varthabharthi

ರಾಷ್ಟ್ರೀಯ

ಗೋರಕ್ಷಕರತ್ತ ಸಂಶಯ ವ್ಯಕ್ತಪಡಿಸಿ ಪೊಲೀಸರ ಹೇಳಿಕೆ

ಸಮಾಜವಿರೋಧಿಗಳಿಂದ ಜಾನುವಾರು ವ್ಯಾಪಾರಿ ಉಮರ್ ಹತ್ಯೆ

ವಾರ್ತಾ ಭಾರತಿ : 13 Nov, 2017

ಜೈಪುರ, ನ.13: ರಾಜಸ್ತಾನದ ಆಲ್ವಾರ್‌ನಲ್ಲಿ ರೈಲು ಹಳಿಯಲ್ಲಿ ಶುಕ್ರವಾರ ಬೆಳಿಗ್ಗೆ ಶವವಾಗಿ ಪತ್ತೆಯಾದ 35ರ ಹರೆಯದ ಉಮರ್ ಮುಹಮ್ಮದ್ ಅವರನ್ನು ಸಮಾಜ ವಿರೋಧಿ ಶಕ್ತಿಗಳು ಕೊಲೆಮಾಡಿವೆ ಎಂದು ಪೊಲೀಸರು ಸೋಮವಾರ ಬಿಡುಗಡೆಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಮೊದಲು, ಗೋರಕ್ಷಕರಿಂದ ಹತ್ಯೆ ನಡೆದ ಬಗ್ಗೆ ಈಗಲೇ ಏನನ್ನೂ ಹೇಳಲಾಗದು ಎಂದು ಹೇಳಿದ್ದ ಪೊಲೀಸರು, 2 ದಿನದ ತನಿಖೆಯ ಬಳಿಕ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.

       ಉಮರ್ ಮುಹಮ್ಮದ್ ಕೊಲೆಗೂ ಘಟನೆ ನಡೆದ ಸುಮಾರು 15 ಕಿ.ಮೀ. ವ್ಯಾಪ್ತಿಯಲ್ಲಿ ಜಾನುವಾರುಗಳಿಂದ ತುಂಬಿದ್ದ ಪಿಕ್‌ಅಪ್ ವಾಹನ ಜಖಂಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಇದುವರೆಗೂ ಪೊಲೀಸರು ಹೇಳುತ್ತಿದ್ದರು.ಆದರೆ ಎರಡು ದಿನ ನಡೆಸಿದ ತನಿಖೆಯ ಬಳಿಕ ಆಲ್ವಾರ್ ಪೊಲೀಸ್ ಅಧೀಕ್ಷಕ ರಾಹುಲ್ ಪ್ರಕಾಶ್ ನೀಡಿದ ಹೇಳಿಕೆಯಲ್ಲಿ ಮುಹಮ್ಮದ್ ಅವರ ಕೊಲೆ ಹಾಗೂ ಜಖಂಗೊಂಡ ಸ್ಥಿತಿಯಲ್ಲಿ ಪತ್ತೆಯಾದ ವಾಹನ ಎರಡಕ್ಕೂ ಸಂಬಂಧವಿದೆ. ಸಮಾಜ ವಿರೋಧಿ ಶಕ್ತಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ಪೊಲೀಸ್ ಅಧೀಕ್ಷಕರ ಹೇಳಿಕೆಯಲ್ಲಿ ‘ತಥಾಕಥಿತ ಗೋರಕ್ಷಕರು’ ಎಂಬ ಉಲ್ಲೇಖ ಇಲ್ಲದಿರುವುದು ಗಮನಾರ್ಹವಾಗಿದೆ.(ಇದುವರೆಗೆ ದೇಶದಾದ್ಯಂತ ನಡೆದ ಈ ರೀತಿಯ ಪ್ರಕರಣಗಳಲ್ಲಿ ‘ತಥಾಕಥಿತ ಗೋರಕ್ಷಕರು’ ಎಂಬ ಪದ ಬಳಸಲಾಗುತ್ತಿತ್ತು).

   ಉಮರ್ ಪಿಕಪ್ ವಾಹನದಲ್ಲಿ ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಸಂದರ್ಭ ಕೆಲವು ಸಮಾಜವಿರೋಧಿ ಶಕ್ತಿಗಳು ಪಿಕ್‌ಅಪ್ ವಾಹನ ತಡೆದು ಉಮರ್ ಹಾಗೂ ವಾಹನದಲ್ಲಿದ್ದ ಇತರ ಇಬ್ಬರು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರು ಉಮರ್ ಮೃತದೇಹವನ್ನು ರೈಲ್ವೇ ಹಳಿಯ ಮೇಲೆ ಎಸೆದುಬಿಡಲು ಇತರ ಕೆಲವರಿಗೆ ಹೇಳಿದ್ದಾರೆ ಎಂದು ರಾಹುಲ್ ಪ್ರಕಾಶ್ ಹೇಳಿದ್ದಾರೆ.

 ಘಟನೆಯಲ್ಲಿ ಮೃತಪಟ್ಟಿರುವ ಉಮರ್ ಮುಹಮ್ಮದ್ ಮಾವ ಇಲ್ಯಾಸ್ ಖಾನ್ ನೀಡಿದ ಹೇಳಿಕೆಯ ಆಧಾರದಲ್ಲಿ ಎಫ್‌ಐಆರ್‌ನಲ್ಲಿ ಕೊಲೆ ಪ್ರಕರಣ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದ ಆರೋಪಿ ಎಂದು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಅಪ್ರಾಪ್ತ ವಯಸ್ಸಿನ ಬಾಲಕ, ಘಟನೆಯಲ್ಲಿ ಪಾಲ್ಗೊಂಡಿರುವ ಐವರ ಹೆಸರನ್ನು ತಿಳಿಸಿದ್ದಾನೆ ಎನ್ನಲಾಗಿದೆ. ಮುಹಮ್ಮದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೈಪುರಕ್ಕೆ ರವಾನಿಸಲಾಗಿದೆ.

  ಈ ಪ್ರಕರಣ 7 ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ನಡೆದ ಹೈನುಗಾರ ಪೆಹ್ಲೂಖಾನ್‌ರನ್ನು ಥಳಿಸಿ ಕೊಲೆಗೈದ ಘಟನೆಯನ್ನು ನೆನಪಿಸುತ್ತದೆ. ಕಳೆದ ಎಪ್ರಿಲ್ 1ರಂದು ಆಲ್ವಾರ್ ಬಳಿ ಗೋರಕ್ಷಕರು ಪೆಹ್ಲೂಖಾನ್ ಎಂಬವರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಖಾನ್ ಹೈನುಗಾರಿಕೆಗೆ ಬಳಸುವ ಉದ್ದೇಶದಿಂದ ಹಸುಗಳನ್ನು ಸಾಗಾಟ ಮಾಡುತ್ತಿದ್ದರು ಎಂಬುದು ಅವರ ಬಳಿಇದ್ದ ದಾಖಲೆ ಪತ್ರಗಳಿಂದ ತಿಳಿದುಬಂದಿತ್ತು.

  ಬಿಜೆಪಿ ಆಡಳಿತದ ಕೆಲವು ರಾಜ್ಯಗಳು ಗೋಹತ್ಯೆ ಶಿಕ್ಷಾರ್ಹ ಅಪರಾಧ ಎಂಬ ಕಾನೂನು ಜಾರಿಗೆ ತಂದಿವೆ. ಮೂರು ವರ್ಷದ ಹಿಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ವಿವಿಧೆಡೆ ಗೋರಕ್ಷಣೆಯ ಹೆಸರಿನಲ್ಲಿ ಥಳಿತ, ಕೊಲೆ ಪ್ರಕರಣ ಹೆಚ್ಚಾಗಿವೆ ಎಂದು ವರದಿಗಳು ತಿಳಿಸಿವೆ . ಜಾನುವಾರು ಹಾಗೂ ಮಾಂಸ ವ್ಯಾಪಾರಿಗಳು, ಸಾಗಣೆದಾರರು ಮಾತ್ರವಲ್ಲ, ತಮ್ಮ ಹಸುಗಳ ಜೊತೆ ಸಾಗುತ್ತಿರುವ ರೈತರ ಮೇಲೂ ‘ಗೋರಕ್ಷಕರು’ ದಾಳಿ ನಡೆಸುತ್ತಿರುವ ಪ್ರಕರಣ ಹೆಚ್ಚಾಗಿದೆ. ಹಸುಗಳ ರಕ್ಷಣೆ ಎಂಬ ನೆಪದಲ್ಲಿ ಮುಸ್ಲಿಮ್ ಹಾಗೂ ದಲಿತರ ಮೇಲೆ ಆಕ್ರಮಣ ನಡೆಸಲಾಗುತ್ತದೆ ಎಂಬ ಟೀಕೆಯೂ ಕೇಳಿಬರುತ್ತಿದೆ. ಆಲ್ವಾರ್ ಹಾಗೂ ಸಮೀಪದ ಪ್ರದೇಶಗಳಲ್ಲಿ ರಾತ್ರಿ ಸಂದರ್ಭ ಗಸ್ತು ತಿರುಗುವ ಗೋರಕ್ಷಕರು, ಜಾನುವಾರು ಸಾಗಾಟಗಾರರನ್ನು ತಡೆಯುತ್ತಾರೆ(ಇವರಲ್ಲಿ ಬಹುತೇಕ ಸಾಗಾಟಗಾರರು ಮುಸ್ಲಿಂ ಬಾಹುಳ್ಯದ ಮೇವೊ ಪ್ರದೇಶದವರಾಗಿದ್ದಾರೆ.). ಜಾನುವಾರು ಸಾಗಾಟಗಾರರಿಂದ ಹಣ ವಸೂಲು ಮಾಡುವುದಲ್ಲದೆ ಗುಂಡು ಹಾರಿಸಿ ಅಥವಾ ಹಲ್ಲೆ ನಡೆಸಿ ಪರಾರಿಯಾಗುತ್ತಾರೆ ಎಂದು ದೂರು ಕೇಳಿ ಬಂದಿದೆ.

ಶುಕ್ರವಾರ ನಡೆದ ಪ್ರಕರಣದಲ್ಲಿ ಉಮರ್ ಮುಹಮ್ಮದ್‌ನ ವಾಹನದಲ್ಲಿ ಒಟ್ಟು ಮೂವರಿದ್ದರು. ಇನ್ನೊಬ್ಬ ಪ್ರಯಾಣಿಕ ತಾಹಿರ್‌ಖಾನ್‌ಗೆ ಗುಂಡಿನೇಟು ತಗಲಿದ್ದು ಹರ್ಯಾಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಪ್ರಯಾಣಿಕ ಜಾವೇದ್ ಖಾನ್ ಎಂಬಾತ ತಪ್ಪಿಸಿಕೊಂಡು ತನ್ನ ಗ್ರಾಮಕ್ಕೆ ಪರಾರಿಯಾಗಿದ್ದು ಗ್ರಾಮಸ್ಥರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಉಮರ್‌ನ ಮಾವ ಇಲ್ಯಾಸ್ ಖಾನ್ ತಿಳಿಸಿದ್ದಾರೆ.

7ರಿಂದ 8 ಮಂದಿಯಿದ್ದ ಕಾರೊಂದು ನಮ್ಮನ್ನು ಅಡ್ಡಗಟ್ಟಿ ನಮ್ಮತ್ತ ಕಲ್ಲು ತೂರಾಟ ನಡೆಸಿತು. ನಾನು ತಪ್ಪಿಸಿಕೊಂಡರೂ ಉಳಿದಿಬ್ಬರನ್ನು ಅವರು ಹಿಡಿದಿಟ್ಟುಕೊಂಡರು ಎಂದು ಜಾವೇದ್ ತಿಳಿಸಿದ್ದಾನೆ. ಉಮರ್ ಹಾಲು ಕರೆಯುವ ಮೂರು ಹಸುಗಳನ್ನು ಹಾಗೂ ಅವುಗಳ ಕರುಗಳನ್ನು ಸಾಗಿಸುತ್ತಿದ್ದ ಎಂದು ಇಲ್ಯಾಸ್ ತಿಳಿಸಿದ್ದಾರೆ. ಆದರೆ ಪೊಲೀಸರು ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ ಮುಹಮ್ಮದ್‌ನ ಪಿಕ್‌ಅಪ್ ವಾಹನದಲ್ಲಿ 7 ಹಸುಗಳಿದ್ದು ಅದರಲ್ಲಿ ಒಂದು ಮೃತಪಟ್ಟಿತ್ತು ಎಂದು ತಿಳಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)