varthabharthi

ಕರ್ನಾಟಕ

ರಾಜ್ಯಾದ್ಯಂತ ಕೆರೆ, ಚೆಕ್‌ಡ್ಯಾಮ್ ಕಾಮಗಾರಿಗೆ 1,000 ಕೋ.ರೂ. ಬಿಡುಗಡೆ: ಸಚಿವ ಜಯಚಂದ್ರ

ವಾರ್ತಾ ಭಾರತಿ : 13 Nov, 2017

ಶಿವಮೊಗ್ಗ, ನ. 13: ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಕೆರೆ ತುಂಬುವ ಕಾಮಗಾರಿ ಮತ್ತು ಚೆಕ್ ಡ್ಯಾಮ್‌ಗಳ ನಿರ್ಮಾಣ ಕ್ಕಾಗಿ 1,000 ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲು ಶಿಕಾರಿಪುರ ತಾಲೂಕು ಅಂಬಾರಗೊಪ್ಪ ಗ್ರಾಮದ ಹತ್ತಿರ ಕುಮುಧ್ವತಿ ನದಿಯಿಂದ ಕೊಪ್ಪದ ಕೆರೆಗೆ 9.39ಲಕ್ಷ ರೂ.ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಏತನೀರಾವರಿ ಯೋಜನೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಕಾಲಕಾಲಕ್ಕೆ ಮಳೆ ಬೀಳದೆ ಬರಗಾಲದ ಸ್ಥಿತಿ ಎದುರಿಸುವಂತಾಗಿದೆ. ಈ ಯೋಜನೆ ಯಿಂದಾಗಿ ಶಾಶ್ವತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಭರವಸೆ ನೀಡಿದರು.

ಈ ಏತ ನೀರಾವರಿ ಯೋಜನೆಯಿಂದ ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ, ಶೀಲವಂತನಕೊಪ್ಪ, ಬಸವಾಪುರ, ತುಮರಿ, ಹೊಸೂರು ಹಾಗೂ ಸುರಗೀಹಳ್ಳಿ ಗ್ರಾಮಗಳ ವ್ಯಾಪ್ತಿಯ 1,361 ಎಕರೆ ಭೂ ಪ್ರದೇಶ ಸಾಗುವಳಿಗೆ ಅನುಕೂಲವಾಗಲಿದೆ. ಅಲ್ಲದೇ ಈ ಭಾಗದ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಮಾತ್ರವಲ್ಲ ಈ ಭಾಗದಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಬಿ.ವೈ. ರಾಘವೇಂದ್ರ, ಜಿಲ್ಲಾ ಪಂಚಾಯತ್ ಸದಸ್ಯ ನರಸಿಂಗನಾಯ್ಕ, ತಾ.ಪಂ.ಉಪಾಧ್ಯಕ್ಷೆ ರೂಪಾ ದಯಾನಂದ್, ಗ್ರಾ.ಪಂ. ಅಧ್ಯಕ್ಷ ಬಿ.ಶಿವಲಿಂಗಪ್ಪ, ಉಪಾಧ್ಯಕ್ಷೆ ಕೆಂಚಮ್ಮ, ತಾಲೂಕು ಪಂಚಾಯತ್ ಸದಸ್ಯೆ ಮಮತಾ, ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ಎಂ. ರವೀಂದ್ರಪ್ಪ, ಕಾರ್ಯಪಾಲಕ ಇಂಜಿನಿ ಯರ್ ಸಿ.ವಿ. ಜಗದೀಶ್ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು, ಅಚ್ಚುಕಟ್ಟು ವ್ಯಾಪ್ತಿಯ ರೈತರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)