varthabharthi

ರಾಷ್ಟ್ರೀಯ

ನೋಟು ನಿಷೇಧದ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ರಿಯಲ್ ಎಸ್ಟೇಟ್ ಕ್ಷೇತ್ರ

ವಾರ್ತಾ ಭಾರತಿ : 13 Nov, 2017

ಹೊಸದಿಲ್ಲಿ, ನ.13: ಕಳೆದ ವರ್ಷ ನ.8ರಂದು ಕೇಂದ್ರ ಸರಕಾರ ನೋಟು ನಿಷೇಧಗೊಳಿಸಿದಾಗ ಆಘಾತಕ್ಕೆ ಒಳಗಾಗಿದ್ದ ದೇಶದ ರಿಯಲ್ ಎಸ್ಟೇಟ್ ವ್ಯವಹಾರ ಕ್ಷೇತ್ರ, ಒಂದು ವರ್ಷ ಕಳೆದರೂ ಇನ್ನೂ ಚೇತರಿಸಿಕೊಂಡಿಲ್ಲ ಎಂದು ಅಂಕಿಅಂಶ ತಿಳಿಸಿದೆ.

  ನೋಟು ನಿಷೇಧ ನಿರ್ಧಾರದ ಮೂಲಕ ಚಲಾವಣೆಯಲ್ಲಿದ್ದ ಶೇ.86ರಷ್ಟು ನಗದನ್ನು ಹಿಂಪಡೆಯಲಾಗಿತ್ತು. ಇದರಿಂದ ಬಹುತೇಕ ನಗದು ರೂಪದಲ್ಲೇ ನಡೆಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಭಾರೀ ಪೆಟ್ಟು ಬಿದ್ದಿತ್ತು ಮತ್ತು ನೂತನ ವಸತಿ ನಿರ್ಮಾಣ ಯೋಜನೆ, ಮನೆ ಮಾರಾಟ ಪ್ರಕ್ರಿಯೆ ಬಹುತೇಕ ನೆಲಕಚ್ಚಿತ್ತು. ಮನೆ ಖರೀದಿಗಾರರ ಹಿತಾಸಕ್ತಿ ರಕ್ಷಿಸುವ ನಿಯಮವನ್ನು ಮೇ ತಿಂಗಳಲ್ಲಿ ಕೇಂದ್ರ ಸರಕಾರ ಘೋಷಿಸಿರುವುದು ಹಾಗೂ ಜಿಎಸ್‌ಟಿ ನಿಯಮ ಜಾರಿಗೊಳಿಸಿರುವುದು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಇನ್ನಷ್ಟು ಹೊಡೆತ ನೀಡಿದೆ.

      ಛಾಯಾ ಅರ್ಥವ್ಯವಸ್ಥೆಯನ್ನು ನಿಬರ್ಂಧಿಸುವುದು ಹಾಗೂ ತೆರಿಗೆ ಜಾಲವನ್ನು ವಿಸ್ತರಿಸುವುದು ಪ್ರಧಾನಿ ಮೋದಿಯ ಉದ್ದೇಶವಾಗಿತ್ತು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನಗದು ವ್ಯವಹಾರ ಅಧಿಕವಾಗಿರುವ ಕಾರಣ ನಗದು ವ್ಯವಹಾರದ ಮೇಲೆ ವಿಧಿಸಿರುವ ನಿರ್ಬಂಧ ಸಹಜವಾಗಿಯೇ ರಿಯಲ್ ಎಸ್ಟೇಟ್ ವ್ಯವಹಾರದ ಮೇಲೆ ಪರಿಣಾಮ ಬೀರಿದೆ . ಕಳೆದ ಐದು ವರ್ಷದಲ್ಲಿ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರ ಏಶ್ಯಾದಲ್ಲಿ ಅಗ್ರಸ್ಥಾನದಲ್ಲಿತ್ತು. ಆದರೆ ನೋಟು ನಿಷೇಧ ಹಾಗೂ ಆಬಳಿಕ ಕೈಗೊಂಡ ಹಲವು ನಿರ್ಧಾರಗಳಿಂದ ವ್ಯವಹಾರ ಇನ್ನಷ್ಟು ಮಂದಗತಿಗೆ ಇಳಿದಿದೆ ಎಂದು ‘ನೈಟ್ ಫ್ರಾಂಕ್ ಇಂಡಿಯ’ದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಶಿಶೀರ್ ಬೈಜಲ್ ಹೇಳಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರದ ಮಟ್ಟಿಗೆ ಮುಂದಿನ 12ರಿಂದ 18 ತಿಂಗಳನ್ನು ‘ನಿಗಾ ಅವಧಿ’ ಎಂದು ಪರಿಗಣಿಸಬಹುದಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

 2016, ನ.8ರಿಂದ 2017 ಸೆ.30ರವರೆಗಿನ ಅವಧಿಯಲ್ಲಿ ಭಾರತದ ಪ್ರಮುಖ 7 ನಗರಗಳಲ್ಲಿ ಹೊಸ ನಿರ್ಮಾಣ ಕಾಮಗಾರಿ ಶೇ.60ರಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಮಾರಾಟ ಪ್ರಕ್ರಿಯೆ ಕೂಡಾ ಶೇ.32ರಷ್ಟು ಇಳಿಕೆ ದಾಖಲಿಸಿದೆ ಎಂದು ‘ಅನರಾಕ್ ಪ್ರಾಪರ್ಟಿ ಕನ್ಸಲ್ಟೆಂಟ್’ ತಿಳಿಸಿದೆ.

       ಈ ಎಲ್ಲಾ ಅಡೆತಡೆಯಿಂದ ನಮಗೆ 5 ತಿಂಗಳ ವ್ಯವಹಾರ ನಷ್ಟವಾಗಿದೆ. ನೂತನವಾಗಿ ಅನುಷ್ಠಾನಗೊಳಿಸಲಾದ ಗ್ರಾಹಕರ ಕಾಯ್ದೆ ಹಾಗೂ ಮಾರಾಟ ತೆರಿಗೆ ನಿಯಮವು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ನೋಟು ನಿಷೇಧಕ್ಕಿಂತಲೂ ತೀವ್ರವಾದ ಪರಿಣಾಮ ಬೀರಿದೆ ಎಂದು ಹೀರಾನಂದಾನಿ ಸಮೂಹಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸುರೇಂದ್ರ ಹೀರಾನಂದಾನಿ ಹೇಳಿದ್ದಾರೆ. ನಿರ್ಮಾಣ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬದಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸುವ ಉದ್ದೇಶದ ಹೊಸ ಕಾಯ್ದೆಯ ಕಾರಣ ಬಿಲ್ಡರ್‌ಗಳು ಹೊಸ ಯೋಜನೆಯ ಆರಂಭವನ್ನು ಮುಂದೂಡಿ, ಈಗಾಗಲೇ ಸಾಗುತ್ತಿರುವ ನಿರ್ಮಾಣ ಕಾಮಗಾರಿಯನ್ನು ಪೂರ್ತಿಗೊಳಿಸಲು ಹೆಚ್ಚಿನ ಗಮನ ಕೇಂದ್ರೀಕರಿಸುವಂತಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂಬರ್‌ಗೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ , ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಯೋಜನೆಗಳ ಆರಂಭ ಶೇ.6ಷ್ಟು ಕಡಿಮೆಯಾಗಿದೆ. ಕಳೆದ ವರ್ಷ ನಗದು ಪಾವತಿಸಿ ಆಸ್ತಿಗಳ ಖರೀದಿಸುವ ಪ್ರಕ್ರಿಯೆ ಬಹುತೇಕ ಅರ್ಧಾಂಶಕ್ಕೆ ಇಳಿದಿದೆ ಎಂದು ವರದಿಯಾಗಿದೆ.ದೇಶದ ಪ್ರಮುಖ ನಗರಗಳಲ್ಲಿ ಆಸ್ತಿಗಳ ಖರೀದಿ ವೌಲ್ಯವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ನೋಟು ನಿಷೇದದ ಬಳಿಕ ವಸತಿಗಳ ಮರು ಮಾರಾಟ ವೌಲ್ಯ ಶೇ.20ರಿಂದ 25ರಷ್ಟು ಕುಸಿದರೆ, ನೂತನ ವಸತಿಯ ವೌಲ್ಯದಲ್ಲಿ ಶೇ.7ರಿಂದ 17ರಷ್ಟು ಇಳಿಕೆಯಾಗಿದೆ. ಹೊಸ ನಿರ್ಮಾಣ ಕಾಮಗಾರಿ ಕಡಿಮೆಯಾಗಿರುವುದು ಹಾಗೂ ಮಾರಾಟವಾಗದೆ ಉಳಿದಿರುವ ಯೋಜನೆಗಳ ಸಂಖ್ಯೆಯಲ್ಲೂ ಇಳಿಮುಖ ದಾಖಲಾಗಿರುವುದರಿಂದ ಮುಂದಿನ ವರ್ಷದಿಂದ ಆಸ್ತಿಯ ವೌಲ್ಯ ಹೆಚ್ಚಾಗಬಹುದು ಎಂದು ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್‌ಗಳ ಒಕ್ಕೂಟದ ಅಧ್ಯಕ್ಷರು ತಿಳಿಸಿದ್ದಾರೆ.

   ಆದರೆ ‘ಆ್ಯಂಬಿಟ್ ಕ್ಯಾಪಿಟಲ್’ನ ಸಂಶೋಧನಾ ವಿಶ್ಲೇಷಕಿ ರಿತಿಕಾ ಮುಖರ್ಜಿ ಇದಕ್ಕೆ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೇಪೀ ಇನ್‌ಫ್ರಾಟೆಕ್ ಲಿ. ಸೇರಿದಂತೆ ಭಾರೀ ಸಾಲದ ಹೊರೆಯಲ್ಲಿ ಮುಳುಗಿರುವ 50 ಸಂಸ್ಥೆಗಳನ್ನು ದಿವಾಳಿ ಎಂದು ಘೋಷಿಸಲು ಕೇಂದ್ರ ಸರಕಾರ ಒತ್ತಡ ಹೇರುತ್ತಿದೆ. ಈ ಪ್ರಯತ್ನ ಯಶಸ್ವಿಯಾದರೆ ಈ ಸಂಸ್ಥೆಗಳು ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗುತ್ತವೆ. ಆಗ ಸಹಜವಾಗಿಯೇ ಆಸ್ತಿಯ ವೌಲ್ಯಗಳಲ್ಲಿ ಇಳಿಕೆಯಾಗುತ್ತದೆ. 2018ರ ಫೆಬ್ರವರಿಯಿಂದ ಜಮೀನಿನ ವೌಲ್ಯದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ. ಜಮೀನಿನ ವೌಲ್ಯ ಕುಸಿದರೆ , 2019-20ರ ವೇಳೆ ರಿಯಲ್ ಎಸ್ಟೇಟ್ ವ್ಯವಹಾರಸ್ತರು ಕಡಿಮೆ ಬೆಲೆಯ ವಸತಿ ನಿರ್ಮಾಣ ಯೋಜನೆಗಳನ್ನು ಆರಂಭಿಸಬಹುದು ಎಂದು ಮುಖರ್ಜಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)