ ಆಧಾರ್ ಜೋಡಣೆ ಯಾಕೆ ಕಡ್ಡಾಯ ಮಾಡಿಲ್ಲ? ಇದರ ಹಿಂದೆ ಯಾವ ಮತ್ಲಬ್ ಅಡಗಿದೆ ಎಂಬುದನ್ನು ಜನ ಬಹಳ ಚೆನ್ನಾಗಿ ಅರಿತುಕೊಂಡಿದ್ದಾರೆ. ಇನ್ನು ಹೊಸ ತಲೆಮಾರಿನವರಿಗೆ ಅವಕಾಶ ಒದಗಿಸುವ ವಿಷಯಕ್ಕೆ ಬಂದರೆ ಗುಜರಾತಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನೇ ರಾಜ್ಯ ಮಟ್ಟಕ್ಕೆ ಏರಿಸಿದವರು ಇನ್ಯಾರೂ ಅಲ್ಲ, ಇದೇ ಮೋದೀಜಿ!

ಇದೇ ನವೆಂಬರ್ 6ರಂದು ಪತ್ರಿಕೆಯೊಂದರ 75ನೆ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಸನ್ಮಾನ್ಯರು, ಮಹಾತ್ಮ ಗಾಂಧಿಯವರನ್ನು ಉಲ್ಲೇಖಿಸುತ್ತಾ, ಪತ್ರಿಕಾ ಸ್ವಾತಂತ್ರದ ದುರ್ಬಳಕೆ ಕ್ರಿಮಿನಲ್ ಕೃತ್ಯ; ಬರೆಯುವ ಸ್ವಾತಂತ್ರದಲ್ಲಿ ‘ವಾಸ್ತವಿಕವಾಗಿ ಸರಿಯಲ್ಲದ’ ಸುದ್ದಿಗಳನ್ನು ಪ್ರಕಟಿಸುವ ಸ್ವಾತಂತ್ರ ಸೇರಿಲ್ಲ ಎಂದು ಮುಂತಾದ ಹತ್ತು ಹಲವು ಪುಕ್ಕಟೆ ಸಲಹೆಗಳನ್ನು ನೀಡಿದರು. ಇವು ಭಟ್ಟಂಗಿ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಅನ್ವಯಿಸುವುದಿಲ್ಲ ಎನ್ನಲು ಬಹುಶಃ ಮರೆತಿರಬೇಕು. ಏಕೆಂದರೆ ನಾವು ದಿನಾ ನೋಡುವಂತೆ ‘ವಾಸ್ತವಿಕವಾಗಿ ಸರಿಯಲ್ಲದ’ ಸುದ್ದಿಗಳನ್ನು ಪ್ರಕಟಿಸುವಲ್ಲಿ ಭಟ್ಟಂಗಿ ಮಾಧ್ಯಮಗಳು ಎಲ್ಲರಿಗಿಂತ ಮುಂಚೂಣಿಯಲ್ಲಿವೆ! ಇನ್ನೊಂದು ಕಡೆ ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಯವರ ಸಹ ಸ್ವಯಂಸೇವಕರು ‘ವಾಸ್ತವಿಕವಾಗಿ ಸರಿಯಲ್ಲದ’ ಸುದ್ದಿಗಳನ್ನು (ಮತ್ತು ಕೆಟ್ಟಕೆಟ್ಟದಾದ ಬೈಗುಳಗಳನ್ನು) ಹರಿಬಿಡುತ್ತಿದ್ದರೆ ಸನ್ಮಾನ್ಯರು ಅದನ್ನೆಲ್ಲ ತಡೆಯುವ ಬದಲು ಫಾಲೋ ಮಾಡುತ್ತಾರೆ! ಅರುಣ್ ಶೌರಿ ಸರಿಯಾಗಿಯೇ ಹೇಳಿದ್ದಾರೆ.

ಬರೀ ಎರಡೂವರೆ ಮಂದಿಯ (ಮೋದಿ, ಅಮಿತ್ ಶಾ ಮತ್ತು ಒಬ್ಬ ಲಾಯರ್) ಆಡಳಿತವಾಗಿ ಪರಿಣಮಿಸಿರುವ ಮೋದಿ ಸರಕಾರದಲ್ಲಿ ನೈಜ ಪ್ರಜಾಪ್ರಭುತ್ವ ಎಲ್ಲಿದೆ? ಪ್ರಶ್ನಿಸುವವರನ್ನು, ಟೀಕಿಸುವವರನ್ನು ಹಿಗ್ಗಾಮುಗ್ಗಾ ಬಯ್ಯುವುದೇ ಮೋದಿ ಸರಕಾರ ಹಾಗೂ ಅದರ ತುತ್ತೂರಿವಾಲಾಗಳ ಮಾಮೂಲಿ ಕಾಯಕವಾಗಿದೆ! ಜನರು ತಿಳಿದುಕೊಳ್ಳಬೇಕಾದ ವಾಸ್ತವ ಏನೆಂದರೆ ಆರೆಸ್ಸೆಸ್‌ನ ರಾಜಕೀಯ ಅಂಗವಾದ ಬಿಜೆಪಿ ತೋರಿಕೆಗೆ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಭಾಗವಹಿಸುತ್ತದಾದರೂ ಅದು ಆರಂಭದಿಂದಲೂ ಸರ್ವಾಧಿಕಾರವನ್ನು ಪ್ರತಿಪಾದಿಸುತ್ತಾ ಬಂದಿರುವ ಪಕ್ಷ. ಇಂತಹ ಪಕ್ಷದಲ್ಲಿ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಅವಕಾಶ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಟೀಕೆ, ಭಿನ್ನಾಭಿಪ್ರಾಯಗಳಿಗೆ ಅವಕಾಶ ಒದಗಿಸುವ ಪ್ರಶ್ನೆ ಎಲ್ಲಿಂದ ಬಂತು?

ಜನತೆಗೆ ಉತ್ತರದಾಯಿಯಾಗಿರುವ ಪ್ರಜಾತಾಂತ್ರಿಕ ಸರಕಾರವೊಂದರಲ್ಲಿ ಪ್ರಾಮುಖ್ಯತೆಯ ಮಟ್ಟಿಗೆ ಮೊದಲು ಸರಕಾರ, ನಂತರ ಪಕ್ಷ, ಕೊನೆಯಲ್ಲಿ ನಾಯಕ ಎಂದಿರಬೇಕು. ಆದರೆ ಮೋದಿ ಸರಕಾರದಲ್ಲಿ ಪ್ರಾಮುಖ್ಯತೆ ಕೇವಲ ಮೋದಿಗೆ. ಆತ, ಆತನ ಸರಕಾರ, ಆತನ ಪಕ್ಷ ಸೇರಿದಂತೆ ಎಲ್ಲವೂ ಉತ್ತರದಾಯಿಯಾಗಿರುವುದು ನಾಗಪುರದಲ್ಲಿರುವ ಅಸಾಂವಿಧಾನಿಕ ಗುರುವಿಗೆ. ಇದು ಆರೆಸ್ಸೆಸ್‌ನ ಮಾಜಿ ಗುರು ಗೋಳ್ವಲ್ಕರ್ ಹಾಕಿಕೊಟ್ಟ ಅನುಲ್ಲಂಘನೀಯ ಪರಂಪರೆಗೆ ಅನುಸಾರವಾಗಿದೆ. ತನ್ನ ಸಂಘಟನೆಯ ವಿನ್ಯಾಸ ಮತ್ತು ಗುರಿಯನ್ನು ಆತ 1940ರಲ್ಲೇ ವಿಷದಪಡಿಸಿದ್ದಾರೆ. ಅಂದು ಮದ್ರಾಸ್‌ನಲ್ಲಿ 1350 ಉನ್ನತಮಟ್ಟದ ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗೋಳ್ವಲ್ಕರ್ ‘‘ಒಂದು ಧ್ವಜ, ಒಬ್ಬ ನಾಯಕ ಮತ್ತು ಒಂದು ಸಿದ್ಧಾಂತದಿಂದ ಸ್ಫೂರ್ತಿ ಪಡೆಯುತ್ತಿರುವ ಆರೆಸ್ಸೆಸ್ ಈ ಮಹಾನ್ ದೇಶದ ಪ್ರತಿಯೊಂದು ಮೂಲೆಯಲ್ಲೂ ಹಿಂದುತ್ವದ ಜ್ಯೋತಿಯನ್ನು ಬೆಳಗಿಸುತ್ತಿದೆ’’ ಎಂದು ಸ್ಪಷ್ಟವಾಗಿ ಹೇಳಿದರು. (ಎಂ.ಎಸ್.ಗೋಳ್ವಲ್ಕರ್, ಶ್ರೀ ಗುರೂಜಿ ಸಮಗ್ರ ದರ್ಶನ್ ಸಂಪುಟ 1, ಪುಟ 11).

ಆರೆಸ್ಸೆಸ್‌ನ ರಾಜಕೀಯ ಉಪಶಾಖೆಯಾದ ಬಿಜೆಪಿಗೆ (1951ರಲ್ಲಿ ಸ್ಥಾಪನೆಯಾದ ಜನಸಂಘ ಇದರ ಹಳೆ ಅವತಾರ) ಸ್ವಯಂಸೇವಕರನ್ನು ಎರವಲು ನೀಡುವ ಐಡಿಯಾ ಗೋಳ್ವಲ್ಕರ್‌ರದು. ಅಂಥವರನ್ನು ಆತ ಆರೆಸ್ಸೆಸ್‌ನ ತಾಳಕ್ಕೆ ತಕ್ಕಂತೆ ಕುಣಿಯಬೇಕಾಗಿರುವ ‘ನಟ’ರೆಂದು ಕರೆಯುತ್ತಾರೆ. 1954ರ ಮಾರ್ಚ್ 16ರಂದು ವಾರ್ಧಾದ ಸಿಂಡಿಯಲ್ಲಿ ಮಾಡಿದ ಭಾಷಣದ ವೇಳೆ ಗೋಳ್ವಲ್ಕರ್ ಏನು ಹೇಳಿದರೆಂಬುದನ್ನು ಗಮನಿಸಿ: ‘‘ನಾವು ಸಂಘಟನೆಯೊಂದರ ಭಾಗವೆಂದು ಹೇಳಿ ಅದರ ಶಿಸ್ತನ್ನು ಒಪ್ಪಿದಾಗ ಜೀವನದಲ್ಲಿ ಆಯ್ಕೆಗಳ ಪ್ರಶ್ನೆ ಇರುವುದಿಲ್ಲ. ಹೇಳಿದಂತೆ ಮಾಡಿ. ಕಬಡ್ಡಿ ಆಡಲು ಹೇಳಿದರೆ ಕಬಡ್ಡಿ ಆಡಿ. ಸಭೆ ನಡೆಸಬೇಕೆಂದು ಹೇಳಿದರೆ ಸಭೆ ನಡೆಸಿ.......

ಉದಾಹರಣೆಗೆ ನಮ್ಮ ಕೆಲವು ಮಿತ್ರರಿಗೆ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಲಾಯಿತು. ಇದರರ್ಥ ಅವರಿಗೆ ರಾಜಕೀಯದಲ್ಲಿ ಭಾರೀ ಆಸಕ್ತಿ ಇದೆ ಅಥವಾ ಪ್ರೇರೇಪಣೆಯಿದೆ ಎಂದಲ್ಲ. ಅವರು ರಾಜಕೀಯಕ್ಕಾಗಿ ನೀರಿಲ್ಲದ ಮೀನಿನಂತೆ ಪ್ರಾಣತ್ಯಾಗ ಮಾಡುವುದಿಲ್ಲ. ರಾಜಕೀಯದಿಂದ ಹೊರಬರುವಂತೆ ಹೇಳಿದರೆ ಅದಕ್ಕೂ ಅವರ ಆಕ್ಷೇಪವಿಲ್ಲ. ಅವರಿಗೆ ವಿವೇಚನಾ ಶಕ್ತಿ ಬೇಕಾಗಿಯೇ ಇಲ್ಲ ’’ (ಶ್ರೀ ಗುರೂಜಿ ಸಮಗ್ರ ದರ್ಶನ್, ಸಂಪುಟ 3, ಪುಟ 32). ಇನ್ನೊಂದು ಸಂದರ್ಭದಲ್ಲಿ ಗೋಳ್ವಲ್ಕರ್ ‘‘ನಮ್ಮ ಕೆಲವು ಸ್ವಯಂಸೇವಕರು ರಾಜಕೀಯದಲ್ಲಿ ದುಡಿಯುತ್ತಿದ್ದಾರೆಂಬ ವಿಷಯವೂ ನಮಗೆ ಗೊತ್ತಿದೆ. ಅಲ್ಲಿ ಅವರು ಅಗತ್ಯ ಬಿದ್ದಂತೆ ಸಾರ್ವಜನಿಕ ಸಭೆ, ಮೆರವಣಿಗೆಗಳನ್ನು ಸಂಘಟಿಸುವ ಕೆಲಸ ಮತ್ತು ಘೋಷಣೆ ಕೂಗುವ ಕೆಲಸ ಮಾಡಬೇಕು. ಇವೆಲ್ಲವೂ ನಮ್ಮ ಕೆಲಸದ ಭಾಗವಲ್ಲ, ಆದಾಗ್ಯೂ ನಟನಿಗೆ ಯಾವ ಪಾತ್ರವನ್ನು ವಹಿಸಲಾಗುತ್ತದೊ ಅದನ್ನಾತ ತನ್ನ ಪೂರ್ತಿ ಸಾಮರ್ಥ್ಯವನ್ನು ಬಳಸಿಕೊಂಡು ನಿರ್ವಹಿಸಬೇಕು.

ಆದರೆ ಸ್ವಯಂಸೇವಕರು ಕೆಲವೊಮ್ಮೆ ಅತಿಶಯ ಉತ್ಸಾಹದಿಂದ ನಟನಿಗೆ ವಹಿಸಿದ ಪಾತ್ರವನ್ನು ಮೀರಿ ನಡೆಯುತ್ತಾರೆ. ಎಷ್ಟೆಂದರೆ ಅವರು ಈ ಕೆಲಸಕ್ಕೆ ನಿರುಪಯೋಗಿಗಳಾಗುತ್ತಾರೆ. ಇದು ಒಳ್ಳೆಯದಲ್ಲ’’ ಎಂದರು (ಶ್ರೀ ಗುರೂಜಿ ಸಮಗ್ರ ದರ್ಶನ್, ಸಂಪುಟ 4, ಪುಟ 4-5). ಬಿಜೆಪಿಯನ್ನು ನಿಯಂತ್ರಿಸುವ ಗೋಳ್ವಲ್ಕರ್‌ರ ಈ ಯೋಜನೆಯನ್ನು ಮಾರ್ಚ್ 1960ರಲ್ಲಿ ಇನ್ನಷ್ಟು ವಿಸ್ತರಿಸಲಾಯಿತು.

ವಾಸ್ತವ ಹೀಗಿರುವಾಗ ‘‘ನೈಜ ಪ್ರಜಾತಾಂತ್ರಿಕ ಕೆಚ್ಚು’’, ಆಂತರಿಕ ಪ್ರಜಾಸತ್ತೆಯ ಮಾತುಗಳೆಲ್ಲ ಪ್ರತೀ ತಿಂಗಳು ತಪ್ಪದೆ ಹೊರಬೀಳುವ ಮನ್ ಕಿ ಬಾತ್‌ನ ಹಾಗೆ ಅಪ್ಪಟ ಬೂಟಾಟಿಕೆಯ ಮಾತುಗಳೆಂಬುದು ಬಹಳ ಸ್ಪಷ್ಟ. ಒಟ್ಟಿನಲ್ಲಿ ಗುರು ಗೋಳ್ವಲ್ಕರ್‌ರ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತಿರುವ ನಿಷ್ಠಾವಂತ ಸ್ವಯಂಸೇವಕ ಮೋದಿ ತನ್ನ ಅಭಿನಯ ಮತ್ತು ಮಾತುಗಾರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಮಂಕುಬೂದಿ ಎರಚುವ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಬಹುತೇಕ ಭಾರತೀಯ ಮತದಾರರ ಸಿನೆಮಾ ಹುಚ್ಚಿನ ಮನೋಸ್ಥಿತಿಯನ್ನು ಚೆನ್ನಾಗಿ ಅರಿತಿರುವ ಮೋದೀಜಿ ತನ್ನ ಅತ್ಯದ್ಭುತ ನಟನಾ ಕೌಶಲ ಮತ್ತು ಸಿನೆಮಾ ಡಯಲಾಗ್ ಥರದ ಭಾಷಣಗಳ ಮೂಲಕ ಅವರ ಮನಸೂರೆ ಮಾಡಿದ್ದಾರೆ. ಹೀರೊ ಯಾವುದೇ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡರೂ ಕೊನೆಯಲ್ಲಿ ಡಿಶುಂ ಡಿಶುಂ ಎಂದು ವಿಲನ್‌ಗಳನ್ನೆಲ್ಲ ಮಣಿಸಿ ಜಯಶಾಲಿಯಾಗಿಬಿಡುತ್ತಾನೆ ಎಂಬ ಸಿನೆಮಾ ಕಥೆಗಳನ್ನು ನಂಬುವ, ಹೀರೋಗಳ ಆ್ಯಕ್ಷನ್, ಡಯಲಾಗ್‌ಗಳಿಗೆ ಮರುಳಾಗಿ ಸಿಳ್ಳೆ ಹಾಕುವ ಜನವರ್ಗಗಳ ದೌರ್ಬಲ್ಯವನ್ನು ಪೂರ್ತಿ ಬಳಸಿಕೊಂಡಿರುವ ಮೋದೀಜಿ ಇಂತಹ ಅಮಾಯಕ ಜನರ ಕಣ್ಣಿಗೆ ಮಣ್ಣೆರಚುವಲ್ಲಿ ಇದುವರೆಗೆ ಯಶಸ್ವಿಯಾಗಿದ್ದಾರೆ. ಈ ಸ್ಥಿತಿ ಎಂದು ಬದಲಾಗುತ್ತದೋ ಗೊತ್ತಿಲ್ಲ. 

(ಆಧಾರ: ಶಂಸುಲ್ ಇಸ್ಲಾಂರ ಆರೆಸ್ಸೆಸ್‌ಅನ್ನು ಅರಿಯಿರಿ ಮತ್ತು ಇತರ ಮೂಲಗಳು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)