varthabharthi

ಅಂತಾರಾಷ್ಟ್ರೀಯ

6,500 ಮಂದಿಗೆ ಗಾಯ

ಇರಾನ್-ಇರಾಕ್ ಗಡಿ ಸಮೀಪ ಭೂಕಂಪ: ಮೃತರ ಸಂಖ್ಯೆ 348ಕ್ಕೇರಿಕೆ

ವಾರ್ತಾ ಭಾರತಿ : 13 Nov, 2017

 ಬಾಗ್ದಾದ್/ಅಂಕರಾ, ನ. 13: ಇರಾಕ್ ಗಡಿಯಲ್ಲಿರುವ ಇರಾನ್‌ನ ಕೆರ್ಮಾನ್‌ಶಾಹ ಪ್ರಾಂತ್ಯದಲ್ಲಿ ರವಿವಾರ ತಡರಾತ್ರಿ ಸಂಭವಿಸಿದ 7.3 ತೀವ್ರತೆಯ ಭೂಕಂಪದಿಂದ ಕನಿಷ್ಠ 348 ಜನರು ಸಾವನ್ನಪ್ಪಿದ್ದಾರೆ ಹಾಗೂ 6,500ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆರ್ಮಾನ್‌ಶಾಹ ಪ್ರಾಂತ್ಯದಲ್ಲಿರುವ ಕೋರೋನರ್ಸ್‌ ಕಚೇರಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಐಎಸ್‌ಎನ್‌ಎ ಉಲ್ಲೇಖಿಸಿದೆ.

ಭೂಕಂಪದಿಂದ 341 ಮಂದಿ ಮೃತಪಟ್ಟಿದ್ದಾರೆ ಹಾಗೂ 5,953 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದಿಂದ ಹೆಚ್ಚಿನ ಸಾವು ಸಂಭವಿಸಿರುವುದು ಇರಾನ್‌ನಲ್ಲಿ. ಭೂಕಂಪದಿಂದ ಉತ್ತರ ಇರಾಕ್‌ನ ಕುರ್ದಿಶ್ ವಲಯದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಹಾಗೂ 535 ಮಂದಿ ಗಾಯಗೊಂಡಿದ್ದಾರೆ ಎಂದು ಇರಾಕ್‌ನ ಆಂತರಿಕ ಸಚಿವಾಲಯ ದೃಢಪಡಿಸಿದೆ.

 ರವಿವಾರ ಸ್ಥಳೀಯ ಸಮಯ ರಾತ್ರಿ 9.18ಕ್ಕೆ ಭೂಕಂಪ ಸಂಭವಿಸಿತು. ಭೂಕಂಪದ ಕೇಂದ್ರ ಇರಾಕ್-ಇರಾನ್ ಗಡಿ ಸಮೀಪ ಇತ್ತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3 ದಾಖಲಾಗಿದೆ ಎಂದು ಅಮೆರಿಕದ ಭೂಸರ್ವೇಕ್ಷಣೆ ತಿಳಿಸಿದೆ.

ಭೂಕಂಪದಿಂದ ಇರಾನ್‌ನ ಹಲವು ಪ್ರಾಂತ್ಯಗಳಲ್ಲಿ ಹಾನಿ ಉಂಟಾಗಿದೆ. ಆದರೆ, ಇರಾಕ್ ಗಡಿಯಿಂದ 15 ಕಿ.ಮೀ. ದೂರದಲ್ಲಿರುವ ಕರ್ಮನ್‌ಶಾಹ್ ಪ್ರಾಂತ್ಯದ ಸರ್ಪೋಲ್-ಎ- ಝಹಾಬ್ ಪಟ್ಟಣದಲ್ಲಿ ಅತೀ ಹೆಚ್ಚು ಹಾನಿ ಉಂಟಾಗಿದೆ.

ಭೂಕಂಪದ ಬಳಿಕ ಪಶ್ಚಿಮ ಇರಾನ್‌ನ ಸರ್ಪೋಲ್-ಇ- ಝೆಹಾಬ್ ನಗರದಲ್ಲಿ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿರು ವವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.

ಶೀತಲ ವಾತಾವರಣ

ಇರಾನ್ ಹಾಗೂ ಇರಾಕ್‌ನ ಹಲವು ನಗರಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಭೂಕಂಪದ ಪಶ್ಚಾತ್ ಕಂಪನದ ಬಳಿಕ ಬೀದಿ ಹಾಗೂ ಪಾರ್ಕ್‌ಗಳಲ್ಲಿ ಶೀತಲ ಹವಾಮಾನ ಕಂಡು ಬಂದಿದ್ದು ಎರಡೂ ದೇಶದ ಜನರು ಆತಂಕಕ್ಕೀಡಾಗಿದ್ದಾರೆ.

ಸುಮಾರು 50 ಪಶ್ಚಾತ್ ಕಂಪನಗಳು ಸಂಭವಿಸಿವೆ. ಇನ್ನಷ್ಟು ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಇರಾನ್‌ನ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಸುಮಾರು 70 ಸಾವಿರ ತುರ್ತು ವಸತಿ ಅವಶ್ಯಕತೆ ಇದೆ ಎಂದು ಇರಾನ್ ರೆಡ್ ಕ್ರೆಸೆಂಟ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

ಕೆಲವು ರಸ್ತೆಗಳು ಬಂದ್ ಆಗಿವೆ. ಇದರಿಂದ ಕುಗ್ರಾಮದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ತಲುಪಿಸಲು ತೊಂದರೆ ಉಂಟಾಗಿದೆ. ತುರ್ತು ಸೇವೆಗೆ ಇರಾನ್ ಸೇನೆ ನಿಯೋಜಿಸಲಾಗಿದೆ ಎಂದು ಇರಾನ್‌ನ ಆಂತರಿಕ ಸಚಿವ ಅಬ್ಡೋಲ್‌ರೆಜಾ ರಹಮಾನಿ ಫಜಿಲ್ ತಿಳಿಸಿದ್ದಾರೆ.

 

Comments (Click here to Expand)