ಫಿಫಾ ವಿಶ್ವಕಪ್: ಸ್ವಿಡ್ಝರ್ಲೆಂಡ್, ಕ್ರೋವೇಶಿಯ ಅರ್ಹತೆ
ಬಾಸೆಲ್, ನ.13: ಉತ್ತರ ಐರ್ಲೆಂಡ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿರುವ ಸ್ವಿಟ್ಝರ್ಲೆಂಡ್ ತಂಡ ರಶ್ಯದಲ್ಲಿ 2018ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಬೆಲ್ಫಾಸ್ಟ್ನಲ್ಲಿ ನಡೆದಿದ್ದ ಮೊದಲ ಪ್ಲೇ-ಆಫ್ ಪಂದ್ಯದಲ್ಲಿ 1-0 ಅಂತರದಲ್ಲಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ ಸ್ವಿಸ್ಗೆ ವಿಶ್ವಕಪ್ ಟಿಕೆಟ್ ಲಭಿಸಿದೆ. ಮೊದಲ ಸುತ್ತಿನ ಪ್ಲೇ-ಆಫ್ ಪಂದ್ಯದಲ್ಲಿ ರಿಕಾರ್ಡೊ ರೊಡ್ರಿಗಝ್ ಏಕೈಕ ಗೋಲು ದಾಖಲಿಸಿದ್ದರು. ಸ್ವಿಸ್ ಸತತ ನಾಲ್ಕನೆ ಬಾರಿ ವಿಶ್ವಕಪ್ಗೆ ಅರ್ಹತೆ ಪಡೆದುಕೊಂಡಿದೆ.
ಉತ್ತರ ಐರ್ಲೆಂಡ್ 1986ರ ಬಳಿಕ ಮೊದಲ ಬಾರಿ ವಿಶ್ವಕಪ್ಗೆ ಅರ್ಹತೆ ಪಡೆಯುವ ವಿಶ್ವಾಸದಲ್ಲಿತ್ತು. ಆದರೆ, ಆ ತಂಡದ ಕನಸು ಭಗ್ನಗೊಂಡಿದೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವ್ಲಾಡಿಮಿರ್ ಪೆಟ್ಕೊವಿಕ್ ನೇತೃತ್ವದ ತಂಡ ಮೊದಲಾರ್ಧದಲ್ಲಿ ಹಲವು ಅವಕಾಶವನ್ನು ಕೈಚೆಲ್ಲಿತ್ತು. ‘‘ಇದೊಂದು ಕಠಿಣ ಪಂದ್ಯವಾಗಿದ್ದು, ನಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು’’ ಎಂದು ಸ್ವಿಸ್ ಗೋಲ್ಕೀಪರ್ ಯಾನ್ ಸೊಮ್ಮೆರ್ ಹೇಳಿದ್ದಾರೆ.
ಕ್ರೋವೇಶಿಯ ಐದನೆ ಬಾರಿ ವಿಶ್ವಕಪ್ ಗೆ
ಗ್ರೀಸ್ ವಿರುದ್ಧ ಎರಡನೆ ಪಂದ್ಯವನ್ನು ಗೋಲುರಹಿತ ಡ್ರಾಗೊಳಿಸಿರುವ ಕ್ರೋವೇಶಿಯ 2018ರ ಫಿಫಾ ವಿಶ್ವಕಪ್ಗೆ ಅರ್ಹತೆೆ ಪಡೆದುಕೊಂಡಿದೆ. ಕ್ರೋವೇಶಿಯ ತಂಡ ಗ್ರೀಸ್ ವಿರುದ್ಧದ ಮೊದಲ ಪ್ಲೇ-ಆಫ್ ಪಂದ್ಯವನ್ನು 4-1 ಅಂತರದಿಂದ ಜಯ ಸಾಧಿಸಿದ ಕಾರಣ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಂಡಿತು. ಕ್ರೋವೇಶಿಯ ರಶ್ಯದಲ್ಲಿ ಮುಂದಿನ ವರ್ಷ ಐದನೆ ಬಾರಿ ವಿಶ್ವಕಪ್ನಲ್ಲಿ ಭಾಗವಹಿಸಲಿದೆ. 2010ರಲ್ಲಿ ಮಾತ್ರ ವಿಶ್ವಕಪ್ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು.
ಮೊದಲ 30 ನಿಮಿಷಗಳ ಆಟದಲ್ಲಿ ಗ್ರೀಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆದರೆ ಆತಿಥೇಯ ತಂಡ ಎರಡು ಬಾರಿ ಗೋಲು ಬಾರಿಸುವ ಅವಕಾಶವನ್ನು ಕೈಚೆಲ್ಲಿತು. ಕ್ರೋವೇಶಿಯ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ ಎದುರಾಳಿ ಗ್ರೀಸ್ಗೆ ಗೋಲು ಬಾರಿಸಲು ಅವಕಾಶ ನೀಡಲಿಲ್ಲ.