varthabharthi

ಸಂಪಾದಕೀಯ

ಸೇಡಿನ ಹತ್ಯೆಯ ಹಿಂದಿರುವ ಕಾನೂನಿನ ವೈಫಲ್ಯ

ವಾರ್ತಾ ಭಾರತಿ : 13 Nov, 2017

ರವಿವಾರ ಎರಡು ಕೊಲೆಗಳು ಮಾಧ್ಯಮಗಳಲ್ಲಿ ಆದ್ಯತೆಯ ಮೇಲೆ ಬಿತ್ತರಗೊಂಡಿವೆ. ಮೊದಲನೆಯದು ಆರೆಸ್ಸೆಸ್ ಕಾರ್ಯಕರ್ತನೊಬ್ಬ ತಿರುವನಂತಪುರದಲ್ಲಿ ಕೊಲೆಯಾಗಿರುವುದು. ಈ ಕೃತ್ಯವನ್ನು ಸಿಪಿಎಂ ಕಾರ್ಯಕರ್ತರು ಎಸಗಿದ್ದಾರೆ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಸಂಘಪರಿವಾರ ಕಾರ್ಯಕರ್ತರೊಳಗೆ ಆಕ್ರೋಶ ಎದ್ದಿದೆ. ಆದರೆ ಕೊಲೆಯಾದವನ ಮೇಲೂ ಕೊಲೆ ಆರೋಪವಿದೆ. ಈತ ಈ ಹಿಂದೆ ಸಿಪಿಎಂ ಕಾರ್ಯಕರ್ತನನ್ನು ಕೊಂದು ಜೈಲು ಸೇರಿದ್ದ. ಆದುದರಿಂದ ಕೇರಳದಲ್ಲಿ ಮುಂದುವರಿದಿರುವ ‘ರಾಜಕೀಯ ಗ್ಯಾಂಗ್‌ವಾರ್’ನ ಭಾಗ ಇದಾಗಿದೆ ಎಂದು ಸುಲಭದಲ್ಲಿ ಶಂಕಿಸಬಹುದು. ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯಾಕಾಂಡ ನಡೆಯುತ್ತಿದೆ ಎಂದು ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಆರೆಸ್ಸೆಸ್ ಗದ್ದಲ ಎಬ್ಬಿಸುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯನ್ನು ವಿರೋಧಿಸಿ ಬಹುದೊಡ್ಡ ಮೆರವಣಿಗೆ ನಡೆದಿತ್ತು. ಕೇಂದ್ರ ಸರಕಾರ ಈ ಕುರಿತಂತೆ ಕೇರಳ ರಾಜ್ಯ ಸರಕಾರಕ್ಕೆ ನೋಟಿಸನ್ನೂ ನೀಡಿದೆ. ಜೊತೆಗೆ ಅಮಿತ್‌ಶಾ ಸೇರಿದಂತೆ ದಿಲ್ಲಿಯ ವರಿಷ್ಠರು ಪದೇ ಪದೇ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇಂತಹ ಸಂದರ್ಭದಲ್ಲೇ ಇನ್ನೊಬ್ಬ ಕಾರ್ಯಕರ್ತನ ಹತ್ಯೆ ನಡೆದಿರುವುದರಿಂದ ಇದನ್ನು ಬಿಜೆಪಿ ಮತ್ತು ಆರೆಸ್ಸೆಸ್ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಇಲ್ಲಿ ಹತ್ಯೆಗೊಳಗಾಗುತ್ತಿರುವ ಆರೆಸ್ಸೆಸ್ ಕಾರ್ಯಕರ್ತರು ಅಮಾಯಕರಂತೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆರೆಸ್ಸೆಸ್ ಕೇರಳದಲ್ಲಿ ಅಹಿಂಸಾ ವ್ರತವನ್ನು ತೊಟ್ಟುಕೊಂಡು ಕೂತಿಲ್ಲ. ಬರೇ ಕೇರಳದಲ್ಲಿ ಎಂದಲ್ಲ, ದೇಶಾದ್ಯಂತ ಹಿಂಸೆಯನ್ನು ಪಸರಿಸುವಲ್ಲಿ ಆರೆಸ್ಸೆಸ್‌ನ ಕೊಡುಗೆ ಬಹುದೊಡ್ಡದು. ಆದರೆ ಕೇರಳದಲ್ಲಿ ಎಡಪಂಥೀಯ ಕಾರ್ಯಕರ್ತರು ಬಲಿಷ್ಠರಾಗಿದ್ದಾರೆ ಮತ್ತು ತೀವ್ರವಾದ ಪ್ರತಿರೋಧವನ್ನು ಆರೆಸ್ಸೆಸ್‌ಗೆ ವ್ಯಕ್ತಪಡಿಸುತ್ತಿದ್ದಾರೆ.

ಬರೇ ಆರೆಸ್ಸೆಸ್ ಕಾರ್ಯಕರ್ತರನ್ನು ಹತ್ಯೆಗೈದಿರುವುದಷ್ಟೇ ತಪ್ಪು ಎಂದಾದಲ್ಲಿ, ಕೇರಳದಲ್ಲಿ ನಡೆದಿರುವ ಎಡಪಂಥೀಯ ಕಾರ್ಯಕರ್ತರ ಹತ್ಯೆಯ ಬಗ್ಗೆ ಕೇಂದ್ರ ಏನು ಹೇಳುತ್ತದೆ? ಆರೆಸ್ಸೆಸ್ ಸಾಂಸ್ಕೃತಿಕ ಸಂಘಟನೆಯಾಗಿ ಉಳಿದಿಲ್ಲ ಎನ್ನುವುದು ವಾಸ್ತವ. ಇತ್ತೀಚೆಗಷ್ಟೇ ಮನೆಯೊಂದರಲ್ಲಿ ಸ್ಫೋಟಕ ತಯಾರಿಸುವ ಸಂದರ್ಭದಲ್ಲಿ ಸ್ಫೋಟ ನಡೆದು ಆರೆಸ್ಸೆಸ್ ಕಾರ್ಯಕರ್ತನೊಬ್ಬ ಸತ್ತಿರುವುದು ಪತ್ರಿಕೆಗಳಲ್ಲಿ ವರದಿಯಾಯಿತು. ಸ್ಫೋಟಕಗಳನ್ನು ಸಾಗಿಸುವ ಸಂದರ್ಭದಲ್ಲೂ ಆರೆಸ್ಸೆಸ್ ಕಾರ್ಯಕರ್ತರು ಮೃತಪಟ್ಟ ಘಟನೆ ನಡೆದಿದೆ. ಆರೆಸ್ಸೆಸ್ ಕಾರ್ಯಕರ್ತರಿಗೆ ಸ್ಫೋಟಕದ ಅಗತ್ಯವೇನಿತ್ತು? ಅದನ್ನು ಅವರು ಸಾಮಾಜಿಕ ಸಾಮರಸ್ಯಕ್ಕೆ ಬಳಸುವ ಯೋಜನೆಯನ್ನು ಹೊಂದಿದ್ದರೆ? ಈ ಪ್ರಶ್ನೆಗೆ ಆರೆಸ್ಸೆಸ್ ನಾಯಕರು ಮತ್ತು ದಿಲ್ಲಿಯ ಬಿಜೆಪಿ ಮುಖಂಡರು ಉತ್ತರಿಸಬೇಕಾಗುತ್ತದೆ. ಎಲ್ಲ ರೀತಿಯ ಹಿಂಸೆ, ಹತ್ಯೆಗಳನ್ನು ಖಂಡಿಸುವ ಪ್ರಾಮಾಣಿಕತೆ ಇದ್ದಾಗಷ್ಟೇ ಕೇಂದ್ರ ಸರಕಾರಕ್ಕಾಗಲಿ, ಆರೆಸ್ಸೆಸ್‌ಗಾಗಲಿ ಕೇರಳದ ಹತ್ಯೆಗಳನ್ನು ಖಂಡಿಸುವ ನೈತಿಕತೆ ಬರುತ್ತದೆ.

 ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ನಡೆದ ದಿನವೇ ರಾಜಸ್ಥಾನದ ಆಲ್ವಾರ್‌ನಲ್ಲಿ ಬರ್ಬರ ಘಟನೆಯೊಂದು ನಡೆದಿದೆ. ಜಾನುವಾರು ವ್ಯಾಪಾರಿಗಳಿಬ್ಬರಿಗೆ ನಕಲಿ ಗೋರಕ್ಷಕರು ಬರ್ಬರವಾಗಿ ಥಳಿಸಿ ಗುಂಡಿಕ್ಕಿದ್ದಾರೆ. ಇದರಲ್ಲಿ ಓರ್ವ ಮೃತಪಟ್ಟಿದ್ದರೆ, ಇನ್ನೋರ್ವ ಗಂಭೀರ ಸ್ಥಿತಿಯಲ್ಲಿದ್ದಾರೆ. ನಕಲಿ ಗೋರಕ್ಷಕರಿಗೂ ಆರೆಸ್ಸೆಸ್ ಕಾರ್ಯಕರ್ತರಿಗೂ ಇರುವ ಒಳಸಂಬಂಧ ದೇಶಕ್ಕೆ ಗೊತ್ತಿಲ್ಲದೇ ಇರುವುದಲ್ಲ. ಈ ಜಾನುವಾರು ವ್ಯಾಪಾರಿಗಳು ರಾಜಕೀಯ ಕಾರ್ಯಕರ್ತರಲ್ಲ. ಇವರ ಮೇಲೆ ಕೊಲೆ ಮಾಡಿದ ಅಥವಾ ಯಾರಿಗೋ ಹಲ್ಲೆ ನಡೆಸಿದ ಆರೋಪಗಳೂ ಇದ್ದಿರಲಿಲ್ಲ. ಈ ನಿಶ್ಶಸ್ತ್ರಧಾರಿಗಳ ಮೇಲೆ ನಕಲಿ ಗೋರಕ್ಷಕರು ಹಲ್ಲೆ ನಡೆಸಿ ಓರ್ವನನ್ನು ಕೊಂದಿದ್ದಾರೆ. ಈ ಹಿಂದೆ ಇದೇ ಆಲ್ವಾರ್‌ನಲ್ಲಿ ಪೆಹ್ಲೂಖಾನ್ ಎನ್ನುವ ಓರ್ವ ವೃದ್ಧ ಕೃಷಿಕರನ್ನು ಇದೇ ನಕಲಿ ಗೋರಕ್ಷಕರು ಥಳಿಸಿ ಕೊಂದು ಹಾಕಿದ್ದರು.

ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಪೊಲೀಸರು ಕೊಲೆಗಾರರನ್ನು ಸರ್ವರೀತಿಯಲ್ಲಿ ರಕ್ಷಿಸಿರುವುದು ಸಾಮಾಜಿಕ ಸಂಘಟನೆಗಳ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ಕೇರಳದಲ್ಲಿ ನಡೆದಿರುವುದು, ನಡೆಯುತ್ತಿರುವುದು ರಾಜಕೀಯ ಪ್ರತೀಕಾರಗಳು. ಆದರೆ ರಾಜಸ್ಥಾನವೂ ಸೇರಿದಂತೆ ದೇಶಾದ್ಯಂತ ಸಂಘಪರಿವಾರದ ಕಾರ್ಯಕರ್ತರು ನಡೆಸುತ್ತಿರುವುದೇನು? ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಕೊಲೆಗಳ ಬಗ್ಗೆ ಗೋಳಾಡುತ್ತಿರುವ ಸರಕಾರ, ರಾಜಸ್ಥಾನದಲ್ಲಿ ನಡೆದಿರುವ ಅಮಾಯಕರ ಕೊಲೆಗಳ ಬಗ್ಗೆ ಏನು ಹೇಳುತ್ತದೆ? ಸಂಘಪರಿವಾರ ಹಿಂಸೆಯನ್ನೇ ತಳಹದಿಯಾಗಿಟ್ಟುಕೊಂಡು ಬೆಳೆದು ಬಂದಿರುವ ಸಂಘಟನೆಗಳು. ಇಂದು ಕೇರಳದಲ್ಲಿ ಎಡಪಂಥೀಯ ಕಾರ್ಯಕರ್ತರು ಸಂಘಟಿತವಾಗಿ ಆ ಹಿಂಸೆಯನ್ನು ಪ್ರತಿರೋಧಿಸುತ್ತಿರುವುದೇ ಆರೆಸ್ಸೆಸ್‌ಗೆ ದೊಡ್ಡ ತಲೆನೋವಾಗಿದೆ. ಇಲ್ಲಿ ಬಾಲ ಬಿಚ್ಚುವುದು ಅದಕ್ಕೆ ಕಷ್ಟ ಸಾಧ್ಯವಾಗಿದೆ.

ಇದೇ ಸಂದರ್ಭದಲ್ಲಿ ಸಂಘಪರಿವಾರ ದೇಶಾದ್ಯಂತ ಅಮಾಯಕರ ಮೇಲೆ ಹಿಂಸಾ ತಾಂಡವವನ್ನೇ ನಡೆಸುತ್ತಿದೆ. ಇಂದು ಇವರಿಂದ ಹಲ್ಲೆಗೀಡಾದವರಿಗೆ ಪೊಲೀಸರೂ ನ್ಯಾಯ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಪರೋಕ್ಷವಾಗಿ ಇವರು ಸಂಘಪರಿವಾರದ ಕೊಲೆಗಾರರನ್ನು ರಕ್ಷಿಸುತ್ತಿದ್ದಾರೆ. ಇದು ಇನ್ನಷ್ಟು ಕೊಲೆಗಳನ್ನು ನಡೆಸಲು ಅವರಿಗೆ ಪ್ರೇರಣೆ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರು ಏನು ಮಾಡಬೇಕು? ತಮ್ಮನ್ನು ತಾವು ರಕ್ಷಿಸಲು ಸಂಘಟಿತರಾಗುವುದು ಮತ್ತು ಆ ಹಿಂಸೆಯನ್ನು ಹಿಂಸೆಯ ಮೂಲಕವೇ ಪ್ರತಿರೋಧಿಸಲು ಸರಕಾರ ಕುಮ್ಮಕ್ಕು ಕೊಡುತ್ತಿದೆಯೇ? ಸರಕಾರ ಮತ್ತು ಕಾನೂನಿನ ವೌನ ಜನರಲ್ಲಿ ಪ್ರತೀಕಾರದ ಭಾವವನ್ನು ಬೆಳೆಸುವುದಿಲ್ಲವೇ? ಅಥವಾ ಇಂತಹದೊಂದು ಪ್ರತೀಕಾರದ ವಿಷವನ್ನು ಬಿತ್ತಿ ಸಮಾಜವನ್ನು ಒಡೆಯುವುದೇ ಸಂಘಪರಿವಾರದ ಉದ್ದೇಶವೇ?

ರಾಜಸ್ತಾನ, ಉತ್ತರಪ್ರದೇಶ, ಜಾರ್ಖಂಡ್ ಮೊದಲಾದೆಡೆ ಸಂಘಪರಿವಾರ ನಡೆಸುತ್ತಿರುವ ಹಿಂಸೆಗೆ ಹೋಲಿಸಿದರೆ ಕೇರಳದಲ್ಲಿ ನಡೆಯುತ್ತಿರುವ ಹಿಂಸೆ ಭಿನ್ನವಾದುದು. ಇಲ್ಲಿ ನಡೆಯುತ್ತಿರುವುದು ರಾಜಕೀಯ ಸಂಘರ್ಷ. ಕೇಂದ್ರ ಸರಕಾರ ಮೊತ್ತ ಮೊದಲು ಆರೆಸ್ಸೆಸ್ ಮತ್ತು ಸಂಘಪರಿವಾರ ದೇಶದ ಉಳಿದೆಡೆಗಳಲ್ಲಿ ಅಮಾಯಕರ ಮೇಲೆ ನಡೆಸುತ್ತಿರುವ ಹಿಂಸೆಯನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ಆಗ ಮಾತ್ರ, ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸೆಯ ಕುರಿತಂತೆ ಮಾತನಾಡುವ ನೈತಿಕ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ತಮ್ಮವರ ಮೇಲೆ ನಡೆದರೆ ಅದು ಕೊಲೆ. ತಮ್ಮವರು ಇತರರ ಮೇಲೆ ನಡೆಸಿದರೆ ಅದು ಸಾಂಸ್ಕೃತಿಕ ಜಾಗೃತಿ ಎಂಬ ಮನಸ್ಥಿತಿಯ ಜೊತೆಗೆ ದೇಶದಲ್ಲಿ ಹಿಂಸೆಯನ್ನು ತಡೆಯುವುದು ಅಸಾಧ್ಯ. ಕೇರಳ ಸರಕಾರಕ್ಕೆ ನೋಟಿಸ್ ನೀಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುವುದಾದರೆ, ಅಮಾಯಕರ ಕಗ್ಗೊಲೆಗಾಗಿ ರಾಜಸ್ಥಾನ ಸರಕಾರಕ್ಕೂ ನೋಟಿಸ್ ನೀಡಲು ಸಾಧ್ಯವಾಗಬೇಕು. ಈ ಹಿಂದೆ ಪೆಹ್ಲೂಖಾನ್‌ರ ಹತ್ಯೆಯ ಆರೋಪಿಗಳನ್ನು ರಕ್ಷಿಸಲು ಹವಣಿಸಿದ ಪೊಲೀಸರನ್ನು ಅಮಾನತು ಮಾಡಬೇಕು ಮತ್ತು ಹೊಸದಾಗಿ ತನಿಖೆಗೆ ಆದೇಶ ನೀಡಬೇಕು. ಆಲ್ವಾರ್‌ನಲ್ಲಿ ರವಿವಾರ ನಡೆದ ಕೊಲೆಯ ಹಿಂದಿರುವ ಪೊಲೀಸ್ ನಿಷ್ಕ್ರಿಯತೆಯನ್ನು ತನಿಖೆಗೊಳಪಡಿಸಬೇಕು. ಎಲ್ಲ ಹತ್ಯೆ ಕೊಲೆಗಳನ್ನು ಸಮಾನ ಕಣ್ಣಿನಿಂದ ನೋಡಲು ಶುರುವಾದ ದಿನ, ಕೇರಳದಲ್ಲ್ಲೂ ಸೇಡಿನ ಹತ್ಯೆಗಳು ಕೊನೆಯಾಗಬಹುದೇನೋ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)