varthabharthi

ಅಂತಾರಾಷ್ಟ್ರೀಯ

ಆಸಿಯಾನ್ ಶೃಂಗಸಭೆಯಲ್ಲಿ ಮೋದಿ-ಟ್ರಂಪ್ ಭೇಟಿ

ಏಶ್ಯಾದ ಭವಿಷ್ಯಕ್ಕಾಗಿ ಭಾರತ-ಅಮೆರಿಕ ಜತೆಗೂಡಿ ಶ್ರಮಿಸಬೇಕು: ಮೋದಿ

ವಾರ್ತಾ ಭಾರತಿ : 13 Nov, 2017

ಮನಿಲ, ನ.13: ಏಶ್ಯಾದ ಉಜ್ವಲ ಭವಿಷ್ಯಕ್ಕಾಗಿ ಭಾರತ ಮತ್ತು ಅಮೆರಿಕ ಜೊತೆಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಉಭಯ ರಾಷ್ಟ್ರಗಳು ದ್ವಿಪಕ್ಷೀಯ ಬಾಂಧವ್ಯವನ್ನು ಮೀರಿ, ಏಶ್ಯಾದ ಭವಿಷ್ಯದ ಕುರಿತು ಜತೆಗೂಡಿ ಕಾರ್ಯನಿರ್ವಹಿಸಬೇಕು. ಎರಡೂ ರಾಷ್ಟ್ರಗಳು ಹಲವು ವಿಷಯಗಳಲ್ಲಿ ಜೊತೆಯಾಗಿ ಮುನ್ನಡೆದಿವೆ ಎಂದು ಮೋದಿ ಹೇಳಿದರು. ಅಮೆರಿಕ ಹಾಗೂ ವಿಶ್ವವು ಭಾರತದ ಮೇಲಿಟ್ಟಿರುವ ನಿರೀಕ್ಷೆಯನ್ನು ಹುಸಿಗೊಳಿಸದು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಭರವಸೆ ನೀಡಿದ ಮೋದಿ, ಭೇಟಿ ನೀಡಿದ ದೇಶದಲ್ಲೆಲ್ಲಾ ಟ್ರಂಪ್ ಭಾರತದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

 ಪ್ರವಾಸ ಹೋದ ಕಡೆಯಲ್ಲಿ ಅಥವಾ ಭಾರತದ ಬಗ್ಗೆ ಪ್ರಸ್ತಾವಿಸಲು ಅವಕಾಶ ದೊರೆತ ಕೂಡಲೇ ಟ್ರಂಪ್ ಭಾರತದ ಕುರಿತು ಆಶಾವಾದ ವ್ಯಕ್ತಪಡಿಸುತ್ತಾರೆ. ಅಮೆರಿಕ ಮತ್ತು ವಿಶ್ವವು ಭಾರತದ ಮೇಲಿಟ್ಟಿರುವ ಆಶಾವಾದ, ನಿರೀಕ್ಷೆಯನ್ನು ಉಳಿಸಿಕೊಳ್ಳಲು ಭಾರತವು ಪ್ರಯತ್ನಿಸುತ್ತಿದೆ ಮತ್ತು ಇನ್ನು ಮುಂದೆಯೂ ಈ ನಿರೀಕ್ಷೆಯನ್ನು ಹುಸಿಗೊಳಿಸದು ಎಂದು ಮೋದಿ ನುಡಿದರು.

   ಮನಿಲಾದಲ್ಲಿ ಆಯೋಜಿಸಲಾದ 12ನೇ ಪೂರ್ವ ಏಶ್ಯಾ ಶೃಂಗಸಭೆ ಹಾಗೂ 15ನೇ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಫಿಲಿಪ್ಪೀನ್ಸ್‌ಗೆ ಆಗಮಿಸಿದ್ದು, ರವಿವಾರ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡ್ಯುಟರ್ಟ್ ಏರ್ಪಡಿಸಿದ ಔತಣಕೂಟದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಪಾಲ್ಗೊಂಡಿದ್ದರು. ಉಭಯ ನಾಯಕರೂ ಈ ಸಂದರ್ಭ ಕೆಲ ಹೊತ್ತು ಮಾತುಕತೆ ನಡೆಸಿದರು.

  ಭಾರತದ ಬಗ್ಗೆ ಹಲವಾರು ಒಳ್ಳೆಯ ವರದಿಗಳು ಬರುತ್ತಿದ್ದು ಇದಕ್ಕಾಗಿ ನಿಮಗೆ ಅಭಿನಂದನೆ ಎಂದು ಹೇಳಿದ ಟ್ರಂಪ್, ಮೋದಿ ಒಳ್ಳೆಯ ಮಿತ್ರ ಎಂದು ಬಣ್ಣಿಸಿದರು. ಈ ಹಿಂದೆ ಮೋದಿಯನ್ನು ಶ್ವೇತಭವನದಲ್ಲಿ ಭೇಟಿ ಮಾಡಿದ್ದೆ. ಈಗ ಭಾರತದ ಪ್ರಧಾನಿ ಮೋದಿ ಇಲ್ಲಿಗೆ ಭೇಟಿ ನೀಡಿರುವುದು ಮಹತ್ವದ ವಿಷಯವಾಗಿದೆ. ಭಾರತದಲ್ಲಿ ಇರುವ ಒಳ ಒಡಕನ್ನು ನಿವಾರಿಸಲು, ಎಲ್ಲರನ್ನೂ ಒಟ್ಟಿಗೆ ಸೇರಿಸಲು ಮೋದಿ ಶ್ಲಾಘನಾರ್ಹ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಟ್ರಂಪ್ ಹೇಳಿರುವುದಾಗಿ ಶ್ವೇತಭವನ ಬಿಡುಗಡೆಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

  

 

Comments (Click here to Expand)