varthabharthi

ಅಂತಾರಾಷ್ಟ್ರೀಯ

ಇರಾಕ್- ಇರಾನ್‌ ನಲ್ಲಿ ಪ್ರಬಲ ಭೂಕಂಪ: ನೂರಕ್ಕೂ ಹೆಚ್ಚು ಮಂದಿ ಮೃತ್ಯು

ವಾರ್ತಾ ಭಾರತಿ : 13 Nov, 2017

ಹುಬೈ, ನ. 13: ಇರಾಕ್- ಇರಾನ್ ಉತ್ತರ ಗಡಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ಇರಾನ್‌ನಲ್ಲಿ ಸಂಭವಿಸಿದ ಈ ಭೀಕರ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3ರಷ್ಟಿತ್ತು ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಭೂಕಂಪದಿಂದ ತತ್ತರಗೊಂಡ ಜನ ಮನೆಗಳಿಂದ ಹೊರಬಂದು ಬೀದಿಯಲ್ಲೇ ಕಾಲ ಕಳೆದರು. ಇರಾಕ್ ರಾಜಧಾನಿ ಬಾಗ್ದಾದ್‌ನಲ್ಲಿ ವಿಶೇಷ ಪ್ರಾರ್ಥನೆಗಳು ನಡೆದವು.

ಗಡಿಭಾಗದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಶರ್ಪೋಲ್ ಇ ಜಹಾಬ್‌ನಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ತುರ್ತುಸೇವೆಗಳ ವಿಭಾಗದ ಮುಖ್ಯಸ್ಥ ಪೀರ್ ಹುಸೇನ್ ಕೂಲಿವಂದ್ ಪ್ರಕಟಿಸಿದ್ದಾರೆ. ಕನಿಷ್ಠ ಎಂಟು ಗ್ರಾಮಗಳಲ್ಲಿ ವ್ಯಾಪಕ ಸಾವು ನೋವು ಸಂಭವಿಸಿದೆ ಎಂದು ಇರಾನ್‌ನ ರೆಡ್‌ಕ್ರೆಸೆಂಟ್ ಸಂಸ್ಥೆಯ ಮುಖ್ಯಸ್ಥ ಮೋರ್ತಜಾ ಸಲೀಮ್ ಹೇಳಿದ್ದಾರೆ.

ಭೂಕುಸಿತಗಳಿಂದಾಗಿ ಪರಿಹಾರ ಕಾರ್ಯಾಚರಣೆಗೆ ತೊಡಕು ಉಂಟಾಗಿದೆ. ಯುಎಇ, ಟರ್ಕಿ, ಕುವೈಟ್ ಹಾಗೂ ಇಸ್ರೇಲ್‌ನಲ್ಲಿ ಕೂಡಾ ಕಂಪನದ ಅನುಭವವಾಗಿದ್ದು, 33.9 ಕಿಲೋಮೀಟರ್ ಆಳದಲ್ಲಿ ಕಂಪನ ಸಂಭವಿಸಿದೆ ಎಂದು ಅಮೆರಿಕದ ಜಿಯೋಗ್ರಾಫಿಕಲ್ ಸರ್ವೆ ಪ್ರಕಟಿಸಿದೆ.

ಯುಎಇನಲ್ಲಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕೂಡಾ ಭೂಕಂಪದ ಅನುಭವವಾಗಿದೆ. ಹಲವು ಮಂದಿ ಟ್ವಿಟ್ಟರ್ ಬಳಕೆದಾರರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೇವಲ ದುಬೈನಲ್ಲಿ ಮಾತ್ರವಲ್ಲದೇ ಅಬುಧಾಬಿಯ ರೀಮ್ ದ್ವೀಪ ಜಿಲ್ಲೆಯಲ್ಲೂ ಭೂಕಂಪದ ಅನುಭವವಾಗಿದೆ ಎಂದು ಹಲವು ಮಂದಿ ನಿವಾಸಿಗಳು ಹೇಳಿದ್ದಾರೆ.

 

Comments (Click here to Expand)